Friday, 22nd November 2024

Fellowship Offer: ಮಾಸಿಕ 60,000 ವೇತನದ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್

fellowship

ಬೆಂಗಳೂರು: ಪಂಚಾಯತ್ ರಾಜ್ (Panchayat raj) ಇಲಾಖೆಯಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗಾಗಿ (Fellowship Offer) ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್ ಆಗಿದೆ. ಈ ಫೆಲೋಶಿಪ್‌ಗೆ ಆಯ್ಕೆಯಾದವರಿಗೆ ರೂ.60,000 ವೇತನ (Salary) ಪ್ರತಿ ತಿಂಗಳು ಸಿಗಲಿದೆ.

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ (Riral development) ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರವು “ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್’ ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ 07 ಹುದ್ದೆಗಳಿಗೆ ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಫೆಲೋಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಖಾಲಿ ಇರುವ ತಾಲ್ಲೂಕುಗಳಿಗೆ ನಿಯುಕ್ತಿಗೊಳಿಸಲಾಗುವುದು.

ಅಭ್ಯರ್ಥಿಗಳ ಅರ್ಹತೆಗಳು

1) ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 32 ವರ್ಷದೊಳಗಿರಬೇಕು.
2) ಅಭ್ಯರ್ಥಿಗಳು ಸಾಮಾಜಿಕ ವಿಜ್ಞಾನಗಳಾದ ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ ಅಥವಾ ಸಮಾಜ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
3) ಸ್ನಾತಕ ಪದವೀಧರರು ಅಭಿವೃದ್ಧಿ ವಲಯದಲ್ಲಿ ಕನಿಷ್ಟ 1-2 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿದ್ದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಕ್ಷೇತ್ರಮಟ್ಟದ ಅನುಭವ ಹೊಂದಿದ್ದಲ್ಲಿ ಹೆಚ್ಚುವರಿ ಅಂಕಗಳೊಂದಿಗೆ ಪರಿಗಣಿಸಲಾಗುವುದು
4) ಕ್ಷೇತ್ರ ಮಟ್ಟದ ಅನುಭವ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೊಳಪಟ್ಟು ಆದ್ಯತೆ ನೀಡಲಾಗುವುದು.
5) M.Phil ಅಥವಾ Ph.D ಉನ್ನತ ವಿದ್ಯಾರ್ಹತೆ ಅಪೇಕ್ಷಣೀಯವಾಗಿದ್ದು, ಹೆಚ್ಚುವರಿ Weightage ಅನ್ನು ನೀಡಲಾಗುವುದು.

ಆಯ್ಕೆ ವಿಧಾನ:

1) ಕಲ್ಯಾಣ ಕರ್ನಾಟಕದ ಪ್ರದೇಶದ ಜಿಲ್ಲೆಗಳಲ್ಲಿ ಖಾಲಿ ಇರುವ ತಾಲ್ಲೂಕುಗಳಿಗೆ ಒಬ್ಬರಂತೆ ಒಟ್ಟು 07 ಫೆಲೋಗಳನ್ನು ಆಯ್ಕೆ ಮಾಡಲಾಗುವುದು.
2) ಫೆಲೋಗಳನ್ನು ಮೆರಿಟ್ ಕಮ್ ಆಪ್ಟಿಟ್ಯೂಡ್ ಮೌಲ್ಯಮಾಪನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಫೆಲೋಶಿಪ್ ಅವಧಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಷಿಪ್ ಅವಧಿಯು ಎರಡು ವರ್ಷಗಳು ಇರುತ್ತದೆ.

ಫೆಲೋಶಿಪ್ ಆಯ್ಕೆಯ ಷರತ್ತುಗಳು:

1) ಅಭ್ಯರ್ಥಿಗಳು ಕಡ್ಡಾಯವಾಗಿ ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು. ಕ್ಷೇತ್ರಮಟ್ಟದಲ್ಲಿ ಮತ್ತು ನಾಗರಿಕರೊಂದಿಗೆ ಕೆಲಸ ಮಾಡಲು ಕನ್ನಡ ಭಾಷೆಯ ಜ್ಞಾನವು ಪ್ರಮುಖ ಅವಶ್ಯಕತೆಯಾಗಿದೆ.
2) ಫೆಲೋಗಳು ಕಲ್ಯಾಣ ಕರ್ನಾಟಕ ವಿಭಾಗದ ಯಾವುದೇ ತಾಲ್ಲೂಕಿಗೆ ನಿಯೋಜಿಸಿದರೂ ಕೆಲಸ ಮಾಡಲು ಸಿದ್ದರಿರಬೇಕು.
3) ಫೆಲೋಷಿಪ್‌ನ ಸಂಪೂರ್ಣ ಅವಧಿಯವರೆಗೆ ನಿಯುಕ್ತಿಗೊಳಿಸಲಾದ ತಾಲ್ಲೂಕಿನಲ್ಲಿಯೇ ವಾಸ್ತವ್ಯ ಮಾಡಬೇಕು ಮತ್ತು ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ನಿರಂತರವಾಗಿ ಪ್ರವಾಸ ಕೈಗೊಳ್ಳುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಿರುತ್ತದೆ.
4) ಫೆಲೋಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವುದು.
ಸ್ಟೈಫೆಂಡ್ ಮತ್ತು ನೇಮಕಾತಿ ಷರತ್ತುಗಳು: ಫೆಲೋಗಳಿಗೆ ತರಬೇತಿ ಮತ್ತು ತಾಲ್ಲೂಕಿನಲ್ಲಿ ನಿಯೋಜನ ಸಮಯದಲ್ಲಿ ತಿಂಗಳಿಗೆ ರೂ.60,000/- ಫೆಲೋಶಿಪ್ ಮೊತ್ತ ನೀಡಲಾಗುತ್ತದೆ. ಫೆಲೋಗಳಿಗೆ ಗ್ರಾಮ ಪಂಚಾಯತಿಗಳಿಗೆ ಪ್ರಯಾಣಿಸಲು ಮಾಸಿಕ ರೂ. 1500/- ಪ್ರಯಾಣ ಭತ್ಯೆ ನೀಡಲಾಗುವುದು. ನೇಮಕಾತಿ ಆದೇಶ ನೀಡುವ ಸಮಯದಲ್ಲಿ ಫೆಲೋಶಿಪ್‌ಗೆ ಸಂಬಂಧಿಸಿದ ಇತರೆ ಷರತ್ತುಗಳನ್ನು ವಿಧಿಸಲಾಗುವುದು.

ಫೆಲೋಗಳ ಪಾತ್ರ ಮತ್ತು ಜವಾಬ್ದಾರಿಗಳು:

ಸಾಮಾಜಿಕ, ಆರ್ಥಿಕ, ಭೌಗೋಳಿಕ ಮತ್ತು ಅಡಳಿತದ ಸನ್ನಿವೇಶಗಳನ್ನು ಅರ್ಥಮಾಡಿಕೊಂಡ ನಂತರ, ಫೆಲೋಗಳು ಈ ಕೆಳಕಂಡ ವಿವಿಧ ಉಪಕ್ರಮಗಳಲ್ಲಿ ಜಿಲ್ಲಾಡಳಿತದೊಂದಿಗೆ ಕೆಲಸ ಮಾಡಬೇಕಾಗುತ್ತದೆ.
1) ನಾಗರೀಕರು ತಾವು ಅರ್ಹರಾಗಿರುವ ಸಾರ್ವತ್ರಿಕ ಹಕ್ಕುಗಳನ್ನು ಪಡೆದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದು.
2) ಅರ್ಹರಾದ ವ್ಯಕ್ತಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಮತ್ತು ಸವಲತ್ತುಗಳು ತಲುಪುತ್ತಿರುವುದನ್ನು ಖಾತ್ರಿಪಡಿಸುವುದು.
3) ಗ್ರಾಮ ಪಂಚಾಯತಿ ಆಡಳಿತದಲ್ಲಿ, ಪ್ರಮುಖವಾಗಿ ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಗ್ರಾಮ ಸಭೆಗಳ ಮೂಲಕ ನಾಗರಿಕರ ಭಾಗವಹಿಸುವಿಕೆ.
4) ಸ್ಥಳೀಯವಾಗಿ ಯೋಜನೆ ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯತಿ ಆಡಳಿತಕ್ಕೆ ನೆರವಾಗುವಂತಹ ಸಾಮಾಜಿಕ-ಆರ್ಥಿಕ ಮತ್ತು ವಸ್ತುಸ್ಥಿತಿಗಳನ್ನು ವಿಶ್ಲೇಷಣೆ ಮಾಡುವುದು.
5) ಪರಿಶಿಷ್ಟ ಜಾತಿ/ಪಂಗಡ, ಕಡುಬಡವರು, ವಿಶೇಷಚೇತನರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸ್ಥಿತಿಗತಿಗಳ ಅಧ್ಯಯನ ಮಾಡುವುದು.
6) MGNREGA, ICDS ನಂತಹ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಹಾಗೂ ಇಲಾಖೆಯಿಂದ ರೂಪಿಸಲಾಗಿರುವ ಘನ ತ್ಯಾಜ್ಯ ವಿಲೇವಾರಿ, ಶಿಶುಪಾಲನಾ ಕೇಂದ್ರಗಳು, ಅರಿವು ಕೇಂದ್ರ ಮುಂತಾದ ಅಭಿವೃದ್ಧಿ ಯೋಜನೆಗಳ ಅಧ್ಯಯನ ಕೈಗೊಳ್ಳುವುದು ಮತ್ತು ಅನುಷ್ಠಾನದಲ್ಲಿ ನೆರವಾಗುವುದು.
7) ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳು, ಸ್ವಸಹಾಯ ಸಂಘಗಳು ಮತ್ತು ಅವುಗಳ ಒಕ್ಕೂಟಗಳು ಮತ್ತು ಪಂಚಾಯತ್ ಮಟ್ಟದಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರೀಕ ಸಂಘಟನೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದು.
8) ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಒಗ್ಗೂಡಿಸುವಿಕೆಗೆ ನೆರವು ನೀಡುವುದು.
9) ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಉದ್ದೇಶ ಹೊಂದಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕರಿಸುವುದು.
10) ತಮ್ಮ ಕೆಲಸದಲ್ಲಿ ಗುಣಮಟ್ಟ, ನೈತಿಕತೆ, ವಿಶ್ವಾಸಾರ್ಹತೆ ಮತ್ತು ಸಮಗ್ರತೆಗೆ ಒತ್ತು ನೀಡುವ ಮೂಲಕ ಕ್ರಿಯಾಶೀಲ ಸಂಶೋಧನೆಗಳನ್ನು (Action Research) ಕೈಗೊಳ್ಳಲು ಅಗತ್ಯ ಕೌಶಲ್ಯಗಳನ್ನು ಗಳಿಸಿಕೊಳ್ಳುವುದು.
11) ತಳಮಟ್ಟದಲ್ಲಿ ನಿರಂತರವಾಗಿ ಕಂಡು ಬರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯ ಮಾಡುವ ಕಾರ್ಯ ಸಂಶೋಧನಾ ಯೋಜನೆಗಳನ್ನು (Action Research Projects) ಕೈಗೊಳ್ಳುವುದು 12) ಗ್ರಾಮ ಪಂಚಾಯತಿಗಳ ಆಡಳಿತ ಮತ್ತು ಅಭಿವೃದ್ಧಿ ಉಪಕ್ರಮಗಳಲ್ಲಿ ನೆರವಾಗುವ ‘ಅಭಿವೃದ್ಧಿ ವೃತ್ತಿಪರ” ರಾಗಿ ಗುರುತಿಸಿಕೊಳ್ಳುವುದು.
13) ಗ್ರಾಮ ಪಂಚಾಯತಿಗಳ ದೈನಂದಿನ ಆಡಳಿತವು ಶಾಸನಾತ್ಮಕ ಕಾರ್ಯವಿಧಾನ ಮತ್ತು ಪ್ರಕ್ರಿಯೆಗಳಿಗೆ ಅನುಗುಣವಾಗಿ ನಡೆಯುವುದನ್ನು ಹಾಗೂ ಸೇವೆಗಳ ವಿತರಣೆಯ ಪರಿಣಾಮಕತೆ ಮತ್ತು ನಿರಂತರತೆಯನ್ನು ಮೌಲ್ಯಮಾಪನ ಮಾಡುವುದು.
14) ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾರ್ವಜನಿಕರೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆ (Focus Group Discussions) ನಡೆಸುವ ಮೂಲಕ ಗ್ರಾಮ ಪಂಚಾಯತಿಗಳ ಅವಶ್ಯಕತೆಗಳನ್ನು ಗುರುತಿಸುವುದು ಮತ್ತು ಅರ್ಥೈಸಿಕೊಳ್ಳುವುದು. 15) ಮೇಲ್ಕಂಡ ಚಟುವಟಿಕೆಗಳನ್ನು ಕೈಗೊಳ್ಳಲು ಫೆಲೋಗಳು ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ ಶ್ರೇಣೀಕರಣ (Gram Panchayat Performance Ranking) ನಲ್ಲಿ ಕೊನೆಯಲ್ಲಿರುವ 10 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳುವುದು.

ಆಸಕ್ತ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯನ್ನುhttps://prcrdpr.karnataka.gov.in/ ವೆಬ್‌ಸೈಟ್ ಮೂಲಕ ಪಡೆದುಕೊಂಡು, ಅದೇ ವೆಬ್‌ಸೈಟ್ ಮೂಲಕವೇ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು. ಆಯುಕ್ತಾಲಯದಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವಿಕೆಯು ದಿನಾಂಕ:02-09-2024 ರಂದು ಪ್ರಾರಂಭವಾಗಿದ್ದು ದಿನಾಂಕ:09-09-2024 ರಂದು ಕೊನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು (ಅಭಿವೃದ್ಧಿ), ಮೊಬೈಲ್ ಸಂಖ್ಯೆ-9740790530, ಪಂಚಾಯತ್ ರಾಜ್ ಆಯುಕ್ತಾಲಯರವರನ್ನು ಸಂಪರ್ಕಿಸುವುದು.

ಈ ಸುದ್ದಿ ಓದಿ: Job News: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಡ್ ನ್ಯೂಸ್, 39,481 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ