Sunday, 24th November 2024

Actor Darshan: ರೇಣುಕಸ್ವಾಮಿಗೆ ಬಲವಂತದಿಂದ ಚಿಕನ್‌ ತಿನ್ನಿಸಿ, ʼಅನ್ನ ಉಗುಳ್ತೀಯಾ… ಮಗನೇʼ ಎಂದು ಒದ್ದಿದ್ದ ದರ್ಶನ್!

actor darshan renukaswamy murder case

ಬೆಂಗಳೂರು: ರೇಣುಕಸ್ವಾಮಿ ಕೊಲೆಗೂ (Renukaswamy murder news) ಮುನ್ನ ಹಲ್ಲೆ ನಡೆಸಿದ ಸಂದರ್ಭದಲ್ಲಿ, ನಟ ದರ್ಶನ್‌ (Actor Darshan) ರೇಣುಕಸ್ವಾಮಿಗೆ ಬಲವಂತವಾಗಿ ಚಿಕನ್‌ ಬಿರಿಯಾನಿ ತಿನ್ನಿಸಿದ್ದ. ಸಸ್ಯಾಹಾರಿಯಾಗಿದ್ದ ರೇಣುಕಸ್ವಾಮಿ ಚಿಕನ್‌ ತಿನ್ನದೆ ಉಗುಳಿದಾಗ ಕೋಪಗೊಂಡ ದರ್ಶನ್‌ “ಅನ್ನ ಉಗುಳ್ತೀಯಾ… ಮಗನೇ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೂಟುಗಾಲಿನಿಂದ ಒದ್ದಿದ್ದ ಎಂಬ ವಿವರ (Bangalore Crime news) ತಿಳಿದುಬಂದಿದೆ.

ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತರುವ ವೇಳೆಯಲ್ಲೇ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ವಾಚ್‌, ಉಂಗುರ ಹಾಗೂ ಕರಡಿಗೆಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ತುಮಕೂರಿನ ರಂಗಾಪುರದ ಬಳಿ ಬಾರ್‌ನಲ್ಲಿ ಆರೋಪಿಗಳಾದ ರಾಘವೇಂದ್ರ, ಜಗದೀಶ್, ಅನುಕುಮಾರ್ ಪಾರ್ಟಿ ಮಾಡಿ, ಅದರ ಹಣವನ್ನು ರೇಣುಕಸ್ವಾಮಿಯಿಂದಲೇ ಕೊಡಿಸಿದ್ದರು. ಬಾರ್‌ನಲ್ಲಿ ಮದ್ಯ ಖರೀದಿಸಿದ್ದು, ಟೋಲ್‌ನಲ್ಲಿ ಹಣ ಪಾವತಿಸಿರುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಎಲ್ಲ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 8ರ ಮಧ್ಯಾಹ್ನ 1.30ಕ್ಕೆ ರೇಣುಕಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ದರ್ಶನ್ ಬರುವ ಮುನ್ನವೇ ಆರೋಪಿಗಳು ಬಡಿಗೆಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ನಂತರ ಬಂದ ದರ್ಶನ್‌ ಸಹ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಚಿಕನ್‌ ಬಿರಿಯಾನಿ ತಿನ್ನಿಸಿದ್ದ. ‘ನಾನು ಜಂಗಮ, ಮಾಂಸಾಹಾರ ತಿನ್ನುವುದಿಲ್ಲ’ ಎಂದು ನಿರಾಕರಿಸಿದ ರೇಣುಕಸ್ವಾಮಿ, ಬಾಯಿಂದ ಅನ್ನದ ಅಗುಳು ಉಗುಳಿದ್ದ. ಇದರಿಂದ ಕುಪಿತಗೊಂಡ ದರ್ಶನ್, ‘ಅನ್ನಕ್ಕೆ ಬೆಲೆ ಕೊಡಲ್ವಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟುಗಾಲಿನಿಂದ ಒದ್ದಿದ್ದ.

ಸಂಜೆ 4.45ಕ್ಕೆ ಶೆಡ್‌ಗೆ ಬಂದ ದರ್ಶನ್ ಪ್ರೇಯಸಿ ಪವಿತ್ರಾಗೌಡ ಸಹ ರೇಣುಕಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದಳು. ಕ್ಷಮೆ ಕೋರುವಂತೆ ಒತ್ತಾಯಿಸಿ, ಪವಿತ್ರ ಗೌಡ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಲಾಗಿತ್ತು.

ದರ್ಶನ್ ಹಾಗೂ ಸಹಚರರು ಪಟ್ಟಣಗೆರೆ ಶೆಡ್‌ಗೆ ಬಂದು ಹೋಗಿರುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರೇಣುಕಸ್ವಾಮಿ ರಕ್ತ ಹಾಗೂ ಫೋಟೊಗಳು ಮಾತ್ರವಲ್ಲದೇ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ವೈಜ್ಞಾನಿಕ ಪುರಾವೆಯಾಗಿದೆ. ಶೆಡ್‌ನ ಮಣ್ಣು ದರ್ಶನ್ ಮತ್ತು ಅವರ ಮೂವರು ಸಹಚರರು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಖಚಿತಪಡಿಸಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾವು ಧರಿಸಿದ್ದ ಶೂಗಳನ್ನು ಹತ್ಯೆ ಬಳಿಕ ಬಿಚ್ಚಿದ್ದ ದರ್ಶನ್‌, ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರು ನೆಲಸಿರುವ ಫ್ಲ್ಯಾಟ್‌ಗೆ ಕಳುಹಿಸಿದ್ದರು. ಬಳಿಕ ಅವರ ಪತ್ನಿ ಮನೆಯಿಂದಲೇ ಆ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ, ‘ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎನ್ನುತ್ತಿದ್ದ ದರ್ಶನ್, ಕೆಲ ದಿನಗಳ ಬಳಿಕ ‘ಏನೋ ತಪ್ಪಾಗಿ ಹೋಗಿದೆ, ಹುಡುಗರು ಏನೋ ತಪ್ಪು ಮಾಡಿದ್ದಾರೆ’ ಎಂದು ಹೇಳಿದ್ದರು. ದರ್ಶನ್ ಹೇಳಿಕೆಯನ್ನು (20 ಪುಟ) ಆರೋಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಮೂರು ಮಂದಿ ಪ್ರತ್ಯಕ್ಷ ಸಾಕ್ಷಿಗಳ ಪೈಕಿ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ ನೀಡಿರುವ ಹೇಳಿಕೆ ಪ್ರಮುಖವಾಗಿದೆ. “ದರ್ಶನ್ ಸಾಬ್‌ ಆಯಾ ಥಾ” “ರೇಣುಕಸ್ವಾಮಿಗೆ ಮರದ ರೆಂಬೆಯಲ್ಲಿ ಹೊಡೆದ ಶಬ್ಧ ಕೇಳಿದ್ದೇನೆ. ಆ ಸಂದರ್ಭದಲ್ಲಿ ನಾನು ಹೊರಗೆ ಇದ್ದೆ” ಎಂದು ಪಟ್ಟಣಗೆರೆ ಶೆಡ್‌ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೋಮವಾರ (ಸೆ.9) ಅಂತ್ಯವಾಗಲಿದೆ. ಹಾಗಾಗಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳನ್ನು ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಗರದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಇತರ ಆರೋಪಿಗಳಾದ ಅನುಕುಮಾರ್‌ ವಿನಯ್ ಹಾಗೂ ಕೇಶವಮೂರ್ತಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿತ್ತು.

ಈ ಸುದ್ದಿ ಓದಿ: Actor Darshan: ದರ್ಶನ್ ನ್ಯಾಯಾಂಗ ಬಂಧನ ನಾಳೆಗೆ ಮುಕ್ತಾಯ; ದಾಸನಿಗೆ ಸಿಗುತ್ತಾ ಜಾಮೀನು?