Friday, 20th September 2024

R T Vittalmurthy Column: ಮೌನವಾಗಿರಲು ನಿರ್ಧರಿಸಿದ ಯತ್ನಾಳ್‌

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಆರು ತಿಂಗಳು ಮೌನವಾಗಿರಲು ನಿರ್ಧರಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ನೀಡಿದ ಸೂಚನೆಯೇ ಇದಕ್ಕೆ ಕಾರಣ. ಇತ್ತೀಚೆಗೆ ದಿಲ್ಲಿ ದಂಡಯಾತ್ರೆ ಕೈಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಯತ್ನಾಳ್ ಆಂಡ್ ಗ್ಯಾಂಗಿನ ವಿರುದ್ಧ ದೂರು ನೀಡಿದ್ದರಲ್ಲ, ಈ ಸಂದರ್ಭದಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಅವರು ಅಮಿತ್ ಶಾ ಮತ್ತು ನಡ್ಡಾ ಅವರನ್ನು ಒತ್ತಾಯಿಸಿದ್ದರು. ‘ಪದೇಪದೆ ನಮ್ಮ ವಿರುದ್ಧ ಆರೋಪ ಮಾಡು ತ್ತಿರುವ ಯತ್ನಾಳ್ ನಮಗಷ್ಟೇ ಅಲ್ಲ, ಅ ಮೂಲಕ ಇಡೀ ಪಕ್ಷವನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ.

ಇದೇ ಸ್ಥಿತಿ ಮುಂದುವರಿದರೆ ಪಕ್ಷ ಕಟ್ಟುವ ಕೆಲಸಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ತಕ್ಷಣ ಅವರಿಗೆ ಗೇಟ್‌ಪಾಸ್ ಕೊಡಿ’ ಅಂತ ವಿಜಯೇಂದ್ರ ಒತ್ತಾಯಿಸಿದ್ದರು. ಆದರೆ ಆ ಹೊತ್ತಿಗಾಗಲೇ ರಾಜ್ಯ ಬಿಜೆಪಿಯಲ್ಲಿ ತಲೆ ಎತ್ತಿದ್ದ ಭಿನ್ನ ಮತೀಯರ ಬಲ ಕಣ್ಣಿಗೆ ಕಾಣಿಸುವಷ್ಟು ಸ್ಪಷ್ಟವಾಗಿದ್ದರಿಂದ ಅಮಿತ್ ಶಾ-ನಡ್ಡಾ ಜೋಡಿ, ‘ಉಚ್ಚಾಟನೆ ಎಲ್ಲ ಬೇಕಿಲ್ಲ. ಇನ್ನು ಆರೋಪ ಮಾಡುತ್ತಾ ತಿರುಗಬೇಡಿ ಅಂತ ಯತ್ನಾಳ್ ಅವರಿಗೆ ಸೂಚನೆ ಕೊಡುತ್ತೇವೆ’ ಅಂತ ಹೇಳಿ ಕಳಿಸಿದ್ದರು.

ಇದರ ಬೆನ್ನ ಮೊನ್ನೆ ಯತ್ನಾಳ್ ಅವರನ್ನು ದಿಲ್ಲಿಗೆ ಕರೆಸಿಕೊಂಡ ನಡ್ಡಾ, ‘ಪಕ್ಷದಲ್ಲಿ ಸಂಘರ್ಷ ಬೇಡ. ಹೀಗಾಗಿ
ಸುಮ್ಮನಿರಿ’ ಎಂದರಂತೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ‘ಸರ್, ನಾವು ರಾಜ್ಯ ಸರಕಾರದ ಭ್ರಷ್ಟಾ
ಚಾರದ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ನಾಯಕರು ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ಯಾವ ಮುಖ ಇಟ್ಟುಕೊಂಡು ಹೋರಾಡಲು ಸಾಧ್ಯ? ಇವರ ಮೇಲೇ ಭ್ರಷ್ಟಾಚಾರದ ಆರೋಪ ಇದ್ದರೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಡುತ್ತಾರೆ. ಈಗ ಆಗುತ್ತಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ನಾವೇನು ಹೇಳುತ್ತಿದ್ದೇವೆ ಅಂದರೆ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ. ಅವರ ಜಾಗಕ್ಕೆ ಸಿ.ಟಿ.ರವಿಯವರು ಬರಲಿ. ಇದೇ ರೀತಿ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೆಲಸ ಮಾಡಲು ನನಗೆ ಅವಕಾಶ ಕೊಡಿ. ಇದಾದ ಮೇಲೆ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಕೆಲಸ ಹೇಗಾಗುತ್ತದೆ ಅಂತ ನೀವೇ ನೋಡಿ’ ಅಂತ ವಿವರಿಸಿದ್ದಾರೆ.

ಯಾವಾಗ ಯತ್ನಾಳ್ ಫೈರ್‌ಬ್ರ್ಯಾಂಡಿನ ತರಹ ಮಾತನಾಡಿದರೋ, ಅವರನ್ನು ಸಮಾಧಾನಿಸಿದ ನಡ್ಡಾ ಅವರು, ‘ನೋ, ನೋ, ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿ ಇನ್ನೂ ಆರು ತಿಂಗಳಾಗಿದೆ ಅಷ್ಟೇ.
ಹೀಗಾಗಿ ಆರು ತಿಂಗಳು ಮೌನವಾಗಿರಿ. ಪರಿಸ್ಥಿತಿ ಏನಾಗುತ್ತದೋ ನೋಡೋಣ. ಆಮೇಲೆ ಮುಂದಿನ ಮಾತು’
ಎಂದಿದ್ದಾರೆ. ನಡ್ಡಾ ಈ ಮಾತು ಹೇಳುತ್ತಿದ್ದಂತೆ ಖುಷಿಯಾದ ಯತ್ನಾಳ್ ದಿಲ್ಲಿಯಿಂದ ವಾಪಸ್ ಬಂದಿದ್ದಾರೆ.

ಈಗ ಅವರ ಕ್ಯಾಂಪಿನಲ್ಲಿ ಹರಡಿರುವ ಸುದ್ದಿಯ ಪ್ರಕಾರ, ಆರು ತಿಂಗಳ ನಂತರ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಮತ್ತು ಅಶೋಕ್ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅರ್ಥಾತ್, ಆರು ತಿಂಗಳಾಗುತ್ತಿದ್ದಂತೆ ಸಿ.ಟಿ.ರವಿ ಪಕ್ಷದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದರೆ, ಯತ್ನಾಳ್ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗುವುದು ಗ್ಯಾರಂಟಿ ಎಂಬುದು ಈ ಕ್ಯಾಂಪಿನ ಸಂಭ್ರಮ. ಮುಂದೇನು ಕತೆಯೋ?

ಯಡಿಯೂರಪ್ಪ-೧ ಯುಗದ ಕನಸು
ಅಂದ ಹಾಗೆ, ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳನ್ನು ಗಮನಿಸಿದ ಕೆಲವರಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ-1 ಯುಗ ಮರುಕಳಿಸುವ ಅನುಮಾನ ಕಾಡುತ್ತಿದೆ. 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು 2011ರಲ್ಲಿ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಯಿತು. ಅಕ್ರಮ ಗಣಿಗಾರಿಕೆಗೆ
ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ ವರದಿ ಯಡಿಯೂರಪ್ಪ ಅವರ ಕುರ್ಚಿಗೆ ಮುಳು
ವಾಗಿದ್ದು ರಹಸ್ಯವೇನಲ್ಲ. ಹೀಗೆ ಅವತ್ತು ಯಡಿಯೂರಪ್ಪ ರಾಜೀನಾಮೆ ಕೊಟ್ಟ ನಂತರ ಈ ಜಾಗಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತರುವುದು ವರಿಷ್ಠರ ಬಯಕೆಯಾಗಿತ್ತು.

ಆದರೆ ಅಷ್ಟೊತ್ತಿಗಾಗಲೇ ಜಗದೀಶ್ ಶೆಟ್ಟರ್ ಅವರನ್ನು ಪಾರಂಪರಿಕ ವೈರಿ ಎಂದು ಪರಿಗಣಿಸಿದ್ದ ಯಡಿಯೂರಪ್ಪ
ಇದನ್ನೊಪ್ಪದೆ ಡಿ.ವಿ.ಸದಾನಂದ ಗೌಡರನ್ನು ತಂದು ಕೂರಿಸಿದರು. ಹೀಗವರು ಸದಾನಂದ ಗೌಡರನ್ನು ತಂದು ಕೂರಿಸುವುದರ ಹಿಂದೆ ಶೋಭಾ ಕರಂದ್ಲಾಜೆ, ಡಿ.ಎನ್.ಜೀವರಾಜ್ ಮತ್ತು ರೇಣುಕಾಚಾರ್ಯ ಅವರಂಥವರ ಒತ್ತಾಸೆ ಇತ್ತು. ಮುಖ್ಯಮಂತ್ರಿಯಾಗುವವರು ಯಡಿಯೂರಪ್ಪರ ನಿಷ್ಠರಾಗಿರಬೇಕು ಎಂಬ ಧೋರಣೆಯೇ ಇದಕ್ಕೆ ಕಾರಣ.
ಅರ್ಥಾತ್, ಅವತ್ತು ಹೈಕಮಾಂಡ್ ವರಿಷ್ಠರು ಬಯಸಿದರೂ ತಮ್ಮ ಕ್ಯಾಂಡಿಡೇಟ್ ಅನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಲಾಗಲಿಲ್ಲ. ಇದಕ್ಕೆ ಯಡಿಯೂರಪ್ಪ ಅವರಿಗಿದ್ದ ಪವರ್ ಕಾರಣವಾಗಿತ್ತು.

ತದನಂತರದ ದಿನಗಳಲ್ಲಿ, ‘ಸದಾನಂದ ಗೌಡರು ನಿಮಗೆ ನಿಷ್ಠರಾಗಿಲ್ಲ’ ಅಂತ ಬೆಂಬಲಿಗರು ದೂರು ಹೊತ್ತು ತರ
ತೊಡಗಿದಾಗ ಪುನಃ ಯಡಿಯೂರಪ್ಪ ಕೆರಳಿದರು. ಹೀಗಾಗಿ ಹಿಂದೆ ತಾವೇ ವಿರೋಧಿಸುತ್ತಿದ್ದ ಜಗದೀಶ್ ಶೆಟ್ಟರ್ ಅವರ ಕೈ ಹಿಡಿದು ಸಿಎಂ ಹುದ್ದೆಯ ಮೇಲೆ ತಂದು ಕೂರಿಸಿದರು. ಹೀಗೆ ಅವತ್ತು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಯಾವ ಪವರ್ ಇತ್ತೋ? ಅದೇ ಪವರ್ ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗಿದೆ. ನಾಳೆ ಮುಡಾ ಪ್ರಕರಣ ತಮ್ಮ ಕುರ್ಚಿಗೆ ಆಪತ್ತು ತಂದರೆ ಸಿದ್ದರಾಮಯ್ಯ ಅವರು ಡಿಕೆಶಿ ಬದಲು ತಮಗೆ ಬೇಕಾದವರು ಸಿಎಂ ಹುದ್ದೆಯ ಮೇಲೆ ಕೂರಲಿ ಅಂತ ಬಯಸಬಹುದು ಎಂಬುದು ಕೆಲವರ ಅನುಮಾನ.

ಅಂದ ಹಾಗೆ, ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ಸುಲಭದ ಮಾತಲ್ಲವಾದರೂ ರಾಜ್ಯ ಕಾಂಗ್ರೆಸ್‌ನಲ್ಲಿ ಮಾತ್ರ ಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚುತ್ತಲೇ ಇದ್ದಾರೆ. ಸಹಜ ನ್ಯಾಯದಡಿ ತಮಗೆ ಸಿಎಂ ಪಟ್ಟ ದಕ್ಕುತ್ತದೆ ಎಂಬುದು ಡಿಸಿಎಂ ಡಿಕೆಶಿ ಲೆಕ್ಕಾಚಾರವಾಗಿದ್ದರೂ, ಶಾಸಕಾಂಗ ಪಕ್ಷದ ಬಲ ತಮ್ಮ ಜತೆಗಿರಲಿದೆ ಎಂಬ ನಂಬಿಕೆಯಿಂದ ಗೃಹ ಸಚಿವ ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಭಾರಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರೇಸಿನಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ತಮಗಿರುವ ಬಲವನ್ನು ನಮಗೆ ವರ್ಗಾಯಿಸುತ್ತಾರೆ ಎಂಬುದು ಈ ನಾಯಕರ ಲೆಕ್ಕಾಚಾರ. ಕುತೂಹಲದ ಸಂಗತಿ ಎಂದರೆ ಇದನ್ನು ಬಲ್ಲ ಹಿರಿಯ ನಾಯಕ ಆರ್.ವಿ.ದೇಶಪಾಂಡೆ, ‘ಸಿದ್ದರಾಮಯ್ಯ ಅವರು ಬಯಸಿದರೆ ನಾನು ಸಿಎಂ ಆಗಲು ಸಿದ್ಧ’ ಎಂದಿದ್ದಾರೆ. ಆದರೆ ಪ್ರಾಕ್ಟಿಕಲಿ ಇದು ಸಾಧ್ಯವೇ ಅಂತ ನೋಡಿದರೆ ಬಹುತೇಕ ಅಸಾಧ್ಯ ಎನ್ನಿಸುತ್ತದೆ. ಕಾರಣ? ಮೊದಲನೆಯದಾಗಿ ಸಿದ್ದರಾಮಯ್ಯ ಅವರ ಪದಚ್ಯುತಿಯನ್ನು ಊಹಿಸಿಕೊಳ್ಳಲು ಕಾಂಗ್ರೆಸ್ ವರಿಷ್ಠರು ತಯಾರಿಲ್ಲ.

ಎರಡನೆಯದಾಗಿ, ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪು ಸಿದ್ದರಾಮಯ್ಯ ಅವರಿಗೆ ವಿರುದ್ಧ
ವಾದರೂ ಕಾನೂನು ಹೋರಾಟದ ಮಾರ್ಗ ಇದ್ದೇ ಇದೆ. ಅದೇ ರೀತಿ, ಕಾನೂನು ಹೋರಾಟ ಸಂಪೂರ್ಣ
ವಿಫಲವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮೊಕದ್ದಮೆ ದಾಖಲಾಗಿ ತನಿಖೆ ಆರಂಭವಾದರೂ ಅದು ಮುಗಿಯಲು
ಇನ್ನಷ್ಟು ಸಮಯ ಬೇಕು. ಮುಂದೆ ತನಿಖೆ ಮುಗಿದ ಮೇಲೆ ಸಿದ್ದರಾಮಯ್ಯ ದೋಷಿ ಅಂತ ಅದು ಹೇಳಬೇಕೆಂದಿಲ್ಲ.
ಬದಲಿಗೆ ಈ ವಿಷಯದಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರಲ್ಲ ಅಂತ ಹೇಳಬಹುದು. ಹೀಗಾಗಿ ಈ ಬಗ್ಗೆ ಎಷ್ಟೇ ಲೆಕ್ಕಾಚಾರ ಹಾಕಿದರೂ ಸಿದ್ದರಾಮಯ್ಯ ಅವರ ಕುರ್ಚಿಗೆ ತಕ್ಷಣ ಅಪಾಯ ಎದುರಾಗುತ್ತದೆ ಅಂತ ಊಹಿಸುವುದು
ಪ್ರಾಕ್ಟಿಕಲ್ ಅಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಮುಂದೆ ಪರಿಸ್ಥಿತಿ ವ್ಯತಿರಿಕ್ತವಾದರೂ ತಮ್ಮ ಜತೆ ಸಾಲಿಡ್ಡಾಗಿ ನಿಂತ ಕಾಂಗ್ರೆಸ್
ಹೈಕಮಾಂಡ್ ಅನ್ನು ಧಿಕ್ಕರಿಸಿ ತಮಗೆ ಬೇಕಾದವರನ್ನು ಸಿಎಂ ಮಾಡಲು ಸಿದ್ದರಾಮಯ್ಯ ಅಣಿಯಾಗುತ್ತಾರೆ ಅಂತ
ಊಹಿಸುವುದೂ ಅಸಾಧ್ಯ. ಹೀಗಾಗಿ ಇವತ್ತಿನ ಬೆಳವಣಿಗೆ ಗಳನ್ನು ಕಣ್ಣ ಮುಂದಿಟ್ಟುಕೊಂಡು ಯಡಿಯೂರಪ್ಪ-೧
ಯುಗ ಮರುಕಳಿಸುತ್ತದೆ ಅನ್ನಲು ಕಾರಣಗಳೇ ಇಲ್ಲ. ಅರ್ಥಾತ್, ಕರ್ನಾಟಕದ ರಾಜಕಾರಣದಲ್ಲಿ ಸಡನ್
ಸಿಎಂ ಗಳು ಉದ್ಭವಿಸುವುದು ಕಷ್ಟ.

ಸಿಕ್ಕರೆ ಡಿಕೆಶಿಗಷ್ಟೇ ಚಾನ್ಸು?
ಇನ್ನು ಪಕ್ಷದ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಸಿಎಂ ಹುದ್ದೆ ತೆರವಾಗುವುದಿಲ್ಲ. ಹಾಗೊಂದು ವೇಳೆ ಅಂಥ
ಸಂದರ್ಭ ಬಂದರೆ ನಿಸ್ಸಂಶಯವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಕಾರಣ? ಕಳೆದ
ವರ್ಷ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸಿಎಂ ಹುದ್ದೆಗೇರುವುದು ಹೇಗೆ ಸಹಜ ನ್ಯಾಯವಾಗಿತ್ತೋ,
ಹಾಗೆಯೇ ಮುಂದಿನ ಕಂತಿನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದೂ ಸಹಜ ನ್ಯಾಯ. ಕಾರಣ?
ಇವತ್ತು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದರ ಹಿಂದೆ ಸಿದ್ದರಾಮಯ್ಯ ಅವರ ಶ್ರಮ ಹೇಗೆ ಕಾರಣವಾಗಿ ದೆಯೋ, ಡಿಕೆಶಿ ಶ್ರಮವೂ ಅಷ್ಟೇ ಕಾರಣವಾಗಿದೆ.

ಅಂದ ಹಾಗೆ, ಚುನಾವಣೆಯಲ್ಲಿ ಕಾಂಗ್ರೆಸ್ ಸೈನ್ಯವನ್ನು ಮುಂದೆ ನಡೆಸಲು ಸಿದ್ದರಾಮಯ್ಯ ಮತ್ತು ಡಿಕೆಶಿ ಇನ್‌ವೆ
ಮಾಡಿದ್ದಾರೆ. ಅವರ ಪ್ರಯತ್ನದ ಫಲವಾಗಿಯೇ, ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿಗಳಿಗೆ ಸಾಲಿಡ್
ಪವರ್ ಸಿಕ್ಕಿದೆ. ಉಳಿದಂತೆ ಕೆಲ ನಾಯಕರು ತಮ್ಮ ಕ್ಷೇತ್ರವನ್ನು ಹೊರತುಪಡಿಸಿ, ಅಕ್ಕಪಕ್ಕದ ಕ್ಷೇತ್ರಗಳಿಗೆ ಇನ್‌ವೆ ಮಾಡಿದ್ದಾರಾದರೂ ಅದನ್ನು ಡಿಕೆಶಿ ಇನ್‌ವೆಮೆಂಟಿನ ಜತೆ ಹೋಲಿಸಲು ಸಾಧ್ಯವೇ ಇಲ್ಲ. ಇನ್ನು ಸಿದ್ದರಾಮಯ್ಯ ಅವರ ನಂತರ, ಬಲಾಬಲವನ್ನು ಆಧರಿಸಿ ಶಾಸಕಾಂಗ ನಾಯಕನನ್ನು ನಿರ್ಧರಿಸಲು ವರಿಷ್ಠರು ಬಯಸುವುದಿಲ್ಲ. ಹಾಗೆ ಮಾಡುವುದು ಎಂದರೆ ಪಕ್ಷ ಹೋಳಾಗಲು, ಆ ಮೂಲಕ ಸರಕಾರ ಉರುಳಲು ದಾರಿ ಮಾಡಿಕೊಟ್ಟಂತೆ ಎಂಬುದು ಅವರಿಗೆ ಗೊತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡುವಾಗ ನಾಯಕ ಪ್ಲಸ್ ಇನ್‌ವೆಸ್ಟರ್ ಮುಖ್ಯ.
1990ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತಲ್ಲ? ಅ ಸಂದರ್ಭದಲ್ಲಿ ಶಾಸಕಾಂಗದ ಬಲಾಬಲವನ್ನು ಪರಿಗಣಿಸಿದ್ದರೆ ಕೆ.ಎಚ್.ಪಾಟೀಲ್ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಅವರ ಬದಲು ಪಕ್ಷದ ಹೈಕಮಾಂಡ್ ಬಂಗಾರಪ್ಪ ಅವರನ್ನು ಸಿಎಂ ಹುದ್ದೆಗೆ ತಂದು ಕೂರಿಸಿತು. ಕಾರಣ? ಕೆಲವೇ ದಿನಗಳಲ್ಲಿ ಎದುರಾಗಲಿದ್ದ ಲೋಕಸಭೆ ಚುನಾವಣೆಗೆ ದೊಡ್ಡ ಮಟ್ಟದ ಫಂಡು ಬೇಕಿತ್ತು. ಅದನ್ನು ಸಂಗ್ರಹಿಸಲು ಕೆ.ಎಚ್.ಪಾಟೀಲರಿಗಿಂತ ಬಂಗಾರಪ್ಪ ಬೆಟರ್ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿತ್ತು.

ಹೀಗಾಗಿಯೇ ಅವತ್ತು ಶಾಸಕಾಂಗ ಪಕ್ಷದಲ್ಲಿ ತಮ್ಮ ಬಲ ಸಾಬೀತುಪಡಿಸಲು ಅಣಿಯಾಗಿದ್ದ ಕೆ.ಎಚ್.ಪಾಟೀಲರಿಗೆ
ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿ ಫೊನು ಮಾಡಿ ತಮ್ಮ ಮನದಿಂಗಿತವನ್ನು ತೋಡಿಕೊಂಡರು. ‘ಇವತ್ತು ನಾವು
ಬಂಗಾರಪ್ಪ ಅವರನ್ನು ಸಿಎಂ ಹುದ್ದೆಗೆ ತರಲು ಬಯಸಿದ್ದೇವೆ. ದಯವಿಟ್ಟು ಸಹಕರಿಸಿ’ ಅಂತ ಅವರು ಹೇಳಿದಾಗ,
‘ಸಹಕಾರ ಕೊಡಲು ಏಕೆ ಕೇಳುತ್ತೀರಿ ಸರ್. ಆರ್ಡರ್ ಮಾಡಿ. ನಿಮ್ಮ ಆರ್ಡರಿಗೆ ನಾನು ತಲೆಬಾಗುತ್ತೇನೆ’ ಎಂದರು
ಕೆ.ಎಚ್.ಪಾಟೀಲ.

ಇದರರ್ಥ ಬೇರೇನೂ ಅಲ್ಲ. ನಾಯಕರಾಗುವವರು ಮುಂದಿನ ಜವಾಬ್ದಾರಿಗಳನ್ನು ಹೊರಲು ಶಕ್ತರಾಗಿರಬೇಕು ಎಂಬುದು ಯಾವುದೇ ಪಕ್ಷದ ವರಿಷ್ಠರ ಬಯಕೆ. ಈ ವಿಷಯ ಬಂದಾಗ ಇವತ್ತು ಸಿದ್ದರಾಮಯ್ಯ ನಂತರ ಚಾನ್ಸು ಪಡೆಯುವವರಿದ್ದರೆ ಅದು ಒನ್ ಆಂಡ್ ಓನ್ಲಿ ಡಿಕೆಶಿ. ‘ಇಲ್ಲ, ನಾಯಕತ್ವದ ಆಯ್ಕೆಗೆ ಶಾಸಕಾಂಗದ ಬಲಾಬಲವೇ ಅಂತಿಮ’ ಎಂದು ಯಾರಾದರೂ ಪಟ್ಟು ಹಿಡಿದರೆ ಸೋನಿಯಾ ಗಾಂಧಿ ಅವರಾಗಲೀ, ರಾಹುಲ್ ಗಾಂಧಿ ಅವರಾಗಲೀ ಇದಕ್ಕೆ ಅವಕಾಶ ಕೊಡುವ ಸಾಧ್ಯತೆ ಇಲ್ಲ.

ಒಂದು ವೇಳೆ ಇದನ್ನು ಧಿಕ್ಕರಿಸಿ, ‘ಸರಕಾರ ಉರುಳಿದ್ರೂ ಪರವಾಗಿಲ್ಲ. ನಮ್ಮ ದಾರಿ ನಮಗೆ’ ಅಂತ ಯಾರಾ
ದರೂ ಹೊರಟರೆ ಕೆಲ ದಿನಗಳ ಕಾಲ ಒಂದಷ್ಟು ಶಾಸಕರು ಬೆಂಬಲಿಸಬಹುದು. ಆದರೆ ಸರಕಾರ ಉರುಳು ವುದು
ಗ್ಯಾರಂಟಿ ಅನ್ನಿಸಿದರೆ ತುಂಬ ಜನ ‘ಪೀಚೇ ಮುಡ್’ ಅಂತ ಕೂಗಿ ಹಿಂದೆ ತಿರುಗುತ್ತಾರೆ. ಹೈಕಮಾಂಡ್ ಜತೆ ನಿಲ್ಲುತ್ತಾರೆ. ಅಂದ ಹಾಗೆ, ಇವೆಲ್ಲವನ್ನೂ ಮೀರಿ ಪರ್ಯಾಯ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತದಾ? ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಹುzಯಲ್ಲಿರುವ ತನಕ ಇಂಥ ಸವಾಲು ಉದ್ಭವವಾಗುವುದಿಲ್ಲ.