Friday, 22nd November 2024

Rahul Gandhi: ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಅಮೆರಿಕದಲ್ಲಿ ರಾಹುಲ್‌ ಆಕ್ರೋಶ; ದೇಶದ್ರೋಹಿಗಳಿಗೆ ಇದೆಲ್ಲಾ ಅರ್ಥ ಆಗಲ್ಲ ಎಂದು ಬಿಜೆಪಿ ತಿರುಗೇಟು

Rahul Gandhi

ಡಲ್ಲಾಸ್‌: ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ. ಇದಕ್ಕೆ ಮೂಲ ಕಾರಣ ಆರ್‌ಎಸ್‌ಎಸ್‌(RSS) ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕಿಡಿಕಾರಿದ್ದಾರೆ. ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಅವರು ಟೆಕ್ಸಾಸ್‌ನಲ್ಲಿ ಭಾರತೀಯ ಅಮೇರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ(PM Narendra Modi), ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವನ್ನು ಟೀಕಿಸಿದ್ದಾರೆ.

ಅಮೇರಿಕಾದಲ್ಲಿ RSS ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ಭಾರತವು ಒಂದು ಪರಿಕಲ್ಪನೆ ಎಂದು ಆರ್‌ಎಸ್‌ಎಸ್ ನಂಬುತ್ತದೆ ಮತ್ತು ಭಾರತವು ಅನೇಕ ವಿಚಾರಗಳೆಂದು ನಾವು ನಂಬುತ್ತೇವೆ. ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಅವಕಾಶ ನೀಡಬೇಕು ಎಂದು ನಾವು ನಂಬುತ್ತೇವೆ. ಭಾರತದ ಪ್ರಧಾನಿಯವರು ಭಾರತದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತದಲ್ಲಿ ಲಕ್ಷಾಂತರ ಜನರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ. ಮೋದಿಯವರು ಜನರ ಮನಸ್ಸಿನಲ್ಲಿ ಭಯವನ್ನು ತುಂಬುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಫಲಿತಾಂಶದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಯವು ಜನರಲ್ಲಿ ಮರೆಯಾಗಿದೆ ಎಂದು ಹೇಳಿದರು.

ಇನ್ನು, ಭಾರತದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಗೆ ಮೋದಿ ಸರ್ಕಾರದ ನೀತಿಗಳೇ ಕಾರಣ ಪ್ರಪಂಚದಲ್ಲಿ ಹಲವಾರು ಕಡೆ ನಿರುದ್ಯೋಗ ಸಮಸ್ಯೆಯಿದೆ. ಭಾರತದಲ್ಲಿಯೂ ನಿರುದ್ಯೋಗ ಸಮಸ್ಯೆಯಿದೆ. ಆದರೆ, ಚೀನಾ, ವಿಯೆಟ್ನಾಂ ಸೇರಿದಂತೆ ಕೆಲವು ದೇಶಗಳಲ್ಲಿ ಆ ಸಮಸ್ಯೆಯಿಲ್ಲ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ. ಅವರ ಯಾವುದೇ ಐಡಿಯಾಗಳು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ದೂರಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿಯೂ ಬಿಜೆಪಿಯ ಸಿದ್ಧಾಂತಗಳ ಹಸ್ತಕ್ಷೇಪದಿಂದಾಗಿ ಅಲ್ಲಿಯೂ ವೈಚಾರಿಕತೆ ಮೊಟಕುಗೊಂಡಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ವಿಶ್ವವಿದ್ಯಾಲಯಗಳಲ್ಲಿ ಆರೆಸ್ಸೆಸ್ ಪ್ರಭಾವಿತ ವ್ಯಕ್ತಿಗಳನ್ನು ಉಪಕುಲಪತಿಗಳಾಗಿ ನೇಮಿಸಲಾಗುತ್ತಿದೆ. ಅದರಿಂದ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಷಯಾಂತರಗಳಾಗುತ್ತಿವೆ ಎಂದು ಆರೋಪಿಸಿದ್ದಾರೆ.

ರಾಹುಲ್‌ ವಿರುದ್ಧ ಬಿಜೆಪಿ ಕಿಡಿ

ಇನ್ನು ಆರ್‌ಎಸ್‌ಎಸ್‌ ವಿರುದ್ಧ ರಾಹುಲ್‌ ಗಾಂಧಿ ಹೇಳಿಕೆಗೆ ಬಿಜೆಪಿ ನಅಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ಕುರಿತು ರಾಹುಲ್ ಗಾಂಧಿಯವರ ಟೀಕೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದು, ರಾಹುಲ್‌ ಗಾಂಧಿಯವರಿಗೆ ಅವರ ಅಜ್ಜಿಯ ಬಳಿಗೆ ಹೋಗುವ ತಂತ್ರಜ್ಞಾನವಿದ್ದರೆ, ಹೋಗಿ ಆರ್‌ಎಸ್‌ಎಸ್ ಪಾತ್ರದ ಬಗ್ಗೆ ಕೇಳಿ ತಿಳಿದುಕೊಳ್ಳಲಿ. ಅಥವಾ ಇತಿಹಾಸದ ಪುಟಗಳಲ್ಲಿ ನೋಡಿ. ಅದರ ಬಗ್ಗೆ ತಿಳಿದುಕೊಳ್ಳಿ. ಒಬ್ಬ ದೇಶದ್ರೋಹಿ ಆರ್‌ಎಸ್‌ಎಸ್‌ ಬಗ್ಗೆ ಅರಿಯಲಾರ. ಆರ್‌ಎಸ್‌ಎಸ್ ಭಾರತದ ಮೌಲ್ಯಗಳು ಮತ್ತು ಸಂಸ್ಕೃತಿಯನ್ನೊಳಗೊಂಡಿರುವ ಸಂಘಟನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Sam Pitroda: ʻರಾಹುಲ್‌ ಗಾಂಧಿ ಪಪ್ಪು ಅಲ್ಲʼ- ಪ್ರತಿಪಕ್ಷಗಳಿಗೆ ಸ್ಯಾಮ್‌ ಪಿತ್ರೋಡಾ ಟಾಂಗ್‌