Sunday, 10th November 2024

EV Vehicles : ಬೆಂಗಳೂರು, ಧಾರವಾಡದ ಜನರಿಗೆ ಇವಿ ವಾಹನದ ಬಗ್ಗೆ ಆಸಕ್ತಿ ಹೆಚ್ಚು

EV vehicles

ಬೆಂಗಳೂರು: ಬೆಂಗಳೂರು (Bangalore) ಹಾಗೂ ಧಾರವಾಡದ (Dharawad) ನಿವಾಸಿಗಳು ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವುದು ಇತ್ತೀಚಿನ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಅವರು ಕೊನೇ ಮೈಲಿ ವಿತರಣಾ ವ್ಯವಸ್ಥೆ ವಿಚಾರಕ್ಕೆ ಬಂದಾಗ ಬ್ಯಾಟರಿ ಚಾಲಿತ ವಾಹನಗಳನ್ನು (EV Vehicles) ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಬದ್ಧರಾಗಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 80.1ರಷ್ಟು ಮಂದಿ ಪರಿಸರಕ್ಕೆ ವಿಷಕಾರಿ ಹೊಗೆ ಹೊರಸೂಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ. ಎರಡೂ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶೇಕಡಾ 96ರಷ್ಟು ಮಂದಿ ಕೊನೇ ಮೈಲಿ ಸಾರಿಗೆಯಾಗಿ ಎಲೆಕ್ಟ್ರಿಕ್‌ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರ ಮೂಲಕ ವಾಯುಮಾಲಿನ್ಯ ತಡೆಗಟ್ಟಬಹುದು ಎಂಬುದನ್ನು ಬಲವಾಗಿ ನಂಬಿದ್ದಾರೆ.

ಕೊನೇ ಮೈಲಿ ವಿತರಣೆ ವ್ಯವಸ್ಥೆ ಎಂದರೆ, ವಿತರಣಾ ಕೇಂದ್ರದಿಂದ ಗ್ರಾಹಕರ ಬಾಗಿಲಿಗೆ ಸರಕುಗಳನ್ನು ಸಾಗಿಸುವ ಸಾರಿಗೆ ವ್ಯವಸ್ಥೆಯಾಗಿದೆ . ವಾಸ್ತವವೇನೆಂದರೆ 2024ರ ವೇಳೆಗೆ ಕೊನೆಯ ಮೈಲಿ ವಿತರಣಾ ವಲಯವೊಂದೇ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲವಾದ ಇಂಗಾಲದ ಡೈಆಕ್ಸೈಡ್ ಅನ್ನು 500,000 ಟನ್‌ನಷ್ಟು ವಾತಾವರಣಕ್ಕೆ ಬಿಡುಗಡೆ ಮಾಡಲಿದೆ ಎಂಬುದು ಸಮೀಕ್ಷೆಗಳ ವಿವರಣೆ . ಹೀಗಾಗಿ ಎರಡು ನಗರಗಳ ಜನರು ಇವಿ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಲಿ ಎಂದು ಬಯಸಿದ್ದಾರೆ.

ಕೊನೇ ಮೈಲಿ ವಿತರಣಾ ವ್ಯವಸ್ಥೆಯ ಗ್ರಾಹಕರನ್ನು ಒಳಗೊಂಡಿರುವ ಈ ಸಮೀಕ್ಷೆಯ ಭಾಗವಾಗಿರುವ ಈ ಸಂಶೋಧನೆಗಳನ್ನು ವಿಶ್ವ ಇವಿ ದಿನವಾಗಿರುವ ಸೆಪ್ಟೆಂಬರ್ 9ರ ಸೋಮವಾರ ಏರ್ಪಡಿಸಲಾದ ವೆಬಿನಾರ್‌ನಲ್ಲಿ ಸಸ್ಟೈನಬಿಲಿಟಿ ಮೊಬಿಲಿಟಿ ನೆಟ್ವರ್ಕ್ (ಎಸ್ಎಂಎನ್) ಬಿಡುಗಡೆ ಮಾಡಿದೆ.

ಪ್ರಮುಖ ಇ ಕಾಮರ್ಸ್ ಸಂಸ್ಥೆಗಳಿಗೆ ಸಲಹೆ

ಎಲೆಕ್ಟ್ರಿಕ್ ವಾಹನಗಳಿಗೆ ಬದಲಾವಣೆಯಾಗುವಲ್ಲಿ ಕೊನೆಯ ಮೈಲಿ ವಿತರಣಾ ವಲಯದಲ್ಲಿ ಗ್ರಾಹಕರ ಗ್ರಹಿಕೆಗಳು ಮತ್ತು ಒಳನೋಟಗಳು’ ಎಂಬ ಶೀರ್ಷಿಕೆಯಡಿ ಈ ಸಮೀಕ್ಷೆ ನಡೆಸಲಾಗಿದೆ. ಲಾಸ್ಟ್ ಮೈಲ್ ಡೆಲಿವರಿ ಕಂಪನಿಗಳ ಫ್ಲೀಟ್ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾವಣೆಯಾಗಬೇಕಾಗಿರುವ ಪ್ರಮುಖ ಅಂಶಗಳನ್ನು ಮೌಲ್ಯಮಾಪನ ಮಾಡಲು ಈ ಸಮೀಕ್ಷೆ ನಡೆಸಲಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ , ಜೊಮಾಟೊ, ಸ್ವಿಗ್ಗಿ, ನೈಕಾ, ಅಜಿಯೊ, ಬಿಗ್‌ಬಾಸ್ಕೆಟ್, ಜಿಯೋ ಮಾರ್ಟ್, ಸ್ನ್ಯಾಪ್‌ಡೀಲ್‌ , ಜೆಪ್ಟೊ, ಡಿಎಚ್ಎಲ್ / ಬ್ಲೂಡಾರ್ಟ್, ಸ್ವಿಗ್ಗಿ ಮಾರ್ಟ್, ಗ್ರೋಫರ್ಸ್ / ಬ್ಲಿಂಕಿಟ್, ಡಿಟಿಡಿಸಿ, ಟಾಟಾಕ್ಲಿಕ್, ಡೆಲಿವರ್, ಡಂಜೊ, ಫೆಡೆಕ್ಸ್ ಮತ್ತು ಇತರರು ಸೇರಿದಂತೆ ಕೊನೇ ಮೈಲಿ ವಿತರಣೆಯಲ್ಲಿ ತೊಡಗಿರುವ ಬ್ರಾಂಡ್‌ಗಳಿಗೆ ಸಂಬಂಧಿಸಿದ ವಾಯುಮಾಲಿನ್ಯದ ಬಗ್ಗೆ ಸಾರ್ವಜನಿಕ ಗ್ರಹಿಕೆ ಮತ್ತು ಬೇಡಿಕೆಯನ್ನು ಈ ಸಮೀಕ್ಷೆಯು ಅಳೆಯುತ್ತಿದೆ.

ಸಮೀಕ್ಷೆಯ ಪ್ರಮುಖ ಅಂಶಗಳು ಇಲ್ಲಿವೆ

ವಾಯುಮಾಲಿನ್ಯ ಕಡಿಮೆ ಮಾಡುವಲ್ಲಿ ಕಂಪನಿಗಳು ಫ್ಲೀಟ್‌ಗಳನ್ನು ಇವಿಗೆ ಪರಿವರ್ತನೆ ಮಾಡುವುದು ಮುಖ್ಯ ಎಂದು 98.1% ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. ಶೇಕಡಾ 80.1% ಮಂದಿ ಹೊರಸೂಸುವಿಕೆ ನಿಯಂತ್ರಣಕ್ಕೆ ತಮ್ಮ ಬದ್ಧತೆಗಳನ್ನು ಪ್ರದರ್ಶಿಸಿದ್ದಾರೆ. 45.7% ಸಮೀಕ್ಷೆಯಲ್ಲಿ ಪಾಲ್ಗೊಂಡವರು ನಗರದ ಗಾಳಿಯ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. 60% ಮಂದಿ ಕಂಪನಿಗಳ ಇವಿ ಪರಿವರ್ತನೆ ಯೋಜನೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. 28% ಮಂದಿ ವಾಯುಮಾಲಿನ್ಯ ತಗ್ಗಿಸುವ ಕ್ರಮಗಳ ಬಗ್ಗೆ ಕಂಪನಿಗಳಿಂದ ಬಹಳ ಪರಿಣಾಮಕಾರಿ ಸಂವಹನ ನಡೆಸಿದ್ದಾರೆ.

19.6% ಸಮೀಕ್ಷೆಯಲ್ಲಿ ಪಾಲ್ಗೊಂಡವರು ಇವಿ ಪರಿವರ್ತನೆಯ ಉಪಕ್ರಮಗಳಲ್ಲಿ ಕಂಪನಿಯ ಬದ್ಧತೆಗಳ ಬಗ್ಗೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು 97% ಮಂದಿ ನಂಬಿದ್ದಾರೆ. 77% ಮಂದಿ ತಮ್ಮ ಬ್ರಾಂಡ್ ನಿಂದ ಪ್ರತಿಸ್ಪರ್ಧಿ ಬ್ರಾಂಡ್‌ಗೆ ಬದಲಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ganesh Chaturthi 2024 : ಒಂದೇ ದಿನ 48 ಲಕ್ಷ ರೂ.ಗಿಂತ ಹೆಚ್ಚು ಕಾಣಿಕೆ ಪಡೆದ ಮುಂಬಯಿಯ ಗಣೇಶ

ಸಮೀಕ್ಷೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯ ಸ್ಪಷ್ಟವಾಗಿತ್ತು. ಕಂಪನಿಗಳು ಬೆಲೆ ಏರಿಕೆಯನ್ನು ಆಶ್ರಯಿಸದೆ ಸುಸ್ಥಿರತೆಗೆ ಆದ್ಯತೆ ನೀಡಬೇಕು ಎಂಬುದೇ ಅವರ ಆಶಯ. ಗ್ರಾಹಕರಿಗೆ ಹೆಚ್ಚುವರಿ ಶುಲ್ಕಗಳ ಹೊರೆ ಹಾಕುವ ಬದಲು ಸುಸ್ಥಿರತೆ ಉಪಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಬಹುಪಾಲು ಮಂದಿ ಒತ್ತಿ ಹೇಳಿದ್ದಾರೆ.

ದೆಹಲಿ (380), ಮುಂಬೈ (380) ಮತ್ತು ಪುಣೆ (380), ಅಸನ್ಸೋಲ್ (373) ಮತ್ತು ಕೋಲ್ಕತ್ತಾ (371), ಕೊಯಮತ್ತೂರು (380) ಮತ್ತು ಚೆನ್ನೈ (372), ಬೆಂಗಳೂರು (372) ಮತ್ತು ಹುಬ್ಬಳ್ಳಿ-ಧಾರವಾಡ (374) ಮತ್ತು ಅಹಮದಾಬಾದ್ (370) ಸೇರಿದಂತೆ 6 ರಾಜ್ಯಗಳು ಮತ್ತು 10 ನಗರಗಳಲ್ಲಿ ಒಟ್ಟು 3800 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.