Friday, 22nd November 2024

Invest Karnataka: ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ ಸಿಂಗಾಪುರ ಉದ್ಯಮಿಗಳು

Invest Karnataka

ಬೆಂಗಳೂರು: ಸಿಂಗಾಪುರದ ಉದ್ಯಮಿಗಳು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ (Invest Karnataka) ಮುಂದೆ ಬಂದರೆ ಅವರಿಗೆ ಅಗತ್ಯವಾಗಿ ಬೇಕಾದ ಭೂಮಿ ಮತ್ತಿತರ ಮೂಲಸೌಕರ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಲ್ಲಿನ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಸೋಮವಾರ ತಮ್ಮನ್ನು ಭೇಟಿಯಾದ `ಸಿಂಗಾಪುರ್ ಬಿಜಿನೆಸ್ ಫೆಡರೇಶನ್’ನ ಉನ್ನತ ಮಟ್ಟದ ನಿಯೋಗದ ಸದಸ್ಯರೊಂದಿಗೆ ಅವರು ಉನ್ನತ ಮಟ್ಟದ ಮಾತುಕತೆ ನಡೆಸಿದರು. ಫೆಡರೇಶನ್ನಿನ ಉಪಾಧ್ಯಕ್ಷ ಪ್ರಸೂನ್ ಮುಖರ್ಜಿ ಈ ನಿಯೋಗದ ನೇತೃತ್ವ ವಹಿಸಿದ್ದರು.

ನಿಯೋಗದೊಂದಿಗೆ ಮಾತನಾಡಿದ ಸಚಿವರು, 2025 ರ ಫೆಬ್ರವರಿ 12 ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಜಾಗತಿಕ ಹೂಡಿಕೆದಾರರ ಸಮಾವೇಶʼ ದಲ್ಲಿ ಸಿಂಗಾಪುರದ ಉದ್ದಿಮೆಗಳು ಭಾಗವಹಿಸಬೇಕು ಎಂದು ಆಹ್ವಾನಿಸಿದರು.

ಈ ಸುದ್ದಿಯನ್ನೂ ಓದಿ | Money Tips: ಸಂಬಳದಲ್ಲಿ ದೊಡ್ಡ ಮೊತ್ತದ ಹಣ ಉಳಿಸಬೇಕೆ? 50:30:20 ನಿಯಮ ಪಾಲಿಸಿ!

ಮಾತುಕತೆಯ ಸಂದರ್ಭದಲ್ಲಿ ಸಿಂಗಾಪುರದ ಅಪ್ಲೈಡ್ ಟೋಟಲ್ ಕಂಟ್ರೋಲ್ ಟ್ರೀಟ್ಮೆಂಟ್ ಪಿಟಿಇ ಲಿಮಿಟೆಡ್, ಬಯೋಮೆಡ್ ಸರ್ವೀಸಸ್ ಪಿಟಿಇ ಲಿಮಿಟೆಡ್, ಕೇಟರಿಂಗ್ ಸೊಲ್ಯೂಷನ್ಸ್ ಲಿ, ಹರ್ಮಿಸ್ ಎಪಿಟೆಕ್ ಕಾರ್ಪೊರೇಷನ್, ಇನ್ಸ್ಫಿಯರ್ ಟೆಕ್ನಾಲಜಿ, ರೀಟ್ಜ್ ಲಿಮಿಟೆಡ್, ಯೂನಿವರ್ಸಲ್ ಸಕ್ಸಸ್ ಎಂಟರ್ಪ್ರೈಸಸ್ ಲಿಮಿಟೆಡ್ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದವು. ಇದಕ್ಕೆ ಸ್ಪಂದಿಸಿದ ಸಚಿವರು, ಭೂಮಿ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಫೆಡರೇಶನ್ನಿನ ಸದಸ್ಯರು, ಬೆಂಗಳೂರಿನಲ್ಲಿ `ಸಿಂಗಾಪುರ ಬಿಜಿನೆಸ್ ಫೆಡರೇಶನ್’ನ ಕಚೇರಿಯನ್ನು ತೆರೆಯಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಅಲ್ಲದೆ, ರಾಜ್ಯ ಸರ್ಕಾರವು ಸಹಕಾರ ನೀಡಿದರೆ ಕರ್ನಾಟಕದಲ್ಲಿ ಸಿಂಗಾಪುರ್ ಇರುವಂತೆ ಮಾಡಲಾಗುವುದು. ಈ ರೀತಿಯ ಸೌಲಭ್ಯ ಮತ್ತು ಪ್ರಾವೀಣ್ಯ ಹಾಗೂ ಬಂಡವಾಳ ಹೂಡಿಕೆಯ ಶಕ್ತಿ ತಮ್ಮ ಒಕ್ಕೂಟಕ್ಕಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Dr G Parameshwar: ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ, ಸ್ಥಳ ಪರಿಶೀಲಿಸಿದ ಸಚಿವ ಪರಮೇಶ್ವರ್ 

ನಿಯೋಗದಲ್ಲಿ ಹೆಸರಾಂತ ಉದ್ಯಮಿಗಳಾದ ಜೆಫ್ರಿ ಗುವೋ, ಡಗ್ಲಾಸ್ ಟ್ಯಾನ್, ಸಮಂತಾ ಟಿಯೋ, ಚೆನ್ ಚಿಯೋಂಗ್, ಮಾರ್ಕಸ್ ಸಿಯಾ, ಪಪ್ಪು ಮಿಲಿಂದ್ ಸುರೇಶ್, ಎಸ್ ಮಹೇಂದ್ರನ್, ಜೆಫ್ರಿ ಕಾಂಗ್ ಮತ್ತು ಶಂಭುನಾಥ್ ರೇ ಇದ್ದರು. ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.