ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud) ಕೋಲ್ಕೊತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ವೇಳೆ ಧ್ವನಿ ತಗ್ಗಿಸಿ ಮಾತನಾಡುವಂತೆ ವಕೀಲರಿಗೆ ಸಲಹೆ ಕೊಟ್ಟ ಪ್ರಸಂಗ ನಡೆಯಿತು. ನೀವು ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡುತ್ತೀರಾ ಅಥವಾ ನ್ಯಾಯಾಲಯದ ಹೊರಗಿನ ಗ್ಯಾಲರಿಯನ್ನು ಉದ್ದೇಶಿಸಿ ಮಾತನಾಡುತ್ತೀರಾ ಎಂದು ಪ್ರಶ್ನಿಸುವ ಮೂಲಕ ವಾದ ಮಾಡುವಾಗ ಕಿರುಚಾಡಬಾರದು ಎಂದು ಹೇಳಿದರು.
ಮುಖ್ಯನ್ಯಾಯಮೂರ್ತಿ ಜತೆ ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸರ್ಕಾರಿ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ಘಟನೆಯ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನಾ ನಿರತರ ಮೇಲೆ ವಕೀಲರು ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ತೋರಿಸಲು ವೀಡಿಯೊಗಳು ಮತ್ತು ಛಾಯಾಚಿತ್ರಗಳು ತಮ್ಮ ಬಳಿ ಇವೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.
ವಕೀಲ ಕೌಸ್ತವ್ ಬಾಗ್ಚಿ ಕೂಡ ಬಿಜೆಪಿ ನಾಯಕರು. ಅವರುಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ. ಸಿಬಲ್ ಅವರ ಕಲ್ಲು ತೂರಾಟದ ಆರೋಪಕ್ಕೆ ಪ್ರತಿಕ್ರಿಯಿಸಿದ ವಕೀಲರು, ಹಿರಿಯ ವಕೀಲರು ನ್ಯಾಯಾಲಯದಲ್ಲಿ ಇಂತಹ ಹೇಳಿಕೆಗಳನ್ನು ಹೇಗೆ ನೀಡಲು ಸಾಧ್ಯ ಎಂದು ಜೋರಾಗಿ ಪ್ರಶ್ನಿಸಿದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನಗೊಂಡರು.
ನೀವು ನ್ಯಾಯಾಲಯದ ಹೊರಗೆ ಗ್ಯಾಲರಿಯನ್ನು ಉದ್ದೇಶಿಸಿ ಮಾತನಾಡಲು ಪ್ರಯತ್ನಿಸುತ್ತಿದ್ದೀರಾ? ಕಳೆದ ಎರಡು ಗಂಟೆಗಳಿಂದ ನಾನು ನಿಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದೇನೆ. “ನೀವು ಮೊದಲು ನಿಮ್ಮ ಧ್ವನಿಯ ಗತಿಯನ್ನು ಕಡಿಮೆ ಮಾಡಬಹುದೇ? ಮುಖ್ಯ ನ್ಯಾಯಾಧೀಶರ ಮಾತನ್ನು ಕೇಳಿ. ನಿಮ್ಮ ಧ್ವನಿಯನ್ನು ತಗ್ಗಿಸಿ. ನಿಮ್ಮ ಮುಂದೆ ಮೂವರು ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಬೇಕು. ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಈ ಪ್ರಕ್ರಿಯೆಗಳನ್ನು ವೀಕ್ಷಿಸುತ್ತಿರುವ ದೊಡ್ಡ ಪ್ರೇಕ್ಷಕರಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಪೀಠಕ್ಕೆ ಕ್ಷಮೆಯಾಚನೆ
ಹೆಚ್ಚಿನ ವಕೀಲರು ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸಲು ಪ್ರಾರಂಭಿಸಿದಾಗ, ಮುಖ್ಯ ನ್ಯಾಯಮೂರ್ತಿಗಳು, “7-8 ಜನರು ಒಂದೇ ಸಮಯದಲ್ಲಿ ವಾದಿಸುವ ಈ ರೀತಿ ಸಮರ್ಥನೀಯ ಅಲ್ಲಎಂದು ಹೇಳಿದರು. ಬಳಿಕ ಮುಂದಿನ ಮಂಗಳವಾರ ಈ ಪ್ರಕರಣದಲ್ಲಿ ಹೊಸ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿತು.
ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಮಾದರಿಗಳನ್ನು ಕಳುಹಿಸಲು ಕೇಂದ್ರ ಸಂಸ್ಥೆ ನಿರ್ಧರಿಸಿದೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದರು.
“ನಾವು ವಿಧಿವಿಜ್ಞಾನ ಪರೀಕ್ಷಾ ವರದಿಯನ್ನು ಪಡೆದಿದ್ದೇವೆ. ಬೆಳಿಗ್ಗೆ 9: 30 ಕ್ಕೆ ವೈದ್ಯೆಯ ಮೃತದೇಹ ಪತ್ತೆಯಾದಾಗ ಆಕೆಯ ಜೀನ್ಸ್ ಮತ್ತು ಒಳ ಉಡುಪುಗಳನ್ನು ತೆಗೆದು ಹತ್ತಿರದಲ್ಲೇ ಮಲಗಿಸಲಾಗಿತ್ತು. ದೇಹ ಅರೆನಗ್ನವಾಗಿತ್ತು ಮತ್ತು ಗಾಯದ ಗುರುತುಗಳು ಇದ್ದವು. ಸ್ಯಾಂಪಲ್‌ಗಳನ್ನು ಪಶ್ಚಿಮ ಬಂಗಾಳದ ಸಿಎಫ್ಎಸ್ಎಲ್‌ಗೆ ಕಳುಹಿಸಿದ್ದಾರೆ. ಮಾದರಿಯನ್ನು ಏಮ್ಸ್‌ಗೆ ಕಳುಹಿಸುವ ನಿರ್ಧಾರವನ್ನು ಸಿಬಿಐ ತೆಗೆದುಕೊಂಡಿದೆ” ಎಂದು ಅವರು ಹೇಳಿದರು.