Friday, 22nd November 2024

GST Council meeting: ವಿಮೆ ಪ್ರೀಮಿಯಂ ಮೇಲಿನ ಜಿಎಸ್‌ಟಿ ಇಳಿಕೆ ನಿರ್ಧಾರ ಮುಂದೂಡಿಕೆ

GST Council meeting

ಹೊಸ ದಿಲ್ಲಿ: ಆರೋಗ್ಯ ವಿಮೆಯ ಪ್ರೀಮಿಯಂ (GST on Insurance Premium) ಮೇಲಿನ ಶೇ.18 ಜಿಎಸ್‌ಟಿ ಇಳಿಕೆಗೆ ಸಂಬಂಧಿಸಿ ಮಂಡಳಿಯ ಸಭೆಯಲ್ಲಿ (GST Council meeting) ಒಮ್ಮತ ಉಂಟಾಗಿದ್ದರೂ, ಈ ಕುರಿತ ಅಂತಿಮ ನಿರ್ಧಾರವನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ಅದೇ ರೀತಿ ಪೇಮೆಂಟ್‌ ಅಗ್ರಿಗೇಟರ್‌ಗಳಿಗೆ, 2,000 ರೂ. ಗಿಂತ ಕಡಿಮೆ ಮೊತ್ತದ ಯುಪಿಐ ವರ್ಗಾವಣೆಗಳ ಮೇಲೆ ಶೇ.18 ಜಿಎಸ್‌ಟಿ ವಿಧಿಸುವ ಪ್ರಸ್ತಾಪವನ್ನು ಮುಂದಿನ ಪರಿಶೀಲನೆಗೋಸ್ಕರ ಫಿಟ್‌ಮೆಂಟ್‌ ಸಮಿತಿಗೆ ಒಪ್ಪಿಸಲಾಗಿದೆ.

ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಪ್ರೀಮಿಯಂ (Taxation of insurance premium) ಮೇಲಿನ ಜಿಎಸ್‌ಟಿ ದರ ಇಳಿಸುವ ಬಗ್ಗೆ ಜಿಸ್‌ಟಿ ಮಂಡಳಿಯಲ್ಲಿ ಸಹಮತ ವ್ಯಕ್ತವಾಗಿದ್ದರೂ, ಅದರ ಪ್ರಕ್ರಿಯೆಗಳ ಬಗ್ಗೆ ಮುಂದಿನ ಕೌನ್ಸಿಲ್‌ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.

54ನೇ ಜಿಎಸ್‌ಟಿ ಮಂಡಳಿಯ ಸಭೆಯ ನೇತೃತ್ವವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಹಿಸಿದ್ದರು. ಪೇಮೆಂಟ್‌ ಅಗ್ರಿಗೇಟರ್‌ಗಳಿಗೆ 2,000 ರೂ.ಗಿಂತ ಕಡಿಮೆ ಮೊತ್ತದ ಯುಪಿಐ ವರ್ಗಾವಣೆಗೆ ಸಂಬಂಧಿಸಿ 18 ಪರ್ಸೆಂಟ್‌ ಜಿಎಸ್‌ಟಿ ವಿಧಿಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಉತ್ತರಾಖಂಡ್‌ ಹಣಕಾಸು ಸಚಿವ ಪ್ರೇಮಚಂದ್‌ ಅಗ್ರವಾಲ್‌ ಅವರು ತಿಳಿಸಿದರು.

ಜಿಎಸ್‌ಟಿ ಮಂಡಳಿಯ ಫಿಟ್‌ಮೆಂಟ್‌ ಸಮಿತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಅಧಿಕಾರಿಗಳು ಇರುತ್ತಾರೆ. ಈ ಸಮಿತಿಯ ಪ್ರತಿನಿಧಿಗಳು ಸಭೆಯಲ್ಲಿ, ಜೀವ ವಿಮೆ, ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲೆ ಜಿಎಸ್‌ಟಿ ಇಳಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿವರಣೆಗಳನ್ನು ನೀಡಿದರು. ಒಂದು ವೇಕೆ ಆರೋಗ್ಯ ವಿಮೆ ಪ್ರೀಮಿಯಂ ಮೇಲಿನ ಜಿಎಸ್‌ಟಿ ಇಳಿಕೆಯಾದರೆ, ವೈಯಕ್ತಿಕವಾಗಿ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ನಿರಾಳವಾಗಲಿದೆ. ಪಾಲಿಸಿದಾರರಿಗೆ ಅನುಕೂಲವಾಗಲಿದೆ ಎಂದು ವಿಮೆ ಕಂಪನಿಗಳೂ ಅಭಿಪ್ರಾಯಪಟ್ಟಿವೆ. ಆರೋಗ್ಯ ವಿಮೆಗಳ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಇಳಿಸಬೇಕು ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳೂ ಒತ್ತಾಯಿಸಿವೆ. ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರೂ ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದರು.

ವಿನಾಯಿತಿ ಯಾವುದಕ್ಕೆ?:
ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಲುವಾಗಿ ಕೈಗೊಳ್ಳುವ ಸಲುವಾಗಿ ಚಟುವಟಿಕೆಗಳನ್ನು ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ. ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಒದಗಿಸುವ ಹೆಲಿಕಾಪ್ಟರ್‌ ಸೇವೆಯ ಮೇಲಿನ ಜಿಎಸ್‌ಟಿಯನ್ನು 18% ನಿಂದ 5%ಕ್ಕೆ ಇಳಿಸಲಾಗಿದೆ. ಆನ್‌ಲೈನ್‌ ಗೇಮಿಂಗ್‌, ಕ್ಯಾಸಿನೊ ಮತ್ತು ರೇಸ್‌ ಕೋರ್ಸ್‌ಗಳಿಗೆ ಸಂಬಂಧಿಸಿ ಜಿಎಸ್‌ಟಿ ದರಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಆದರೆ ಇವುಗಳ ಬಗ್ಗೆ ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ.

ಇದನ್ನೂ ಓದಿ | HD Kumaraswamy: ಕೇಂದ್ರ ಸರ್ಕಾರದಿಂದ ಆಟೊ ಉದ್ದಿಮೆಗೆ ಉತ್ತೇಜನ; ಉದ್ಯೋಗವಕಾಶ ಹೆಚ್ಚಳ ನಿರೀಕ್ಷೆ

ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಈಗಾಗಲೇ, ಜೀವ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಮೇಲಿನ 18% ಜಿಎಸ್‌ಟಿ ಕಡಿತಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಪಂಜಾಬ್‌, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಜಿಎಸ್‌ಟಿ ಪರಿಹಾರ ಸೆಸ್‌ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಸಲಹೆ ನೀಡಿವೆ.