Friday, 22nd November 2024

Laxmi Hebbalkar: ಸಚಿವರ ನಡೆ ಜನರ ಮನೆ ಬಾಗಿಲ ಕಡೆ; ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಹೊಸ ಸಂಪ್ರದಾಯಕ್ಕೆ ನಾಂದಿ

Laxmi Hebbalkar

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಖುದ್ದಾಗಿ ಸಮಸ್ಯೆ ಆಲಿಸಿ ಪರಿಹರಿಸುವ ವಿನೂತನ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಆರಂಭಿಸಿದ್ದಾರೆ. ಸೋಮವಾರ ನಂದಿಹಳ್ಳಿ ಗ್ರಾಮಕ್ಕೆ ತೆರಳಿದ ಸಚಿವರು ಜನರ ಅಹವಾಲುಗಳನ್ನು ಆಲಿಸಿದರು. ಈ ವಾರ ಪೂರ್ತಿ ಹಳ್ಳಿ ಭೇಟಿ ಮುಂದುವರಿಸಲಿರುವ ಅವರು, ಜನರ ಮನೆ ಬಾಗಿಲಿಗೆ ಸಚಿವರೊಬ್ಬರು ತೆರಳಿ ಸಮಸ್ಯೆ ಕೇಳುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಸಚಿವರ ಮನೆ ಬಾಗಿಲಿಗೆ ಜನರು ಸಮಸ್ಯೆ ಹೊತ್ತು ಬರುವುದನ್ನು ತಪ್ಪಿಸಲು ಸಚಿವರೇ ಜನರ ಮನೆ ಬಾಗಿಲಿನತ್ತ ಹೆಜ್ಜೆ ಹಾಕುತ್ತಿರುವುದಕ್ಕೆ ಕ್ಷೇತ್ರದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ ಎಂದು ಹೇಳಿದರು.

ಶಾಲೆಗಳ ಅಭಿವೃದ್ಧಿಯೇ ನನ್ನ ಗುರಿ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಶಾಲೆಗೆ ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕ ಮಾಡಲು ಈಗಾಗಲೇ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಸರ್ವಜನಾಂಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಲು ಬದ್ಧಳಾಗಿದ್ದೇನೆ. ಮರಾಠಿ ಶಾಲೆಗಳ ಅಭಿವೃದ್ಧಿಗೂ ಬದ್ಧವಾಗಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಈ ವೇಳೆ ಯುವರಾಜ ಕದಂ, ರೇಖಾ ಶಿಂಗೆನ್ನವರ್, ಮಹಾದೇವ ಜಾಧವ್, ಶಶಿಕಾಂತ್ ಪಾಟೀಲ್, ಸಹದೇವ ಬೆಳಗಾಂವಕರ, ರಾಮದಾಸ್ ಜಾಧವ್, ಸಂಜೀವ್ ಮಾಧರ, ಮಲ್ಲಿಕಾರ್ಜುನ ಲೋಕುರ,, ಮಾರುತಿ ಲೋಕುರ, ಗಣಪತಿ ಜಾಧವ್, ಅಶೋಕ್ ಜಾಧವ್, ಪರಶುರಾಮ್ ಜಂಗಳೆ, ನಿಂಗಪ್ಪ ಹಂಪಣ್ಣವರ, ನೀಲವ್ವ ಬಾಚೂಕರ, ರೇಖಾ ಮಾದರ, ಯಲ್ಲಪ್ಪ ಹಗೆದಾಳ, ವಸಂತ ಗೋರೆ, ಡಾ.ಕಿರಣ್ ಲೊಂಡೆ ಸೇರಿದಂತೆ ಹಲವು ಮಂದಿ ಉಪಪಸ್ಥಿತರಿದ್ದರು.

ನಂತರ ಗ್ರಾಮದ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕುಂದುಕೊರತೆಗಳನ್ನು ಆಲಿಸಿ, ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಈ ವೇಳೆ ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಇದಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಸಚಿವರು, ಅಹವಾಲು ಸ್ವೀಕರಿಸಿದರು. ಜನಸ್ಪಂದನೆಯ ಮೂಲಕ ಜನರ ಸಂಕಷ್ಟಗಳನ್ನು ಆಲಿಸುವುದು ನನ್ನ ಕರ್ತವ್ಯ, ಮನವಿ ಸ್ವೀಕರಿಸಿ ಪರಿಹಾರ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸವನ್ನು ಮಾಡಿದರು.

ಜೀವನದಲ್ಲಿ ಸೋಲು-ಗೆಲುವನ್ನು ಸಮಾನಾವಾಗಿ ಸ್ವೀಕರಿಸಿ

ಬೆಳಗಾವಿಯ ಕ್ಯಾಂಪ್ ಪ್ರದೇಶಲ್ಲಿರುವ ಸೆಂಟ್ ಪಾಲ್ ಹೈಸ್ಕೂಲ್ ನ ಎಡಿ ಮೆಮೋರಿಯಲ್ ಫುಟ್‌ಬಾಲ್ ಟೂರ್ನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸೋಮವಾರ ಚಾಲನೆ ನೀಡಿದರು. ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಈ ಶಾಲೆಗೆ ಉತ್ತಮ ಹೆಸರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ನಾನು ಸತತ ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಸತತ ಪ್ರಯತ್ನದಿಂದ ಗೆದ್ದು, 7 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಒಬ್ಬಳೇ ಮಹಿಳೆ ಮಂತ್ರಿಯಾಗಿರುವೆ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾ ಸ್ಪೂರ್ತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಳೆದ 56 ವರ್ಷಗಳಿಂದ ಈ ಟೂರ್ನಿ ನಡೆಯುತ್ತಾ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಜೊತೆಗೆ 26 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ಖುಷಿ ವಿಚಾರ. ಇಂತಹ ಒಳ್ಳೆಯ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ ಎಂದು ಸಚಿವೆ ಹೇಳಿದರು.

ಈ ಸುದ್ದಿಯನ್ನೂ ಓದಿ | Basavaraja Bommai: ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ! ಬೊಮ್ಮಾಯಿ ಗೇಲಿ

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಫಾದರ್ ಸೈಮನ್ ಫರ್ನಾಂಡೀಸ್, ಅಲುಮ್ನಿಯ ಅಧ್ಯಕ್ಷರಾದ ಡಾ. ಮಾಧವ ಪ್ರಭು, ಚಾಬ್ರಿಯಾ ಮತ್ತು ನಿಪ್ಪಾಣಿಕರ್ ಕುಟುಂಬದ ಸದಸ್ಯರು, ಫರೀಶ್ ಮುರಕುಟೆ, ಅಮಿತ್ ಪಾಟೀಲ, ಕಿರಣ ನಿಪ್ಪಾಣಿಕರ್, ಆದಿತ್ಯ, ಸಮಕ್ಷ ಚಾಬ್ರಿಯಾ, ಲಿನೋರಿಯಾ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.