Thursday, 19th September 2024

Vinesh Phogat : ವಿನೇಶ್ ರಾಜಕೀಯ ಮಾಡುವುದಕ್ಕಿಂತ ಕುಸ್ತಿ ಕಡೆಗೆ ಗಮನ ಕೊಡಬೇಕಿತ್ತು ಎಂದ ಚಿಕ್ಕಪ್ಪ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಸೋಮವಾರ 2028 ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕಿತ್ತು. ಅದನ್ನು ಬಿಟ್ಟು ರಾಜಕೀಯಕ್ಕೆ ಸೇರುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ನಿರ್ಧಾರ ಸರಿಯಲ್ಲ ಆಕ್ಷೇಪಿಸಿದರು. ಕುಸ್ತಿಪಟು ಬಜರಂಗ್ ಪೂನಿಯಾ ಅವರೊಂದಿಗೆ ವಿನೇಶ್ ಕಾಂಗ್ರೆಸ್ ಸೇರಿದ ಕೆಲವು ದಿನಗಳ ನಂತರ ಅವರ ಹೇಳಿಕೆ ಬಂದಿದೆ.

ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಹಾವೀರ್ ಫೋಗಟ್ “ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ. ಅವಳು ತನ್ನ ಒಲಿಂಪಿಕ್ ಗುರಿಯನ್ನು ಸಾಧಿಸುವತ್ತ ಗಮನ ಹರಿಸಬೇಕಾಗಿತ್ತು. ಅವರು ರಾಜಕೀಯಕ್ಕೆ ಸೇರುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾ ವಿಧಾನಸಭಾ ಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೇಶ್ ಫೋಗಟ್ ಅವರನ್ನು ಕಣಕ್ಕಿಳಿಸಿದೆ. ಒಬ್ಬ ಅಥ್ಲೀಟ್‌ ರಾಜಕೀಯಕ್ಕೆ ಸೇರಲು ನಿರ್ಧರಿಸಿದಾಗ ಎಲ್ಲಾ ಭರವಸೆಗಳು ಕಳೆದುಹೋಗುತ್ತವೆ ಎಂದು ಮಹಾವೀರ್ ಫೋಗಟ್ ಹೇಳಿದ್ದಾರೆ. ಮಹಾವೀರ್ ಫೋಗಟ್ ಅವರ ಮಗಳು ಬಬಿತಾ ಫೋಗಟ್ 2019 ರಲ್ಲಿ ಬಿಜೆಪಿಗೆ ಸೇರಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಚಿಕ್ಕ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರ ಮೇಲೆ ಅವಲಂಬಿತವಾಗಿರುತ್ತದೆ. ಅವರನ್ನು ಪೋಷಿಸಿ ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಈ ವಯಸ್ಸಿನಲ್ಲಿ, ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದಿತ್ತು. ಈ ಬಾರಿ ಅವರು ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ ಎಂದು ಅವರು ಹೇಳಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹ

ಕಳೆದ ತಿಂಗಳು, ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ಫೈನಲ್‌ ಸ್ವಲ್ಪ ಮೊದಲು 100 ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹರಾಗಿದ್ದರು. ಈ ನಿರ್ಧಾರದ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅದನ್ನ ತಿರಸ್ಕರಿಸಿತು. ವಿವಾದದ ಮಧ್ಯೆ, ವಿನೇಶ್ ಫೋಗಟ್ ಕುಸ್ತಿಯಿಂದ ನಿವೃತ್ತರಾಗಿದ್ದರು.

ಇದನ್ನೂ ಓದಿ: Usman Khawaja : ಆಸ್ಟ್ರೇಲಿಯಾವನ್ನು ಸೋಲಿಸುವುದು ಭಾರತದ ಅಭಿಮಾನಿಗಳ ಕನಸು ಎಂದ ಆಸೀಸ್ ಆಟಗಾರ

ಡಬ್ಲ್ಯುಎಫ್ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ವಿನೇಶ್ ಭಾಗವಹಿಸಿದ್ದು ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಒದಗಿಸಿದೆಯೇ ಎಂದು ಕೇಳಿದಾಗ, ಮಹಾವೀರ್ ಫೋಗಟ್ ಅದನ್ನು ನಿರಾಕರಿಸಿದರು.

“ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆದಿತ್ತು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಮೊದಲು ಯಾವುದೇ ಸಮಸ್ಯೆ ಇರಲಿಲ್ಲ. ಚುನಾವಣೆಗಳನ್ನು ಘೋಷಿಸಲಾಗಿದೆ. ನಂತರ, ಎಲ್ಲಾ ಚರ್ಚೆಗಳು ನಡೆದವು ಎಂದು ಅವರು ಹೇಳಿದರು.

ಈ ಹಿಂದೆ, ಮಹಾವೀರ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತರಾಗುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ತಮ್ಮ ಸೋದರ ಸೊಸೆಯನ್ನು ಒತ್ತಾಯಿಸಿದ್ದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ನಂತರದ ಹೃದಯ ವಿದ್ರಾವಕತೆಯನ್ನು ನಿವಾರಿಸುವುದಾಗಿ ಹೇಳಿದ್ದರು.