Friday, 22nd November 2024

Tumkur News: ಸೆ.14ರಂದು ರಾಜ್ಯಗಳ ಅಸ್ಮಿತೆ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ

Tumkur News

ತುಮಕೂರು: ಒಕ್ಕೂಟ ಉಳಿಸಿ ಆಂದೋಲನದ ವತಿಯಿಂದ ರಾಜ್ಯಗಳ ಅಸ್ಮಿತೆ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸೆ. 14ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ ಹಾಗೂ ಪ್ರೊ. ಎಸ್. ಜಿ. ಸಿದ್ದರಾಮಯ್ಯ (Tumkur News) ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು, ಪ್ರತಿಪಕ್ಷಗಳಾಗಲಿ, ಸಾಹಿತಿ, ಪ್ರಗತಿಪರರಾಗಲಿ ಒಕ್ಕೂಟ ಸರ್ಕಾರದ ವಿರುದ್ಧ ಧ್ವನಿ ಎತ್ತಬಾರದು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಭಾರತದ ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಆದರೆ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವ ದಾಳಿ ಅತ್ಯಂತ ಅಪಾಯಕಾರಿಯಾದುದು. ಸಾಂವಿಧಾನಿಕವಾಗಿ, ಶಾಸನಾತ್ಮಕವಾಗಿ, ವಿತ್ತೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ಮುಗಿಸುವ ದಿಕ್ಕಿನಲ್ಲಿ ಸಾಗಿದೆ ಎಂದು ಜಾಣಗೆರೆ ವೆಂಕಟರಾಮಯ್ಯ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Invest Karnataka: ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ ಸಿಂಗಾಪುರ ಉದ್ಯಮಿಗಳು

ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮಾತನಾಡಿ, ಸೆ.14ರಂದು ನಡೆಯಲಿರುವ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲಗೌಡ ಅವರು ವಹಿಸಲಿದ್ದು, ಜನಪರ ಚಿಂತನೆಯ ಸಾಹಿತಿ ದೇವನೂರು ಮಹದೇವ, ರಾಮಕೃಷ್ಣ ಸೇರಿ ಅನೇಕ ಸಾಹಿತಿಗಳು, ಸಾಮಾಜಿಕ ಚಿಂತಕರು, ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಆಂದೋಲನ ಒಂದು ದಿನಕ್ಕೆ ಸೀಮಿತವಲ್ಲ. ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ. ಭಾರತ ಒಕ್ಕೂಟ ವ್ಯವಸ್ಥೆಯಾದರೂ ಒಕ್ಕೂಟ ಎನ್ನುವುದನ್ನೇ ಮರೆತಂತೆ ಕೇಂದ್ರೀಕೃತ ಆಡಳಿತ, ರಾಜ್ಯಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರವೆಂಬ ಪರಿಭಾಷೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ಸುದ್ದಿಯನ್ನೂ ಓದಿ | Tata Motors : ಟಾಟಾ ಕಾರುಗಳು ಉತ್ಸವ ಆರಂಭ, ಎಸ್‌ಯುವಿಗಳ ಮೇಲೆ ಭರ್ಜರಿ ಆಫರ್‌ಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಟರಾಜ್ ಬೂದಾಳ್ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಪ್ರಾದೇಶಿಕ ಭಾಷೆ, ಶಿಕ್ಷಣದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇವೆಲ್ಲವನ್ನು ಜನರ ಮುಂದಿಡಲು ಅಭಿಯಾನ ನಡೆಸಲಾಗುತ್ತಿದೆ ಎಂದರು.