Saturday, 23rd November 2024

Apple iPhone 16 : ಆಪಲ್‌ ಐಫೋನ್‌ 16 ಸೀರಿಸ್‌ ಬಿಡುಗಡೆ; ಭಾರತದಲ್ಲಿ ಬೆಲೆ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ

Apple iPhone 16

ಬೆಂಗಳೂರು: ಆಪಲ್ ಕಂಪನಿಯು ಹೊಸ ಐಫೋನ್ 16 ಸರಣಿಯನ್ನು (Apple iPhone 16) ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. ಐಫೋನ್ 16 ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡಿದ್ದು ಉತ್ಸಾಹಿಗಳಿಗೆ ಹೊಸ ಫೋನ್ ಖರೀದಿ ಮಾಡುವಂತೆ ಪ್ರೇರೇಪಿಸುವಂತಿದೆ. ಯಾಕೆಂದರೆ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಐಫೋನ್ 16 ಪ್ರೊ ಹಲವಾರು ಬದಲಾವಣೆಗಳೊಂದಿಗೆ ಮಾರಕಟ್ಟೆಗೆ ಇಳಿಸಿದೆ. ಐಫೋನ್ 16 ಸರಣಿ ಶೀಘ್ರದಲ್ಲೇ ಪ್ರಿ-ಆರ್ಡರ್ ಆರಂಭವಾಗಲಿದ್ದು ಫ್ಲಿಪ್ ಕಾರ್ಟ್, ಅಮೆಜಾನ್, ಆಪಲ್ ಸ್ಟೋರ್ ಮತ್ತು ಇತರ ಪ್ಲಾಟ್ ಫಾರ್ಮ್‌ಗಳಲ್ಲಿಲಭ್ಯವಾಗಲಿದೆ.

ಭಾರತದಲ್ಲಿ ಬೆಲೆ ಎಷ್ಟು?

ಐಫೋನ್ 16 ಆರಂಭಿಕ ಬೆಲೆ 799 ಡಾಲರ್ (ಸುಮಾರು 67,000 ರೂ.) ಮತ್ತು ಐಫೋನ್ 16 ಪ್ಲಸ್ ಬೆಲೆ 899 ಡಾಲರ್ (ಸುಮಾರು 75,500 ರೂ.) ಐಫೋನ್ 16 ಪ್ರೊ ಬೆಲೆ 128 ಜಿಬಿಗೆ 999 ಡಾಲರ್ (ಸುಮಾರು 83,870 ರೂ.) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 256 ಜಿಬಿಗೆ 1199 ಡಾಲರ್ (ಸುಮಾರು 1 ಲಕ್ಷ ರೂ.) ನಿಂದ ಪ್ರಾರಂಭವಾಗುತ್ತದೆ. ಇದು ಯುಎಸ್‌ ಮಾರುಕಟ್ಟೆಯಲ್ಲಿನ ಬೆಲೆಯಾಗಿದೆ.

ಭಾರತದಲ್ಲಿ ಐಫೋನ್ 16 ಬೆಲೆ 79,900 ರೂ ಮತ್ತು ಐಫೋನ್ 16 ಪ್ಲಸ್ ಬೆಲೆ 89,900 ರೂ. ಐಫೋನ್ 16 ಪ್ರೊ ಭಾರತದಲ್ಲಿ 1,19,900 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1,44,900 ರೂಪಾಯಿಗಳಾಗಿವೆ. ಪ್ರೀ-ಆರ್ಡರ್ ಸೆಪ್ಟೆಂಬರ್ 13 ರಂದು ಸಂಜೆ 5:30 ಕ್ಕೆ ಭಾರತದಲ್ಲಿ ಪ್ರಾರಂಭವಾಗುತ್ತದೆ. ಮೊದಲ ಮಾರಾಟ ಸೆಪ್ಟೆಂಬರ್ 20 ರಂದು ನಡೆಯಲಿದೆ.

ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಕುರಿತ ಮಾಹಿತಿ ಇಲ್ಲಿದೆ

ಆಪಲ್ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳನ್ನು ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಹೊಸ ಬಣ್ಣ-ತುಂಬಿದ ಬ್ಯಾಕ್‌ಗ್ಲಾಸ್ ನೀಡಲಾಗಿದೆ. ಅಲ್ಟ್ರಾಮರೈನ್, ಟೀಲ್, ಪಿಂಕ್‌, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಐಫೋನ್ 16 ಮೊಬೈಲ್‌ 6.1 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ಲಸ್ 6.7 ಇಂಚಿನ ದೊಡ್ಡ ಡಿಸ್‌ಪ್ಲೇ ಜತೆ ಸಿಗಲಿದೆ. ಎರಡೂ ಮಾದರಿಗಳು 2000 ನಿಟ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿವೆ. ಕತ್ತಲೆಯಲ್ಲಿ 1 ನಿಟ್ ವರೆಗೆ ಮಸುಕಾಗಬಹುದು.

ಆಪಲ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಳಲ್ಲೂ ಆಕ್ಷನ್ ಬಟನ್ ಈ ಬಾರಿ ನೀಡಿದೆ. ಇದು ವಾಯ್ಸ್‌ ಮೆಮೊಗಳನ್ನು ರೆಕಾರ್ಡ್ ಮಾಡಲು, ಹಾಡುಗಳನ್ನು ಗುರುತಿಸಲು ಅಥವಾ ಭಾಷಾಂತರಿಸಲು ಸುಲಭ ಮಾಡುತ್ತದೆ. ಹೆಚ್ಚುವರಿಯಾಗಿ, ಐಫೋನ್ 16 ಹೊಸ ಕ್ಯಾಮೆರಾ ಕಂಟ್ರೋಲ್‌ ಫೀಚರ್ ಜತೆಗೆ ಬಂದಿದೆ. ಇದು ಆನ್ / ಆಫ್ ಸ್ವಿಚ್ ಕೆಳಗೆ ಬಲಭಾಗದಲ್ಲಿರುವ ಸ್ಕ್ರೀನ್‌ ಮೇಲೆ ಬೆರಳನ್ನು ಜಾರಿಸುವ ಮೂಲಕ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಲು ಅನುಕೂಲ ಮಾಡಿಕೊಡಲಿದೆ.

ಹೊಸ ಕ್ಯಾಮೆರಾ ಕಂಟ್ರೋಲ್ ಬಟನ್ ಮೂಲಕ ಒಂದೇ ಕ್ಲಿಕ್‌ನಲ್ಲಿ ಕ್ಯಾಮೆರಾ ಓಪನ್ ಮಾಡಿ ಎರಡನೇ ಕ್ಲಿಕ್‌ನಲ್ಲಿ ಫೋಟೋ ಕ್ಯಾಪ್ಚರ್ ಮಾಡಬಹುದು. ಅಥವಾ ವೀಡಿಯೊವನ್ನು ರೆಕಾರ್ಡ್ ಕೂಡ ಮಾಡಬಹುದು.

ಐಫೋನ್ 16 ಮತ್ತು ಪ್ಲಸ್ ಫೋನ್‌ಗಳು ಇತ್ತೀಚಿನ ಎ 18 ಚಿಪ್ ಸೆಟ್ ಒಳಗೊಂಡಿದೆ. ಇದು ಎರಡನೇ ತಲೆಮಾರಿನ 3 ಎನ್ಎಂ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಎ 18 ಚಿಪ್ 6-ಕೋರ್ ಸಿಪಿಯುನೊಂದಿಗೆ ಬರುತ್ತದೆ. ಇದು 2 ಪರ್ಫಾಮೆನ್ಸ್ ಕೋರ್‌ಗಳು ಮತ್ತು 4 ಎಫಿಷಿಯೆನ್ಸಿ ಕೋರ್ ಗಳನ್ನು ಒಳಗೊಂಡಿದೆ. ಐಫೋನ್ 15ನಲ್ಲಿನ ಎ 16 ಬಯೋನಿಕ್‌ಗೆ ಹೋಲಿಸಿದರೆ ಐಫೋನ್ 16 ಶೇಕಡಾ 30 ರಷ್ಟು ವೇಗವಾಗಿರುತ್ತದೆ.

ಕ್ಯಾಮೆರಾ

ಐಫೋನ್ 16 ಈಗ ಶಕ್ತಿಯುತ 48 ಮೆಗಾಪಿಕ್ಸೆಲ್ ಮೇನ್‌ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 48 ಎಂಪಿ ಮತ್ತು 12 ಎಂಪಿ ಫೋಟೋಗಳನ್ನು ಸ್ಪಷ್ಟವಾದ 24 ಎಂಪಿ ಚಿತ್ರವಾಗಿ ಸಂಯೋಜಿಸುತ್ತದೆ. ಇದು ಸೆನ್ಸರ್ ನ ಮಧ್ಯದ 12 ಎಂಪಿ ಬಳಸಿ 2 ಎಕ್ಸ್ ಟೆಲಿಫೋಟೋ ಜೂಮ್ ಆಯ್ಕೆಯನ್ನು ಸಹ ಹೊಂದಿದೆ, ಜೊತೆಗೆ ಲೋಲೈಟ್‌ ಶಾಟ್ ಗಳಿಗಾಗಿ ವೇಗದ ಎಫ್ / 1.6 ಅಪರ್ಚರ್ ಹೊಂದಿದೆ.

ಡಾಲ್ಬಿ ವಿಷನ್ ಎಚ್‌ಡಿಆರ್‌ ಸಹಾಯದಿಂದ 4 ಕೆ 60 ವೀಡಿಯೊವನ್ನು ಶೂಟ್ ಮಾಡಬಹುದು. ಹೊಸ 12 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ದೊಡ್ಡ ಅಪರ್ಚರ್ ಮತ್ತು ದೊಡ್ಡ ಪಿಕ್ಸೆಲ್‌ಗಳನ್ನು ಹೊಂದಿದೆ. ಐಫೋನ್ 16 ಒಂದು ಫೋನ್‌ ಕ್ಯಾಮೆರಾವು ನಾಲ್ಕು ಕ್ಯಾಮೆರಾ ಲೆನ್ಸ್‌ಗಳಿಗೆ ಸಮಾನವಾಗಿದೆ. ತನ್ನ ಎರಡೂ ಲೆನ್ಸ್‌ಗಳನ್ನು ಬಳಸಿಕೊಂಡು ವಿಶೇಷ ವೀಡಿಯೊ ಮತ್ತು ಫೋಟೋಗಳನ್ನು ಸೆರೆಹಿಡಿಯಬಹುದು ಎಂದು ಆಪಲ್ ಹೇಳಿಕೊಂಡಿದೆ.

ಸ್ಟ್ಯಾಂಡರ್ಡ್ ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಫೀಚರ್‌ ಸೇರಿಸಿರುವುದ ಪ್ರಮುಖ ಹೈಲೈಟ್. ಈ ಎಐ-ಚಾಲಿತ ಫೀಚರ್‌ ಭಾಷೆಗಳು, ಚಿತ್ರಗಳು ಮತ್ತಿತರ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತದೆ.

ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ವಿಶೇಷತೆಗಳು ಇಲ್ಲಿದೆ

ಐಫೋನ್ 16 ಪ್ರೊ ಮಾದರಿಗಳು ಹೊಸ ಚಿನ್ನದ ಬಣ್ಣದಲ್ಲಿ ಬರುತ್ತವೆ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ ಹೊಂದಿವೆ. ಐಫೋನ್ 16 ಪ್ರೊ 6.3 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಸ್ಕ್ರೀನ್‌ ಹೊಂದಿದೆ. ಎರಡೂ ಮಾದರಿಗಳು ತೆಳ್ಳಗಿನ ಅಂಚುಗಳನ್ನು ಹೊಂದಿವೆ ಮತ್ತು ಯಾವಾಗಲೂ 120Hz ಪ್ರೊಮೋಷನ್ ಡಿಸ್‌ಪ್ಲೇಗಳನ್ನು ಹೊಂದಿವೆ. ಪ್ರೊ ಮಾದರಿಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡೆಸರ್ಟ್ ಟೈಟಾನಿಯಂ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: Guinness World Record : ಒಂದು ಚಾರ್ಜ್‌ನಲ್ಲಿ 949 ಕಿ.ಮೀ ಪ್ರಯಾಣ; ಮರ್ಸಿಡೀಸ್‌ ಕಾರಿನ ಹೊಸ ದಾಖಲೆ

ಚಿಪ್ ಸೆಟ್

ಎರಡೂ ಮಾದರಿಗಳು ಸುಧಾರಿತ ಎ18 ಪ್ರೊ ಚಿಪ್ ಸೆಟ್‌ನಿಂದ ಕೆಲಸ ಮಾಡುತ್ತದೆ. ಹೊಸ ಚಿಪ್ 6-ಕೋರ್ ಜಿಪಿಯು ಅನ್ನು ಹೊಂದಿದೆ, ಇದು ಎ 17 ಪ್ರೊಗಿಂತ 20% ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಇದು 2 ಪರ್ಫಾಮೆನ್ಸ್‌f ಕೋರ್ ಗಳು ಮತ್ತು 4 ಎಫಿಷಿಯೆನ್ಸಿ ಕೋರ್‌ ಗಳನ್ನು ಹೊಂದಿದೆ.

ಕ್ಯಾಮೆರಾ ಅಪ್‌ಡೇಟ್‌

ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಅನ್ನು ಅಪ್‌ಡೇಟ್ ಮಾಡಲಾಗಿದ್ದು, ಐಫೋನ್ 16 ಪ್ರೊ ಮಾದರಿಗಳು ಎರಡನೇ ತಲೆಮಾರಿನ ಕ್ವಾಡ್-ಪಿಕ್ಸೆಲ್ ಸೆನ್ಸರ್ ಜತೆಗೆ ಹೊಸ 48 ಎಂಪಿ ಫ್ಯೂಷನ್ ಕ್ಯಾಮೆರಾ ಹೊಂದಿದೆ. ಕ್ಯಾಮೆರಾಗಳು 4 ಕೆ 120 ವೀಡಿಯೊ ಸೆರೆಹಿಡಿಯುತ್ತದೆ. ಆಟೋಫೋಕಸ್ ಹೊಂದಿರುವ ಹೊಸ 48 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಸೇರಿಸಲಾಗಿದೆ. ಎರಡೂ ಪ್ರೊ ಮಾದರಿಗಳು 12 ಎಂಪಿ ಸೆನ್ಸಾರ್‌ನೊಂದಿಗೆ ಬರುತ್ತವೆ. ಇದು 120 ಎಂಎಂ ಫೋಕಲ್ ಲೆಂತ್‌ನೊಂದಿಗೆ 5 ಎಕ್ಸ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ.

ಆಡಿಯೋ ಅಪ್‌ಡೇಟ್‌

ಐಫೋನ್ 16 ಪ್ರೊ ಸರಣಿಯು ವೀಡಿಯೊ ರೆಕಾರ್ಡಿಂಗ್ ಸಮಯದಲ್ಲಿ ಸ್ಪೇಶಲ್‌ ಆಡಿಯೋ ಸೆರೆಹಿಡಿಯವ ಹೊಸ ಆಡಿಯೊ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ. “ಇನ್-ಫ್ರೇಮ್ ಮಿಕ್ಸ್” ಕ್ಯಾಮೆರಾದಲ್ಲಿ ಧ್ವನಿಯನ್ನು ಪ್ರತ್ಯೇಕಿಸುತ್ತದೆ. ಇದು ಸ್ಟುಡಿಯೋ ರೀತಿಯ ರೆಕಾರ್ಡಿಂಗ್ ಎಫೆಕ್ಟ್‌ ನೀಡುತ್ತದೆ.

ಬ್ಯಾಟರಿ

ಕಂಪನಿಯು ಬ್ಯಾಟರಿ ಗಾತ್ರವನ್ನು ಬಹಿರಂಗಪಡಿಸಿಲ್ಲ. ಆದರೆ ಪರ್ಪಾಮೆನ್ಸ್‌ ಬಗ್ಗೆ ಹೆಮ್ಮೆಪಡುತ್ತಿದೆ. ದೊಡ್ಡ ಸಾಮರ್ಥ್ಯ ಮತ್ತು ಉತ್ತಮ ನಿರ್ವಹಣೆಯೊಂದಿಗೆ ಬ್ಯಾಟರಿಯನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ಆಪಲ್ ಹೇಳಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ಐಫೋನ್‌ನಲ್ಲಿ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.