Sunday, 10th November 2024

Israel-Palestine War: ಗಾಜಾ ಮೇಲೆ ಇಸ್ರೇಲ್‌ ಮತ್ತೆ ದಾಳಿ; 40 ಜನ ಸಾವು

Israel- Palestine war

ಗಾಜಾ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌(Israel-Palestine War) ನಡುವೆ ನಡೆಯುತ್ತಿರುವ ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ಯಾಲೆಸ್ತೀನ್ ಭೂಪ್ರದೇಶದ ದಕ್ಷಿಣದಲ್ಲಿರುವ ಜನನಿಬಿಡ ಪ್ರದೇಶದ ಮೇಲೆ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ

ಈ ಬಗ್ಗೆ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದ್ದು, ಆ ಪ್ರದೇಶದಲ್ಲಿ ಹಮಾಸ್ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಗಾಜಾದ ಪ್ರಮುಖ ದಕ್ಷಿಣ ನಗರವಾದ ಖಾನ್ ಯುನಿಸ್‌ನಲ್ಲಿ ಈ ದಾಳಿ ನಡೆದಿದ್ದು, ಇದನ್ನು ಯುದ್ಧದ ಆರಂಭದಲ್ಲಿ ಇಸ್ರೇಲಿ ಮಿಲಿಟರಿ ಸುರಕ್ಷಿತ ವಲಯವೆಂದು ಗೊತ್ತುಪಡಿಸಿತು, ಹತ್ತಾರು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರು ಅಲ್ಲಿ ಆಶ್ರಯ ಪಡೆಯುತ್ತಿದ್ದರು. ಇದೀಗ ಸೇನೆ ಆ ಪ್ರದೇಶವನ್ನೇ ಗುರಿಯಾಗಿಸಿ ದಾಳಿ ನಡೆಸಿದೆ.

ದಾಳಿಯಲ್ಲಿ 20 ರಿಂದ 40 ಟೆಂಟ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಸ್ರೇಲ್‌ ಮತ್ತು ಗಾಜಾ ನಡುವೆ ಈ ಯುದ್ಧ ಆರಂಭವಾಗಿದ್ದು, ಇದುವರೆಗೆ 1,205 ಜನ ಮೃತಪಟ್ಟಿದ್ದಾರೆ. ದಾಳಿಯ ಸಂದರ್ಭದಲ್ಲಿ ಉಗ್ರಗಾಮಿಗಳು 251 ಒತ್ತೆಯಾಳುಗಳನ್ನು ವಶಪಡಿಸಿಕೊಂಡಿದ್ದು, ಅವರಲ್ಲಿ 97 ಮಂದಿ ಇನ್ನೂ ಗಾಜಾದಲ್ಲಿದ್ದಾರೆ, ಇದರಲ್ಲಿ 33 ಮಂದಿ ಸತ್ತಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಕಳೆದ ವಾರ ದಕ್ಷಿಣ ಗಾಜಾ ಪಟ್ಟಿಯಲ್ಲಿ ಹಮಾಸ್‌ ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ 6 ಮಂದಿ ಇಸ್ರೇಲ್‌ ಪ್ರಜೆಗಳ ಶವ ಪತ್ತೆಯಾಗಿದ್ದು, ಇಸ್ರೇಲ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಲಕ್ಷಾಂತರ ಪ್ರತಿಭಟನಾಕಾರರು ಬೀದಿಗಿಳಿದು, ಸೆರೆಯಾಳುಗಳನ್ನು ಬಿಡುಗಡೆ ಮಾಡಲು ದೇಶದ ನಾಯಕತ್ವದ ಅಸಮರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೆಲ್ ಅವೀವ್ (Tel Aviv)ನಲ್ಲಿ 3,00,000ಕ್ಕೂ ಅಧಿಕ ಮಂದಿ ಜಮಾಯಿಸಿದ್ದರೆ, ದೇಶದ ವಿವಿಧ ಭಾಗಗಳಲ್ಲಿ 2,00,000 ಅಧಿಕ ಮಂದಿ ಪ್ರತಿಭಟನೆ ನಡೆಸಿದರು. ಇದು ಸುಮಾರು 18 ತಿಂಗಳಲ್ಲಿ ಅತಿದೊಡ್ಡ ರ‍್ಯಾಲಿ ಎನಿಸಿಕೊಂಡಿದೆ. ವೀಡಿಯೊದಲ್ಲಿ ಟೆಲ್ ಅವೀವ್‌ನ ಮುಖ್ಯ ಹೆದ್ದಾರಿ ಉದ್ದಕ್ಕೂ ಹತ್ಯೆಗೀಡಾದ ಒತ್ತೆಯಾಳುಗಳ ಚಿತ್ರಗಳೊಂದಿಗೆ, ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ತುಂಬಿರುವುದು ಕಂಡು ಬಂದಿದೆ. ಈ ಸಂಬಂಧ ಈಗಾಗಲೇ 29 ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದ ಕಾರ್ಮಿಕ ಮುಖಂಡರು ಸೋಮವಾರ ಒಂದು ದಿನದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಪ್ರತಿಭಟನಾಕಾರರು ಶನಿವಾರ ರಾತ್ರಿ ಪತ್ತೆಯಾದ ಶವಗಳ ಸಂಕೇತವಾಗಿ 6 ಸಾಂಕೇತಿಕ ಶವಪೆಟ್ಟಿಗೆಗಳನ್ನುಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು. ಹಮಾಸ್‌ ಉಗ್ರರು ಅಪಹರಿಸಿದ ಹರ್ಷ್ ಗೋಲ್ಡ್ ಬರ್ಗ್-ಪೋಲಿನ್ (23), ಈಡನ್ ಯೆರುಶಾಲ್ಮಿ (24), ಓರಿ ಡ್ಯಾನಿನೊ (25), ಅಲೆಕ್ಸ್ ಲೊಬನೊವ್ (32), ಕಾರ್ಮೆಲ್ ಗ್ಯಾಟ್ (40) ಮತ್ತು ಅಲ್ಮೋಗ್ ಸರೂಸಿ (27) ಅವರ ಶವಗಳು ಗಾಜಾದ ದಕ್ಷಿಣ ನಗರದ ರಾಫಾದ ಸುರಂಗದಲ್ಲಿ ಪತ್ತೆಯಾಗಿತ್ತು.

ವಿಧಿವಿಜ್ಞಾನ ಪರೀಕ್ಷೆಯು ಅವರನ್ನು 48-72 ಗಂಟೆಗಳ ಹಿಂದೆ ಹಮಾಸ್ ಭಯೋತ್ಪಾದಕರು ಹತ್ಯೆ ಮಾಡಿದೆ ಎನ್ನುವುದನ್ನು ದೃಢಪಡಿಸಿತ್ತು. ಇದಕ್ಕೆ ಕಾರಣರಾದವರನ್ನು ಹತ್ಯೆ ಮಾಡುವವರೆಗೆ ಇಸ್ರೇಲ್ ವಿಶ್ರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಗುಡುಗಿದ್ದಾರೆ.

ಈ ಸುದ್ದಿಯನ್ನೂ ಓದಿ: Israel-Hamas Conflict: ಹಮಾಸ್‌ ಉಗ್ರರ ಸೆರೆಯಲ್ಲಿದ್ದ 6 ಇಸ್ರೇಲಿ ಪ್ರಜೆಗಳು ಶವವಾಗಿ ಪತ್ತೆ- ಭುಗಿಲೆದ್ದ ಆಕ್ರೋಶ