Friday, 22nd November 2024

Train Derailment Attempt: ಮತ್ತೆ ರೈಲು ಹಳಿ ತಪ್ಪಿಸಲು ಯತ್ನ; ಕ್ವಿಂಟಾಲ್‌ ತೂಕದ ಸಿಮೆಂಟ್‌ ಕಲ್ಲನ್ನಿಟ್ಟು ದುಷ್ಕೃತ್ಯ

Train Derailment Attempt

ಜೈಪುರ: ನಿನ್ನೆಯಷ್ಟೇ ರೈಲ್ವೇ ಹಳಿಗೆ ಗ್ಯಾಸ್‌ ಸಿಲಿಂಡರ್‌ ಅಡ್ಡ ಇಟ್ಟು ಹಳಿತಪ್ಪುವಂತೆ ಮಾಡಲು ಯತ್ನಿಸಿರುವ ಘಟನೆ ವರದಿಯಾದ ಬೆನ್ನಲ್ಲೇ ಇದೀಗ ಮತ್ತೆ ಅಂತಹದ್ದೇ ಒಂದು ದುಷ್ಕೃತ್ಯ ಬಯಲಾಗಿದೆ. ರಾಜಸ್ಥಾನ(Rajasthan)ದ ಅಜ್ಮೇರ್‌ನಲ್ಲಿ ಈ ಘಟನೆ ನಡೆದಿದ್ದು, ರೈಲ್ವೇ ಹಳಿಗಳ ಮೇಲೆ ಸುಮಾರು ಒಂದು ಕಿ.ಮೀ ಎರಡು ಸಿಮೆಂಟ್‌ ಬ್ಲಾಕ್ಸ್‌ಗಳನ್ನು ಇಟ್ಟು ರೈಲು ಹಳಿ ತಪ್ಪಿಸುವ(Train Derailment Attempt) ಯತ್ನ ನಡೆದಿದೆ. ಅದೃಷ್ಟವಶಾತ್‌ ಭಾರೀ ಅವಘಡ ತಪ್ಪಿದೆ.

ಸರಧನಾ ಮತ್ತು ಬಂಗಾಧ್‌ ಗ್ರಾಮಗಳ ಮಧ್ಯೆ ಈ ಘಟನೆ ನಡೆದಿದ್ದು, ಒಂದೂವರೆ ಕ್ವಿಂಟಾಲ್‌ ತೂಕದ ಕಲ್ಲುಗಳನ್ನು ಹಳಿಗಳ ಮೇಲೆ ದುಷ್ಕರ್ಮಿಗಳು ಇಟ್ಟಿದ್ದಾರೆ. ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಧಿಕೃತ ಮೂಲಗಳು ಮತ್ತು ಎಫ್‌ಐಆರ್ ಪ್ರಕಾರ, ಇಬ್ಬರು ಡಿಎಫ್‌ಸಿಸಿಐಎಲ್ ಉದ್ಯೋಗಿಗಳಾದ ರವಿ ಬುಂದೇಲಾ ಮತ್ತು ವಿಶ್ವಜೀತ್ ದಾಸ್ ಅವರು ಬ್ಲಾಕ್‌ಗಳ ಬಗ್ಗೆ ರಾತ್ರಿ 10:36 ಕ್ಕೆ ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಪೊಲೀಸರು ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು ಆಗಮಿಸಿದ ನಂತರ, ರೈಲ್ವೆ ಹಳಿಗಳ ಬದಿಯಲ್ಲಿ 1 ಕಿಮೀ ದೂರದಲ್ಲಿ ಎರಡು ಮುರಿದ ಸಿಮೆಂಟ್ ಬ್ಲಾಕ್‌ಗಳನ್ನು ಹಾಕಿರುವುದು ಕಂಡುಬಂದಿದೆ.

ದೇಶದಲ್ಲಿ ರೈಲು ದುರಂತಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ರೈಲ್ವೇ ಹಳಿಗೆ ಎಲ್‌ಪಿಜಿ ಸಿಲಿಂಡರ್‌ ಅಡ್ಡಲಾಗಿಟ್ಟು ರೈಲು ಹಳಿತಪ್ಪುವಂತೆ ಮಾಡಲು ಸಂಚು ರೂಪಿಸಿದ್ದಾರೆ. ಅದೃಷ್ಟವಶಾತ್‌ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ತಡರಾತ್ರಿ ಹಳಿಗಳ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ. ಉತ್ತರ ಪ್ರದೇಶದ ಎರಡನೇ ದೊಡ್ಡ ನಗರವಾದ ಕಾನ್ಪುರ ಮತ್ತು ಹರಿಯಾಣದ ಭಿವಾನಿಯನ್ನು ಸಂಪರ್ಕಿಸುವ ಕಾಳಿಂದಿ ಎಕ್ಸ್‌ಪ್ರೆಸ್, ಕಾನ್ಪುರದ ಶಿವರಾಜ್‌ಪುರದಲ್ಲಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ಅನ್ನು ಹಳಿಗಳ ಮೇಲೆ ಹಾಕುವ ಮೂಲಕ ಕಾಳಿಂದಿ ಎಕ್ಸ್‌ಪ್ರೆಸ್ ಅನ್ನು ಹಳಿತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಮಾಹಿತಿ ಪಡೆದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದ್ದು, ರೈಲ್ವೇ ರಕ್ಷಣಾ ಪಡೆ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಳಿಗಳ ಮೇಲೆ ಸಿಲಿಂಡರ್‌ಗಳನ್ನು ಇಟ್ಟಿರುವುದುನ್ನು ಲೊಕೊ ಪೈಲಟ್ (ಚಾಲಕ) ದೂರದಿಂದಲೇ ಗಮನಿಸಿದ್ದು, ತಕ್ಷಣ ಬ್ರೇಕ್‌ ಹಾಕಿದ್ದಾನೆ. ರೈಲು ನಿಲ್ಲುವ ಮುನ್ನವೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ ಆದರೆ ಡಿಕ್ಕಿಯ ಪರಿಣಾಮವಾಗಿ ಸಿಲಿಂಡರ್ ಹಳಿಯಿಂದ ದೂರ ಸರಿದಿದೆ. ಘಟನೆಯ ನಂತರ, ಕಾಳಿಂದಿ ಎಕ್ಸ್‌ಪ್ರೆಸ್ ಸುಮಾರು 20 ನಿಮಿಷಗಳ ಕಾಲ ಸ್ಥಳದಲ್ಲಿ ನಿಂತಿತ್ತು ಮತ್ತು ಪರಿಶೀಲನೆಗಾಗಿ ಬಿಲ್ಹೌರ್ ನಿಲ್ದಾಣದಲ್ಲಿ ಮತ್ತೆ ನಿಲ್ಲಿಸಲಾಯಿತು.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಲಿಂಡರ್ ಜೊತೆಗೆ ಪೆಟ್ರೋಲ್ ಬಾಟಲಿ ಮತ್ತು ಬೆಂಕಿಕಡ್ಡಿಗಳನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ. ಏತನ್ಮಧ್ಯೆ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಪೊಲೀಸರು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಭೇದಿಸಲು ಆರು ತಂಡಗಳನ್ನು ರಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Vande Bharat Train: ಹುಬ್ಬಳ್ಳಿ-ಪುಣೆ ಮಧ್ಯೆ ವಂದೇ ಭಾರತ್ ರೈಲು; ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತೊಂದು ಗಿಫ್ಟ್!