Friday, 22nd November 2024

Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಬರೋಬ್ಬರಿ 400 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಚಂಪತ್‌ ರಾಯ್‌

Ram Mandir

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ (Ram Mandir) ಮತ್ತು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಹಲವು ದೇಗುಲ ಮತ್ತು ಇತರ ಕಾಮಗಾರಿಗಳಿಂದ ಸರ್ಕಾರದ ಖಜಾನೆಗೆ ಸುಮಾರು 400 ಕೋಟಿ ರೂ. ಜಿಎಸ್‌ಟಿ (Goods and Services Tax-GST) ಸಂಗ್ರಹವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ (Champat Rai) ತಿಳಿಸಿದ್ದಾರೆ.

ಜಿಎಸ್‌ಟಿ ಸಂಗ್ರಹದ ನಿಜವಾದ ಮೌಲ್ಯ ನಿರ್ಮಾಣ ಕಾಮಗಾರಿಗಳೆಲ್ಲ ಪೂರ್ತಿಯಾದ ಬಳಿಕ ದೊರೆಯಲಿದೆ ಎಂದು ಅವರು ವಿವರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ನನ್ನ ಅಂದಾಜಿನ ಪ್ರಕಾರ ರಾಮ ಮಂದಿರ ನಿರ್ಮಾಣದಿಂದ ಸರ್ಕಾರಕ್ಕೆ ಒಟ್ಟು 400 ಕೋಟಿ ರೂ ಜಿಎಸ್‌ಟಿ ಸಂಗ್ರಹವಾಗಲಿದೆ. 70 ಎಕ್ರೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸಂಕೀರ್ಣದಲ್ಲಿ ಒಟ್ಟು 18 ದೇವಾಲಯಗಳನ್ನು ನಿರ್ಮಿಸಲಾಗುವುದು. ಇದು ಮಹರ್ಷಿ ವಾಲ್ಮೀಕಿ, ಶಬರಿ ಮತ್ತು ತುಳಸಿದಾಸರ ದೇವಾಲಯಗಳನ್ನು ಒಳಗೊಂಡಿದೆ. ನಾವು ಶೇ. 100ರಷ್ಟು ತೆರಿಗೆ ಪಾವತಿಸುತ್ತೇವೆ. ತೆರಿಗೆಯಲ್ಲಿ ಒಂದು ರೂಪಾಯಿಯನ್ನೂ ಕಡಿಮೆ ಮಾಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ʼʼಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿದೆ. ಏಕಕಾಲಕ್ಕೆ 2 ಲಕ್ಷ ಭಕ್ತರು ಬಂದರೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆʼʼ ಎಂದು ವಿಶ್ವ ಹಿಂದೂ ಪರಿಷತ್‌ನ ಮುಖಂಡರೂ ಆಗಿರುವ ಚಂಪತ್‌ ರಾಯ್‌ ಹೇಳಿದ್ದಾರೆ.

“ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸುವ ಆಂದೋಲನದ ವೇಳೆ ಎಷ್ಟು ಮಂದಿ, ಅವರ ಕುಟುಂಬ ಸದಸ್ಯರು ತೊಂದರೆ ಅನುಭವಿಸಿದರು ಎಂಬುದು ನನಗೆ ತಿಳಿದಿಲ್ಲ. ಈ ಯಜ್ಞ (ಚಳುವಳಿ) 1,000 ವರ್ಷಗಳಷ್ಟು ಹಳೆಯದಾದ ಸ್ವಾತಂತ್ರ್ಯ ಹೋರಾಟಕ್ಕಿಂತ ಕಡಿಮೆಯಿಲ್ಲ. ಈ ಆಂದೋಲನ ಸಾರ್ವಜನಿಕರ ಕಲ್ಯಾಣಕ್ಕಾಗಿ ನಡೆದಿದೆ” ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯ ಸಂಕೀರ್ಣದಲ್ಲಿನಿರ್ಮಾಣವಾಗುತ್ತಿರುವ ಶಿವ ದೇವಾಲಯದ ಶಿವಲಿಂಗವನ್ನು ಅಂತಿಮಗೊಳಿಸಲು ಅವರು ಭಾನುವಾರ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬಕಾವಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಐಎಎಸ್‌ ಅಧಿಕಾರಿಗಳ ಸಲಹೆ ಮೇರೆಗೆ ನಾನು ಅಲ್ಲಿಗೆ ಭೇಟಿ ನೀಡಿದ್ದಾಗಿ ಎಂದು ಅವರು ತಿಳಿಸಿದ್ದಾರೆ. ನರ್ಮದಾ ನದಿಯ ದಡದಲ್ಲಿರುವ ಬಕಾವಾ ಸುಂದರವಾದ ಶಿವಲಿಂಗಗಳ ನಿರ್ಮಾಣಕ್ಕೆ ಹೆಸರುವಾಸಿ. ಇಲ್ಲಿನ ಶಿವಲಿಂಗಗಳನ್ನು ಪ್ರಪಂಚದಾದ್ಯಂತದ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.

ಪ್ರಾಣ ಪ್ರತಿಷ್ಠೆ

ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ರಾಮ ಮಂದಿರದಲ್ಲಿ ಈ ವರ್ಷದ ಜನವರಿ 22ರಂದು ಪ್ರಾಣ ಪ್ರತಿಷ್ಠೆಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾವಹಿಸಿದ್ದರು. ಜತೆಗೆ ವಿವಿಧ ಕ್ಷೇತ್ರಗಳ 8 ಸಾವಿರಕ್ಕಿಂತ ಅಧಿಕ ಮಂದಿ ಸಾಕ್ಷಿಯಾಗಿದ್ದರು.

ಕೋಟ್ಯಾಂತರ ಮಂದಿ ಭೇಟಿ

ಪ್ರಾಣ ಪ್ರತಿಷ್ಠೆ ನೆರವೇರಿದ ಬಳಿಕ ರಾಮ ಮಂದಿರಕ್ಕೆ ಇದುವರೆಗೆ ಕೋಟ್ಯಾಂತರ ಮಂದಿ ಭಕ್ತರು ಭೇಟಿ ನೀಡಿದ್ದಾರೆ. ಆರಂಭದಲ್ಲಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಮಂದಿ ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸಿದ್ದರು. ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವ ಯೋಜನೆಯೂ ಇದೆ.

ಈ ಸುದ್ದಿಯನ್ನೂ ಓದಿ: HD Kumaraswamy: 2030ರ ವೇಳೆಗೆ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಗುರಿ: ಎಚ್‌ಡಿಕೆ