Friday, 22nd November 2024

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ವಿವರ ಪ್ರಸಾರಕ್ಕೆ ತಡೆ ಹಾಕಿದ ಹೈಕೋರ್ಟ್‌

renukaswamy murder case high court actor darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಪೊಲೀಸರು ಕೋರ್ಟಿಗೆ ಸಲ್ಲಿಸಿರುವ ಆರೋಪಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಹೈಕೋರ್ಟ್‌ (High court) ಮಾಧ್ಯಮಗಳಿಗೆ ಸೂಚಿಸಿದೆ. ದರ್ಶನ್‌ (Actor Darshan) ಪರ ವಕೀಲರು ಇದಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹೋಗಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು. ಚಾರ್ಜ್‌ಶೀಟ್‌ನಲ್ಲಿ ಕೊಲೆಯ ವಿವರ, ಸ್ಥಳ ಮಹಜರು, ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸಾಕ್ಷಿಗಳ ಹೇಳಿಕೆ, ಸಾಕ್ಷ್ಯಗಳ ಮಾಹಿತಿ ಮುಂತಾದ ಅಂಶಗಳೆಲ್ಲ ದಾಖಲಾಗಿವೆ. ಆರೋಪ ಪಟ್ಟಿ ದಾಖಲು ಮಾಡಿದಾಗಿನಿಂದಲೂ ಅದರಲ್ಲಿರುವ ಅಂಶಗಳು ಮಾಧ್ಯಮಗಳಲ್ಲಿ ವರದಿ ಆಗುತ್ತಿವೆ. ಜೊತೆಗೆ ರೇಣುಕಾಸ್ವಾಮಿಯ ಕೊನೆಯ ಕ್ಷಣಗಳ ಕೆಲವು ಫೋಟೊಗಳೂ ಬಹಿರಂಗವಾಗಿವೆ. ಇದೀಗ, ಇವೆಲ್ಲವನ್ನು ಪ್ರಸಾರ ಮಾಡದಂತೆ ಕೋರ್ಟ್‌ ಹೇಳಿದೆ.

ಸೋಮವಾರ ನಟ ದರ್ಶನ್ ಪರ ವಕೀಲರು ಚಾರ್ಜ್‌ಶೀಟ್‌ನಲ್ಲಿದ್ದ ಮಾಹಿತಿ ಸೋರಿಕೆಯಾಗಿದ್ದು, ಅವುಗಳ ಪ್ರಸಾರಕ್ಕೆ ತಡೆ ಕೊಡಬೇಕು ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು, ಇಂದು ಆದೇಶವನ್ನು ಪ್ರಕಟಿಸಿದ್ದು, ದರ್ಶನ್‌ ಮನವಿಯನ್ನು ಪುರಸ್ಕರಿಸಿ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದೆ.

ಇದಕ್ಕೂ ಮುನ್ನ ಆಗಸ್ಟ್ 27ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು. ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠವು ಮುಂದಿನ ವಿಚಾರಣೆವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಸುಪ್ರೀಂಕೋರ್ಟ್​ನ ಸಿದ್ಧಾರ್ಥ ವಶಿಷ್ಟ್ @ ಮನು ಶರ್ಮಾ ವಿರುದ್ಧ ರಾಜ್ಯ (ದೆಹಲಿಯ ಎನ್‌ಸಿಟಿ), 2010, ಮತ್ತು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್, 1995 ರ ಷರತ್ತು 5 ಮತ್ತು ಸಮನ್ವಯ ಪೀಠದ ತೀರ್ಪನ್ನು ಉಲ್ಲೇಖ ಮಾಡಿ, ಮೇಲಿನಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳಿಗೆ ತಲುಪಿಸುವಂತೆ ಹಾಗೂ ಆದೇಶ ಪಾಲನೆ ಆಗುವಂತೆ ನಿಗಾ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶನ ನೀಡಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಕಕ್ಷಿದಾರರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿದ್ದು, ಇವರಲ್ಲಿ ಯಾರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ವಿಚಾರ. ಅರ್ಜಿದಾರರು ಈ ರೀತಿ ಆದೇಶ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧಿಸಲಾಗಿತ್ತು. ರೇಣುಕಾ ಸ್ವಾಮಿ, ದರ್ಶನ್​ರ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಹಲ್ಲೆ ನಡೆಸಿ ಕೊಲ್ಲಲಾಗಿದೆ ಎಂಬ ಆರೋಪ ಬಂಧಿತರ ಮೇಲಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 12 ಕ್ಕೆ ನಡೆಯಲಿದೆ.

ಈ ಸುದ್ದಿ ಓದಿ: Actor Darshan: ನಟ ದರ್ಶನ್‌ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ