Friday, 20th September 2024

MLA YeshwantRayagowda : ತಾಲೂಕಿನ ಒಂದು ಗ್ರಾಮ ಸರಾಯಿ ಮುಕ್ತ ಮಾಡಿ – ಯಶವಂತರಾಯ ಗೌಡ

ಇಂಡಿ: ಇಂಡಿ ತಾಲೂಕಿನಲ್ಲಿಯ ಯಾವದಾದರೂ ಒಂದು ಗ್ರಾಮವನ್ನು ಶರಾಯಿ ಮುಕ್ತ ಮಾಡಿ ಅದು ಇತರ ಗ್ರಾಮಗಳಿಗೆ ಪ್ರೇರಣೆ ಯಾಗುತ್ತದೆ ಎಂದು ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಅದಕ್ಕೆ ಪೂರಕವಾಗಿ ಮಾತನಾಡಿದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸ್ಥಳಿಯ ಧರ್ಮಸ್ಥಳ ಸೇವಾ ಸಂಸ್ಥೆ ಮತ್ತು ಪೂಜ್ಯ ಶ್ರೀ ಅಮೃತಾನಂದ ಅವರ ಸಹಕಾರದಿಂದ ಯಾವದಾದರೂ ಒಂದು ಗ್ರಾಮ ಗುರುತಿಸಿ ಬರುವ ಅಕ್ಟೋಬರ್ ೨ ರಿಂದ ಶರಾಯಿ ಮುಕ್ತ ಗ್ರಾಮ ಮಾಡಲು ಕಾರ್ಯ ಯೋಜನೆ ರೂಪಿಸಲಾಗುವದು ಎಂದರು.
ತಾಲೂಕಿನಲ್ಲಿ ೭೧೮೭೬ ಮಹಿಳೆಯರು ಪ್ರತಿ ತಿಂಗಳು ರೂ ೨೦೦೦ ಹಣ ಪಡೆಯುತ್ತಿದ್ದು ಪ್ರತಿ ತಿಂಗಳು ಆ ಹಣ ಒಟ್ಟು ೧೪ ಕೋಟಿ ವಿತರಣೆಯಾಗುತ್ತಿದ್ದು ಈ ವರೆಗೆ ೧೧ ತಿಂಗಳಲ್ಲಿ ೧೫೪ ಕೋಟಿ ರೂ ವಿತರಣೆ ಯಾಗಿದೆ ಎಂದರು.

ವಿದ್ಯುತ್ ಇಲಾಖೆಯಿಂದ ಒಟ್ಟು ೪೧ ಸಾವಿರ ಮನೆಗಳಲ್ಲಿ ೩೯ ಸಾವಿರ ಮನೆಗಳಿಗೆ ಒಟ್ಟು ೦೬ ಕೋಟಿ ಮೌಲ್ಯದ ವಿದ್ಯುತ್ ಉಚಿತ ಮತ್ತು ತಾಲೂಕಿನಲ್ಲಿ ೬೧ ಸಾವಿರ ಜನರಿಗೆ ಅಕ್ಕಿಯ ಹಣ ಕುರಿತು ಪ್ರತಿಯೊಬ್ಬರಿಗೆ ರೂ ೧೭೦ ರಂತೆ ೨೨ ಕೋಟಿ ರೂ ಹಣ ನೀಡಲಾಗುವದು ಎಂದು ಸಭೆಯಲ್ಲಿ ಸಂಬಂದಿತ ಅಧಿಕಾರಿಗಳು ಮತ್ತು ಶಾಸಕರು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ಜೂನ ತಿಂಗಳಲ್ಲಿ ೧೦೨ ಮಿ.ಮಿ ಮಳೆ ಬರಬೇಕಾಗಿತ್ತು. ೧೮೧ ಮಿ ಮಿ ಬಂದಿದೆ. ಜುಲೈ ತಿಂಗಳಲ್ಲಿ ೯೭ ಮಿ.ಮಿ ಬರಬೇಕಾಗಿದ್ದು ೯೪ ಮಿ.ಮಿ ಬಂದಿದೆ. ಅಗಸ್ಟ ತಿಂಗಳಲ್ಲಿ ೧೦೧ ಬರಬೇಕಾಗಿತ್ತು ೧೯೧ ಮಿಮಿ ಮಳೆ ಬಂದಿದೆ. ವಾಡಿಕೆಯಂತೆ ಹೆಚ್ಚಿಗೆ ಮಳೆ ಬಂದಿದೆ ಎಂದರು.ತೋಟಗಾರಿಕೆ ಇಲಾಖೆಯ ಎಚ್.ಎಸ್.ಪಾಟೀಲರು ಮಾತನಾಡಿ ಬೆಳೆಹಾನಿ ೩೧ ಹೇಕ್ಟರ್ ಪ್ರದೇಶದಲ್ಲಿ ಹಾಳಾಗಿದ್ದು ೧೦೫ ಜನರಿಗೆ ಪರಿಹಾರ ಬಂದಿದೆ. ಬರಗಾಲದಿಂದ ೧೦೫ ಹೇ ಪ್ರದೇಶಕ್ಕೆ ಪರಿಹಾರ ಹಣ ನೀಡಿದ್ದಾರೆ ಎಂದರು.

ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ರಾಜಕುಮಾರ ಅಡಕಿ ಮಾತನಾಡಿ ಸಿಡಿಲು ಬಡಿದು ಸಾವು ಸಂಬವಿಸಿದ ೧೪ ಜಾನುವಾರುಗಳಿಗೆ ಮತ್ತು ೯೦ ಇತರೆ ಕಾರಣಗಳಿಂದ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಹಣ ನೀಡಿದೆ ಎಂದರು.

ರೈತರು ೧೯೧೨ ಕ್ಕೆ ಕರೆ ಮಾಡಿದರೆ ರೈತರ ಹೊಲಗಳಿಗೆ ಅಂಬುಲನ್ಸ ಬರುತ್ತದೆ ಎಂದರು.









ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಲು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯಕ್ಕಾಗಿ ಶಾಸಕರು ಘಟಕ ವ್ಯವಸ್ಥಾಪಕರ ಜೊತೆ ಚರ್ಚೆ ನಡೆಸಿದರು. ಅನೇಕರು ದವಾಖಾನೆಗೆ ಹೋಗುತ್ತಾರೆ. ಹೀಗಾಗಿ ಬೆಳಗಾಂವ ಜಿಲ್ಲೆ ಅನೇಕ ಕಡೆ ಉಚಿತ ಬಸ್ ವ್ಯವಸ್ಥೆ ನೀಡಿದ್ದಾರೆ ನಮ್ಮ ತಾಲೂಕಿನವರಿಗೂ ಸವಲತ್ತು ಕೊಡಲು ಚರ್ಚೆ ನಡೆಯಿತು.

ಅದಲ್ಲದೆ, ಪಟ್ಟಣದ ೧೦ ಕಿ.ಮಿ ವರೆಗೆ ನಗರ ಸಾರಿಗೆ ಮಾಡಲು ಕೇಳಿಕೊಂಡರು.ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು,ನಗರದ ಡ್ರೇನೇಜ ನೀರು ಬಸ್ ನಿಲ್ದಾಣದಲ್ಲಿ ಬರುತ್ತದೆ ಎಂಬ ಕುರಿತು ಚರ್ಚೆ ನಡೆಯಿತು.

ಕೃಷಿ ತೋಟಗಾರಿಕೆ, ಹೆಸ್ಕಾಂ, ಅರಣ್ಯ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಯಿತು.
ಕೆಡಿಪಿ ಗೆ ನೂತನವಾಗಿ ಆಯ್ಕೆಯಾದ ನಾಮನಿರ್ದೇಶಕ ಸದಸ್ಯರಾದ ಬಿ.ಕೆ.ಪಾಟೀಲ, ಗುರನಗೌಡ ಪಾಟೀಲ, ಕೆಂಪೆಗೌಡ ಪರಗೊಂಡ ಕರಜಗಿ ಗುರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಎಸಿ ಅಬೀದ್ ಗದ್ಯಾಳ, ಜಿಪಂ ನ ವಿಜಯಕುಮಾರ ಅಜುರೆ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಡಿ,ವಾಯ್ ಎಸ್ ಪಿ ಜಗದೀಶ ಎಚ್.ಎಸ್, ಇಒ ಬಾಬು ರಾಠೋಡ, ಭೀಮು ಕವಲಗಿ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಮಲ್ಲನಗೌಡ ಬಿರಾದಾರ ಮತ್ತಿತರಿದ್ದರು.

ಅಧಿಕಾರಿಗಳಾದ ಆರ್.ಎಸ್.ರುದ್ರವಾಡಿ, ಮಹಾಂತೇಶ ಹಂಗರಗಿ, ಮಹಾದೇವಪ್ಪ ಏವೂರ ಅರಣ್ಯ ಇಲಾಖೆಯ ಎಸ್.ಜಿ.ಸಂಗಾಲಕ, ಮಂಜುನಾಥ ಧುಳೆ ಮತ್ತಿತರಿದ್ದರು.