ಮುಂಬೈ : ಸ್ತ್ರೀ 2 ಚಿತ್ರದಲ್ಲಿ ತಮನ್ನಾ ಭಾಟಿಯಾ ಅವರು ಡ್ಯಾನ್ಸ್ ಮಾಡಿದ ‘ಆಜ್ ಕಿ ರಾತ್ ‘(Aaj Ki Raat) ಹಾಡು ಬಿಡುಗಡೆಯಾದಾಗಿನಿಂದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡಿಗೆ ಅನೇಕರು ಡ್ಯಾನ್ಸ್ ಮಾಡಿ ಅದರ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ ಈ ಹಾಡಿಗೆ ಮಕ್ಕಳು ಡ್ಯಾನ್ಸ್ ಮಾಡಿದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳು ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದು ಈ ವಿಡಿಯೊದಲ್ಲಿ ಕಂಡುಬಂದಿದೆ.
ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗಾಗಿ ಅದರ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮ ಎಂದು ಸೂಚಿಸುವ ಬ್ಯಾನರ್ ಹೊಂದಿರುವ ವೇದಿಕೆಯ ಮೇಲೆ ಕೆಲವು ಮಕ್ಕಳು ಡ್ಯಾನ್ಸ್ ಮಾಡಿರುವ ವಿಡಿಯೊ ಇದಾಗಿದೆ. ಈ ಬ್ಯಾನರ್ನಲ್ಲಿ ಪೂಜ್ಯ ಶಿಕ್ಷಕ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಫೋಟೊವಿದೆ. ಅವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.
ವಿಡಿಯೊದಲ್ಲಿ ಮಕ್ಕಳು ಕೆಲವು ಐಟಂ ಸಾಂಗ್ಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಅದರಲ್ಲಿ ಒಬ್ಬಳು ಹುಡುಗಿ ಚಿತ್ರದಲ್ಲಿ ತಮನ್ನಾ ಭಾಟಿಯಾ ಅವರಂತೆಯೇ ಉಡುಪನ್ನು ಧರಿಸಿ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಅಸ್ಸಾಂನ ಶಾಲೆಯೊಂದರಲ್ಲಿ ಈ ಕಾರ್ಯಕ್ರಮ ನಡೆದಿತ್ತು. ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಾಗಿನಿಂದ, ಜನರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಈ ಹಾಡಿಗೆ ಮಕ್ಕಳು ಡ್ಯಾನ್ಸ್ ಮಾಡಲು ಏಕೆ ಅವಕಾಶ ನೀಡಿದ್ದೀರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. “ಶಿಕ್ಷಕರಲ್ಲಿ ಒಬ್ಬರ ವೈಯಕ್ತಿಕ ತರಬೇತಿಯಿಲ್ಲದೆ ಈ ನೃತ್ಯ ನಡೆಯಲು ಸಾಧ್ಯವಿಲ್ಲ, ಇಲ್ಲಿಯೂ ಅದೇ ರೀತಿ ನಡೆದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಎಕ್ಸ್ ಬಳಕೆದಾರರೊಬ್ಬರು ತಿಳಿಸಿದ್ದಾರೆ. “ಇದಕ್ಕೆ ಸಂಘಟಕರು ಮತ್ತು ಪೋಷಕರು ಅವಕಾಶ ನೀಡಿದ್ದು ನಾಚಿಕೆಗೇಡಿನ ಕೃತ್ಯ. ನಾವು ನಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದೇವೆ? ಎಂಬುದನ್ನು ಅರಿತುಕೊಳ್ಳಬೇಕು ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು “ಇದು ಅಸಹ್ಯಕರವಾಗಿದೆ!” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಹಾಲಿನ ಕೆನೆ ಮತ್ತು ಅಲೋವೆರಾ ಇವೆರಡರಲ್ಲಿ ಯಾವುದು ನಿಮ್ಮ ಚರ್ಮಕ್ಕೆ ಸೂಕ್ತ?
ಹೊಸದಾಗಿ ಬಿಡುಗಡೆಯಾದ ಸ್ತ್ರೀ 2 ಚಿತ್ರದ ಆಜ್ ಕಿ ರಾತ್ ಹಾಡನ್ನು ಸಚಿನ್-ಜಿಗರ್ ಸಂಯೋಜಿಸಿದ್ದಾರೆ. ಮಧುಬಂತಿ ಬಾಗ್ಚಿ, ದಿವ್ಯಾ ಕುಮಾರ್, ಸಚಿನ್-ಜಿಗರ್ ಹಾಡಿರುವ ಈ ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ.