Thursday, 19th September 2024

ಸ್ಫೂರ್ತಿಪಥ ಅಂಕಣ: Lata Mangeshkar: ಈ ಕುಟುಂಬ ಸಮರ್ಪಣೆ ಮಾಡಿದ್ದು ಒಂದು ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು!

Lata Mangeshkar

M=Music = Melody = Mangeshkar Family

Rajendra Bhat K
  • ರಾಜೇಂದ್ರ ಭಟ್ ಕೆ.

ಸ್ಫೂರ್ತಿಪಥ ಅಂಕಣ: ಗೋವಾದಲ್ಲಿ ಇರುವ ಪ್ರಸಿದ್ಧವಾದ ಮಂಗೇಶಿ ದೇವಸ್ಥಾನಕ್ಕೆ ಕುಳಾವಿಗಳಾದ ಒಂದು ಶ್ರದ್ಧಾವಂತ ಕುಟುಂಬವು ಮುಂದೆ ಮಂಗೇಷ್ಕರ್ ಎಂಬ ಉಪನಾಮವನ್ನು ಪಡೆಯಿತು! ಈ ಕುಟುಂಬವು ಭಾರತೀಯ ಸಂಗೀತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಭಾರೀ ದೊಡ್ಡ ಪುಸ್ತಕವನ್ನೇ ಬರೆಯಬೇಕು ಎಂದು ಆಸೆ ಇದೆ. ಅದನ್ನು ಸಂಕ್ಷಿಪ್ತ ಮಾಡಿ ಇಲ್ಲಿ (Lata Mangeshkar) ದಾಖಲಿಸುತ್ತಿದ್ದೇನೆ.

ಅಪ್ಪ ದೀನಾನಾಥ್ ಮಂಗೇಷ್ಕರ್ ಸಂಗೀತ ಗುರು ಆಗಿದ್ದರು. ಮರಾಠಿ ನಾಟಕದ ಮಂಡಳಿಯಲ್ಲಿ ಹಾರ್ಮೋನಿಯಂ ಮೇಷ್ಟ್ರು ಆಗಿದ್ದರು. ಹಲವು ಕಡೆಗಳಲ್ಲಿ ಸಂಗೀತ ಪಾಠ ಹೇಳುತ್ತಿದ್ದರು. ಮರಾಠಿ ರಂಗಭೂಮಿಯಲ್ಲಿ ಅವರದ್ದು ಬಹಳ ದೊಡ್ಡ ಹೆಸರು. ಆದರೆ ಬಡತನ ಬೆಂಬಿಡದ ಭೂತ ಆಗಿತ್ತು.

ಅವರು ಸಣ್ಣ ಪ್ರಾಯದಲ್ಲಿ ತೀರಿದಾಗ ಮಗಳು ಲತಾಗೆ ಕೇವಲ 13 ವರ್ಷ. ಅದರಿಂದಾಗಿ ಆಕೆ ಇಡೀ ಕುಟುಂಬದ ಹೊಣೆಯನ್ನು ಸಣ್ಣ ಪ್ರಾಯದಲ್ಲಿ ಹೊರಬೇಕಾಯಿತು. ಆಕೆ ಸಿನೆಮಾಗಳಲ್ಲಿ ಹಾಡಲು ಆರಂಭ ಮಾಡುವಾಗ ಆಕೆಗೆ ಕೇವಲ 13 ವರ್ಷ! ತನ್ನ ಬಾಲ್ಯದ ಅಪಮಾನ, ಹಸಿವು, ನೋವು ಎಲ್ಲವನ್ನೂ ಮೆಟ್ಟಿ ನಿಂತ ಲತಾ ಅದರ ಬಿಸಿಯು ತನ್ನ ಕುಟುಂಬಕ್ಕೆ ಒಂದಿಷ್ಟೂ ತಾಗದ ಹಾಗೆ ಪ್ರೀತಿಯಿಂದ ನೋಡಿಕೊಂಡವರು. ಈ ಸಾಂಸಾರಿಕ ಒತ್ತಡದಲ್ಲಿ ತಾನು ಮದುವೆಯನ್ನೇ ಮರೆತೆ ಎಂದು ಲತಾ ಹೇಳಿದ್ದಾರೆ. ಆಕೆ ಭಾರೀ ಹಠವಾದಿ ಅನ್ನುವುದು ಅವರ ವ್ಯಕ್ತಿತ್ವ!

ಎಪ್ಪತ್ತು ವರ್ಷಗಳ ಅವಧಿಯಲ್ಲಿ ಆಕೆ ಹಾಡಿದ್ದು ಇಪ್ಪತ್ತು ಭಾಷೆಗಳ 50,000 ಹಾಡುಗಳನ್ನು! ಆ ಅಮರ ಹಾಡುಗಳ ವೈವಿಧ್ಯದ ಬಗ್ಗೆ ದೊಡ್ಡ ಗ್ರಂಥವನ್ನೇ ಬರೆಯಬಹುದು. ಭಾರತದ ಕೋಗಿಲೆ ಎಂದು ಕರೆಸಿಕೊಂಡ ಆಕೆ ಅತೀ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಬರೆದದ್ದು ಮಾತ್ರವಲ್ಲ 81 ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಜೀವಮಾನದಲ್ಲಿ ಪಡೆದಿದ್ದಾರೆ. ಕೊನೆ ಕೊನೆಗೆ ನನಗೆ ಅವಾರ್ಡ್ ಕೊಡುವುದೇ ಬೇಡ ಎಂದು ಲತಾ ದೀದಿಯು ಜ್ಯೂರಿಗಳನ್ನು ವಿನಂತಿ ಮಾಡಿದ್ದು ಅವರ ಸಜ್ಜನಿಕೆ!

ಹಿನ್ನೆಲೆ ಗಾಯನಕ್ಕೆ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಅವರು ಪಡೆದಿದ್ದಾರೆ. ಎಲ್ಲ ಪದ್ಮ ಪ್ರಶಸ್ತಿಗಳು ಮತ್ತು ಭಾರತರತ್ನ ಕಿರೀಟ ಅವರ ಶೋಕೇಸಲ್ಲಿ ಇವೆ!

Lata Mangeshkar

ಆಕೆಯ ಮೊದಲ ತಂಗಿಯಾದ ಮೀನಾ ಖಾಡಿಲ್ಕರ್ ಎರಡೇ ವರ್ಷಗಳ ಅಂತರದಲ್ಲಿ ಹುಟ್ಟಿದವರು. ಆಕೆ ಕೂಡ ಹಿಂದೀ ಮತ್ತು ಮರಾಠಿ ಭಾಷೆಗಳಲ್ಲಿ ಐವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಸಾವಿರಾರು ಹಾಡು ಹಾಡಿದ್ದಾರೆ. ಅಕ್ಕ ಲತಾ ಬಗ್ಗೆ ಎರಡು ಅದ್ಭುತವಾದ ಪುಸ್ತಕ ಮೀನಾ ಬರೆದಿದ್ದಾರೆ.

‘ಮೊತೀ ತೀಚಿ ಸಾವಳಿ'(ನಾನು ಆಕೆಯ ನೆರಳು) ಪುಸ್ತಕವು ಮರಾಠಿ ಭಾಷೆಯಲ್ಲಿ ಇದೆ. ‘ದೀದಿ ಔರ್ ಮೀ’ ಕೂಡ ಅವರು ಬರೆದ ಅದ್ಭುತ ಪುಸ್ತಕ. ಈ ಎರಡೂ ಪುಸ್ತಕಗಳನ್ನು ಸ್ವತಃ ಲತಾ ಬಿಡುಗಡೆ ಮಾಡಿದ್ದಾರೆ.

ಲತಾ ಅವರ ಎರಡನೇ ತಂಗಿ ಆಶಾ ಭೋಂಸ್ಲೆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ! ಆಕೆ ಕೂಡ ಹಾಡಿದ್ದು ಇಪ್ಪತ್ತು ಭಾಷೆಗಳ 12,000 ಹಾಡುಗಳನ್ನು! ಹಿನ್ನೆಲೆ ಗಾಯನಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳು ಅವರಿಗೆ ದೊರೆತಿವೆ. ಅದೇ ರೀತಿ ಒಟ್ಟು 76 ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಟ ಪ್ರಶಸ್ತಿಗಳು, ಹಲವು ಪದ್ಮ ಪ್ರಶಸ್ತಿಗಳು ಆಶಾ ಅವರಿಗೆ ದೊರೆತಿವೆ.

ಮಾಧುರ್ಯಕ್ಕೆ ಲತಾ ಹೆಸರಾದರೆ ವೈವಿಧ್ಯಕ್ಕೆ ಆಶಾ ದೊಡ್ಡ ಹೆಸರು!

ಆಶಾ ಮತ್ತು ಲತಾ ಮಧ್ಯೆ ದೊಡ್ಡದಾದ ಕಲಹ ಇದೆ ಎಂಬ ಗುಮಾನಿಯು ಮುಂಬೈಯಲ್ಲಿ ಒಂದು ಕಾಲದಲ್ಲಿ ಹರಡಿತ್ತು! ಆದರೆ ಸ್ವತಃ ಅಕ್ಕ ಲತಾ ಅದನ್ನು ನಿರಾಕರಿಸಿದರು. ಅದರ ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರಕಾರಗಳು ಸ್ಥಾಪನೆ ಮಾಡಿದ ಲತಾ ಮಂಗೇಶ್ಕರ್ ಹೆಸರಿನ ಎರಡೂ ಪ್ರಶಸ್ತಿಗಳನ್ನು ಆಶಾ ಭೋಂಸ್ಲೆ ಪಡೆದಿದ್ದಾರೆ!

ಲತಾ ಅವರ ಮೂರನೇ ತಂಗಿ ಉಷಾ ಮಂಗೇಷ್ಕರ್ ಕೂಡ ಸಾವಿರಾರು ಹಿಂದೀ ಮತ್ತು ಮರಾಠಿಯ ಹಾಡುಗಳನ್ನು ಹಾಡಿದ್ದಾರೆ. ವಿಶೇಷವಾಗಿ ಮರಾಠಿ ಭಕ್ತಿಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ದೊಡ್ಡ ಹೆಸರು ಇದೆ. ಹಿನ್ನೆಲೆ ಗಾಯನಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ತನ್ನ ದೊಡ್ಡ ಅಕ್ಕನ ಹಾಗೆ ಅವರು ಮದುವೆ ಆಗದೇ ಹಾಗೇ ಉಳಿದರು!

ಈ ಮಂಗೇಷ್ಕರ್ ಸೋದರಿಯರಿಗೆ ಒಬ್ಬನೇ ಸೋದರ ಹೃದಯನಾಥ. ಅವರೂ ಗಾಯಕ, ಸಂಗೀತ ನಿರ್ದೇಶಕ ಎಲ್ಲವೂ ಆಗಿದ್ದಾರೆ. ಹಿಂದೀ ಮತ್ತು ಮರಾಠಿ ಭಾಷೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ ಮತ್ತು ಅಷ್ಟೇ ಹಾಡುಗಳನ್ನು ಸುಂದರವಾದ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಅವರಿಗೆ ಸಂಗೀತ ನಿರ್ದೇಶನಕ್ಕಾಗಿ ಒಂದು ರಾಷ್ಟ್ರಪ್ರಶಸ್ತಿ ಕೂಡ ದೊರೆತಿದೆ. ಪದ್ಮಶ್ರೀ ಪ್ರಶಸ್ತಿ ಕೂಡ ಅವರ ಸಂಗ್ರಹದಲ್ಲಿ ಇದೆ.

ದೀನಾನಾಥ ಮಂಗೇಷ್ಕರ್

ಹೀಗೆ ಎಂ ಅಂದರೆ ಮ್ಯೂಸಿಕ್, ಮೆಲೋಡಿ ಮತ್ತು ಮಂಗೇಷ್ಕರ್ ಎಲ್ಲವೂ ಆಗಿದೆ ಎಂದು ನನ್ನ ಭಾವನೆ!

ಭಾರತದ ಒಂದೇ ಕುಟುಂಬಕ್ಕೆ ಒಂದು ಭಾರತ ರತ್ನ, ಹಲವು ಪದ್ಮ ಪ್ರಶಸ್ತಿಗಳು, ಹತ್ತಾರು ಜೀವಮಾನದ ಸಾಧನೆಯ ಪ್ರಶಸ್ತಿಗಳು, ನೂರಾರು ರಾಷ್ಟ್ರಮಟ್ಟದ ಮತ್ತು ಜಾಗತಿಕ ಮಟ್ಟದ ಪ್ರಶಸ್ತಿಗಳು ದೊರೆತದ್ದು ಒಂದು ಬಹು ಶ್ರೇಷ್ಠವಾದ ದಾಖಲೆ! ಹಾಗೆಯೇ ಒಂದೇ ಕುಟುಂಬವು ಸೇರಿ ಒಂದು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಸುಮಧುರ ಹಾಡುಗಳನ್ನು ಸಮರ್ಪಣೆ ಮಾಡಿದ್ದು ಎಂದಿಗೂ ಅಳಿಸಲು ಸಾಧ್ಯವಾಗದ ದಾಖಲೆ!

ಮಂಗೇಷ್ಕರ್ ಕುಟುಂಬವು ಭಾರತೀಯ ಸಂಗೀತಕ್ಕೆ ಮತ್ತು ಸಮಗ್ರ ಭಾರತೀಯ ಸಂಸ್ಕೃತಿಗೆ ಕೊಟ್ಟ ಕೊಡುಗೆಯನ್ನು ಯಾರೂ ಮೀರಿಸಲು ಸಾಧ್ಯವೇ ಇಲ್ಲ.

ಈ ಬರಹ ಓದಿ: Motivation: ಸ್ಫೂರ್ತಿಪಥ ಅಂಕಣ: ಬೊಮನ್ ಇರಾನಿ ಬದುಕು ಆತನ ಸಿನಿಮಾಗಳಿಗಿಂತ ಹೆಚ್ಚು ರೋಚಕ!