Friday, 22nd November 2024

Rahul Gandhi: INDI ಅಲಯನ್ಸ್ ಅಥವಾ INDIA ಅಲಯನ್ಸ್? ವಿದ್ಯಾರ್ಥಿಯ ಪ್ರಶ್ನೆಗೆ ತಡವರಿಸಿದ ರಾಹುಲ್‌ ಗಾಂಧಿ- ಈ ವಿಡಿಯೋ ಭಾರೀ ವೈರಲ್‌

Rahul Gandhi

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕಳೆದೆರಡು ದಿನಗಳಲ್ಲಿ ಅಲ್ಲಿಂದಲೇ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿರುದ್ಧ ಕಿಡಿಕಾರುತ್ತಾ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಬಡಬಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಗ್ಗೂಡಿದ ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.A. ಯ ಅರ್ಥದ ಕುರಿತು ಯುಎಸ್‌ನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಾಗದೇ ರಾಹುಲ್‌ ಗಾಂಧಿ ಮುಜುಗರಕ್ಕೀಡಾಗಿದ್ದಾರೆ.

USನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ವಿದ್ಯಾರ್ಥಿಯೊಬ್ಬ ವಿರೋಧ ಪಕ್ಷವನ್ನು “INDI ಅಲಯನ್ಸ್” ಎಂದು ಉಲ್ಲೇಖಿಸಿದನು. ಆಗ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ ಅದು INDI ಅಲಯನ್ಸ್ ಅಲ್ಲ ಬದಲಾಗಿ ಅದು INDIA ಅಲಯನ್ಸ್ ಆಗಿದೆ. INDIA ಅಲಯನ್ಸ್ ಎನ್ನುವುದು ಬಿಜೆಪಿಯವರು ಅದನ್ನು ತಿದ್ದಿರುವುದು ಎಂದಿದ್ದಾರೆ. “INDI ಅಲಯನ್ಸ್” ಎಂಬ ಪದವನ್ನು ಬಿಜೆಪಿ ಬಳಸುತ್ತದೆ ಮತ್ತು INDI ಅಲಯನ್ಸ್‌ನ ಸಂಪೂರ್ಣ ಕಲ್ಪನೆಯು ಲೋಕಸಭೆ ಚುನಾವಣೆಯ ಸಮದಲ್ಲಿ ಭಾರತದ ಮೇಲೆ ದಾಳಿಯಾಗುತ್ತಿದೆ ಎಂದು ಜನರಿಗೆ ಹೇಳುವುದಾಗಿದೆ ಎಂದು ಹೇಳಿದರು. ವಿದ್ಯಾರ್ಥಿ ಮತ್ತೆ ಮುಂದುವರೆದು, ಕೊನೆಯ ಅಕ್ಷರ A ಏನನ್ನು ಪ್ರತಿನಿಧಿಸುತ್ತದೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ರಾಹುಲ್‌ A ಅಂದ್ರೆ ಅಲಯನ್ಸ್‌ ಎಂದಿದ್ದಾರೆ.

ಹೀಗೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಾಗದೇ ರಾಹುಲ್‌ ಗಾಂಧಿ ಒದ್ದಾಡಿದ್ದಾರೆ. ಜತೆಗಿದ್ದ ಸಂದರ್ಶನಕಾರರೂ ಕೂಡ ರಾಹುಲ್‌ ಬಾಲಿಷವಾದ ಉತ್ತರಕ್ಕೆ ನಗಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ನಿನ್ನೆ ರಾಹುಲ್‌ ಗಾಂಧಿ ಸಿಖ್‌ಗಳ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗಿದೆ. ಇದರಿಂದ ತೀವ್ರ ಕೆಂಡಾಮಂಡಲವಾಗಿರುವ ಬಿಜೆಪಿ ರಾಹುಲ್‌ ಗಾಂಧಿಯವರನ್ನು ಕೋರ್ಟ್‌ಗೆಳೆಯುವುದಾಗಿ ಎಚ್ಚರಿಕೆ ನೀಡಿದೆ. ವರ್ಜೀನಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಭಾರತದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೆ. ಸಭೆಯ ಮುಂದಿನ ಸಾಲಿನಲ್ಲಿ ಕುಳಿತ ಸಿಖ್ ಧರ್ಮೀಯರಲ್ಲಿ ಒಬ್ಬರಿಗೆ ತಮ್ಮ ಹೆಸರು ಹೇಳುವಂತೆ ರಾಹುಲ್ ಗಾಂಧಿ ಹೇಳಿದಾಗ, ಟರ್ಬನ್‌(ಪೇಟ) ಧರಿಸಿದ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದರು. ಭಾರತದಲ್ಲಿ ಸಿಖ್ಖರು ಪೇಟವನ್ನು ಧರಿಸಲು ಅಥವಾ ಅನುಮತಿ ನೀಡಬಹುದೇ ಬೇಡವೇ, ಅಥವಾ ಅವರು ಸಿಖ್ಖರು ಗುರುದ್ವಾರಕ್ಕೆ ಹೋಗಲು ಸಾಧ್ಯವೇ ಎಂಬುದಕ್ಕಾಗಿ ಹೋರಾಟವಾಗಿದೆ. ಇದು ಕೇವಲ ಒಂದು ಧರ್ಮದಲ್ಲಿ ಅಲ್ಲ, ಎಲ್ಲಾ ಧರ್ಮದಲ್ಲಿ ಇಂತಹ ಹೋರಾಟ, ಸಂಘರ್ಷಗಳಿವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi Controversy: ಸಿಖ್ಖರ ಬಗ್ಗೆ ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ- ಕೋರ್ಟ್‌ಗೆಳೆಯುತ್ತೇವೆ ಎಂದು ಖಡಕ್‌ ಎಚ್ಚರಿಕೆ