ತಿಳಿರುತೋರಣ
ಶ್ರೀವತ್ಸಜೋಶಿ
ಅಡುಗೆಗೂ ಭಾಷೆ? ಹಾಗೆಂದರೇನು ಅಂತ ಅರ್ಥವಾಗಲಿಲ್ಲವೇ? ಈ ಹುಡುಗಿಯ ಮಾತುಗಳನ್ನೊಮ್ಮೆ ಕೇಳಿ: ‘ನಮಸ್ಕಾರ. ನನ್ನ ಹೆಸರು ಮನಸ್ವಿ. ನಮ್ಮ ಊರು ಧಾರ್ವಾಡ್. ಧಾರ್ವಾಡಿನ್ ಫೇಮಸ್ ಗಿರ್ಮಿಟ್. ಗಿರ್ಮಿಟ್ ನನ್ಗೆೆ ತುಂಬ ಇಷ್ಟ. ಗಿರ್ಮಿಟ್ ಹೇಗ್
ಮಾಡೋದು ಅಂತ ಹೇಳ್ತೀನಿ, ಬನ್ನಿ.
ಬೇಕಾಗಿರುವ ಸಾಮಗ್ರಿ: ಸಾಸ್ವಿ, ಜೀರಿಗಿ, ಉಳ್ಳಾಗಡ್ಡಿ, ಶೇಂಗಾ, ಹುಣ್ಸೆೆ ಹಣ್ಣಿನ್‌ಹುಳಿ, ಎಣ್ಣಿ, ಬೆಲ್ಲ, ಕರ್ಬೇವ್, ಮೆಣ್ಸಿನ್‌ಕಾಯಿ, ಇಂಗ್, ಅರಿಶಿನ ಪುಡಿ, ಟೊಮ್ಯಾಟೊ, ಉಪ್ಪು, ಪುಟಾಣಿಟ್ಟ್, ಚುರ್ಮುರಿ, ಕೋತಂಬ್ರಿ. ಈಗ ಹೇಗ್ ಮಾಡೋದು ಅಂತ ತೋರಿಸ್ತೀನಿ.
ಒಂದು ತವಾದಲ್ಲಿ ಎಣ್ಣಿ ಹಾಕಿ ಎಣ್ಣಿ ಬಿಸಿಯಾದ್ ಮೇಲೆ ಸಾಸ್ವಿ, ಜೀರ್‌ಗಿ, ಮೆಣ್ಸಿನ್‌ಕಾಯಿ, ಇಂಗ್, ಅರಿಶಿನಪುಡಿ, ಆಮೇಲೆ
ಕರ್ಬೇವ್ ಹಾಕಿ ಕಲ್ಸಬೇಕು. ಶೇಂಗಾನೂ ಹಾಕ್ಬೇಕು. ಶೇಂಗಾ ಕೆಂಪಾದ್ ಮೇಲೆ ಉಳ್ಳಾಗಡ್ಡಿ ಹಾಕ್ಬೇಕು. ಉಳ್ಳಾಗಡ್ಡಿ ಬೆಂದ್ಮೇಲೆ
ಬೆಲ್ಲ, ಆಮೇಲೆ ಹುಣ್ಸೆಹಣ್ಣಿನ್‌ಹುಳಿ ಹಾಕಿ ಕಲ್ಸಬೇಕು. ಅದ್ರ್ ಜೊತೆಗೆ ಚುರ್ಮುರಿ ಕಲ್ಸಬೇಕು. ಚುರ್ಮುರಿ ಜೊತೆಗೆ ಟೊಮ್ಯಾಟೊ, ಉಪ್ಪು, ಪುಟಾಣಿಟ್ಟು, ಕೋತಂಬ್ರಿ ಹಾಕಿ ಕಲ್ಸಬೇಕು. ಆಮೇಲೆ ಗಿರ್ಮಿಟ್ ರೆಡಿ! ಗಿರ್ಮಿಟ್ ಜೊತೆಗೆ ಮಿರ್ಚಿನೂ ತಿನ್ಬೋದು.’
ಮನಸ್ವಿ ಕುಲಕರ್ಣಿ ಎಂದು ಈ ಹುಡುಗಿಯ ಪೂರ್ಣ ಹೆಸರು. ಒಂಬತ್ತು ಅಥವಾ ಹತ್ತು ವರ್ಷದವಳಿರಬಹುದು. ತನ್ನ ಊರು ಧಾರವಾಡ ಅಂತ ಹೇಳಿದಳಾದರೂ ಈಕೆ ಈಗ ಇರುವುದು ಜರ್ಮನಿ ದೇಶದಲ್ಲಿ. ಗಿರ್ಮಿಟ್ ತಯಾರಿಸುವುದು ಹೇಗೆ ಎಂದು ಈಕೆ ವಿಡಿಯೋದಲ್ಲಿ ಹೇಳಿದ್ದೂ ಜರ್ಮನಿಯಿಂದಲೇ. ಇವಳ ಮಾತಿನಲ್ಲಿ ಎಷ್ಟು ಇಂಗ್ಲಿಷ್ ಪದಗಳು ಬಂದವು ಎಂದು ಒಮ್ಮೆ ಗಮನಿಸಿ. ಸೂಕ್ಷ್ಮವಾಗಿ ಗಮನಿಸಿದರಷ್ಟೇ ಗೊತ್ತಾದೀತು- ‘ಫೇಮಸ್’ ಅಂತ ಒಂದು, ‘ರೆಡಿ’ ಅಂತ ಇನ್ನೊಂದು, ಅಷ್ಟೇ. ಬೇರೆ ಒಂದೂ ಇಲ್ಲ. ಅಷ್ಟಾಗಿ ಇವೇನೂ ಈಕೆಯ ಅಡುಗೆಗೆ ಅಥವಾ ವಿವರಣೆಗೆ ನೇರವಾಗಿ ಸಂಬಂಧಿಸಿದ್ದಲ್ಲ ಬಿಡಿ. ಮತ್ತೆ ಟೊಮ್ಯಾಟೊಗೆ ‘ಗೂದೆ ಹಣ್ಣು’ ಅನ್ಬೇಕಿತ್ತಲ್ವಾ ಅಂತ ಮೂಗುಮುರಿಯಬೇಡಿ. ಅಷ್ಟು ಚೊಕ್ಕವಾಗಿ ಧಾರ್ವಾಡ್ ಕನ್ನಡದ ಸೊಗಡಿನಲ್ಲಿ ಎಲ್ಲವನ್ನೂ ವಿವರಿಸಿದ್ದಾಳೆ, ಅದನ್ನು ಮೆಚ್ಚಿಕೊಳ್ಳಿ.
ಅಂದ ಹಾಗೆ ಮನಸ್ವಿ ಕುಲಕರ್ಣಿ ಯಾರು, ಅವಳ ಗಿರ್ಮಿಟ್ ಪಾಕವಿಧಾನದ ವಿಡಿಯೋ ನನಗೆಲ್ಲಿ ಸಿಕ್ಕಿತು ಅನ್ನೋದನ್ನೆಲ್ಲ ಆಮೇಲೆ ಹೇಳುತ್ತೇನೆ. ಅದಕ್ಕಿಂತ ಮೊದಲು, ಈಗ ಇದೇ ಗಿರ್ಮಿಟ್ ಮಾಡುವ ವಿಧಾನವನ್ನು ಬೆಂಗಳೂರಿನ ಯಾರೋ ಒಬ್ಬಾಕೆ (ಹೆಸರು ಮುಖ್ಯವಲ್ಲ, ಬೇಕಿದ್ದರೆ ಮಿಟುಕಲಾಡಿ ಮೀನಾಕ್ಷಿ ಅಂತಿರಲಿ, ಈ ಲೇಖನದ ಮಟ್ಟಿಗೆ ‘ಮಿ.ಮೀ’ ಎಂಬ ಹ್ರಸ್ವ ರೂಪವೇ
ಇರಲಿ) ಕನ್ನಡ ಟಿ.ವಿ ವಾಹಿನಿಯೊಂದರ ಕುಕ್ಕಿಂಗ್ ಶೋ ಪ್ರೋಗ್ರಾಮ್‌ನಲ್ಲಿ ಪ್ರೆಸೆಂಟ್ ಮಾಡ್ತಾಳೆ ಅಂತಿಟ್ಕೊಳ್ಳಿ. ಆಕೆಯ
ಬಾಯಿಂದ ಉದುರಲಿರುವ ಆಣಿಮುತ್ತುಗಳು ನಿಮ್ಮ ಕಿವಿತಮಟೆಗಳಿಗೆ ಬಹುಶಃ ಆಗಲೇ ಅಪ್ಪಳಿಸಲಾರಂಭಿಸಿರಬಹುದು.
ಹೀಗಿರುತ್ತದೆ ಮಿ.ಮೀಯ ವರಸೆ: ‘ಹಲೋ ಹಾಯ್ ಫ್ರೆಂಡ್ಸ್ ಹೇಗಿದ್ದೀರಾ! ಇವತ್ತಿನ್ ಶೋದಲ್ಲಿ ನಿಮ್ಗೊಂದ್ ಬೊಂಬಾಟ್ ರೆಸಿಪಿ ಹೇಳ್ಕೊಡ್ತೀನಿ. ಯಾವ್ದು ಅಂತೀರಾ, ಅದೇ ಧಾರ್ವಾಡದ ಪ್ರಖ್ಯಾತ ಗಿರ್ಮಿಟ್. ಹೆಸ್ರು ಕೇಳಿದ್ ಕೂಡಲೆ ಮೈ ಮೌತ್ ಈಸ್ ವಾಟರಿಂಗ್… ಉಮ್‌ಮ್… ಆಆಆಹ್! ಸರಿ, ಇದಕ್ಕೆೆ ಬೇಕಾಗಿರೋ ಇನ್‌ಗ್ರೇಡಿಯೆಂಟ್ಸು ಲಿಸ್ಟ್ ಮಾಡ್ತಿನಿ. ಮಸ್ಟರ್ಡ್ ಸೀಡ್ಸ್, ಕ್ಯುಮಿನ್ ಸೀಡ್ಸ್, ಆನಿಯನ್ಸ್, ಪೀನಟ್ಸು, ಟ್ಯಾಮರಿಂಡ್ ಪಲ್ಪು, ಕುಕಿಂಗ್ ಆಯಿಲ್, ಬೆಲ್ಲ, ಕರಿಬೇವು, ಗ್ರೀನ್ ಚಿಲ್ಲೀಸ್, ಅಸೆಫೊಟಿಡಾ ಅಂದ್ರೆ ಇಂಗು, ಟರ್ಮರಿಕ್ ಪೌಡರ್, ಟೊಮ್ಯಾಟೊ, ಸಾಲ್ಟ್ ಟು ಟೇಸ್ಟ್, ಪಫ್ಡ್ ರೈಸ್ ಅಂದ್ರೆ ಚುರ್ಮುರಿ, ಕೋರಿಯಾಂಡರ್ ಲೀವ್ಸ್- ಇಷ್ಟೇ.
ಮೊದ್ಲಿಗೆ ಮೀಡಿಯಂ ಫ್ಲೇಮ್ ಸ್ಟವ್ ಮೇಲೆ ಒಂದು ಫ್ರೈಯಿಂಗ್ ಪ್ಯಾನ್‌ನಲ್ಲಿ ಎರಡ್ ಸ್ಪೂನ್ ಆಯಿಲ್ ಹಾಕ್ಕೊಳ್ಳಿ. ಆಯಿಲ್ ಹೀಟ್ ಆದ್ಮೇಲೆ ಅದಕ್ಕೆ ಮಸ್ಟರ್ಡ್ ಸೀಡ್ಸ್, ಕ್ಯುಮಿನ್ಸ್ ಸೇರಿಸಿ ಅವು ಸ್ಪ್ಲಟರ್ ಆದ್ಕೂಡ್ಲೇ ಗ್ರೀನ್ ಚಿಲ್ಲೀಸ್, ಇಂಗು, ಟರ್ಮರಿಕ್ ಪೌಡರ್ ಮತ್ತು ಕರಿಬೇನ್ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಪೀನಟ್ಸನ್ನೂ ಸೇರ್ಸಿ. ಪೀನಟ್ಸ್ ಒಳ್ಳೆ ರೋಸ್ಟ್ ಆದ್ಮೇಲೆ ಚೋಪ್ಡ್ ಆನಿಯನ್‌ಸ್ ಹಾಕಿ. ಅದು ಗೋಲ್ಡನ್ ಬ್ರೌನ್ ಕಲರ್ ಬಂದ್ಲೇಲೆ ಬೆಲ್ಲ ಮತ್ತು ಟ್ಯಾಮರಿಂಡ್ ಪಲ್ಪ್ ಹಾಕಿ ಮಿಕ್ಸ್ ಮಾಡಿ. ಈಗ ಪಫ್ಡ್ ರೈಸ್ ಸೇರಿಸಿ. ಜೊತೆಗೆ ಟೊಮ್ಯಾಟೊ, ಸಾಲ್ಟ್ ಟು ಟೇಸ್ಟ್, ಪುಟಾಣಿಟ್ಟು ಕೂಡ ಆಡ್ ಮಾಡಿ.
ಕೋರಿಯಾಂಡರ್ ಲೀವ್ಸ್ ಹಾಕಿ ಗಾರ್ನಿಷ್ ಮಾಡಿ. ಘಮಘಮ ಅನ್ನೋ ಗಿರ್ಮಿಟ್ ಸಿದ್ದ!’ ಆಹಾ! ಏನು ಚಂದ! ಆ ಜರ್ಮನಿಯ ಕನ್ನಡ ಹುಡುಗಿ ಯಾವ ಒಂದೆರಡು ಇಂಗ್ಲಿಷ್ ಪದ ಬಳಸಿದ್ದಳೋ, ಅವುಗಳನ್ನು ಕನ್ನಡದಲ್ಲೇ ಉಲಿದಿದ್ದಾಳೆ ನಮ್ಮ ಬೆಂಗ್ಳೂರಿನ ಮಿ.ಮೀ!
ಅದೂಹೇಗೆ, ತನ್ನಂತೆಯೇ ಅಲ್ಪಪ್ರಾಣಿ ಆಗಿ ‘ಸಿದ್ದ’, ‘ಪ್ರಕ್ಯಾತ’ ಅಂತ ಉಚ್ಚಾರ. ಆಮೇಲೆ ಕರಿಬೇವು, ಬೆಲ್ಲ, ಪುಟಾಣಿಟ್ಟು
ಇವುಗಳನ್ನೂ ಕನ್ನಡದಲ್ಲೇ ಹೇಳಿದ್ದಾಳೆನ್ನಿ. ಪಾಪ ಇಂಗ್ಲಿಷ್ ಪದಗಳು ತತ್‌ಕ್ಷಣಕ್ಕೆ ಹೊಳೆಯಲಿಲ್ಲ ಏನ್ಮಾಡೋದು. ಅಂತೂ ಆ
ಜರ್ಮನಿಯ ಪುಟ್ಟ ಬಾಲೆಗೆ ಏನೂ ಗೊತ್ತಿಲ್ಲ. ಕನ್ನಡದಲ್ಲಿ ಅಡುಗೆ ವಿಧಾನ ಹೇಳ್ಕೊಡೋದು ಅಂದ್ರೆ ಹಾಗಾ? ಅದಕ್ಕೊಂದು ಸ್ಟೆೆ ಲ್ ಬೇಡ್ವಾ? ಈ ಮಿ.ಮೀ ವಿಡಿಯೋ ಏನಾದ್ರೂ ಸೋಶಿಯಲ್ ಮೀಡಿಯಾದಲ್ಲಿ ಬಂತೋ, ಅವಳು ಬೇಡೋದೇ ಬೇಕಾಗಿಲ್ಲ, ತತ್‌ಕ್ಷಣವೇ ದಬದಬನೆ ಲೈಕು ಕಾಮೆಂಟು ಶೇರು ಸಬ್‌ಸ್ಕ್ರೈಬು ಸುರಿಮಳೆ!
ಕಳೆದ ವಾರ ಜರ್ಮನಿ ದೇಶದ ಕನ್ನಡಿಗರ ಸಂಘಟನೆಗಳು ಸೇರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿಯಾಗಿ ಚಿಕ್ಕ
ಮಕ್ಕಳಿಗೆ ಕನ್ನಡ ಕಲಿಕೆ – ಬಳಕೆಯ ಸ್ಪರ್ಧೆಗಳನ್ನು ಏರ್ಪಡಿಸಿದ್ದವು. ವಯೋಮಿತಿಗನುಗುಣವಾಗಿ – ಕನ್ನಡ ಪದ್ಯ ಹೇಳುವುದು, ಮೆಚ್ಚಿನ ನೀತಿಕಥೆ ಹೇಳುವುದು, ಇಷ್ಟವಾದ ಅಡುಗೆ, ಕರ್ನಾಟಕದ ಯಾವುದಾದರೂ ಸ್ಥಳ ಪರಿಚಯ, ಕರ್ನಾಟಕ ಇತಿಹಾಸದ ಬಗ್ಗೆೆ ಕಿರುಭಾಷಣ- ಹೀಗೆ ವಿವಿಧ ಸ್ಪರ್ಧೆಗಳು. ಅದಕ್ಕೆ ತೀರ್ಪುಗಾರನಾಗುವಂತೆ ನನ್ನನ್ನು ಕೇಳಿಕೊಂಡಿದ್ದರು (‘ಇಲ್ಲಿ ಕನ್ನಡ ಮಕ್ಕಳ ಸ್ಪರ್ಧೆಗಳಿಗೆ ತೀರ್ಪುಗಾರರು ಸಿಗುತ್ತಾರೆ’ ಎಂದು ನಾನೇನೂ ಬೋರ್ಡ್ ಹಾಕ್ಕೊಂಡಿಲ್ಲವಾದರೂ ಅಂಥದೊಂದು ಬೋರ್ಡ್ ಇದೆಯೆಂದು ಬೇರೆಯವರು ಹೇಗೆ ಅಂದಾಜಿಸುತ್ತಾರೋ ನನಗೆ ಗೊತ್ತಿಲ್ಲ).
ಈಗ ಎಲ್ಲವೂ ಮನೆಯಲ್ಲಿದ್ದುಕೊಂಡೇ ಆನ್‌ಲೈನ್ ಮೂಲಕ ತಾನೆ? ಯೂಟ್ಯೂಬ್ ವಿಡಿಯೊಗಳನ್ನು ನೋಡಿ ತೀರ್ಪುಗಾರಿಕೆ. ಜರ್ಮನಿಯಾದರೇನು ಜಪಾನ್ ಆದರೇನು, ಸಿಂಗಾಪುರ ಆದರೇನು ಸಿದ್ದಾಪುರ ಆದರೇನು! ಪ್ರಪಂಚವೆಲ್ಲ ಕೈಬೆರಳ ತುದಿಯಲ್ಲಿ. ಅಲ್ಲ, ಕೈಬೆರಳಿಂದ ಅದುಮುವ ಮೌಸ್ ಕ್ಲಿಕ್‌ನಲ್ಲಿ, ಕೈಬೆರಳಿಂದ ಕುಟ್ಟುವ ಕೀಬೋರ್ಡ್‌ನಲ್ಲಿ, ಕೈಬೆರಳಿಂದ ತೀಡುವ ಸ್ಮಾರ್ಟ್ ಫೋನ್ ಸ್ಕ್ರೀನ್‌ನಲ್ಲಿ. ಅಮೆರಿಕದಿಂದ ಭಾರತಕ್ಕೆ ಹೋಗುವಾಗ ಲುಫ್ತಾನ್ಸಾ ವಿಮಾನದಲ್ಲಿ ಹೋದರೆ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ ನೋಡಿದ್ದೇನೆಯೇ ಹೊರತು ಜರ್ಮನಿಯ ಬೇರಾವ ಸ್ಥಳಗಳೂ ಅವುಗಳ ಹೆಸರಿನ ಉಚ್ಚಾರವೂ ನನಗೆ ಸರಿಯಾಗಿ ಗೊತ್ತಿಲ್ಲ.
ಜರ್ಮನಿಯಲ್ಲಿ ಅಷ್ಟೆಲ್ಲ ಕನ್ನಡಿಗರು ಇದ್ದಾರೆಂದು ನನಗೆ ಕಲ್ಪನೆಯೂ ಇಲ್ಲ. ತಿಳಿದುಕೊಂಡಂತಾಗುತ್ತದೆಂಬ ಕುತೂಹಲವೇ ನಾನು ಸಂತೋಷದಿಂದ ಒಪ್ಪಲಿಕ್ಕೆ ಮುಖ್ಯ ಕಾರಣ. ಕನ್ನಡ ಪದ್ಯ ಹೇಳುವುದು, ಕನ್ನಡದಲ್ಲಿ ನೀತಿಕಥೆ ಹೇಳುವುದು, ಕರ್ನಾಟಕದ ಸ್ಥಳಗಳ ಬಗ್ಗೆ ಮಾತಾಡುವುದು… ಮಕ್ಕಳು ಮುದ್ದಾಗಿ ಕನ್ನಡದಲ್ಲಿ ಮಾತನಾಡಿದರು. ಕೆಲವರು ಅಭಿನಯವನ್ನೂ
ಸೇರಿಸಿದರು. ಚೆನ್ನಾಗಿಯೇ ಇತ್ತು. ಆದರೆ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮತ್ತು ಆಶ್ಚರ್ಯಚಕಿತನಾಗಿಸಿದ್ದು ‘ಇಷ್ಟವಾದ
ಅಡುಗೆ’ ಭಾಗ. ಇಲ್ಲ, ಬಾಯಿಯಲ್ಲಿ ನೀರೂರುವ ತಿಂಡಿತಿನಸು ತೋರಿಸಿದರು ಅಥವಾ ಅದರ ಬಗ್ಗೆ ಮಾತನಾಡಿದರು ಎಂಬ
ಕಾರಣಕ್ಕೆೆ ಅಲ್ಲ. ಸ್ಪರ್ಧೆಯಲ್ಲಿದ್ದ ಹದಿಮೂರು ಮಕ್ಕಳೂ ಎಲ್ಲಪದಾರ್ಥಗಳ, ಪರಿಕರಗಳ ಹೆಸರನ್ನು ಕನ್ನಡ ಪದಗಳಲ್ಲೇ
ಹೇಳಿದ್ದು, ಅಡುಗೆಯ ವಿಧಾನದ ಪ್ರತಿಯೊಂದು ಹಂತವನ್ನೂ ಕನ್ನಡ ಪದಗಳಿಂದಲೇ ವಿವರಿಸಿದ್ದು ನನ್ನನ್ನು ನಿಜವಾಗಿಯೂ
ದಂಗುಬಡಿಸಿತು!
ಮನಸ್ವಿ ಕುಲಕರ್ಣಿ ವಿವರಿಸಿದ ಗಿರ್ಮಿಟ್ ಬಗ್ಗೆ ಆಗಲೇ ಹೇಳಿದೆನಷ್ಟೆ? ಇನ್ನೊಬ್ಬ ಹುಡುಗ ಅಂಶ್ ಶೆಟ್ಟಿ ಎಂಬ ಹೆಸರಿನವನು ತನ್ನ ಇಷ್ಟದ ಬಿಸಿಬೇಳೆ ಭಾತ್‌ನ ಪ್ರಾತ್ಯಕ್ಷಿಕೆ ನೀಡಿದ. ಆತನೂ ಅಷ್ಟೇ – ಬಿಸಿಬೇಳೆ ಭಾತ್‌ನ ಮಸಾಲೆಹುಡಿ ತಯಾರಿಸಲಿಕ್ಕೆ ಬೇಕಾಗುವ ಮೆಣಸು, ಕೊತ್ತಂಬರಿಬೀಜ, ಜೀರಿಗೆ, ಕರಿಮೆಣಸು, ಲವಂಗ, ಚೆಕ್ಕೆ, ಬೆಳ್ಳುಳ್ಳಿ, ಒಗ್ಗರಣೆಗೆ ಬೇಕಾಗುವ ಸಾಸಿವೆ, ಚಿಟಿಕೆ ಇಂಗು, ಅರಶಿನ, ನೆಲಕಡಲೆ, ಗೋಡಂಬಿ, ಅನ್ನ ಮಾಡಲು ಅಕ್ಕಿ ಮತ್ತು ತೊಗರಿಬೇಳೆ, ಅಕ್ಕಿಯ ಬದಲಿಗೆ ಗೋಧಿನುಚ್ಚು, ತೊಗರಿಬೇಳೆಯ ಬದಲಿಗೆ ಹೆಸರುಬೇಳೆ, ಜೊತೆಯಲ್ಲೇ ಬೇಯಿಸಲಿಕ್ಕೆ ತರಕಾರಿಯಾಗಿ ಹುರುಳಿಕಾಯಿ, ಬಟಾಣಿ, ಈರುಳ್ಳಿ, ಆಲೂಗಡ್ಡೆೆ, ಕ್ಯಾರೆಟ್, ಟೊಮ್ಯಾಟೊ, ತಿನ್ನುವಾಗ ಹಾಕಿಕೊಳ್ಳಲಿಕ್ಕೆ ಬೂಂದಿ, ತುಪ್ಪ – ಪ್ರತಿಯೊಂದನ್ನೂ ಕೈಯಿಂದ ತೋರಿಸಿ ಕನ್ನಡದಲ್ಲಿ ಹೇಳಿದನು – ಬೇಕಾಗುವ ಸಾಮಗ್ರಿಗಳ ಪಟ್ಟಿ ಹೇಳುವಾಗಲೂ, ಮಾಡುವ ವಿಧಾನವನ್ನು ತಿಳಿಸುವಾಗಲೂ. ಅಂದರೆ ಆತ ಅದನ್ನು ಸ್ಪರ್ಧೆಗೋಸ್ಕರ ಗಟ್ಟುಹೊಡೆದು ಒಪ್ಪಿಸಿದ್ದಲ್ಲ.
ಆ ಎಲ್ಲ ವಸ್ತುಗಳ ಕನ್ನಡ ಹೆಸರುಗಳು ಅವನಿಗೆ ಗೊತ್ತಿವೆ; ಅಡುಗೆಯ ಸಣ್ಣಪುಟ್ಟ ಪ್ರಕ್ರಿಯೆಗಳನ್ನೆಲ್ಲ ಕನ್ನಡದಲ್ಲಿ ಏನೆನ್ನುವು ದೆಂದೂ ಗೊತ್ತಿದೆ! ಮುಂದೆ ಕೌಸ್ತುಭ್ ವಿವರಿಸಿದ ಮಸಾಲೆದೋಸೆ, ಮನೋಮಯ್ ವಿವರಿಸಿದ ಬೆಣ್ಣೆೆದೋಸೆ, ಶಾನ್ ಬೆಳವಡಿ
ಬಣ್ಣಿಸಿದ ಬೆಂಡೆಕಾಯಿ ಮೊಸರುಬಜ್ಜಿ, ಸಂಕಲ್ಪ್ ಸಾದರಪಡಿಸಿದ ಖಾರ ಅವಲಕ್ಕಿ, ವಿಭಾ ವಿವರಿಸಿದ ಕಾಳುಮೆಣಸಿನ ಸಾರು,
ಮೇಘನಾ ಮಾಡಿದ ರಾಗಿಮುದ್ದೆ, ಸಮೃದ್ಧಿ ತೋರಿಸಿದ ಚಿತ್ರಾನ್ನ… ಎಲ್ಲವೂ ಕನ್ನಡಿಗರ ಅಚ್ಚುಮೆಚ್ಚಿನ ಅಡುಗೆಗಳು.
ವಿವರಣೆಗೆ ಬಳಸಿದ್ದು ಅಚ್ಚಕನ್ನಡ ಪದಗಳು. ಬೆಂಗಳೂರಿನ ಮಿ.ಮೀಯಾದರೆ ಚಿತ್ರಾಾನ್ನ ಅಂತ ಎಲ್ಲಿ ಅಂತಿದ್ಲು? ಲೆಮನ್
ರೈಸ್ ಅಂತ ಹೇಳೋದಕ್ಕೆ ಮಾತ್ರ ಅಲ್ವಾ ಅವಳ ನಾಲಿಗೆ ಹೊರಳೋದು? ಹೀಗೇಕೆ? ದೂರದ ಜರ್ಮನಿಯಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳು ಅಡುಗೆ – ಊಟ – ತಿಂಡಿ ವಿಚಾರವನ್ನೆಲ್ಲ ಚಂದದ ಕನ್ನಡ ಪದಗಳಲ್ಲೇ ಮಾತನಾಡಬಲ್ಲರಾದರೆ ಕರ್ನಾಟಕ ದಲ್ಲಿ ಮುಖ್ಯವಾಗಿ ಬೆಂಗಳೂರು ಮತ್ತು ಈಗೀಗ ಮೈಸೂರು ಮಂಗಳೂರು ಮುಂತಾದ ನಗರಪ್ರದೇಶಗಳವರಿಗೆ ಮಾತ್ರ ‘ನುಗ್ಗೇ ಕಾಯಿ ಹೋಯ್ತು ಡ್ರಮ್‌ಸ್ಟಿಕ್ ಬಂತು ಢುಂ ಢುಂ ಢುಂ!’ ಆದದ್ದೇಕೆ? ಹೋಟೆಲು(ರೆಸ್ಟೊರಂಟ್)ಗಳಲ್ಲಿ, ದರ್ಶಿನಿಗಳಲ್ಲಿ, ಕೊನೆಗೆ ಈಗೀಗ ಬಹುಶಃ ಖಾನಾವಳಿಗಳಲ್ಲೂ ‘ಅನ್ನ’ ಎಂದು ಹೇಳಿದರೆ ಅದು ಪ್ರತಿಷ್ಠೆಗೆ ಕಡಿಮೆ, ‘ವ್ಹೆಟ್ ರೈಸ್’ ಎಂದರೇನೇ ಅದಕ್ಕೊೊಂದು ಖದರು ಅಂತಾಗಿದ್ದೇಕೆ? ಉದ್ದೇಶಪೂರ್ವಕವೇನಲ್ಲ, ಹಾಗೆನ್ನುವುದೇ ಸಹಜ ಎಂಬಂತಾಗಿದೆ.
ಮೊಸರನ್ನ ‘ಕರ್ಡ್ ರೈಸ್’ ಆಗಿದೆ. ಒಂದುವೇಳೆ ಇಂಗ್ಲಿಷ್ ಅಲ್ಲದಿದ್ದರೆ ಕನ್ನಡೇತರ ಬೇರೆ ಭಾಷೆಗಳ ಪದಗಳಾದರೂ ಸರಿ, ಕನ್ನಡ ಪದಗಳಿಗಿಂತ ಅವು ಶ್ರೇಷ್ಠತೆಯುಳ್ಳವು ಎಂಬ ಅಲಿಖಿತ ಸಂವಿಧಾನವೊಂದು ಜನರಲ್ಲಿ ಬೇರುಬಿಟ್ಟಿದೆ. ಅದರಿಂದಾಗಿಯೇ ಸಾರಿನ ಬದಲು ‘ರಸಂ’, ಹುಳಿಯ ಬದಲು ‘ಸಾಂಬಾರ್’, ಮೊಸರುಬಜ್ಜಿಯ ಬದಲಿಗೆ ‘ರಾಯ್ತಾ’, ಗೋಡಂಬಿ/ಗೇರುಬೀಜದ ಬದಲಿಗೆ ‘ಕಾಜೂ’ ತಪ್ಪಿದರೆ ‘ಕಾಶ್ಯೂ’. ಇದು ಮಾಲ್‌ಗಳು ಮತ್ತು ಸೂಪರ್ ಮಾರ್ಕೆಟ್‌ಗಳಿಂದಾಗಿ ಉಂಟಾದದ್ದೇ? ಏಕೆಂದರೆ ಅಲ್ಲಿ
ಜಾಹಿರಾತುಗಳಿಂದ ಹಿಡಿದು ಒಳಗಿನ ಡಿಸ್ಪ್ಲೇ ಬೋರ್ಡ್ ಗಳವರೆಗೂ ಗೋಧಿಟ್ಟು ‘ಆಟ್ಟಾ’ ಆಗಿಯೇ ಇರುತ್ತದೆ ನಾ ಗೋಧಿಹಿಟ್ಟು ಎಂದು ಕರೆಸಿಕೊಳ್ಳುವ ಭಾಗ್ಯ ಅದಕ್ಕಿಲ್ಲ.
ಅಥವಾ ಕೆಲವು ಪದಾರ್ಥಗಳ ಇಂಗ್ಲಿಷ್ ಹೆಸರಿನ ಉಚ್ಚಾರ- ಸೋಪು, ಶುಗರ್ರು, ಆಯಿಲ್ಲು, ಗ್ರಾಂಫ್ಲೋರು, ಆನಿಯನ್ನು, ಗಾರ್ಲಿಕ್ಕು, ಜಿಂಜರ್ರು… ಹೀಗೆ ‘ಉ’ಕಾರಾಂತ್ಯಗೊಳಿಸಿದರೆ ಕನ್ನಡದ ಅಂಗಿ ತೊಡಿಸಿದಂತೆ ಎಂಬ ಧೋರಣೆಯೇ? ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲೂ ಹೀಗೆ ಅಡುಗೆ – ಆಹಾರ – ಊಟ – ತಿಂಡಿಗಳಿಗೆ ಸಂಬಂಧಿಸಿದ ಪದಗಳು ನಶಿಸಿಹೋಗುತ್ತಿವೆಯೇ? ಇರಲಿಕ್ಕಿಲ್ಲವೆಂದು ನನ್ನ ಅಂದಾಜು. ಒಂದು ಚಿಕ್ಕ ಉದಾಹರಣೆ ಹೇಳುತ್ತೇನೆ. ನಿಮಗೆ ಬಣ್ಣದ ಸೌತೆ ಅಥವಾ ಮಂಗಳೂರು ಸೌತೆ ಎಂಬ ತರಕಾರಿ ಗೊತ್ತಿದೆಯಷ್ಟೆ? ತೆಲುಗಿನಲ್ಲಿ ಅದಕ್ಕೆ ‘ದೋಸಕಾಯ’ ಎಂದು ಹೇಳುತ್ತಾರೆ. ‘ದೋಸಕಾಯ-ಪಪ್ಪು’ (ತೊಗರಿಬೇಳೆ ಮತ್ತು ಬಣ್ಣದ ಸೌತೆ ಒಟ್ಟಿಗೇ ಬೇಯಿಸಿ ಉಪ್ಪು ಖಾರ ಸೇರಿಸಿ ಇಂಗಿನ ಒಗ್ಗರಣೆ ಕೊಟ್ಟ ಒಂದು ವ್ಯಂಜನ) ತೆಲುಗು ಮಂದಿಯ ಪ್ರಿಯವಾದ ಖಾದ್ಯ.
ನಾನು ತೊಂಬತ್ತರ ದಶಕದಲ್ಲಿ ತೆಲುಗುನಾಡಿನಲ್ಲಿದ್ದಾಗ ‘ದೋಸಕಾಯ’ ಹೆಸರಿನ ಪರಿಚಯ ಮಾಡಿಕೊಂಡಿದ್ದೆೆನಾದರೂ ಆಮೇಲೆ ಮರೆತುಹೋಗಿತ್ತು. ಅದು ಮತ್ತೆ ಕಾಣಿಸಿದ್ದೆಲ್ಲಿ ಎಂದು ನಾನೀಗ ಹೇಳಿದರೆ ನಿಮಗೆ ಆಶ್ಚರ್ಯವಾದೀತು! ಇಲ್ಲಿ
ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಕೊರಿಯನ್ ಸ್ವಾಮ್ಯದ ಗ್ರೋಸರಿ ಸ್ಟೋರ್‌ಗಳು ಇವೆ. ಭಾರತೀಯರಿಗೆ ಪರಿಚಿತ ಮತ್ತು
ಜೀವನಾವಶ್ಯಕ ಹಣ್ಣುಹಂಪಲು ತರಕಾರಿ ದವಸಧಾನ್ಯಗಳೆಲ್ಲ ಸಿಗುತ್ತವಾದ್ದರಿಂದ ಭಾರತೀಯರು ತಮ್ಮ ಅಗತ್ಯಗಳಿಗೆ ಅಲ್ಲಿಗೇ
ಹೋಗುತ್ತಾರೆ. ನಾನೂ ಅಲ್ಲಿಗೇ ಹೋಗುತ್ತೇನೆ. ಅಲ್ಲಿ ಬೇರೆಲ್ಲ ಹಣ್ಣು, ತರಕಾರಿಗಳಿಗೆ ಅವುಗಳ ಇಂಗ್ಲಿಷ್ ಹೆಸರನ್ನೇ ಡಿಸ್ಪ್ಲೇ
ಮಾಡಿರೋದು. ಆದರೆ ಬಣ್ಣದ ಸೌತೆಯ ರಾಶಿಯ ಪಕ್ಕ ಇರುವ ಬೋರ್ಡ್‌ನಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ದೋಸ ಕಾಯ ಅಂತ
ಬರೆದಿರುತ್ತಾರೆ!
ಅಂದರೆ, ತೆಲುಗು ಜನರಾದರೂ ಪರದೇಶದ ಅಂಗಡಿಗಳಲ್ಲೂ ತಮ್ಮ ನೆಚ್ಚಿನ ಪದಾರ್ಥದ ಹೆಸರನ್ನು ತೆಲುಗಿನಲ್ಲಿ ಕಂಡು ಕೊಂಡಾರು; ಪರಂತು ಕನ್ನಡಿಗರು ಬೆಂಗಳೂರಿನ ಮಾಲ್‌ಗಳಲ್ಲಿ ಸುಪರ್‌ಮಾರ್ಕೆಟ್‌ಗಳಲ್ಲಿ ಕನ್ನಡವನ್ನು ಕನ್ನಡಕವಿಟ್ಟು ಹುಡುಕಬೇಕಾದ ಪರಿಸ್ಥಿತಿ. ಒಂದುವೇಳೆ ಕನ್ನಡದಲ್ಲಿದ್ದರೂ ಗೂಗಲ್ ಅನುವಾದದ ಅಧ್ವಾನ ಆಭಾಸಗಳು.
ಮತ್ತೆ ಜರ್ಮನಿಯ ಕನ್ನಡಿಗರ ವಿಚಾರಕ್ಕೆ ಬಂದರೆ ಇನ್ನೊಂದು ಅಂಶ ಚಿಂತನೆಗೆ ಗ್ರಾಸವಾಗುತ್ತದೆ. ಏನೆಂದರೆ ಅವರೇನೂ ಜರ್ಮನಿಗೆ ಹೋದಮೇಲಷ್ಟೇ ಅಡುಗೆ ಪದಾರ್ಥಗಳ ಕನ್ನಡ ಹೆಸರುಗಳನ್ನು ಕಲಿತು ಹೇಳಲಿಕ್ಕಾರಂಭಿಸಿದ್ದಲ್ಲ. ದಶಕಗಳ ಹಿಂದೆಯೋ ವರ್ಷಗಳ ಹಿಂದೆಯೋ ಅವರು ಅಲ್ಲಿಗೆ ಹೋಗುವ ಮುಂಚೆ ಕರ್ನಾಟಕದಲ್ಲಿದ್ದಾಗ (ಬೆಂಗಳೂರಿರಲಿ ಮೈಸೂರಿರಲಿ
ಮತ್ತ್ಯಾವುದೇ ಪ್ರದೇಶರಲಿ) ಪದಾರ್ಥಗಳ ಹೆಸರನ್ನು ಕನ್ನಡದಲ್ಲೇ ಹೇಳುವ ಅಭ್ಯಾಸವಿದ್ದವರು. ಅದೂ ಪ್ರಯತ್ನ ಪೂರ್ವಕ ವೇನಲ್ಲ, ಅತ್ಯಂತ ಸಹಜ ಪ್ರಕ್ರಿಯೆ ಎಂಬಂತೆ. ಅಲ್ಲಿಗೆ ಹೋದಮೇಲೂ ಮನೆಮಂದಿಯೊಡನೆ ಅಥವಾ ಕನ್ನಡಿಗ ಮಿತ್ರರೊಡನೆ ಮಾತನಾಡುವಾಗ ಸಹಜ ಪ್ರಕ್ರಿಯೆಯಾಗಿಯೇ ಆ ಕನ್ನಡ ಪದಗಳನ್ನು ಬಳಸುತ್ತ ಸಾಗಿದರಿರಬೇಕು. ಈಗ ಮಕ್ಕಳಿಗೂ ಅವುಗಳನ್ನೇ ಪರಿಚಯಿಸಿದ್ದಾರೆ, ಮಕ್ಕಳೂ ಕಲಿತುಕೊಂಡಿದ್ದಾರೆ.
ನಿಜವಾಗಿಯಾದರೆ ಅದೇನೂ ಹುಬ್ಬೇರಿಸುವಂಥ ದೊಡ್ಡ ಸಂಗತಿಯೂ ಅಲ್ಲ. ಆದರೆ ಕರ್ನಾಟಕದಲ್ಲೇ ಉಳಿದವರು, ಮುಖ್ಯವಾಗಿ ಬೆಂಗಳೂರು ಮೈಸೂರು ಮುಂತಾದ ನಗರಪ್ರದೇಶಗಳವರು ಈಹಿಂದೆ ಕನ್ನಡ ಪದಗಳನ್ನು ಬಳಸುತ್ತಿದ್ದವರು ಈಗೇಕೆ ಅದು ಪ್ರತಿಷ್ಠೆಗೆ ಕಮ್ಮಿ ಎಂಬ ಭಾವನೆ ತಂದುಕೊಂಡರು? ಇದಕ್ಕೆ ಕಾರಣಗಳು ಏನು? ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಗೆ ತೋರದಿರುವ ‘ನಶಿಸುತ್ತಿರುವಿಕೆಯ ಲಕ್ಷಣಗಳು’ ನಮ್ಮ ಕನ್ನಡಕ್ಕೆ ಮಾತ್ರ ಏಕೆ ಕಾಣಿಸಿಕೊಂಡಿವೆ? ಅಥವಾ ಹಾಗೆ ನಮಗನಿಸುತ್ತದೆ? ಸಮಾಜಶಾಸ್ತ್ರಜ್ಞರಿಗೆ, ಭಾಷಾವಿಜ್ಞಾನಿಗಳಿಗೆ ಬಹುಶಃ ಇದೊಂದು ಅಧ್ಯಯನಯೋಗ್ಯ ವಿಚಾರ.
ಹಾಗಂತ, ‘ಕನ್ನಡ ಭಾಷೆಯು ಅಪಾಯದ ಅಂಚಿನಲ್ಲಿದೆ, ಇನ್ನೇನು ಇದು ಸತ್ತೇಹೋಗುತ್ತದೆ!’ ಅಂತೆಲ್ಲ ವೃಥಾ ಗುಲ್ಲೆಬ್ಬಿಸುವ, ಅಥವಾ ಸೋಗಿನ ಆತಂಕ ಸೃಷ್ಟಿಸುವ ಉದ್ದೇಶದಿಂದ ನಾನು ಈ ಲಹರಿಯನ್ನಿಲ್ಲಿ ಬರೆದಿದ್ದಲ್ಲ. ಬೆಂಗಳೂರಿನ ಮಿಟುಕಲಾಡಿ ಮೀನಾಕ್ಷಿಗಳು ‘ಮಸ್ಟರ್ಡ್ ಸೀಡ್ಸ್ ಸ್ಪ್ಲಟ್ಟರ್ ಆದ್ಮೇಲೆ ಕರ್ರಿ ಲೀವ್ಸ್ ಸೇರಿಸಿ ಗಾರ್ನಿಷ್ ಮಾಡಿ’ ಅಂತ ವಟಗುಟ್ಟುತ್ತಾರೆಂದ ಮಾತ್ರಕ್ಕೇ ಎಲ್ಲೆಡೆಯೂ ಹಾಗೆಯೇ ಅಂತೇನಿಲ್ಲ. ಯುಟ್ಯೂಬ್‌ನಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿರುವ ಅಸಂಖ್ಯಾತ ಕುಕ್ಕಿಂಗ್/ಫುಡ್ ಚಾನೆಲ್‌ಗಳ ಪೈಕಿ ಸೀದಾಸಾದಾ ಸರಳ ಕನ್ನಡದಲ್ಲಿ ಸದಭಿರುಚಿಯ ಅಡುಗೆಗಳನ್ನು ಪ್ರಸ್ತುತಪಡಿಸುವಂಥವೂ ಸಾಕಷ್ಟಿವೆ.
ಉದಾಹರಣೆಗೆ ನಮ್ಮ ಕರಾವಳಿ ಶೈಲಿಯ ಸಸ್ಯಾಹಾರಿ ಅಡುಗೆಗಳನ್ನು ಇಷ್ಟಪಡುವವರಿಗೆ, ಹಲಸು – ಮಾವುಗಳ ವಿಧವಿಧ
ಖಾದ್ಯಗಳಷ್ಟೇ ಅಲ್ಲದೆ ಪತ್ರೊಡೆ, ಬನ್ಸ್, ಬಾಣ್ಲೆದೋಸೆ, ಕಾಯಿಹೋಳಿಗೆಯೇ ಮೊದಲಾದ ಬಗೆಬಗೆ ಭಕ್ಷ್ಯಗಳ ತಯಾರಿ ಹೇಗೆಂದು ಕುತೂಹಲರುವರಿಗೆ ‘ಭಟ್ ಏಂಡ್ ಭಟ್’ ಎಂಬೊಂದು ಯುಟ್ಯೂಬ್ ಚಾನೆಲ್ (bit.ly/bhatnbhat). ಕಾಸರಗೋಡಿನಲ್ಲಿ ನೆಲೆಸಿರುವ ಸುದರ್ಶನ್ ಮತ್ತು ಮನೋಹರ್ ಎಂಬಿಬ್ಬರು ತರುಣರು (ಅವಳಿಸೋದರರು) ಅವರ ಅಮ್ಮನ ಮಾರ್ಗದರ್ಶನದಲ್ಲಿ
ವಿವಿಧ ಅಡುಗೆಗಳನ್ನು, ಟಿಪಿಕಲ್ ಮಂಗಳೂರು ಶೈಲಿಯ ಕನ್ನಡದಲ್ಲಿ ತಿಳಿಸುತ್ತಾರೆ.
ಅವರ ವಿಧಾನಗಳಲ್ಲಿ ಮಿಕ್ಸರ್ ಗ್ರೈಂಡರ್ ಇಲ್ಲ, ಕಡೆಯುವಕಲ್ಲು ಇದೆ! ಮಸ್ಟರ್ಡ್ ಸೀಸನಿಂಗ್ ಇಲ್ಲ, ಶುದ್ಧವಾದ ತೆಂಗಿನೆಣ್ಣೆ ಯಲ್ಲಿ ಸಾಸಿವೆ ಒಗ್ಗರಣೆ ಇದೆ!