ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ (Udupi Murder Case) ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Central jail) ಅನ್ನ, ನೀರು ಸ್ವೀಕರಿಸದೆ ಉಪವಾಸ ಮುಷ್ಕರ ಹೂಡಿದ್ದಾನೆ ಎಂದು ತಿಳಿದುಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್, ಆಹಾರ ಸೇವಿಸದೆ ಉಪವಾಸ ಮುಷ್ಕರ ಮಾಡುತ್ತಿದ್ದು, ಪ್ರತ್ಯೇಕ ಸೆಲ್‌ನಿಂದ ಪ್ರಧಾನ ಸೆಲ್‌ಗೆ ಶಿಫ್ಟ್ ಮಾಡಲು ಬೇಡಿಕೆ ಇಟ್ಟಿದ್ದಾನೆ.
2023ರ ನವೆಂಬರ್ 12ರಂದು ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ ಉಡುಪಿಯಲ್ಲಿನ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಆರೋಪಿ ಪ್ರವೀಣನನ್ನು ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. ಪ್ರಕರಣದ ವಿಚಾರಣೆ ಉಡುಪಿ ಕೋರ್ಟ್‌ನಲ್ಲಿ ನಡೆಯುತ್ತಿದೆ.
ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಕೋರ್ಟ್‌ಗೆ ವರ್ಗಾಯಿಸುವಂತೆ ಹಾಗೂ ಪ್ರತ್ಯೇಕ ಸೆಲ್‌ನಿಂದ ತನ್ನನ್ನು ಪ್ರಧಾನ ಸೆಲ್‌ಗೆ ಶಿಫ್ಟ್ ಮಾಡುವಂತೆ ಒತ್ತಾಯಿಸಿ ಈತ ಆಹಾರ ಸೇವಿಸದೆ ಮೊಂಡು ಹಿಡಿದಿದ್ದಾನೆ.
ವಾಸ್ತವವಾಗಿ ಈತನನ್ನು ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ. ಪ್ರವೀಣ್‌ಗೆ ಜೀವ ಬೆದರಿಕೆ ಇರುವುದರಿಂದ ಪ್ರತ್ಯೇಕ ಸೆಲ್‌ನ ಅಗತ್ಯ ಇದೆ ಎಂದು ಜೈಲ್ನ ಸಹಾಯಕ ಅಧೀಕ್ಷಕರು ಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಜೀವ ಬೆದರಿಕೆಯ ಹಿನ್ನೆಲೆಯಲ್ಲಿಯೇ ನವೆಂಬರ್ 27ರಂದು ಉಡುಪಿಯಿಂದ ಬೆಂಗಳೂರಿಗೆ ಆರೋಪಿಯನ್ನು ಪೊಲೀಸರು ಶಿಫ್ಟ್ ಮಾಡಿದ್ದರು.
ಪ್ರವೀಣ ಕೇವಲ 15 ನಿಮಿಷಗಳಲ್ಲಿ ಉಡುಪಿಯ ಮನೆಗೆ ನುಗ್ಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಗಳಾದ ಹಸೀನಾ (48) ಮತ್ತು ಅವರ ಮಕ್ಕಳಾದ, ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) ಹಾಗೂ 8ನೇ ತರಗತಿಯ ಅಸೀಮ್(12) ಕೊಲೆಯಾದವರು. ಹತ್ಯೆಗೀಡಾದ ಯುವತಿ ಅಫ್ನಾನ್ ಹಾಗೂ ಆರೋಪಿ ಪ್ರವೀಣ ಇಬ್ಬರೂ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಯುವತಿಗೂ ಆರೋಪಿಗೂ ಪರಿಚಯವಿತ್ತು.
ಈ ಸುದ್ದಿ ಓದಿ: Physical Harassment: ಅತ್ಯಾಚಾರ ಆರೋಪಿಗೆ ಜಾಮೀನು ಸಿಗಲು ಸಾಕ್ಷ್ಯಾಧಾರ ತಿರುಚಿ ಸಂತ್ರಸ್ತೆಯ ತಂದೆಯಿಂದಲೇ ಸಹಾಯ; ಇಬ್ಬರು ಅರೆಸ್ಟ್