ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಬಳಿಕ ಹಾಕಿಯಿಂದ ನಿವೃತ್ತರಾದ ಖ್ಯಾತ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್(PR Sreejesh) ಅವರಿಗೆ ಪ್ರಧಾನಿ ನರೇಂದ್ರ ಮೋದಿ(PM Modi) ಹೃದಯಸ್ಪರ್ಶಿ ಪತ್ರವೊಂದನ್ನು ಕಳುಹಿಸಿದ್ದಾರೆ. ಈ ಪತ್ರವನ್ನು ಶ್ರೀಜೇಶ್ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಾಕಿ ಮೈದಾನದಲ್ಲಿ ಶ್ರೀಜೇಶ್ ಅವರ ಪ್ರಯಾಣವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಹೃದಯಸ್ಪರ್ಶಿ ಪತ್ರವನ್ನು ಬರೆಯುವ ಜತೆಗೆ ಜೂನಿಯರ್ ಪುರುಷರ ತಂಡದ ಮುಖ್ಯ ಕೋಚ್ ಸ್ಥಾನವನ್ನು ವಹಿಸಿಕೊಳ್ಳುತ್ತಿರುವ ಶ್ರೀಜೇಶ್‌ಗೆ ಶುಭ ಹಾರೈಸಿದ್ದಾರೆ.
“ಆಟಗಾರನಾಗಿ ದೇಶಕ್ಕಾಗಿ ನೀವು ನೀಡಿದ ಕೊಡುಗೆ ಅಪಾರ. ನಿಮ್ಮ ಹಾಕಿ ವೃತ್ತಿ ಜೀವನದಲ್ಲಿ ಹಲವು ಸಿಹಿ ಮತ್ತು ಕಹಿಯ ಅನುಭವ ಕಂಡಿದ್ದೀರಿ. ಇದೆಲ್ಲವನ್ನು ಅರಗಿಸಿಕೊಳ್ಳಬೇಕು. ಜೂನಿಯರ್ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ ನಿಮ್ಮ ಹೊಸ ಪಯಣ ಆರಂಭವಾಗಲಿದೆ. ಭಾರತ ತಂಡಕ್ಕೆ ಮತ್ತೊಂದು ಶ್ರೀಜೇಶ್‌ರನ್ನು ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮ್ಮ ಸಾಧನೆ ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ನೀವು ನಮ್ಮ ಗೋಲ್‌ಕೀಪರ್ ಆಗಿ ಮೈದಾನದಲ್ಲಿ ನಿಂತಾಗ, ಭಾರತೀಯ ಅಭಿಮಾನಿಗಳ ಹೃದಯದಲ್ಲಿ ಭರವಸೆಯ ಭಾವನೆ ಇತ್ತು. ಗೆಲುವು ಮತ್ತು ಸೋಲಿನ ನಡುವೆ ನಿಲ್ಲುವ ಗೋಡೆಯಾಗಿದ್ದೀರಿ. ತೀಕ್ಷ್ಣವಾದ ಪ್ರವೃತ್ತಿಗಳು ಮತ್ತು ಒತ್ತಡದಲ್ಲಿ ಶಾಂತವಾದ ನಿಮ್ಮ ಆತ್ಮವಿಶ್ವಾಸವನ್ನು ಮೆಚ್ಚಲೇ ಬೇಕು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಿಎಂ ಮೋದಿ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಅಥ್ಲೀಟ್ಗಳಿಗಾಗಿ ವಿಶೇಷ ಸಭೆ ಆಯೋಜಿಸಿದ್ದರು. ಈ ವೇಳೆ ಶ್ರೀಜೇಶ್ ಮೋದಿ ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದರು. ಈ ವೇಳೆ ಮೋದಿ ಅವರು, ಶ್ರೀಜೇಶ್ ಮಗ ಮತ್ತು ಮಗಳ ತಲೆ ಕೈ ಇಟ್ಟು ಆಶೀರ್ವದಿಸಿದ್ದರು.
ಇದನ್ನೂ ಓದಿ Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್
2 ದಶಕಗಳ ಕಾಲ ಭಾರತೀಯ ಹಾಕಿಗೆ ಸೇವೆ ಸಲ್ಲಿಸಿದ ಶ್ರೀಜೇಶ್, ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನಿವೃತ್ತರಾಗುವುದಾಗಿ ಮೊದಲೇ ಪ್ರಕಟಿಸಿದ್ದರು. ಅಲ್ಲಿ ಕಂಚಿನ ಪದಕ ಉಳಿಸಿ ಕೊಳ್ಳುವಲ್ಲಿ ಶ್ರೀಜೇಶ್ ವಹಿಸಿದ ಪಾತ್ರ ಅಮೋಘವಾಗಿತ್ತು. ಭಾರತೀಯ ಹಾಕಿಗೆ ಶ್ರೀಜೇಶ್ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಹಾಕಿ ಇಂಡಿಯಾ(Hockey India) ಕಳೆದ ವಾರ ಶ್ರೀಜೇಶ್ ಅವರ ಜೆರ್ಸಿ ನಂ.16ಕ್ಕೆ ವಿದಾಯ ಹೇಳಿತ್ತು. ಇನ್ನು ಮುಂದೆ ಶ್ರೀಜೇಶ್ ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಾಕಿ ಹಿರಿಯರ ತಂಡದ ಯಾವೊಬ್ಬ ಆಟಗಾರರಿಗೂ ನೀಡಲಾಗುವುದಿಲ್ಲ.
36 ವಷದ ಕೇರಳದ ಶ್ರೀಜೇಶ್ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್ ಕಂಚಿನ ಪದಕ, ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.