Friday, 22nd November 2024

Toll Free travel: ಎಕ್ಸ್‌ಪ್ರೆಸ್‌ವೇಗಳಲ್ಲಿ 20 ಕಿ.ಮೀ ಪ್ರಯಾಣಕ್ಕೆ ಶುಲ್ಕವಿಲ್ಲ! ಸದ್ಯದಲ್ಲೇ ಟೋಲ್‌ ಸಂಗ್ರಹ ಸ್ವಯಂಚಾಲಿತ

toll free travel

ನವದೆಹಲಿ: ಗ್ಲೋಬಲ್‌ ನೇವಿಗೇಶನ್ ಸ್ಯಾಟಲೈಟ್‌ ಸಿಸ್ಟಮ್‌ (ಜಿಎನ್‌ಎಸ್‌ಎಸ್‌- GNSS) ಅಳವಡಿಸಿಕೊಂಡ ಖಾಸಗಿ ವಾಹನಗಳಿಗೆ (Private Vehicles) ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ (Expressway) 20 ಕಿ.ಮೀವರೆಗಿನ ಪ್ರಯಾಣಕ್ಕೆ ಇನ್ನು ಟೋಲ್‌ (Toll Free travel) ಕಟ್ಟಬೇಕಿಲ್ಲ. ಎಲೆಕ್ಟ್ರಾನಿಕ್‌ ಟೋಲ್‌ (Electronic toll collections) ಸಂಗ್ರಹವನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಭವಿಷ್ಯದಲ್ಲಿ ಟೋಲ್‌ ಪ್ಲಾಜಾಗಳ ಅಗತ್ಯವಿರುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ- 2008ಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿದ್ದುಪಡಿ ತರುವ ಮೂಲಕ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮಗಳ ಅನ್ವಯ, ಮೊದಲಿನ 20 ಕಿ.ಮೀ ದೂರ ಪ್ರಯಾಣದವರೆಗೆ ಟೋಲ್‌ ಅನ್ವಯಿಸದು. 20 ಕಿ.ಮೀ. ದಾಟಿದ ನಂತರ ವಾಹನವು ಪ್ರಯಾಣಿಸಿದ ದೂರಕ್ಕೆ ಮಾತ್ರವೇ ಶುಲ್ಕ ಕಡಿತ ಮಾಡಲಾಗುತ್ತದೆ. 20 ಕಿ.ಮೀ. ಎಂಬುದು 1 ದಿನದ ಕೋಟಾ. ಪ್ರತಿದಿನ 20 ಕಿ.ಮೀ.ನಷ್ಟು ಉಚಿತವಾಗಿ ಸಂಚರಿಸಬಹುದಾಗಿದೆ. ಜೊತೆಗೆ ಎರಡೂ ದಿಕ್ಕಿನಲ್ಲಿ ಮಾಡುವ ಎರಡೂ ಪ್ರತ್ಯೇಕ ಪ್ರಯಾಣಕ್ಕೂ ಈ ನಿಯಮ ಅನ್ವಯಿಸುತ್ತದೆ. ಈ ಹಿಂದಿನಂತೆ ಇಡೀ ಟೋಲ್‌ ವ್ಯಾಪ್ತಿಗೆ ಒಳಪಟ್ಟ ಅಷ್ಟೂ ದೂರಕ್ಕೆ ಶುಲ್ಕ ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ಜಿಎನ್‌ಎಸ್‌ಎಸ್‌ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹರ್ಯಾಣದ ಪಾಣಿಪತ್‌- ಹಿಸಾರ್‌ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳು- 2008 ಇದನ್ನು ಪರಿಷ್ಕರಿಸಿದೆ. ಉಪಗ್ರಹ ಆಧಾರಿತ ವ್ಯವಸ್ಥೆ ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಸಂಯೋಜಿಸಲು ಮುಂದಾಗಿದೆ.

ಈ ತಿದ್ದುಪಡಿಯೊಂದಿಗೆ ಟೋಲ್ ಸಂಗ್ರಹಣೆಯು ಇಲ್ಲಿನ ಆನ್-ಬೋರ್ಡ್ ಘಟಕಗಳೊಂದಿಗೆ (OBUs) ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಸೇರಿಸಿಕೊಂಡು ʼಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ʼ (GNSS) ಬಳಕೆಯ ವ್ಯಾಪ್ತಿಗೆ ಬರಲಿವೆ. ಇದು ಫಾಸ್ಟ್ಯಾಗ್ ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ತಂತ್ರಜ್ಞಾನದಂತಹ ಈಗಿರುವ ವ್ಯವಸ್ಥೆಗಳನ್ನು ಸುಧಾರಿಸಲಿದೆ.

GNSS OBUಗಳನ್ನು ಹೊಂದಿರುವ ವಾಹನಗಳು ಪ್ರಯಾಣಿಸುವ ದೂರವನ್ನು ಆಧರಿಸಿ ಸ್ವಯಂಚಾಲಿತವಾಗಿ ಟೋಲ್‌ ಪಾವತಿ ಆಗುತ್ತದೆ. GNSS ಸಾಧನಗಳನ್ನು ಹೊಂದಿರುವ ವಾಹನಗಳಿಗೆ ಟೋಲ್ ಪ್ಲಾಜಾಗಳಲ್ಲಿ ವಿಶೇಷ ಲೇನ್‌ಗಳನ್ನು ರಚಿಸಲು 2008ರ ನಿಯಮಗಳ ನಿಯಮ 6 ಅನ್ನು ಬದಲಾಯಿಸಲಾಗಿದೆ.

ಸದ್ಯಕ್ಕೆ, ಟೋಲ್ ಬೂತ್‌ಗಳಲ್ಲಿ ಸುಂಕವನ್ನು ಹಸ್ತಚಾಲಿತವಾಗಿ ಪಾವತಿಸಲಾಗುತ್ತದೆ. ಇದು ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ. ಫಾಸ್ಟ್‌ಟ್ಯಾಗ್ ಬಳಸಿದರೂ ಸಹ. GPS ಆಧಾರಿತ ಟೋಲ್ ವ್ಯವಸ್ಥೆಯು ಉಪಗ್ರಹಗಳು ಮತ್ತು ಇನ್-ಕಾರ್ ಟ್ರ್ಯಾಕಿಂಗ್ ಸಿಸ್ಟಮ್‌ಗಳನ್ನು ಪಯಣಿಸಿದ ದೂರದ ಆಧಾರದ ಮೇಲೆ ಟೋಲ್‌ಗಳನ್ನು ಲೆಕ್ಕಾಚಾರ ಮಾಡುತ್ತದೆ. ಈ ವ್ಯವಸ್ಥೆಯು ಉಪಗ್ರಹ-ಆಧಾರಿತ ಟ್ರ್ಯಾಕಿಂಗ್ ಮತ್ತು GPS ತಂತ್ರಜ್ಞಾನವನ್ನು ಬಳಸಿ ವಾಹನ ಸಂಚರಿಸುವ ದೂರಕ್ಕೆ ಅನುಗುಣವಾಗಿ ಟೋಲ್‌ ಚಾರ್ಜ್ ಮಾಡುತ್ತದೆ. ಹೀಗಾಗಿ ಟೋಲ್ ಪ್ಲಾಜಾಗಳ ಅಗತ್ಯ ಇರುವುದಿಲ್ಲ. ಇದರಿಂದ ವಾಹನ ಚಾಲಕರಿಗೆ ಕಾಯುವ ಸಮಯ ಇರುವುದಿಲ್ಲ.

ಈ ಸುದ್ದಿ ಓದಿ: ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದಿದ್ದರೆ ದುಪ್ಪಟ್ಟು ಟೋಲ್‌