Friday, 20th September 2024

James Anderson: 42ನೇ ವಯಸ್ಸಿನಲ್ಲಿ ಐಪಿಎಲ್‌ ಆಡಲು ಮುಂದಾದ ಇಂಗ್ಲೆಂಡ್‌ ವೇಗಿ

James Anderson

ಲಂಡನ್‌: ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌(James Anderson) ಐಪಿಎಲ್‌(IPL) ಆಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದೂವರೆ ಶತಮಾನ ದಷ್ಟು ಇತಿಹಾಸವಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಉಡಾಯಿಸಿದ ವಿಶ್ವದ ಏಕೈಕ ವೇಗದ ಬೌಲರ್‌ ಎಂಬ ಖ್ಯಾತಿಯ ಜೇಮ್ಸ್‌ ಆ್ಯಂಡರ್ಸನ್‌ ಇದೇ ಜುಲೈನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು.

42 ನೇ ವಯಸ್ಸಿನಲ್ಲಿ ಜೇಮ್ಸ್‌ ಆ್ಯಂಡರ್ಸನ್‌ ಐಪಿಎಲ್‌ ಆಡಲು ಆಸಕ್ತಿ ತೋರಿದ್ದು ಅಚ್ಚರಿ ತಂದಿದೆ. ಆ್ಯಂಡರ್ಸನ್‌ ಇದುವರೆಗೂ ಐಪಿಎಲ್‌ ಪಂದ್ಯ ಆಡಿಲ್ಲ. ದಿ ಹಂಡ್ರೆಡ್ ಲೀಗ್ ವೇಳೆ ಮಾತನಾಡಿದ್ದ ಜೇಮ್ಸ್ ಅ್ಯಂಡರ್ಸನ್, ಈ ಲೀಗ್​ನಲ್ಲಿ ಒಬ್ಬ ಬೌಲರ್​ಗೆ ಸೀಮಿತ ಎಸೆತಗಳು ಮಾತ್ರ ಲಭಿಸುತ್ತದೆ. ಆದರೆ ನಾನು 20 ಓವರ್‌ ಕ್ರಿಕೆಟ್‌ ಆಡಲು ಸಿದ್ಧ ಎಂದು ಹೇಳುವ ಮೂಲಕ ಫ್ರಾಂಚೈಸಿ ಕ್ರಿಕೆಟ್‌ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ಗೆ ಇದೇ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಆ್ಯಂಡರ್ಸನ್‌ ಕೂಡ ತಮ್ಮ ಹೆಸರನ್ನು ನೊಂದಾಯಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು. ಅತಿ ಹೆಚ್ಚು ಎಸೆತಗಳನ್ನು ಎಸೆದ ವಿಶ್ಚ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 44039 ಎಸೆತಗಳನ್ನು ಎಸೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 40850 ಎಸೆತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದಾಯ ಪಂದ್ಯದಲ್ಲಿ ಆ್ಯಂಡರ್ಸನ್​ ಒಟ್ಟು 4 ವಿಕೆಟ್​ ಕಿತ್ತು ಮಿಂಚಿದ್ದರು.

ಇದನ್ನೂ ಓದಿ PR Sreejesh: ಮಾಜಿ ಗೋಲ್‌ಕೀಪರ್‌ ಶ್ರೀಜೇಶ್‌ಗೆ ಹೃದಯಸ್ಪರ್ಶಿ ಪತ್ರ ಕಳುಹಿಸಿದ ಮೋದಿ

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.