Saturday, 23rd November 2024

ಬಂಡೆಯ ಮೇಲಿನ ಚಿತ್ರದ ಒಳಗುಟ್ಟು

ಸುಧಕ್ಕನ ಕಥೆಗಳು

ಸುಧಾಮೂರ್ತಿ

ಒಂದು ದಿನ ಸುಭದ್ರಾ ಮತ್ತು ಸುಮತಿ ಊರಿಗೆ ಬಂದರು. ಬಹಳ ದಿನದ ನಂತರ ತಾಯಿಯನ್ನು ನೋಡಿ ಮಕ್ಕಳು ಕುಣಿದಾಡಿ ದರು. ‘ಎರಡು ದಿನ ಆಫೀಸಿಗೆ ರೆಜೆ ಇದೆ. ನಾವೆರಡು ದಿನ ಲೀವ್ ಹಾಕಿ ಬಂದಿದ್ದೇವೆ. ಒಟ್ಟು ಒಂದು ವಾರ ಇಲ್ಲಿ ಇರ್ತೀವಿ’ ಎಂದರು ಮಗಳು ಮತ್ತು ಸೊಸೆ.

‘ಅಮ್ಮ ನಮ್ಮ ಮನೆಯಲ್ಲಿ ನಮ್ಮ ಯಾವುದೇ ಮಾತು ಮಕ್ಕಳು ಕೇಳೋದಿಲ್ಲ. ಇಲ್ಲಿ ನೋಡಿದ್ರೆ ಎಷ್ಟು ಚೆನ್ನಾಗಿ ಹೊಂದಿಕೊಂಡಿ ದ್ದಾರೆ. ಏನೂ ಗಲಾಟೆ ಇಲ್ಲ’ ಎಂದು ಅಚ್ಚರಿಪಟ್ಟರು.

‘ಅಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಅನ್ನೋ ಅನೇಕ ಪುಸ್ತಕ ಇದೆ. ನಾನು ಓದಿದ್ರೂ ಅದರಂತೆ ಮಕ್ಕಳು ಮಾತೇ ಕೇಳೋಲ್ಲ’ ಅಂದಳು ಸುಮತಿ. ‘ಮಕ್ಕಳು ತಾಯಿಯರ ಜತೆ ಗಲಾಟೆ ಮಾಡ್ತಾರೆ. ಅಜ್ಜ ಅಜ್ಜಿ ಜತೆ ಇಲ್ಲ. ಆದರೆ ಪುಸ್ತಕಕ್ಕಿಂತ ಅನುಭವ,
ಲೋಕಾನುಭವ ಬಹಳ ಮುಖ್ಯ. ನಿಮಗೆ ಚಿತ್ರದ ಒಳಗುಟ್ಟಿನ ಕಥೆ.

ನಾನು ಚಿಕ್ಕವರಿದ್ದಾಗ ಹೇಳಿದ್ದು ನೆನಪಿಲ್ವಾ ಎಂದಳು ಅಜ್ಜಿ. ‘ನೆನಪಿಲ್ಲ ಅಮ್ಮ, ಈಗ ಹೇಳು’ ಮಕ್ಕಳಂತೆ ಸುಮತಿ ಹಠ ಮಾಡಿ ದಳು. ಮಕ್ಕಳೂ ಅಮ್ಮನ ಜತೆಗೂಡಿದರು. ಆಗ ಅಜ್ಜಿ ‘ ಇದು ನನ್ನ ಕಥೆಯಲ್ಲ. ನನಗೆ ಯಾರೋ ಹೇಳಿದ್ದು. ಬೇರೆಯವರ ಕಥೆ. ನನಗೆ ತುಂಬಾ ಇಷ್ಟವಾಯಿತು ಎಂದಳು.

‘ಇರಲಿ ಅಜ್ಜಿ ಆ ಕಥೆ ಹೇಳು’ ಎಂದರು ಮಕ್ಕಳು. ಹಿಂದೆ ಅಮರಾವತಿ ಅಂತಾ ದೊಡ್ಡ ಊರಿತಂತೆ. ಅಲ್ಲಿ ಚಂದ್ರಬೀದಿ ಅನ್ನೋ  ದೊಡ್ಡ ದಾರಿ ಇತ್ತಂತೆ. ಆ ದಾರಿಯ ಮಧ್ಯದಲ್ಲಿ ಒಂದು ದೊಡ್ಡ ಬಂಡೆ ಇತ್ತಂತೆ. ಬಂಡೆಯ ಮೇಲೆ ಮೂರು ಚಿತ್ರಗಳಿದ್ದವು.
1.ಎತ್ತು.

2.ಕತ್ತೆ.
3.ಲಿಂಗ(ಶಿವಲಿಂಗ)

ಅದಲ್ಲದೇ ಬೇರೆ ಏನೂ ಇರಲಿಲ್ಲ. ಜನರಿಗೆ ಅದನ್ನು ನೋಡಿದಾಗ ಏನಿದು? ಅನಿಸಿತು. ಕೆಲವರು ಶಿವಲಿಂಗದ ಚಿತ್ರನೋಡಿ, ಅನೇಕ ಕಥೆಗಳನ್ನು ಹುಟ್ಟುಹಾಕಿದರು. ಹಿಂದೆ ಶಿವ ಭೂಮಿಗೆ ಬಂದಾಗ ಈ ಕಲ್ಲಮೇಲೆ ಕೂತಿದ್ದನಂತೆ. ಅವನಿಗೆ ಒಂದು ಕತ್ತೆ ಭಕ್ತನಾಗಿ ಬಂತಂತೆ. ಅದನ್ನು ನಂದಿ ನೋಡಿದನಂತೆ. ಹೀಗೆ ಏನೇನೋ ಊಹೆಗಳು. ಕೆಲವರು ಆ ಬಂಡೆಗೆ ಪ್ರತಿ ಸೋಮವಾರ ಪೂಜೆ ಮಾಡುತ್ತಿದ್ದರು. ಕೆಲವರು ಬಸವಣ್ಣ ಹೊಲ ಊಳುತ್ತಾನೆ ಎಂದು ಎತ್ತಿನ ಚಿತ್ರವನ್ನು ಪೂಜೆ ಮಾಡುತ್ತಿದ್ದರು.

ಕೆಲವರು ಕತ್ತೆ ಭಾರಹೊರುತ್ತದೆ. ಅದು ಒಳ್ಳೆಯ ಸಂಕೇತ ಎನ್ನುತ್ತಿದ್ದರು. ಆದರೆ ಯಾರಿಗೂ ಅದೇನಂತ ನಿಖರವಾಗಿ ಗೊತ್ತಿರ ಲಿಲ್ಲ. ಈ ಬಂಡೆಯಿಂದ ದಾರಿಹೋಕರಿಗೆ ತುಂಬಾ ತೊಂದರೆ ಮಾತ್ರ ಆಗುತ್ತಿತ್ತು. ರಸ್ತೆಯ ಮಧ್ಯೆ ರಥ, ಕುದುರೆ ಹಾಯ್ದು ಹೋಗು ತ್ತಿದ್ದವು. ನೇರವಾಗಿ ಹೋಗುವಂತಿರಲಿಲ್ಲ. ಒಂದು ದಿನ ಆ ಊರಿಗೆ ಒಬ್ಬ ಜಾಣ ಬಂದ. ಆತ ದಾರಿಯಲ್ಲಿ ಹೋಗುವಾಗ ಈ ಬಂಡೆ ಯಿದ್ದ ದಾರಿಯನ್ನು ನೋಡಿ ಅವನಿಗೆ ಬಹಳ ಅಚ್ಚರಿಯಾಯಿತು. ಸುತ್ತಮುತ್ತಲಿನ ಜನರಿಗೆ ಇದೇನೆಂದು ಕೇಳಿದ.

‘ಅಯ್ಯೋ ನಮಗೆ ಇದೇನು ಗೊತ್ತಿಲ್ಲ. ಬಹಳ ದಿನಗಳಿಂದ ಇದೆ. ಇದೆ. ಇದೇನು ವಿಚಿತ್ರವೋ, ದೇವರ ಆಟವೋ ಗೊತ್ತಿಲ್ಲ. ನಮ ಗ್ಯಾಕೆ ಬೇಕು? ಅಂತಾ ಸುಮ್ಮನಿದ್ದೇವೆ’ ಎಂದರು. ಜಾಣನಿಗೆ ಇನ್ನೂ ಅಚ್ಚರಿಯಾಯಿತು. ಊರ ಕೊತವಾಲನ ಕಡೆಗೆ ಹೋಗಿ ಕೇಳಿದ. ಇದೇನು ಸ್ವಾಮಿ. ನಿಮ್ಮ ಊರಮಧ್ಯದಲ್ಲಿ ಮುಖ್ಯವಾದ ಬೀದಿಯ ಮಧ್ಯದಲ್ಲಿರುವ ಮುಖ್ಯವಾದ ಬೀದಿಯ ಮಧ್ಯದಲ್ಲಿ ಈ ಚಿತ್ರವಿರುವ ಬಂಡೆಯಿದೆ. ನಿಮಗೆ ಇದರ ಬಗ್ಗೆ ಗೊತ್ತಿದೆಯಲ್ಲಾ.

‘ಹೌದೌದು, ಬಹಳ ದಿನಗಿಂದ ಇದೆ. ಮೇಲೆ ಚಿತ್ರ ಬೇರೆ ಇದೆ. ಬೇರೆ ಬರಹ ಇಲ್ಲ. ಮಂತ್ರವೋ, ಮಾಟವೋ ತಿಳಿಯದು. ನಮಗ್ಯಾಕೆ ಇಲ್ಲಿನ ಉಸಾಬರಿ? ’ ಹೀಗೆ ಪ್ರತಿಯೊಬ್ಬರೂ ಉತ್ತರ ಕೊಟ್ಟರು. ಮರುದಿನ ಜಾಣ ಎಲ್ಲರನ್ನೂ ಕರೆದ. ಬಂಡೆಯ ಬಳಿಗೆ ಹೋಗಿ ಮತ್ತೊಮ್ಮೆ ಚಿತ್ರವನ್ನು ನೋಡಿ ನಸುನಕ್ಕ.

ಇದರ ಅರ್ಥ ನಿಮಗೆ ಆಗಲಿಲ್ಲವೇ? ಇದು ಒಂದು ಆದೇಶ ಇದೆ. ಎತ್ತು, ಕತ್ತೆ, ಲಿಂಗ … ಅಂದರೆ ಲಿಂಗ ಚಿತ್ರವಿರುವ ಈ ಕಲ್ಲನ್ನು ಎತ್ತು ಎಂದಿದೆ. ಇಲ್ಲವಾದರೆ ನೀನು ಕತ್ತೆಯೇ. ಹೀಗೆ ಹೇಳುತ್ತಾ ಆ ಭಾರಿ ಬಂಡೆಯನ್ನು ಜನರ ಸಹಾಯದಿಂದ ಸರಿಸಿದ. ಅಚ್ಚರಿ ಯೆಂಬಂತೆ ಆ ಬಂಡೆಯ ಕೆಳಗೆ ಒಂದು ಹೊಂಡವಿದ್ದು ಅದರಲ್ಲಿ ಒಂದು ಪೆಟ್ಟಿಗೆ ಇದ್ದಿತು. ಅದನ್ನು ತೆಗೆದಾಗ ಅದರಲ್ಲಿ ಚಿನ್ನದ ನಾಣ್ಯಗಳಿದ್ದವು. ಎಲ್ಲರಿಗೂ ಅಚ್ಚರಿಯಾಯಿತು.

ನಮ್ಮ ಹಿರಿಯರು ಜನಹಿತಕ್ಕಾಗಿ ಒಂದು ನಿಧಿಯನ್ನು ಮಾರ್ಗದ ಮಧ್ಯೆದಲ್ಲಿ ಇಟ್ಟಿದ್ದರು. ಎಲ್ಲರಿಗೂ ತಿಳಿಯಬಾರದೆಂದು ಸಂಕೇ ತಿಕವಾಗಿ ಚಿತ್ರರೂಪದಿಂದ ಆದೇಶ ಕೊಟ್ಟಿದ್ದರು. ನೀವು ಅದರ ಅರ್ಥ ತಿಳಿಯದೇ ಪೂಜೆ ಪುನಸ್ಕಾರ ಮಾಡಿಕೊಂಡು ಕೂತಿರಿ. ಅಲ್ಲದೇ ದಾರಿಯ ಮಧ್ಯದಲ್ಲಿ ಬಂಡೆ ಇದ್ದರೂ ಕೊತವಾಲರು ಅದನ್ನು ಎತ್ತದೇ ಹೋದರು. ಜನರು ಬಂಡೆಯ ಆಚೆ ಈಚೆ ಹೋದರೆ ಹೊರತು ಒಳಗೇನಿದೆ, ಜನರಿಗಾಗಿ, ಮಾರ್ಗಕ್ಕಾಗಿ ಇದನ್ನು ಎತ್ತಬೇಕು ಅಂದುಕೊಳ್ಳಲಿಲ್ಲ.

ಅದಕ್ಕೆ ನಿಮ್ಮಂಥವರಿಗೆಲ್ಲ ನಮ್ಮ ಹಿರಿಯರು ಕತ್ತೆ ಎಂದು ಕರೆದರು. ಈ ನಿಧಿಯಿಂದ ಈ ದಾರಿಯನ್ನೂ ಈ ಊರಿನಲ್ಲಿ ಇರುವ ಇನ್ನು ಅನೇಕ ದಾರಿಯನ್ನು ಸರಿಪಡಿಸಿ ಎಂದು ಹೇಳಿ ಹೊರಟುಹೋದ.