Saturday, 23rd November 2024

Maldivian Minister: ಪ್ರಧಾನಿ ಮೋದಿ ವಿರುದ್ಧ ಟೀಕೆ; ಅಮಾನತುಗೊಂಡಿದ್ದ ಮಾಲ್ಡೀವ್ಸ್‌ ಸಚಿವರಿಬ್ಬರು ರಾಜೀನಾಮೆ

Maldivian Ministers

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಲಕ್ಷದ್ವೀಪ ಭೇಟಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅಮಾನತುಗೊಂಡಿದ್ದ ಮಾಲ್ಡೀವ್ಸ್‌ನ ಇಬ್ಬರು ಸಚಿವರು(Maldivian Minister) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಚಿವರಾದ ಮರಿಯಮ್ ಶಿಯುನಾ ಮತ್ತು ಮಲ್ಶಾ ಷರೀಫ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ವಿರುದ್ಧ ತಮ್ಮ ಕಾಮೆಂಟ್‌ಗಳ ಬಗ್ಗೆ ವಿವಾದವನ್ನು ಹುಟ್ಟುಹಾಕಿದ್ದರು. ಮಾಲ್ಢೀವ್ಸ್‌ ಅಧ್ಯಕ್ಷ ಮೊಹಮದ್ ಮುಯಿಝು ಅವರು ದೆಹಲಿಯಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಬಗ್ಗೆ ಘೋಷಣೆ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಸಚಿವರಾದ ಮರಿಯಮ್ ಶಿಯುನಾ ಮತ್ತು ಮಲ್ಶಾ ಷರೀಫ್ ಸೇರಿದಂತೆ ಒಟ್ಟು ಮೂವರು ಸಚಿವರು ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಭಾರತದಲ್ಲಿ ಭಾರೀ ಅಕ್ರೋಶ ಎದುರಾಗಿತ್ತು, ಅಲ್ಲದೇ ಮಾಲ್ಡೀವ್ಸ್‌ ಪ್ರವಾಸೋದ್ಯಕ್ಕೆ ಸೆಡ್ಡು ಹೊಡೆಯಲು ಭಾರತ ನಿರ್ಧರಿಸಿತ್ತು. ಅನೇಕ ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ಕ್ಯಾನ್ಸಲ್‌ ಮಾಡಿ ಲಕ್ಷದ್ವೀಪದತ್ತ ಮುಖ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅಧ್ಯಕ್ಷ ಮೊಹಮದ್ ಮುಯಿಝು ಈ ಮೂವರು ಸಚಿವರನ್ನು ಅಮಾನತುಗೊಳಿಸಿದ್ದರು. ಇದೀಗ ಒಂಬತ್ತು ತಿಂಗಳ ಅಮಾನತಿನ ನಂತರ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಮೊಹಮದ್ ಮುಯಿಝು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ವಕ್ತಾರರಾದ ಹೀನಾ ವಲೀದ್ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅಧ್ಯಕ್ಷ ಮೊಹಮದ್ ಮುಯಿಝು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲೇ ಅದನ್ನು ಘೋಷಿಸಲಾಗುತ್ತದೆ. ಅಲ್ಲಿ ಅವರು ಪ್ರಧಾನಿ ಮೋದಿ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಭಾರತ ನೀಡಿದ ಆರ್ಥಿಕ ಪೆಟ್ಟಿನ ನಂತರ ತನ್ನ ತಪ್ಪನ್ನು ಸುಧಾರಿಸಿಕೊಳ್ಳಲು ಮುಂದಾಗಿರುವ ಮಾಲ್ಡೀವ್ಸ್‌ ಭಾರತದತ್ತ ಸ್ನೇಹ ಹಸ್ತ ಚಾಚಿದೆ. ಕಳೆದ ತಿಂಗಳು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಮಾಲ್ಡೀವ್ಸ್ ಭೇಟಿ ನೀಡಿ ಜೈಶಂಕರ್ ಹಲವಾರು ಒಡಂಬಡಿಕೆಗಳಿಗೆ ಸಹಿ ಹಾಕಿದ್ದರು. ಅಲ್ಲದೇ ಅಧಿಕ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಭಾರತದಲ್ಲಿ ಹೆಚ್ಚುವರಿ 1,000 ಮಾಲ್ಡೀವ್ಸ್ ನಾಗರಿಕ ಸೇವಕರ ಸಾಮರ್ಥ್ಯ ವರ್ಧನೆ ಮತ್ತು ಮಾಲ್ಡೀವ್ಸ್ ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪರಿಚಯಿಸುವ ಒಪ್ಪಂದಗಳು ನಡೆಯಿತು.

ಭಾರತವನ್ನು ಹೊಗಳಿದ ಮುಯಿಝು
ಮಾಲ್ಡೀವ್ಸ್​ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರು ಭಾರತದ ನಿರಂತರ ಅಭಿವೃದ್ಧಿ ನೆರವನ್ನು ಶ್ಲಾಘಿಸಿದ್ದರು. ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆ ಪುನರುಚ್ಚರಿಸಿದ್ದಾರೆ. ಜೈಶಂಕರ್ ಅವರ ಭೇಟಿಯ ಸಮಯದಲ್ಲಿ, ಮಾಲ್ಡೀವ್ಸ್ ಕಡೆಯವರು ಸಾಮಾಜಿಕ, ಮೂಲಸೌಕರ್ಯ ಮತ್ತು ಹಣಕಾಸು ಕ್ಷೇತ್ರಗಳು ಸೇರಿದಂತೆ ಮಾಲ್ಡೀವ್ಸ್​ ನೀಡಲಾಗಿರುವ ಒಟ್ಟಾರೆ ಅಭಿವೃದ್ಧಿಗೆ ಭಾರತದ ಬೆಂಬಲವನ್ನು ಕೊಂಡಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಮಾಲ್ಡೀವ್ಸ್​ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ: ಮುಯಿಝುಗೆ ಗೆಲುವು