Saturday, 23rd November 2024

Surendra Pai Column: ಯೋಗ ಮಾಂತ್ರಿಕ – ಯೋಗಾಚಾರ್ಯ

ಸುರೇಂದ್ರ ಪೈ, ಭಟ್ಕಳ

ಭಾರತೀಯ ಸಂಸ್ಕೃತಿ, ಪರಂಪರೆಯು ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ನೆಲ-ಜಲದ ಕಲೆ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಹೀಗೆ ಎಲ್ಲ ಕ್ಷೇತ್ರದಲ್ಲೂ ವಿಶ್ವಕ್ಕೆ ಭಾರತದ ಕೊಡುಗೆ ಅನನ್ಯವಾದದ್ದು. ಅವುಗಳಲ್ಲಿ ನಮ್ಮ ಪ್ರಾಚೀನ ಯೋಗವು ಒಂದಾಗಿದೆ. ನಮ್ಮ ಋಷಿ ಮುನಿಗಳು ಯೋಗದ ಮೂಲಕ ಸಿದ್ಧಿಯನ್ನು ಸಾಧಿಸುತ್ತಿದ್ದರು.

೨೦೧೫ ರಂದು ವಿಶ್ವ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸುವ ಮುನ್ನವೇ ಯೋಗ ಕಲೆಯನ್ನು ಪಾಶ್ಚಾತ್ಯ ದೇಶಗಳಲ್ಲಿ ಪಸರಿಸಿ ಆಧುನಿಕ ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಮಹಾನ್ ಯೋಗ ಮಾಂತ್ರಿಕ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್ ಅವರಿಗೆ ಸಲ್ಲುತ್ತದೆ. ಯೋಗಾಚಾರ್ಯ ಬೆಳ್ಳೂರು ಕೃಷ್ಣಮಾರ್ಚಾ
ಸುಂದರರಾಜ ಅಯ್ಯಂಗಾರ್ ಡಿಸೆಂಬರ್ 14, 1918 ರಂದು ಕರ್ನಾಟಕದ ಬೆಳ್ಳೂರಿನಲ್ಲಿ ಜನಿಸಿದರು. ಬಡ
ಕುಟುಂಬದಲ್ಲಿ ಬೆಳೆದ ಇವರು ಬಾಲ್ಯದಲ್ಲಿ ಮಲೇರಿಯಾ, ಕ್ಷಯ ಮತ್ತು ಟೈಫಾಯಿಡ್ ಜ್ವರ ಸೇರಿದಂತೆ
ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು.

16 ನೇ ವಯಸ್ಸಿನಲ್ಲಿ, ಅವರು ತಮ್ಮ ಸೋದರ ಮಾವ ಟಿ.ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಯೋಗ
ಪ್ರಯಾಣವನ್ನು ಪ್ರಾರಂಭಿಸಿದರು. ವಿಶ್ವದ ಖ್ಯಾತ ಪಿಟೀಲು ವಾದಕ ಯೆಹೂದಿ ಮೆನುಹಿನ್ 1952 ರಲ್ಲಿ, ಅವರು ಬಾಂಬೆಯಲ್ಲಿ ಪ್ರದರ್ಶನ ನೀಡುವುದಕ್ಕಾಗಿ ಬಂದಾಗ ಜವಾಹರ ಲಾಲ್ ನೆಹರೂ ಮೂಲಕ ಪರಿಚಯವಾದ ಅಯ್ಯಂಗಾರ್ ರವರು, ನಿರಂತರ ಕಾರ್ಯಕ್ರಮದಿಂದ ಬಳಲಿದ್ದ ಮೆನು ಹಿನ್ ಅವರಿಗೆ ಶವಾಸನದ ಮೂಲಕ ನಿದ್ರೆಗೆ ಜಾರುವಂತೆ ಮಾಡಿದರು. ನಿದ್ರೆಯಿಂದ ಎದ್ದ ಬಳಿಕ ದೈಹಿಕ ಹಾಗೂ ಮಾನಸಿಕವಾಗಿ ಚೈತನ್ಯ ಪಡೆದುದ್ದನ್ನು ಕಂಡು ಆತ ಯೋಗವನ್ನು ನಿತ್ಯ ಅಭ್ಯಾಸ ಮಾಡುವುದರಿಂದ ತನ್ನ ವೃತ್ತಿಯಲ್ಲೂ ಬೆಳೆಯಲು ಸಾಧ್ಯ ಎಂದು ಅರಿತು ಯೋಗಾಚಾರ್ಯ ಬಿಕೆಎಸ್ ಅವರನ್ನು ಪಾಶ್ಚಾತ್ಯ ದೇಶಕ್ಕೆ ಬರುವಂತೆ ಆಹ್ವಾನಿಸಿದರು.

ಅಲ್ಲಿಂದ ಪ್ರಾರಂಭವಾದ ಅಯ್ಯಂಗಾರ್ ಅವರ ಪಾಶ್ಚಾತ್ಯ ದೇಶಗಳ ಪಯಣ ಹಲವು ವರ್ಷಗಳ ಕಾಲ ನಿರಂತರ ವಾಗಿ ನಡೆಯುತ್ತಲೇ ಬಂತು. ಹೋದ ಪ್ರತಿ ದೇಶದಲ್ಲೂ ಯೋಗ ಶಿಕ್ಷಣದ ವಿವಿಧ ಪ್ರಕಾರವನ್ನು ಪರಿಚಯಿಸುತ್ತಾ ಬಂದರು. ಯೋಗಾಚಾರ್ಯ ಅಯ್ಯಂಗಾರ್ ಅವರು ಯೋಗದ ಒಂದು ವಿಶಿಷ್ಟ ಶೈಲಿಯನ್ನು ಅಭಿವೃದ್ಧಿಪಡಿಸಿ ದರು, ಇದನ್ನು ಅಯ್ಯಂಗಾರ್ ಯೋಗ ಎಂದು ಕರೆಯಲಾಗುತ್ತದೆ. ಅಯ್ಯಂಗಾರ್ ಯೋಗವು ಪ್ರಾಣಾಯಾಮದ ಅಭ್ಯಾಸ, ದೇಹ, ಮನಸ್ಸು ಮತ್ತು ಉಸಿರಾಟದ ಏಕೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.

ಇದನ್ನು ಪ್ರಸ್ತುತ 70ಕ್ಕೂ ಹೆಚ್ಚು ದೇಶಗಳಲ್ಲಿ ಕಲಿಸಲಾಗುತ್ತದೆ. ಅವರು ಜಗತ್ತಿನ 40 ರಾಷ್ಟ್ರಗಳಲ್ಲಿ 180
ಯೋಗ ಕೆಂದ್ರಗಳನ್ನು ಸ್ಥಾಪಿಸಿದ್ದು, ಸುಮಾರು ೨ ಸಾವಿರಕ್ಕೂ ನುರಿತ ಯೋಗ-ಶಿಕ್ಷಕರು, ಯೋಗವಿದ್ಯೆಯ
ಮಹತ್ವವನ್ನು ಪ್ರಚಾರ ಮಾಡುವುದರ ಮೂಲಕ ಅವರ ಸಂದೇಶವನ್ನು ಜೀವಂತವಾಗಿಟ್ಟಿದ್ದಾರೆ. ಇವರು ನೆಹರೂ,
ಜಿಡ್ಡು ಕೃಷ್ಣಮೂರ್ತಿ ಮತ್ತು ಜಯಪ್ರಕಾಶ್ ನಾರಾಯಣ್ ಸೇರಿದಂತೆ ಬೆಲ್ಜಿಯಂನ ರಾಣಿ ಎಲಿಸಬೆತ್ ಅವರಿಗೆ ಯೋಗವನ್ನು ಕಲಿಸಿದ್ದಾರೆ.

ಯೋಗಾಚಾರ್ಯ ಬಿಕೆಎಸ್ ಅವರು 1966 ರಲ್ಲಿ ಪ್ರಕಟಿಸಿದ ಅತ್ಯಂತ ಪ್ರಸಿದ್ಧ ಪುಸ್ತಕ, ಲೈಟ್ ಆನ್ ಯೋಗ
ಯೋಗಾಭ್ಯಾಸಕ್ಕೆ ನಿರ್ಣಾಯಕ ಮಾರ್ಗದರ್ಶಿ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ‘ಲೈಟ್ ಆನ್ ಪ್ರಾಣಾ ಯಾಮ, ಪತಂಜಲಿಯ ಯೋಗ ಸೂತ್ರಗಳ ಮೇಲೆ ಬೆಳಕು, ಮತ್ತು ಯೋಗ: ಸಮಗ್ರ ಆರೋಗ್ಯದ ಹಾದಿ’ ಪುಸ್ತಕಗಳನ್ನು ಬರೆದಿದ್ದಾರೆ.

ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್ ಅವರು ಯೋಗಕ್ಕೆ ನೀಡಿದ ಕೊಡುಗೆ ಗಳನ್ನು ಗುರುತಿಸಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳೊಂದಿಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ. ಯೋಗ ಶಿಕ್ಷಣವನ್ನು ವಿಶ್ವದಾದ್ಯಂತ ಪಸರಿಸಿದ ಮಹಾನ್ ಚೇತನ ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ನಮ್ಮ ದೇಶದ ಅಮೂಲ್ಯ ರತ್ನಗಳಲ್ಲಿ ಒಬ್ಬರೆನಿಸಿ ದ್ದಾರೆ.