Friday, 22nd November 2024

Pratap Simha: ದೇವರು ಭಕ್ತರಿಗೆ ಸೇರಬೇಕು; ಚಾಮುಂಡಿ ಪ್ರಾಧಿಕಾರ ಒಳ್ಳೆಯ ನಿರ್ಧಾರ: ಸಿಎಂ ಸಿದ್ದರಾಮಯ್ಯ ಪರ ಪ್ರತಾಪ್‌ ಸಿಂಹ ಬ್ಯಾಟಿಂಗ್

pratap simha

ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿಗಾಗಿ ಪ್ರಾಧಿಕಾರ (Chamundeshwari Temple Development Authority) ನಿರ್ಮಾಣ ಮಾಡುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನಿರ್ಧಾರ ಉತ್ತಮವಾದುದು. ಇದರಿಂದ ಚಾಮುಂಡಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗಲಿ ಎಂದು ಆಶಿಸುತ್ತೇನೆ. ದೇವರು ಭಕ್ತರಿಗೆ ಸೇರಬೇಕು ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

ಚಾಮುಂಡಿ ಪ್ರಾಧಿಕಾರಕ್ಕೆ ಮೈಸೂರು ರಾಜಮನೆತನದ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹ, ಈ ಮೂಲಕ ಸಂಸದ ಯದುವೀರ್ ಒಡೆಯರ್‌ (Yaduveer Wadiyar) ಅಭಿಪ್ರಾಯವನ್ನು ಪರೋಕ್ಷವಾಗಿ ವಿರೋಧಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಆದರೆ ಚಾಮುಂಡೇಶ್ವರಿ ಕ್ಷೇತ್ರ ಪ್ರಾಧಿಕಾರ ಉತ್ತಮ ನಿರ್ಧಾರ. ಅಲ್ಲಿಗೆ ಅದರ ಅಗತ್ಯವಿದೆ ಎಂದರು.

ಬೆಟ್ಟದ ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೊಲೀಸ್​ ಠಾಣೆ ಹಾಗೂ ಆಸ್ಪತ್ರೆ ಬೇಕು. ಅಶಕ್ತರಿಗೆ, ಅಂಗವಿಕಲರಿಗೆ ದರ್ಶನಕ್ಕೆ ಸರಿಯಾದ ವ್ಯವಸ್ಥೆ ಆಗಬೇಕು. ಇದೆಲ್ಲಾ ಆಗಬೇಕಿದ್ದರೆ ಒಂದು ಪ್ರಾಧಿಕಾರ ಬೇಕೇ ಬೇಕು. ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಪ್ರಾಧಿಕಾರ ರಚನೆ ಮಾಡಿದ್ದಾರೆ, ಇದು ಒಳ್ಳೆಯ ಕೆಲಸ ಎಂದರು.

ಆಸ್ತಿ ವಿಚಾರವಾಗಿ ಮಾತನಾಡುವುದಿಲ್ಲ. ಆದರೆ, ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಪ್ರತಾಪ್ ಸಿಂಹ ಹೇಳಿದರು. ಅಮೃತ್ ಯೋಜನೆಯ ಕುಡಿಯುವ ನೀರು ತಲುಪದಿರಲು ಕಾರಣ ಯಾರು? ನಾನು ಹೇಳಿದರೆ ವಿವಾದ ಆಗುತ್ತದೆ. ಪೈಪ್​​ಲೈನ್​ ಬಗ್ಗೆ ನೀವೇ ನೋಡಿ ಎಂದು ಪ್ರತಾಪ್ ಸಿಂಹ ನುಡಿದರು.

ಚಾಮುಂಡಿ ಬೆಟ್ಟದ ದೇವಿಕೆರೆ ಮೇಲೆ ನಮಾಜ್ ಮಾಡುತ್ತಿದ್ದರು. ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಮರ 12 ಅಂಗಡಿಗಳಿದ್ದವು. ಅಲ್ಲಿರುವುದು ಹಿಂದೂಗಳ ದೇವಸ್ಥಾನ. ಹಿಂದೂಗಳು ಭಕ್ತಿ ಭಾವದಿಂದ ಹೋಗುವ ಜಾಗದಲ್ಲಿ ಇವರು ಯಾಕೆ ಅಂಗಡಿ ಇಡಬೇಕು? ಮುಜರಾಯಿ ಕಾನೂನಿನಲ್ಲಿ ಕೂಡ ಇದಕ್ಕೆ ಅವಕಾಶ ಇಲ್ಲ ಎಂದು ಮುಸ್ಲಿಂ ಅಂಗಡಿಗಳನ್ನು ತೆಗೆಸಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಚಾಮುಂಡೇಶ್ವರಿಗೆ ಅವಮಾನ‌ ಮಾಡುವ ರೀತಿಯಲ್ಲಿ ಆರಂಭವಾದ ಮಹಿಷ ದಸರಾ ತಡೆಯುವ ಕೆಲಸ ಮಾಡಿದೆ. ಅಂದು ಚಾಮುಂಡೇಶ್ವರಿ ತಾಯಿಗೆ ಅನ್ಯಾಯ ಆಗುವಾಗ ಯಾರೂ ಮಾತನಾಡಲಿಲ್ಲ ಎಂದು ತಮ್ಮ ಹೋರಾಟವನ್ನು ಪ್ರತಾಪ್ ಸಿಂಹ ನೆನಪಿಸಿಕೊಂಡರು.

ಈ ಸುದ್ದಿ ಓದಿ: CM Siddaramaiah: ಗುಣಮಟ್ಟ ನಿರ್ವಹಿಸದಿದ್ದರೆ ಕ್ರಮ: ಚಾಮುಂಡಿ ಬೆಟ್ಟ ಪ್ರಾಧಿಕಾರದ ಮೊದಲ ಸಭೆ ನಡೆಸಿ ಸಿಎಂ ಎಚ್ಚರಿಕೆ