Friday, 22nd November 2024

Namma Metro: ಚಾಲಕನಿಲ್ಲದ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಸಿದ್ಧರಾಗಿ! ಪ್ರಾಯೋಗಿಕ ಸಂಚಾರ ಆರಂಭ

namma metro yellow line

ಬೆಂಗಳೂರು: ನಮ್ಮ ಮೆಟ್ರೊ (Namma Metro) ನೇರಳೆ (Purple line) ಹಾಗೂ ಹಸಿರು ಮಾರ್ಗಗಳ (green line) ಯಶಸ್ವಿ ಕಾರ್ಯಾಚರಣೆಯ ಜೊತೆಜೊತೆಗೇ, ಹಳದಿ ಮಾರ್ಗದ (Yellow line) ಕಾಮಗಾರಿಯೂ ಪೂರೈಸಿದ್ದು, ಇದೇ ವರ್ಷದ ಅಂತ್ಯಕ್ಕೂ ಮುನ್ನ ಚಾಲಕನಿಲ್ಲದ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲಿದೆ ಎಂದು ಗೊತ್ತಾಗಿದೆ. ಸಾಧ್ಯವಾದರೆ ಮುಂದಿನ ತಿಂಗಳಲ್ಲೇ ಪ್ರಾಯೋಗಿಕ ರೈಲು ಓಡಾಟ ನಡೆಸಲು ಮೆಟ್ರೋ (BMRCL) ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬೊಮ್ಮಸಂದ್ರದಿಂದ ಆರ್.ವಿ.ರಸ್ತೆ ನಡುವೆ ಹಳದಿ ಲೈನ್ ಇರಲಿದೆ.‌ 18.82 ಕಿಲೋಮೀಟರ್‌ಗಳಷ್ಟು ಉದ್ದ ಇರುವ ಈ ಎಲಿವೇಟೆಡ್ ಮೆಟ್ರೋ ಮಾರ್ಗ 16 ನಿಲ್ದಾಣಗಳನ್ನು ಹೊಂದಿದೆ. ಬೆಂಗಳೂರಿನ ದಕ್ಷಿಣ ಭಾಗಕ್ಕೆ, ವಿಶೇಷವಾಗಿ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳು ಇರುವ ಪ್ರದೇಶಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದೀಗ ತೂಕ ಸಾಮರ್ಥ್ಯದ ಸಂಬಂಧಿತ ಆಸಿಲೇಷನ್ ಮತ್ತು ಎಲೆಕ್ಟ್ರಾನಿಕ್ ಬ್ರೇಕರ್ಸ್ ಡಿಸ್ಟ್ರಿಬೂಷನ್ (ಇಬಿಡಿ) ಪ್ರಯೋಗಗಳು ಈ ಲೈನ್‌ನಲ್ಲಿ ನಡೆಯುತ್ತಿದ್ದು, ಪ್ರಾಯೋಗಿಕ ಸಂಚಾರ ಮುಂದಿನ ಹತ್ತು ದಿನ ನಡೆಯಲಿದೆ. ಲಖನೌ ಮೂಲದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಅಧಿಕಾರಿಗಳು ಈ ತಪಾಸಣೆ ನಡೆಸುತ್ತಿದ್ದಾರೆ. ಈ ಸಂಸ್ಥೆ ಪ್ರಾಯೋಗಿಕ ವರದಿ ಸಲ್ಲಿಸಿದ ಬಳಿಕ ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿ ಪಡೆಯಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.

ಆಸಿಲೇಷನ್ ಮತ್ತು ಇಬಿಡಿ ಪ್ರಾಯೋಗಿಕ ಸಂಚಾರದ ಭಾಗವಾಗಿ ಮೆಟ್ರೋ ರೈಲಿನಲ್ಲಿ ಮರಳು ಮೂಟೆ ತುಂಬಿಸಿ ಭಾರ ಪರೀಕ್ಷೆ, ಬೋಗಿಯಲ್ಲಿ ನೀರನ್ನು ತುಂಬಿಸಿ ನಿಯಂತ್ರಣ ಪರೀಕ್ಷೆ ಮಾಡಲಾಗುತ್ತದೆ. ರೈಲು ವೇಗವಾಗಿ ಮತ್ತು ನಿಧಾನವಾಗಿ ಹೋಗುವಾಗ ನಿಯಂತ್ರಣಕ್ಕೆ ತರುವುದನ್ನು ಪರೀಕ್ಷಿಸಲಾಗುತ್ತದೆ. ಈ ವೇಳೆ ಬ್ರೇಕ್ ಪರೀಕ್ಷೆ ಕೂಡ ನಡೆಯಲಿದೆ.

ಚಾಲಕ ರಹಿತವಾಗಿ ಮೆಟ್ರೊ ರೈಲು ಕೂಡ ಇಲ್ಲಿ ಸಂಚರಿಸಲಿದೆ. ಸದ್ಯ ಆರು ಸೆಟ್‌ಗಳ ಒಂದು ರೈಲು ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದು, ಇನ್ನಷ್ಟು ರೈಲುಗಳು ಬರಬೇಕಿದೆ. ಈ ವರ್ಷದ ಅಂತ್ಯದಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈಯಿಂದ ಈ ಬೋಗಿಗಳು ಬರಬೇಕಿದ್ದು, ನಿರ್ಮಾಣದಲ್ಲಿ ತಡವಾಗಿದ್ದರಿಂದ ಒಟ್ಟು ಕಾರ್ಯಾಚರಣೆ ತಡವಾಗಿದೆ.

ಹೊಸ ಮಾದರಿಯ ಚಾಲಕ ರಹಿತ ರೈಲು ಸಂಚಾರ ನಡೆಯಲಿರುವ ಕಾರಣ ಇಲ್ಲಿ 37 ಬಗೆಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸಿಎಂಆರ್‌ಎಸ್‌ ಹಸಿರು ನಿಶಾನೆ ಬಳಿಕ ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಹೀಗಾಗಿ ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಇಲ್ಲಿ ಮೆಟ್ರೋ ಓಡಾಟ ನಿರೀಕ್ಷಿಸಬಹುದು.

ಬೊಮ್ಮಸಂದ್ರದಿಂದ ಬಳಿಕ ತಮಿಳುನಾಡಿನ ಹೊಸೂರು ವರೆಗೆ ಮೆಟ್ರೋ ವಿಸ್ತರಿಸುವ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಸದ್ಯಕ್ಕೆ ತೀವ್ರ ವಿರೋಧದ ಕಾರಣ ಸ್ಥಗಿತಗೊಂಡಿದೆ. 23 ಕಿ.ಮೀ. ಉದ್ದದ ಈ ಯೋಜನೆ ಪೈಕಿ 12 ಕಿ.ಮೀ. ಕರ್ನಾಟಕದಲ್ಲಿ ಮತ್ತು 11 ಕಿ.ಮೀ. ತಮಿಳುನಾಡಿನಲ್ಲಿರಲಿದೆ. ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಹಾದುಹೋಗುವ ಹಳದಿ ಮಾರ್ಗವನ್ನು ವಿಸ್ತರಿಸಿ ಹೊಸೂರಿನವರೆಗೆ ಕೊಂಡೊಯ್ಯುವ ಚಿಂತನೆ ಇದಾಗಿತ್ತು. ಈ ವಿಸ್ತರನೆಯಿಂದ ಬೆಂಗಳೂರಿಗೆ ಲಾಭವಾಗುವ ಬದಲು ಧಕ್ಕೆಯೇ ಉಂಟಾಗುವ ಸಂಭವನೀಯತೆ ಇದೆ ಎಂದು ರಾಜ್ಯದ ನಗರ ಸಾರಿಗೆ ತಜ್ಞರು, ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿ: Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ; ವಾಣಿಜ್ಯ ಸೇವೆ ಆರಂಭ ಯಾವಾಗ?