Friday, 20th September 2024

Mysuru Engineer Dies: ಲೇಹ್‌ನಲ್ಲಿ ಚಾರಣಕ್ಕೆ ತೆರಳಿದ್ದ ಮೈಸೂರಿನ ಎಂಜಿನಿಯರ್‌ ಸಾವು

Mysuru Engineer Dies

ಮೈಸೂರು: ಲಡಾಖ್‌ನ ಲೇಹ್‌ಗೆ ಚಾರಣಕ್ಕೆ ತೆರಳಿದ್ದ ವೇಳೆ ಉಸಿರಾಟದ ತೊಂದರೆಯಿಂದ ಮೈಸೂರು ಮೂಲದ ಎಂಜಿನಿಯರ್‌ (Mysuru Engineer Dies) ಮೃತಪಟ್ಟಿದ್ದಾರೆ. ಬೆಂಗಳೂರಿನ ಜಿಇ ಎಲೆಕ್ಟ್ರಿಕಲ್ಸ್‌-ಮೆಡಿಕಲ್‌ ಎಕ್ವಿಪ್‌ಮೆಂಟ್‌ ವಿಂಗ್‌ನ ಡೆಪ್ಯುಟಿ ಮ್ಯಾನೇಜರ್ ನರೇನ್‌ ಕೌಶಿಕ್ (44) ಮೃತರು.

ಇವರು ಮೈಸೂರು ಮಹಾರಾಜ ಪದವಿ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಆರ್‌.ಎನ್‌.ಪದ್ಮನಾಭ ಅವರ ಪುತ್ರರಾಗಿದ್ದು, ಹರಿಯಾಣದಿಂದ ಲೇಹ್‌ಗೆ ಚಾರಣಕ್ಕೆ ತೆರಳುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನರೇನ್‌ ಕೌಶಿಕ್ ಅವರು (Naren Kaushil) ಸೆ.2ರಂದು ಏಳು ಸ್ನೇಹಿತರ ಜತೆ ಬೆಂಗಳೂರಿನಿಂದ ಉತ್ತರ ಭಾರತಕ್ಕೆ ಚಾರಣಕ್ಕಾಗಿ ತೆರಳಿದ್ದರು. ಅವರೊಂದಿಗೆ ಇಬ್ಬರು ವೈದ್ಯರು ಹಾಗೂ ಇಬ್ಬರು ಶೇರ್ಪಾಗಳೂ ಇದ್ದರು. ಆದರೆ, ಪರ್ವ ಪ್ರದೇಶದಲ್ಲಿ 18000 ಅಡಿ ಎತ್ತರದಲ್ಲಿ ಇದ್ದಾಗ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ವೈದ್ಯರು ಸರ್ವ ಪ್ರಯತ್ನ ಮಾಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸೆ.8ರಂದು ನರೇನ್‌ ಕೌಶಿಕ್ ಅವರ ನಿಧನದ ಸುದ್ದಿ ತಿಳಿದ ಕುಟುಂಬಸ್ಥರು ಸೆ.9ರಂದು ಲೇಹ್‌ಗೆ ತಲುಪಿದ್ದಾರೆ. ಬಳಿಕ ಸೆ. 10ರಂದು ಸ್ಥಳೀಯ ಅಧಿಕಾರಿಗಳ ನೆರವಿನಿಂದ ಅಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮೃತ ದೇಹವನ್ನು ಮೈಸೂರಿಗೆ ತಲುಪಿಸಲು ವ್ಯವಸ್ಥೆ ಮಾಡುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. ಆದರೆ, ನರೇನ್‌ ಅವರು ಮೃತಪಟ್ಟು ಮೂರು ದಿನ ಆಗಿದ್ದರಿಂದ ಲೇಹ್‌ನಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Terror attack: ಕಣಿವೆ ರಾಜ್ಯದಲ್ಲಿ ಗುಂಡಿನ ಚಕಮಕಿ; ಸೇನಾ ಬಲೆಗೆ ಬಿದ್ದ ನಾಲ್ವರು ಜೈಷ್‌ ಉಗ್ರರು

ಮೈಸೂರು ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಅವರು ಲೇಹ್‌ ಅಧಿಕಾರಿಗಳನ್ನು ಸಂಪರ್ಕಿಸಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ನೆರವಾಗಿದ್ದಾರೆ. ಮೃತರಿಗೆ ತಂದೆ ಪ್ರೊ.ಆರ್‌.ಎನ್‌. ಪದ್ಮನಾಭ, ತಾಯಿ ನಾಗರತ್ನ ಪದ್ಮನಾಭ, ಪತ್ನಿ ರಾಧಿಕಾ ಕೌಶಿಕ್‌,‌ ಪುತ್ರಿ ವರುಣಿ ಕೌಶಿಕ್, ಸಹೋದರ ಪವನ್‌ ಕೌಶಿಕ್‌ ಇದ್ದಾರೆ.

ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡಬೇಡ ಎಂದು ಅಣ್ಣ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಸಹೋದರ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಪ್ಯಾಯಲಗುರ್ಕಿ ಗ್ರಾಮದಲ್ಲಿ ನಡೆದಿದೆ. ಗಿರೀಶ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ.

ಗಿರೀಶ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಜಾಗದಲ್ಲಿ ಹಾಡು ಹಾಕಿ ಡ್ಯಾನ್ಸ್ ಮಾಡುತ್ತಿದ್ದ. ಮಧ್ಯರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಯುವಕನ ತಾಯಿ ಹಾಗೂ ಸಹೋದರ ಬೈದು ಬುದ್ಧಿ ಹೇಳಿದ್ದಾರೆ. ಡ್ಯಾನ್ಸ್ ಮಾಡಿದ್ದು ಸಾಕು ಮನೆಗೆ ಬಾ ಎಂದು ಕರೆದಿದ್ದಾರೆ. ಇದರಿಂದ ಮನನೊಂದ ಯುವಕ ಗ್ರಾಮದ ಹೊರವಲಯದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗುತ್ತಿದ್ದ ಗ್ರಾಮಸ್ಥರು ಮರದಲ್ಲಿ ನೇತಾಡುತ್ತಿದ್ದ ಯುವಕನ ಶವ ಕಂಡು ಮನೆಯವರಿಗೆ ತಿಳಿಸಿದ್ದಾರೆ. ಪೇರೆಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.