ಒಳ್ಳೆಯ ಮಗಳು ಒಳ್ಳೆಯ ಸೊಸೆ ಕೂಡ ಆಗಬಹುದು ಅಲ್ವಾ?
- ರಾಜೇಂದ್ರ ಭಟ್ ಕೆ.
ಮಾನವೀಯ ಸಂಬಂಧಗಳಲ್ಲಿ (Human Relationship) ನನಗೆ ಅತೀ ಹೆಚ್ಚು ಸಂಕೀರ್ಣ ಅನ್ನಿಸುವುದು ಅತ್ತೆ (mother in law) ಮತ್ತು ಸೊಸೆಯರ (daughter in law) ಸಂಬಂಧ. ಮೊನ್ನೆ ಮೊನ್ನೆಯವರೆಗೂ ಒಳ್ಳೆಯ ತಾಯಿ ಆಗಿದ್ದಾಕೆ ಮಗ ಮದುವೆಯಾಗಿ ಸೊಸೆಯನ್ನು ಮನೆ ತುಂಬಿಸಿಕೊಂಡ ನಂತರ ಒಳ್ಳೆಯ ಅತ್ತೆ ಆಗಬಹುದು ಅಲ್ವಾ? ಯಾವುದೋ ಮನೆಯಲ್ಲಿ ಒಳ್ಳೆಯ ಮಗಳು ಆಗಿದ್ದ ಹುಡುಗಿಯು ಗಂಡನ ಮನೆಗೆ ಬಂದಾಗ ಒಳ್ಳೆಯ ಸೊಸೆ ಕೂಡ ಆಗಲು ಏನು ತೊಂದರೆ?
ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ತುಂಬಾ ಸುಧಾರಣೆ ಆಗಿವೆ. 70-80ರ ದಶಕಗಳ ಯಾವುದೇ ಭಾಷೆಯ ಸಿನಿಮಾ ನೋಡಿದವರಿಗೆ ಕಣ್ಣಿಗೆ ರಾಚುವ ದೃಶ್ಯಗಳು ಅಂದರೆ ಅತ್ತೆ ಮತ್ತು ಸೊಸೆಯರ ವೈರುಧ್ಯದ ಸಂಬಂಧಗಳೇ ಎನ್ನಬಹುದು. ಕನ್ನಡದಲ್ಲಿ ಲೀಲಾವತಿ, ರಮಾದೇವಿ ಮೊದಲಾದವರು ಅತ್ತೆಯಾಗಿ ಘರ್ಜನೆ ಮಾಡಿದರೆ, ಕಣ್ಣೀರು ಸುರಿಸಲು ಆರತಿ, ಕಲ್ಪನಾ, ಗೀತಾ, ಭಾರತಿ ಮೊದಲಾದ ಅಳು ಮುಂಜಿಯರು ಇದ್ದರು. ಸಿನೆಮಾಗಳು ಆಗಿನ ಕಾಲದ ಸಮಾಜದ ಪ್ರತಿಬಿಂಬ ಎಂದೇ ಭಾವಿಸಿಕೊಂಡ ನಮಗೆ ಆ ರೀತಿಯ ದೃಶ್ಯಗಳು ಹಲವು ಕುಟುಂಬಗಳಲ್ಲಿ ಕೂಡ ಕಂಡು ಬರುತ್ತಿದ್ದವು!
ಬಹಿರಂಗವಾಗಿ ರಚ್ಚೆ ಹಿಡಿದು ಹೊಡೆದಾಡಿಕೊಂಡ ಅತ್ತೆ ಸೊಸೆಯರ ಪ್ರಕರಣಗಳು ಕೂಡ ಇದ್ದವು. ಕೋರ್ಟು ಕಟ್ಟೆ ಹತ್ತಿದ ಪ್ರಕರಣಗಳು ಕೂಡ ಇದ್ದವು. ಈ ಜಗಳ ಬಂದಾಗ ಯಾರ ಪಕ್ಷ ವಹಿಸಬೇಕು ಎಂದು ಗೊತ್ತಾಗದೆ ಪಡಿಪಾಟಲು ಪಡುವ ಮಗನ ಕಷ್ಟ ದೇವರಿಗೇ ಪ್ರೀತಿ ಎಂಬಂತೆ ಆಗಿತ್ತು! ಅಂತಿಮವಾಗಿ ಕುಟುಂಬಗಳು ಒಡೆದು ಹೋಗುವ ಮಟ್ಟಕ್ಕೆ ಈ ಅತ್ತೆ ಸೊಸೆ ಪ್ರಕರಣಗಳು ಮುಂದುವರೆಯುತ್ತಿದ್ದವು.
ಒಳ್ಳೆಯ ಅತ್ತೆ ಮತ್ತು ಒಳ್ಳೆಯ ಸೊಸೆಯರು ಆಗಿನ ಕಾಲದಲ್ಲಿಯೂ ಇದ್ದರು.
ಎಲ್ಲರ ಮನೆಯ ದೋಸೆಯೂ ತೂತು, ಕೆಲವರದ್ದು ಕಾವಲಿಯೇ ತೂತು!
ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧಗಳು ಸ್ವಲ್ಪ ಸುಧಾರಣೆ ಆಗಿವೆ ಎಂದು ನನಗೆ ಅನ್ನಿಸುತ್ತದೆ. ಆದರೆ ಆಳಕ್ಕೆ ಹೋದಂತೆ ಕೆಲವು ಮನೆಗಳಲ್ಲಿ ಅಸಮಾಧಾನದ ಹೊಗೆಯು ಇದ್ದೇ ಇರುತ್ತದೆ. ಯಾವುದೇ ಅತ್ತೆಯನ್ನು ಅಂತರಂಗದ ಚರ್ಚೆಗೆ ಎಳೆದರೆ 70% ಅತ್ತೆಯರು ತಮ್ಮ ಸೊಸೆಯರ ಬಗ್ಗೆ ಆರೋಪಗಳ ಮಳೆಯನ್ನು ಸುರಿಸುತ್ತಾರೆ. ನನ್ನ ಮಗ ನನ್ನ ಸೆರಗು ಹಿಡಿದುಕೊಂಡು ಮೊನ್ನೆ ಮೊನ್ನೆಯವರೆಗೂ ಓಡಾಡುತ್ತಿದ್ದ, ಆ ಮಿಟುಕಲಾಡಿ ಬಂದ ನಂತರ ಏನು ಮಾಟ ಮಾಡಿದಳೋ ಏನೋ, ಈಗ ಪೂರ್ತಿ ಬದಲಾಗಿದ್ದಾನೆ. ಯಾವಾಗ ನೋಡಿದರೂ ಅವಳದ್ದೇ ಧ್ಯಾನ. ಇದನ್ನೆಲ್ಲ ನೋಡಲು ನಾನು ಬದುಕಿರಬೇಕಿತ್ತಾ? ಎಂದು ಬಿಸಿ ಶ್ವಾಸ ಹೊರಹಾಕುತ್ತಾರೆ.
ಇಂತಹ ವಿಷಯದಲ್ಲಿ ಸೊಸೆಯರೂ ಅಷ್ಟೇ, ತಮ್ಮ ಅತ್ತೆಯರ ಬಗ್ಗೆ 70% ಸೊಸೆಯರು ಮಾಡುವ ಆರೋಪಗಳನ್ನು ಸ್ವಲ್ಪ ಗಮನಿಸಿ – ನಾನು ಅಮ್ಮನ ಮನೆಯಲ್ಲಿ ರಾಜಕುಮಾರಿಯ ಹಾಗೆ ಇದ್ದೆ. ಇಲ್ಲಿ ಎಲ್ಲವನ್ನೂ ಆ ಅತ್ತೆಯನ್ನು ಕೇಳಿಯೇ ಮಾಡಬೇಕು! ಕೈ ಹಿಡಿದ ಗಂಡನನ್ನು ನಂಬಿಕೊಂಡು ಈ ಮನೆಗೆ ಬಂದೆ. ಅವನೂ ತಾಯಿಯ ಮುಂದೆ ಒಂದಕ್ಷರ ಮಾತಾಡುವುದಿಲ್ಲ. ನಾವೆಲ್ಲರೂ ಈ ಮಾಡರ್ನ್ ಕಾಲದವರು. ನಮ್ಮ ಮತ್ತು ಅವರ ನಡುವೆ ಒಂದು ದೊಡ್ಡ ಜನರೇಶನ್ ಗ್ಯಾಪ್ ಇದೆ. ನಮ್ಮ ಭಾವನೆಗಳೇ ಯಾರಿಗೂ ಅರ್ಥ ಆಗೋದಿಲ್ಲ ಎಂದು ಮೂಗು ಮುರಿಯುತ್ತಾರೆ!
ಬದಲಾವಣೆ ಆಗಬೇಕಾದದ್ದು ಇಬ್ಬರ ಮೈಂಡ್ ಸೆಟ್
ಅತ್ತೆ ಮತ್ತು ಸೊಸೆ ಇಬ್ಬರೂ ಸ್ವಲ್ಪ ಬ್ರಾಡ್ ಆಗಿ ಯೋಚನೆ ಮಾಡಿದರೆ ಈ ಸಮಸ್ಯೆಗಳು ನೂರಕ್ಕೆ ನೂರು ಪರಿಹಾರ ಆಗುತ್ತವೆ. ಅತ್ತೆಯು ಸ್ವಲ್ಪ ಹೊತ್ತು ಸೊಸೆಯ ಪ್ಲೇಸಲ್ಲಿ ಕೂತು ಯೋಚನೆ ಮಾಡಿದರೆ, ಹಾಗೆಯೇ ಸೊಸೆ ಅತ್ತೆಯ ಪ್ಲೇಸಲ್ಲಿ ಕುಳಿತು ಯೋಚನೆ ಮಾಡಲು ಸಾಧ್ಯವಾದರೆ…? ಈ ಗುಣಕ್ಕೆ ಎಂಪಥಿ ( Empathy) ಎನ್ನುತ್ತೇವೆ.
ಅತ್ತೆಯ ಯೋಚನೆ ಹೀಗಿರಲಿ….
ನಾನು ಒಂದು ಕಾಲದಲ್ಲಿ ಸೊಸೆಯಾಗಿ ಈ ಮನೆಗೆ ಬಂದಿದ್ದೆ. ಆಗ ನನಗೂ, ನನ್ನ ಗಂಡನಿಗೂ ಏಕಾಂತ ಬೇಕಿತ್ತು. ನನಗೂ ಆಗ ಗಂಡನ ಪ್ರೀತಿಯೇ ಸರ್ವಸ್ವ ಆಗಿತ್ತು. ಹಾಗೆಯೇ ಸೊಸೆಯು ಹೊಸದಾಗಿ ಮದುವೆ ಆಗಿ ನಮ್ಮ ಮನೆಗೆ ಬಂದಿದ್ದಾಳೆ.ಆಕೆಗೂ ಇದು ಹೊಸ ಪರಿಸರ. ಹೊಸ ಮನೆ. ಹೊಂದಿಕೊಳ್ಳಲು ಸ್ವಲ್ಪ ಸಮಯ ಆಕೆಗೆ ಬೇಕು. ನಾವು ಕೊಡಬೇಕು ಅಲ್ವಾ?
ನನ್ನ ಮಗರಾಯ ಮದುವೆಗೆ ಮೊದಲು ಮನೆಯೊಳಗೆ ಬಂದ ಕೂಡಲೇ ಅಮ್ಮಾ ಎಂದು ಕರೆಯುತ್ತಿದ್ದ. ನಾನೇ ಅವನಿಗೆ ಊಟ ಬಡಿಸಬೇಕಿತ್ತು. ಈಗ ಮನೆಯೊಳಗೆ ಬಂದ ಕೂಡಲೇ ಇವಳೇ ಎಂದು ಕರೆಯುತ್ತಾನೆ. ಊಟ ಅವಳೇ ಬಡಿಸಬೇಕು. ಅದರಲ್ಲಿ ಏನು ತಪ್ಪು?
ಅವರೇ ಅಲ್ವಾ ಜೀವನಪೂರ್ತಿ ಬದುಕಬೇಕಾದವರು. ಅವರಿಗೂ ಏಕಾಂತ ಬೇಕು ಅಲ್ವಾ? ನಾನ್ಯಾಕೆ ಅವರ ಏಕಾಂತದ ನಡುವೆ ಹೋಗಬೇಕು? ನನ್ನ ಮಗಳು ಗಂಡನ ಮನೆಯಲ್ಲಿ ಮಹಾರಾಣಿ ಆಗಿರಬೇಕು ಎಂದು ನಾನು ಆಸೆ ಪಡುತ್ತೇನೆ. ಹಾಗೇ ಅಲ್ವಾ ನನ್ನ ಸೊಸೆ? ಅವಳನ್ನು ಮಗಳಾಗಿ ನೋಡಲು ನಾನು ಪ್ರಯತ್ನ ಪಟ್ಟರೆ ಅವಳೂ ನನ್ನನ್ನು ಪ್ರೀತಿ ಮಾಡ್ತಾಳೆ.
ಸೊಸೆ ಈ ರೀತಿ ಯೋಚನೆ ಮಾಡಿದರೆ ಒಳ್ಳೇದು.
ನನ್ನ ಅತ್ತೆ ತನ್ನ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದಾರೆ. ಆರೈಕೆ ಮಾಡಿದ್ದಾರೆ. ಶಿಕ್ಷಣ ಕೊಡಿಸಿದ್ದಾರೆ. ನಾನು ನಿನ್ನೆ ಮೊನ್ನೆ ಈ ಮನೆಗೆ ಬಂದವಳು. ನನ್ನ ಗಂಡನ ಮೇಲೆ ಅತ್ತೆಗೆ ಕೂಡ ಅಧಿಕಾರ ಇದೆ ಅಲ್ವಾ? ಹಾಗಿರುವಾಗ ನಾನು ಯಾಕೆ ಅತ್ತೆ ಮತ್ತು ನನ್ನ ಗಂಡನನ್ನು ದೂರ ಮಾಡಲಿ? ಮನೆಯ ಯಜಮಾನಿ ಅತ್ತೆಯೇ ಆಗಿರಲಿ. ಬೀಗದ ಕೈ ಅವರೇ ಇಟ್ಟುಕೊಳ್ಳಲಿ. ನಾನು ಒಳ್ಳೆಯ ಮಗಳಾಗಿ ಇದ್ದ ಹಾಗೆ ಒಳ್ಳೆಯ ಸೊಸೆ ಕೂಡ ಆಗಬೇಕು. ಇನ್ನು ಮುಂದೆ ಇದು ನನ್ನದೇ ಮನೆ. ಈ ಮನೆಗೆ ಸಂಬಂಧ ಪಟ್ಟವರು ಎಲ್ಲರೂ ನನ್ನವರು. ಇದನ್ನು ನಾನು ಯಾಕೆ ಒಡೆಯಬೇಕು? ನನಗೆ ಎಲ್ಲರ ಪ್ರೀತಿಯೂ ದೊರಕಲಿ ಅಲ್ವಾ? ನನ್ನ ಗಂಡನಿಗೆ ನಾನು ಸಂದಿಗ್ಧಗಳನ್ನು ಕ್ರಿಯೇಟ್ ಮಾಡಬಾರದು.
ಭರತವಾಕ್ಯ – ಇಂದಿಗೂ ತನ್ನ ಸೊಸೆಯನ್ನು ಮಗಳ ಹಾಗೆ ನೋಡುವ ಅತ್ತೆಯರು ಸಾಕಷ್ಟು ಮಂದಿ ಇದ್ದಾರೆ. ತನ್ನ ಅತ್ತೆಯಲ್ಲಿ ತಾಯಿಯನ್ನು ಕಾಣುವ, ಹಾಗೆ ನೋಡಿಕೊಳ್ಳುವ ಸೊಸೆಯರು ಇದ್ದಾರೆ. ತಾಯಿ ಮತ್ತು ಹೆಂಡತಿಯ ಪ್ರೀತಿಯನ್ನು ಚಂದವಾಗಿ ಬ್ಯಾಲೆನ್ಸ್ ಮಾಡಲು ಕಲಿತಿರುವ ಮಗನೂ ಇರುತ್ತಾರೆ. ಅವರಿಗೆಲ್ಲಾ ನನ್ನ ಅಭಿನಂದನೆಗಳು.
ಈ ಬರಹ ಓದಿ: ಸ್ಫೂರ್ತಿಪಥ ಅಂಕಣ: Lata Mangeshkar: ಈ ಕುಟುಂಬ ಸಮರ್ಪಣೆ ಮಾಡಿದ್ದು ಒಂದು ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು!