Saturday, 23rd November 2024

Shashidhara Halady Special Column: ಸಾವಿರಾರು ಮಿಣುಕುಗಳು ಪರಿಸರದ ಬೆಳಕುಗಳು !

ಶಶಿಧರ ಹಾಲಾಡಿ

ಜೀವಜಗತ್ತಿನ ಅತ್ಯಪೂರ್ವ ವಿದ್ಯಮಾನ ಎನಿಸಿರುವ ‘ದೇಹದಲ್ಲಿ ಬೆಳಕನ್ನು ಉತ್ಪಾದಿಸುವ’ ಕ್ರಿಯೆಯನ್ನು
ತಮ್ಮ ಬದುಕಿನ ಅಂಗವಾಗಿರಿಸಿಕೊಂಡಿರುವ ಮಿಣುಕು ಹುಳಗಳ ಜೀವನದ ಕುರಿತಾದ ಆಕರ್ಷಕ ಛಾಯಾ ಚಿತ್ರಗಳ ಪ್ರದರ್ಶನವು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಸೆಪ್ಟೆಂಬರ್ 15ರ ತನಕ ನಡೆಯುತ್ತಿದೆ.

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಅಂಗವಾಗಿ, ಅವರನ್ನು ನೆನಪಿಸಿಕೊಂಡು, ಒಂದು ಅಪರೂಪದ
ಛಾಯಾಚಿತ್ರ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಈಗ ನಡೆಯುತ್ತಿದೆ. ಸೆಪ್ಟೆಂಬರ್ 8 ರಿಂದ 15ರ ತನಕ ಪ್ರತಿದಿನ ನಡೆಯುತ್ತಿರುವ ಈ ಪ್ರದರ್ಶನದ ಮುಖ್ಯ ಥೀಂ ‘ಮಿಣುಕು ಹುಳ’ಗಳು! ಆದ್ದರಿಂದಲೇ ಈ ಪ್ರದರ್ಶನದ ಹೆಸರು ‘ಮಿಣುಕು ಲೋಕ’.

ಮೂಡಿಗೆರೆಯ ಹ್ಯಾಂಡ್‌ಪೋಸ್ಟ್ ಹತ್ತಿರದ ಕಾಡು ಪ್ರದೇಶದ ಅಂಚಿನಲ್ಲಿ ಮನೆ ಮಾಡಿಕೊಂಡಿದ್ದ ತೇಜಸ್ವಿಯವರು, 1970ರ ದಶಕದಲ್ಲೇ ಅಲ್ಲಿನ ನಿಸರ್ಗ ವ್ಯಾಪಾರಗಳನ್ನು ಕಂಡು ಆಶ್ಚರ್ಯಪಟ್ಟವರು. ಸಂಜೆಯಾದ ತಕ್ಷಣ ಮನೆಯ ಸುತ್ತಲೂ ಹಾರಾಡುವ ಸಾವಿರಾರು ಮಿಣುಕು ಹುಳಗಳನ್ನು ಕಂಡು ಅವರು ಬೆರಗಾಗಿರಲೇಬೇಕು!

ಮನೆ ಎದುರಿನ ನೆಲದಲ್ಲೂ ಬೆಳಕು ಬೀರುವ ಮಿಣುಕುಹುಳಗಳು (ಲಾರ್ವಾ, ಹೆಣ್ಣು ಮಿಣುಕು ಹುಳ), ಮನೆ ಸುತ್ತಲಿನ ಆಗಸದಲ್ಲೂ ಹಾರುತ್ತಾ ಬೆಳಕು ಬೀರುವ ಮಿಣುಕು ಹುಳಗಳು (ಗಂಡು)! ತಕ್ಷಣ ಅವರು ಮಾಡಿದ ಕೆಲಸ ವೆಂದರೆ, ಆ ಮಿಣುಕುಹುಳಗಳ ಫೋಟೋ ತೆಗೆಯುವುದು. ಆದರೆ ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ
(ಗಮನಿಸಿ : ಇದು ೧೯೭೦ರ ದಶಕದಲ್ಲಿ). ಏಕೆಂದರೆ, ಫ್ಲ್ಯಾಶ್ ಹಾಕಿ ಚಿತ್ರಿಸಿದರೆ, ಮಿಣುಕು ಹುಳಗಳ ಬೆಳಕು ಕಾಣಿಸು ವುದಿಲ್ಲ. ಸುಮ್ಮನೆ ಕ್ಲಿಕ್ ಮಾಡಿದರೆ, ಕತ್ತಲಿನಲ್ಲಿ ಅವುಗಳ ಚಿತ್ರ ಮೂಡಿಬರುವುದಿಲ್ಲ.

ಆದರೆ ತೇಜಸ್ವಿಯವರು ಈ ವಿಚಾರದಲ್ಲಿ ಸಾಹಸಿ : ಲಾಂಗ್ ಎಕ್ಸ್‌ಪೋಷರ್ ಮೊದಲಾದ ಪ್ರಯೋಗಗಳನ್ನು ಮಾಡಿ, ಹತ್ತಾರು ಚಿತ್ರಗಳನ್ನು ಕ್ಲಿಕ್ ಮಾಡಿ, ಟ್ರಯಲ್ ಅಂಡ್ ಎರರ್ ವಿಧಾನದಲ್ಲಿ, ಕೊನೆಗೂ ಮಿಣುಕು ಹುಳಗಳ ಚಿತ್ರ ಗಳನ್ನು ಕ್ಲಿಕ್ಕಿಸಿದರು. ಆಗ, ಪ್ರಿಂಟ್ ಹಾಕುವ ಕಾಲ, ಡಿಜಿಟಲ್ ಕ್ಯಾಮೆರಾಗಳು ಇಲ್ಲದ, ರೋಲ್ ಫಿಲಂ ಕಾಲ. ಆ ಕಾಡಿನಲ್ಲಿ ಕುಳಿತು, ಮಿಣುಕು ಹುಳಗಳನ್ನು ಪ್ರಿಂಟ್ ಮೂಲಕ ಛಾಯಾಚಿತ್ರಕ್ಕೆ ಇಳಿಸಲು ಅವರು ಎಷ್ಟು ರೋಲ್
ಖಾಲಿ ಮಾಡಿದ್ದರೋ ಏನೊ!

ತೇಜಸ್ವಿ ಕ್ಲಿಕ್ಕಿಸಿದ ಚಿತ್ರಗಳು

ಮಿಣುಕು ಹುಳಗಳ ಕುರಿತು ತೇಜಸ್ವಿಯವರು ಒಂದು ಲೇಖನವನ್ನೂ ಬರೆದರು; ತುಷಾರ ಮಾಸಪತ್ರಿಕೆಯಲ್ಲಿ ಅದು ಪ್ರಕಟಗೊಂಡಿತು. ‘ಮಿಣುಕು ಹುಳಗಳ ಲಭ್ಯ ಬೆಳಕಿನಲ್ಲಿ ಚಿತ್ರಿಸಿದ ಚಿತ್ರಗಳಿವು’ ಎಂಬ ವಿವರಣೆಯೊಂದಿಗೆ, ಆ
ಬರಹದ ಜತೆಯಲ್ಲಿ ನಾಲ್ಕಾರು ಫೋಟೋಗಳು ಮುದ್ರಣಗೊಂಡಿದ್ದವು. ಅದನ್ನು ಕಂಡು, ಪರಿಸರಾಸಕ್ತರು, ಛಾಯಾ ಚಿತ್ರಗ್ರಾಹಕರು ಅಕ್ಷರಶಃ ಬೆರಗಾದರು. ಕನ್ನಡ ಪತ್ರಿಕೆಯೊಂದರಲ್ಲಿ ಮೊದಲ ಬಾರಿ ಮಿಣುಕು ಹುಳಗಳ ಫೋಟೋ ಗಳು, ಅವುಗಳ ಲಭ್ಯ ಬೆಳಕಿನಲ್ಲಿ ಚಿತ್ರಣಗೊಂಡು, ಪ್ರಕಟಗೊಂಡಿದ್ದವು. ಆ ಅಪರೂಪದ ಲೇಖನವು ನಂತರ, ಅವರ ‘ಮಾಯೆಯ ಮುಖಗಳು’ ಸಂಕಲನದಲ್ಲೂ ಅಡಕಗೊಂಡಿದೆ.

ಆದ್ದರಿಂದಲೇ, ಈಗ ನಡೆಯುತ್ತಿರುವ ಮಿಣುಕುಹುಳಗಳ ಛಾಯಾಚಿತ್ರ ಪ್ರದರ್ಶನಕ್ಕೆ ‘ಮಿಣುಕು ಲೋಕ’ ಎಂದು ಹೆಸರಿಸಿ, ತೇಜಸ್ವಿಯರ ಫೋಟೋದೊಂದಿಗೆ ಪ್ರದರ್ಶಿಸಿರುವುದು ಅರ್ಥಪೂರ್ಣ.

ಚಿತ್ರಕಲಾಪರಿಷತ್‌ನ ನಾಲ್ಕು ವಿಶಾಲ ಹಾಲ್‌ನಲ್ಲಿ, ದೊಡ್ಡ ಗಾತ್ರದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದ್ದು, ಎಲ್ಲಾ ಚಿತ್ರಗಳು ಮಿಣುಕುಹುಳಗಳ ಮಾಯಾಲೋಕವನ್ನೇ ತೆರೆದಿಡುತ್ತವೆ. ಮಿಣುಕು
ಹುಳಗಳ ಲಾರ್ವಾ, ಹೆಣ್ಣು ಹುಳ (ಇದು ಹಾರಲಾರದು), ಗಂಡು ಹುಳ (ಇದು ಹಾರಾಡುತ್ತಾ ತನ್ನ ಹಿಂಭಾಗದಲ್ಲಿ ಬೆಳಕು ಮಾಡುತ್ತದೆ), ಮರದ ಮೇಲೆ ಕುಳಿತ ಸಾವಿರಾರು ಮಿಣುಕು ಹುಳಗಳು ನಡೆಸುವ ‘ಬೆಳಕಿನ ಪರಿಷೆ’ ಇವೆಲ್ಲಾ ವಿದ್ಯಮಾನಗಳನ್ನು ಇಲ್ಲಿನ ಛಾಯಾಚಿತ್ರಗಳು ಸೆರೆಹಿಡಿದಿವೆ. ದೊಡ್ಡಗಾತ್ರದ, ಗುಣಮಟ್ಟದ ವರ್ಣಮಯ ಚಿತ್ರಗಳು, ಮಿಣುಕುಹುಳಗಳ ಜಗತ್ತನ್ನೇ ನಮ್ಮೆದುರು ತೆರೆದಿಡುತ್ತವೆ.

ಒಂದು ಅದ್ಭುತ ಅನುಭವ

ಇಲ್ಲಿನ ಛಾಯಾಚಿತ್ರಗಳನ್ನು ಗಮನವಿಟ್ಟು ನೋಡಿದ ವಿದ್ಯಾರ್ಥಿಯಾಗಲೀ, ಸಾರ್ವಜನಿಕರಾಗಲೀ, ಮಿಣುಕುಹುಳ ಗಳ ಜೀವನಕ್ರಮವನ್ನು ತಿಳಿದುಕೊಳ್ಳಲು ಸಾಧ್ಯ ಮತ್ತು ಅದೊಂದು ಅದ್ಭುತ ಎನಿಸುವ ಅನುಭವ. ಏಕೆಂದರೆ, ಈ ಜಗತ್ತಿನಲ್ಲಿ ಬೆಳಕನ್ನು ಉತ್ಪತ್ತಿ ಮಾಡುವ ಕೆಲವೇ ಕೆಲವು ಜೀವಿಗಳಲ್ಲಿ ಮಿಣುಕುಹುಳ ಸೇರಿದೆ. ಜತೆಗೆ, ಅದು ನಮ್ಮ ನಿಮ್ಮ ಮನೆಯ ಸುತ್ತಲೂ, ಮಳೆಗಾಲದ ಆರಂಭದಲ್ಲಿ ಹಾರಾಡುತ್ತಿರುತ್ತದೆ!

ಆಧುನಿಕ ಮಾನವನ ಜೀವನ ಶೈಲಿಯಿಂದಾಗಿ (ಪ್ರಖರ ಬೆಳಕು, ಎಲ್‌ಇಡಿ, ಕೀಟನಾಶಕಗಳ ಬಳಕೆ, ಗಿಡಮರಗಳ ನಾಶ ಇತ್ಯಾದಿ) ಮಿಣುಕು ಹುಳಗಳ ಬದುಕು ಸ್ವಲ್ಪ ಕಷ್ಟಕ್ಕೆ ಸಿಲುಕಿದೆ; ಮಿಣುಕು ಹುಳಗಳು ಸಂತಾನೋತ್ಪತ್ತಿ
ಮಾಡಲು, ಗಂಡು ಮತ್ತು ಹೆಣ್ಣು ಪರಸ್ಪರ ಗುರುತಿಸಿಕೊಳ್ಳಲು ಅವು ಬೆಳಕನ್ನು ಉತ್ಪತ್ತಿ ಮಾಡುತ್ತವೆ. ಆದರೆ ಆಧುನಿಕ ಮಾನವನು ಸುತ್ತಲೂ ಬೆಳಗುತ್ತಿರುವ ಪ್ರಖರ ಬೆಳಕಿನಿಂದಾಗಿ, ಅವುಗಳ ದಾರಿ ತಪ್ಪುತ್ತಿದೆ! ಲಕ್ಷಾಂತರ ವರ್ಷಗಳಿಂದ ಅವು ಅನುಸರಿಸಿದ್ದ ಬೆಳಕಿನ ಭಾಷೆಗೆ, ಮನುಷ್ಯನ ವಿದ್ಯುತ್ ಬೆಳಕು ಕಂಟಕ ಎನಿಸಿದೆ.

ಜತೆಗೆ, ಕೀಟನಾಶಕಗಳ ಬಳಕೆಯಿಂದಾಗಿ, ಅವುಗಳ ಲಾರ್ವಾಗಳು ಅಪಾರ ಸಂಖ್ಯೆಯಲ್ಲಿ ಸಾಯುತ್ತಿವೆ. ದೇಹದಲ್ಲಿ ಬೆಳಕು ಉತ್ಪತ್ತಿ ಮಾಡುವ ಅಪೂರ್ವ ಶಕ್ತಿ ಹೊಂದಿರುವ ಮಿಣುಕು ಹುಳಗಳ ಬದುಕೇ ಒಂದು ವಿಸ್ಮಯ. ಇವುಗಳನ್ನು ರಕ್ಷಿಸಿದರೆ, ನಮ್ಮ ಪರಿಸರವನ್ನು ನಾವು ರಕ್ಷಿಸಿಕೊಂಡಂತೆ. ಸೆಪ್ಟೆಂಬರ್ 15ರ ತನಕ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಈ ಛಾಯಾಚಿತ್ರ ಪ್ರದರ್ಶನವು, ತೇಜಸ್ವಿಯವರನ್ನು ನೆನಪು ಮಾಡಿ ಕೊಳ್ಳುತ್ತಲೇ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಅಪೂರ್ವ ಮಾಹಿತಿಯನ್ನು, ಅಪರೂಪದ ಲೋಕವನ್ನುಪರಿಚ ಯಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.