Thursday, 19th September 2024

Chinese garlic: ಸಿಮೆಂಟ್ ಬೆಳ್ಳುಳ್ಳಿ ಆಯಿತು, ಈಗ ಮೇಡ್‌ ಇನ್‌ ಚೀನಾ ಬೆಳ್ಳುಳ್ಳಿಯ ಹಾವಳಿ!

Chinese Garlic

ಭಾರತೀಯರ ಬಹುತೇಕ ನಿತ್ಯದ ಖಾದ್ಯಗಳಲ್ಲಿ ಬಳಕೆಯಾಗುವ ಬೆಳ್ಳುಳ್ಳಿ (garlic) ಆರೋಗ್ಯಕರ (healthy) ಗುಣಗಳನ್ನು ಹೊಂದಿದೆ. ಆದರೆ ಇದರ ಬಳಕೆಗೂ ಈಗ ಆತಂಕ ಶುರುವಾಗಿದೆ. ಯಾಕೆಂದರೆ ಇತ್ತೀಚೆಗೆಷ್ಟೇ ಸಿಮೆಂಟ್ ಬೆಳ್ಳುಳ್ಳಿ (cement garlic) ಪತ್ತೆಯಾಗಿ ಸಾಮಾಜಿಕ ಜಾಲತಾಣದಲ್ಲಿ (social media) ಭಾರಿ ಚರ್ಚೆಯ ಸಂಗತಿಯಾಗಿತ್ತು. ಈ ನಡುವೆ ಇದೀಗ ಆತಂಕ ಹೆಚ್ಚು ಮಾಡುವ ವಿಷಯವೆಂದರೆ ಭಾರತೀಯ ಮಾರುಕಟ್ಟೆಗೆ (Indian market) ಈಗ ನಿಷೇಧಿತ ಚೀನಿ ಬೆಳ್ಳುಳ್ಳಿ (Chinese garlic) ಕಾಲಿಟ್ಟಿದೆ.

ನಿಷೇಧಿತ ಚೈನೀಸ್ ಬೆಳ್ಳುಳ್ಳಿ ಭಾರತಕ್ಕೆ ಕಾಲಿಟ್ಟಿರುವುದಕ್ಕೆ ಗುಜರಾತ್ ನಲ್ಲಿ ವ್ಯಾಪಾರಿಗಳು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಸ್ಥಳೀಯ ಬೆಳ್ಳುಳ್ಳಿಗಿಂತ ಭಿನ್ನವಾಗಿರುವ ಈ ಬೆಳ್ಳುಳ್ಳಿ ಸೌಮ್ಯವಾದ ಪರಿಮಳ ಹೊಂದಿದ್ದು, ಭಾರೀ ಪ್ರಮಾಣದ ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ಬೆಳೆಯಲಾಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ಬೆಳ್ಳುಳ್ಳಿಯನ್ನು “ಮಾಂತ್ರಿಕ ಮಸಾಲೆ” ಎಂದು ಕರೆಯಲಾಗುತ್ತದೆ. ಇದು ಖಾದ್ಯದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶಾದ್ಯಂತ ಇದನ್ನು ಬೆಳೆಯಲಾಗುತ್ತಿದೆ.

ಬೆಳ್ಳುಳ್ಳಿಯ ಉತ್ಪಾದನೆಯಲ್ಲಿ ಚೀನಾ ವಿಶ್ವದ ಅತಿ ದೊಡ್ಡ ಉತ್ಪಾದಕ ದೇಶವಾಗಿದೆ. ಆದರೆ 2014ರಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಚೀನಾದ ಬೆಳ್ಳುಳ್ಳಿ ನಿರಂತರವಾಗಿ ಇನ್ನೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.

ಗುಜರಾತ್‌ನ ರಾಜ್‌ಕೋಟ್‌ನ ಗೊಂಡಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿಯಲ್ಲಿ (ಎಪಿಎಂಸಿ) ಇತ್ತೀಚೆಗೆ ಚೀನಾದ ಬೆಳ್ಳುಳ್ಳಿಯ ಚೀಲಗಳು ಪತ್ತೆಯಾಗಿತ್ತು. ಬಳಿಕ ವ್ಯಾಪಾರಿಗಳು ಪ್ರತಿಭಟನೆ ನಡೆಸಿ, ನಿಷೇಧದ ಹೊರತಾಗಿಯೂ ಚೀನಾದ ಬೆಳ್ಳುಳ್ಳಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿರುವುದನ್ನು ವಿರೋಧಿಸಿದರು.

ದೇಶಿಯ ಬೆಳ್ಳುಳ್ಳಿಗಿಂತ ಹೇಗೆ ಭಿನ್ನ ?

ಚೀನಾದ ಬೆಳ್ಳುಳ್ಳಿಯು ಗಾತ್ರ ಮತ್ತು ವಾಸನೆಯಲ್ಲಿ ಭಾರತೀಯ ಬೆಳ್ಳುಳ್ಳಿಗಿಂತ ಭಿನ್ನವಾಗಿದೆ. ಇದು ನೈಜ್ಯ ಬೆಳ್ಳುಳ್ಳಿಯಂತೆ ಹೆಚ್ಚು ಕಟು ವಾಸನೆಯನ್ನು ಹೊಂದಿರುವುದಿಲ್ಲ. ತಿಳಿ ಬಿಳಿ ಮತ್ತು ಗುಲಾಬಿ ಬಣ್ಣದಲ್ಲಿ ಇರುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಇದನ್ನು ರಾಸಾಯನಿಕ, ಕೀಟನಾಶಕಗಳನ್ನು ಬಳಸಿ ಬೆಳೆಯಲಾಗುತ್ತದೆ.

ದೇಶಿಯ ಬೆಳ್ಳುಳ್ಳಿ ಹೇಗಿರುತ್ತದೆ?

ಭಾರತೀಯ ಬೆಳ್ಳುಳ್ಳಿಯನ್ನು ಕನಿಷ್ಠ ರಾಸಾಯನಿಕವನ್ನು ಬಳಸಿ ಬೆಳೆಯಲಾಗುತ್ತದೆ ಮತ್ತು ಇದು ಬಳಕೆಗೆ ಸುರಕ್ಷಿತವಾಗಿದೆ. ನೈಸರ್ಗಿಕವಾದ ಕಟು ವಾಸನೆ ಹೊಂದಿದ್ದು ಮತ್ತು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಹೆಚ್ಚು ಬಿಳಿ ಬಣ್ಣದಲ್ಲೇ ಇರುತ್ತದೆ.

Ayushman Bharat: ಕೇಂದ್ರದ ಆಯುಷ್ಮಾನ್ ಯೋಜನೆ ವಿಸ್ತರಣೆ; ಹಿರಿಯ ನಾಗರಿಕರಿಗೆ ಏನೇನು ಪ್ರಯೋಜನ?

ಆಹಾರ ತಜ್ಞರು ಏನು ಹೇಳುತ್ತಾರೆ ?

ಆಧುನಿಕ ಕೃಷಿ ತಂತ್ರಗಳನ್ನು ಬಳಸಿ ಈಗ ಚೈನೀಸ್ ಬೆಳ್ಳುಳ್ಳಿಯನ್ನೂ ಬೆಳೆಸಲಾಗುತ್ತದೆ. ಇದು ದೇಹಾರೋಗ್ಯಕ್ಕೆ ಸುರಕ್ಷಿತವಲ್ಲ. ಚೈನೀಸ್ ಬೆಳ್ಳುಳ್ಳಿಯು ಹೆಚ್ಚು ರಾಸಾಯನಿಕ ಮತ್ತು ಕೀಟನಾಶಕ ಬಳಸಿ ಬೆಳೆಸುವುದರಿಂದ ಅದರ ಸೇವನೆ ಅಪಾಯಕಾರಿಯಾಗಿದೆ. ಹೀಗಾಗಿ ನೈಸರ್ಗಿಕ ಸುವಾಸನೆಯಿಂದ ತುಂಬಿರುವ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಬಳಕೆಯಿಂದ ದೇಶದಲ್ಲಿ ಬೆಳೆಸಲಾಗಿರುವುದರಿಂದ ಭಾರತೀಯ ಬೆಳ್ಳುಳ್ಳಿಯನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರಾದ ಜಿನಾಲ್ ಪಟೇಲ್.