ಬೆಂಗಳೂರು: ರಾಜ್ಯಾದ್ಯಂತ ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಲಾಗಿದ್ದ ಪಿಎಸ್‌ಐ ಪರೀಕ್ಷೆಯನ್ನು (PSI Exam) ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr. G. Parameshwar) ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪಿಎಸ್‌ಐ ಪರೀಕ್ಷೆ ಮುಂದೂಡಬೇಕು ಎಂಬುದಾಗಿ ಇತ್ತೀಚೆಗಷ್ಟೇ ಬಿಜೆಪಿ ಯುವ ಮೋರ್ಚಾದಿಂದ (BJP yuva morcha) ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜು ಮು ನಿರಾಜು ಸೇರಿದಂತೆ ಪರೀಕ್ಷಾ ಆಕಾಂಕ್ಷಿಗಳು ಇತ್ತೀಚೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಸದಾಶಿವ ನಗರದ ಸರಕಾರಿ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆಪ್ಟೆಂಬರ್ 28ರಂದು ಶನಿವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ನೂರಕ್ಕೂ ಹೆಚ್ಚು ಪಿಎಸ್ ಐ ಆಕಾಂಕ್ಷಿಗಳು ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆ ಸೆ. 22ರಂದು ನಡೆಯಲಿದೆ. ಇವರು ರಾಜ್ಯದಲ್ಲಿ ಸೆ. 22ರಂದು ನಡೆಯಲಿರುವ ಪಿಎಸ್‌ಐ ಪರೀಕ್ಷೆಯನ್ನು ಬರೆಯುವುದು ಅಸಾಧ್ಯವಾಗಿತ್ತು ಎಂದರು.
ಎರಡು ಪರೀಕ್ಷೆಗಳಲ್ಲಿ ಕೇವಲ ಒಂದನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕೆಲವು ಪರೀಕ್ಷಾರ್ಥಿಗಳಿಗೆ ಉಂಟಾಗಿದ್ದರಿಂದ ಅವರಿಗೆ ಅವಕಾಶ ಕೈತಪ್ಪದಂತೆ ಮಾಡುವ ಸಲುವಾಗಿ ಪಿಎಸ್ಐ ಪರೀಕ್ಷೆಯನ್ನು ಮುಂದೂಡುವಂತೆ ಆಕಾಂಕ್ಷಿಗಳು ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಬಿಜೆಪಿಯೂ ಸಹ ಮನವಿ ಮಾಡಿತ್ತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪರೀಕ್ಷಾ ದಿನಾಂಕವನ್ನು ಡಿಸೆಂಬರ್ ವರೆಗೆ ಮುಂದೂಡಲು ಕೆಇಎ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಆದರೆ ಡಿಸೆಂಬರ್‌ವರೆಗೆ ಪರೀಕ್ಷೆ ಮುಂದೂಡುವುದು ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ದಿನಗಳು ಖಾಲಿ ಇಲ್ಲ ಎಂದು ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ಪ್ರಾಥಮಿಕ ಶಿಕ್ಷಣ ಸಚಿವ ಮಂಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ ಸೆಪ್ಟೆಂಬರ್ 28ರಂದು ಶನಿವಾರ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ. ಪರೀಕ್ಷೆ ನಡೆಸಲು ಶಿಕ್ಷಕರು ಬೇಕಾಗುತ್ತದೆ. ಎಲ್ಲ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು ಅನುಕೂಲವಾಗುವ ನಿಟ್ಟಿನಲ್ಲಿ ಸೆ. 28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
KPSC Exam: ಗ್ರೂಪ್-ಬಿ ಹುದ್ದೆಗಳ ನೇಮಕಾತಿ; ಸೆ.14ರ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಈ ಅಭ್ಯರ್ಥಿಗಳಿಗೆ ವಿನಾಯಿತಿ
ಇನ್ನು ಪೊಲೀಸ್ ಪೇದೆ ನೇಮಕಾತಿಗೆ ವಯೋಮಿತಿ ಹೆಚ್ಚಳದ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.