Sunday, 24th November 2024

JDS: ಕಾಣೆಯಾದ ಜೆಡಿಎಸ್‌, ಕೌನ್ಸಿಲ್ಸ್ ವಿಫ್ ಜಾರಿಯ ಎಚ್ಚರಿಕೆ ನೀಡಿದ ಜೆಡಿಎಸ್

ಚಿಕ್ಕಬಳ್ಳಾಪುರ: ಕಳೆದ ನಾಲ್ಕೈದು ದಿನಗಳಿಂದ ನಗರಸಭೆ ಜೆಡಿಎಸ್ ಸದಸ್ಯರಾದ ವೀಣಾ ರಾಮು, ಆರ್. ಮಟಮಪ್ಪ ಅವರು ಜೆಡಿಎಸ್ ಮುಖಂಡರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿರುವುದು ಕಳವಳಕರಿಯಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷರ ಆದೇಶದಂತೆ ವಿಫ್ ಜಾರಿಗೊಳಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಕಾಣೆಯಾಗಿರುವವರಿಗೆ ನೇರ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಜೆಡಿಎಸ್ ಸದಸ್ಯರ ಕಾಣೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ನಮ್ಮ ಪಕ್ಷದ ಸದಸ್ಯರಾದ ಮಟಮಪ್ಪ ಮತ್ತು ವೀಣಾ ರಾಮು ಅವರು ಇಷ್ಟು ದಿನಗಳಿಂದ ಪಕ್ಷದ ಎಲ್ಲಾ ಸಭೆ ಗಳಲ್ಲೂ ನಮ್ಮೊಂದಿಗಿದ್ದರು. ನಗರಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಕೂಡ ಸಹಮತ ಸೂಚಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಹಾಗೆ ಇದ್ದಕ್ಕಿದ್ದಂತೆ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಇದಕ್ಕೆ ಕಾರಣ ತಿಳಿದಿಲ್ಲ. ಆದರೆ, ಅವರಿಬ್ಬರು ಎನ್.ಡಿ.ಎ ಒಕ್ಕೂಟ ಸೂಚಿಸುವ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದರು.

ಎಲ್ಲೇ ಇದ್ದರೂ ಕೂಡ ಜೆಡಿಎಸ್ ಪಕ್ಷದ ಸಹಕಾರದಿಂದಲೇ ನಗರಸಭಾ ಸದಸ್ಯರಾಗಿರುವ ಆರ್.ಮಟಮಪ್ಪ, ವೀಣಾ ರಾಮು ನಾಳೆ ನಡೆಯುವ ಚುನಾವಣೆಯಲ್ಲಿ ಭಾಗವಹಿಸಿ ಮೈತ್ರಿ ಪಕ್ಷಗಳ ಸಮ್ಮತ ಅಭ್ಯರ್ಥಿಗೆ ಬೆಂಬಲ ಕೊಡಬೇಕು. ಒಂದು ವೇಳೆ ನಿಮ್ಮ ನಿರ್ಧಾರಗಳು ಬದಲಾದರೆ, ಪಕ್ಷದ ಮುಖಂಡರೆಲ್ಲರೂ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಕೆ.ಆರ್.ರೆಡ್ಡಿ ಮಾತನಾಡಿ, ರಾಜ್ಯಾಧ್ಯಕ್ಷರು ಈಗಾಗಲೇ ವಿಪ್ ಜಾರಿಗೊಳಿಸಲು ಆದೇಶ ನೀಡಿದ್ದಾರೆ. ಅದರಂತೆ ವಿಪ್ ಜಾರಿಗೊಳಿಸುತ್ತೇವೆ. ಅವರ ತೀರ್ಮಾನ ಏನಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು ಮಾತನಾಡಿ, ನಮ್ಮ ಪಕ್ಷದ ಚಿನ್ಹೆಯಡಿ ಸ್ಪರ್ಧಿಸಿ ಗೆದ್ದಿರುವ ಆರ್.ಮಟಮಪ್ಪ, ವೀಣಾರಾಮು ಅವರು ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿರುವ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ. ಚುನಾವಣೆಯನ್ನು ಅಕ್ರಮವಾಗಿ ಗೆಲ್ಲುವ ಏಕೈಕ ಉದ್ದೇಶದಿಂದಲೇ ಈ ಕೆಲಸ ಮಾಡಿದ್ದಾರೆ. ಇವರ ಮಾತನ್ನು ಕೇಳಿ ನಮ್ಮ ಸದಸ್ಯರು ಅಡ್ಡಮತದಾನ ಮಾಡಿದ್ದೇ ಆದಲ್ಲಿ ಪಕ್ಷದಿಂದ ಉಚ್ಚಾಟಿಸ ಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಿಸಾನ್ ಕೃಷ್ಣಪ್ಪ,ಪಾರಿಜಾತ, ಮಂಡಿಕಲ್ ದಿನೇಶ್, ವೆಂಕಟೇಶ್, ಶಿಲ್ಪಾ ಗೌಡ ಹಾಗೂ ನಾಗರಾಜು, ಕೃಷ್ಣಾರೆಡ್ಡಿ ಇತರರಿದ್ದರು.