ಹುಲುನ್‌ಬಿಯುರ್ (ಚೀನಾ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy) ಹಾಕಿ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿ ಫೈನಲ್ ತಲುಪಿರುವ ಭಾರತ ತಂಡದ ಅಜೇಯ ಗೆಲುವಿನ ಓಟ ಮತ್ತೆ ಮುಂದುವರಿದಿದೆ. ಇಂದು(ಗುರುವಾರ) ನಡೆದ ಕೊರಿಯಾ(India vs Korea Hockey) ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಸದ್ಯ ಭಾರತ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.
6 ತಂಡಗಳ ನಡುವಿನ ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಾವಳಿ ಇದಾಗಿದ್ದು, ಹಾಲಿ ಚಾಂಪಿಯನ್ ಭಾರತ ಶನಿವಾರ ನಡೆಯುವ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಬುಧವಾರ ನಡೆದಿದ್ದ ಪಂದ್ಯದಲ್ಲಿ ಭಾರತ 8-1 ಭರ್ಜರಿ ಅಂತರದಿಂದ ಮಲೇಷ್ಯಾವನ್ನು ಮಣಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿತ್ತು.
ಇಂದು(ಗುರುವಾರ) ನಡೆದ ಪಂದ್ಯದಲ್ಲಿ ಭಾರತ ತನ್ನ ಹಿಂದಿನ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಭಾರತ, ಮೊದಲ ಕ್ವಾರ್ಟರ್‌ನ ಎಂಟು ನಿಮಿಷದಲ್ಲೇ ಗೋಲು ದಾಖಲಿಸಿತು. ಅರೈಜೀತ್ ಸಿಂಗ್ ಹುಂಡಾಲ್ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ಸು ಸಾಧಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸಿ ಮಿಂಚಿದರು.
ಇದನ್ನೂ ಓದಿ Bangladesh Team: ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ
ದ್ವಿತೀಯ ಕ್ವಾರ್ಟರ್‌ನಲ್ಲಿ ಕೊರಿಯಾ ಕೂಡ ಒಂದು ಗೋಲು ಬಾರಿಸಿತು. ಹೀಗಾಗಿ ಪಂದ್ಯ 2-1 ಗೋಲುಗಳ ಅಂತರದಿಂದ ತೀವ್ರ ಪೈಪೋಟಿಗೆ ಸಾಗಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಮತ್ತೊಂದು ಗೋಲು ಬಾರಿಸಿ ತನ್ನ ಮುನ್ನಡೆಯನ್ನು ವಿಸ್ತರಿಸಿತು. ಮೂರು ಗೋಲು ದಾಖಲಿಸಿದ ಬಳಿಕ ಭಾರತೀಯ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ ಎದುರಾಳಿ ತಂಡವನ್ನು ಕಟ್ಟಿಹಾಕಿದರು. ಭಾರತ ಇದಕ್ಕೂ ಮುನ್ನ ಚೀನ ವಿರುದ್ಧ 3-0 ಹಾಗೂ ಜಪಾನ್ ವಿರುದ್ಧ 5-1, ಮಲೇಷ್ಯಾ ವಿರುದ್ಧ 8-1 ಅಂತರದ ಜಯ ಸಾಧಿಸಿತ್ತು.