Thursday, 19th September 2024

Stock Market: ಪುಟಿದೆದ್ದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಗುರುವಾರ (ಸೆಪ್ಟೆಂಬರ್‌ 12) ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರೀ ಏರಿಕೆ ಕಂಡಿವೆ. ಒಂದು ಹಂತದಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) 1,593 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 83,116ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ (Nifty) ಸೂಚ್ಯಂಕವು 515 ಪಾಯಿಂಟ್‌ಗಳಷ್ಟು ವೃದ್ಧಿಸಿ ಜೀವಮಾನದ ಗರಿಷ್ಠ 25,433ಕ್ಕೆ ತಲುಪಿತ್ತು. ದಿನದಾಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ 82,962.71ರಲ್ಲಿ ವಹಿವಾಟು ಕೊನೆಗೊಳಿಸಿದೆ. ನಿಫ್ಟಿ 50 ಸೂಚ್ಯಂಕವು 25,388.90ರಲ್ಲಿ ಸ್ಥಿರವಾಗಿದೆ. ಈ ಮೂಲಕ ಹೂಡಿಕೆದಾರರ ಸಂಪತ್ತು ಸುಮಾರು 6 ಲಕ್ಷ ಕೋಟಿ ರೂ. ಏರಿಕೆ ಕಂಡು 465.9 ಲಕ್ಷ ಕೋಟಿ ರೂ.ಗೆ ತಲುಪಿದೆ (Stock Market).

ಅಮೆರಿಕದಿಂದ ತಮ್ಮ ಆದಾಯದ ಗಣನೀಯ ಭಾಗವನ್ನು ಪಡೆದ ಐಟಿ ಕಂಪನಿಗಳ ಮೌಲ್ಯ ಶೇ. 1ರಷ್ಟು ಏರಿಕೆಯಾಗಿದೆ. ಹೆಚ್ಚುವರಿಯಾಗಿ ನಿಫ್ಟಿ ಬ್ಯಾಂಕ್, ಆಟೋ, ಹಣಕಾಸು ಸೇವೆಗಳು, ಹೆಲ್ತ್‌ಕೇರ್‌ ಮತ್ತು ತೈಲ ಹಾಗೂ ಅನಿಲ ವಲಯಗಳು ಶೇ. 1ಕ್ಕಿಂತ ಹೆಚ್ಚು ಲಾಭ ಗಳಿಸಿವೆ.

256 ಷೇರುಗಳು ಇಂದು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಬಿಎಸ್ಇ 500 ಷೇರುಗಳಾದ ಅಜಂತಾ ಫಾರ್ಮಾ, ಆಲ್ಕೆಮ್ ಲ್ಯಾಬೊರೇಟರೀಸ್, ಅಪರ್ ಇಂಡಸ್ಟ್ರೀಸ್, ಅಪೊಲೊ ಆಸ್ಪತ್ರೆ, ಬಜಾಜ್ ಆಟೋ, ಏರ್‌ಟೆಲ್‌, ಬಿಎಲ್ಎಸ್, ಬ್ರಿಟಾನಿಯಾ, ಸೆಂಚುರಿ ಟೆಕ್ಸ್‌ಟೈಲ್ಸ್‌, ಚೋಲಾ ಫೈನಾನ್ಸ್ ಮತ್ತು ಕೊಫೋರ್ಜ್ ಒಂದು ವರ್ಷದ ಗರಿಷ್ಠ ಮಟ್ಟವನ್ನು ತಲುಪಿದವು. ಇದೇ ವೇಳೆ 36 ಷೇರುಗಳು ಇಂದು ತಮ್ಮ ಒಂದು ವರ್ಷದ ಕನಿಷ್ಠ ಮಟ್ಟವನ್ನು ಮುಟ್ಟಿದವು.

ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಇನ್ಫೋಸಿಸ್‌ ಷೇರುಗಳು ತೀವ್ರ ಏರಿಕೆ ಕಂಡಿದ್ದು, ಸೆನ್ಸೆಕ್ಸ್‌ಗೆ 500 ಅಂಕಗಳಷ್ಟು ಕೊಡುಗೆ ನೀಡಿವೆ. ಜೊತೆಗೆ ಎಲ್ & ಟಿ, ಎಂ & ಎಂ, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಸಹ ಸೂಚ್ಯಂಕ ಏರಿಕೆಗೆ ಗಣನೀಯ ಪ್ರಮಾಣದ ಕೊಡುಗೆ ನೀಡಿವೆ.

ಏರಿಕೆಗೆ ಕಾರಣವೇನು?

ಅಮೆರಿಕದಲ್ಲಿ ಹಣದುಬ್ಬರದ ದತ್ತಾಂಶದ ನಂತರ ದೇಶೀಯ ಷೇರುಗಳಿಗೆ ವಿದೇಶಿ ಒಳಹರಿವು ಹೆಚ್ಚಬಹುದು ಎಂಬ ನಿರೀಕ್ಷೆಯ ಮೇಲೆ ಈ ಏರಿಕೆ ದಾಖಲಾಗಿದೆ. ಫೆಡರಲ್‌ ರಿಸರ್ವ್‌ ಮುಂದಿನ ವಾರದ ಸಭೆಯಲ್ಲಿ ಬಡ್ಡಿ ದರವನ್ನು 25 ಮೂಲ ಅಂಕಗಳಷ್ಟು ಕಡಿತಗೊಳಿಸುವ ನಿರೀಕ್ಷೆ ಇದ್ದು, ಇದರಿಂದ ಹೂಡಿಕೆ ಹೆಚ್ಚಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಅಲ್ಲದೆ ರಿಯಲ್ ಎಸ್ಟೇಟ್ ಮತ್ತು ಸರಕು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇರುವುದರಿಂದ ಚೀನಾದ ದರ ಕಡಿತಕ್ಕೆ ಷೇರುಪೇಟೆ ಬಲವಾಗಿ ಪ್ರತಿಕ್ರಿಯಿಸುತ್ತಿದೆ. ಆದ್ದರಿಂದ ಈ ಪುಟಿದೇಳುವಿಕೆ ಕಂಡು ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Illegal Fishing: ಅಕ್ರಮವಾಗಿ ಮರಿ ಮೀನುಗಳ ಬೇಟೆ; ಸಾರ್ಡಿನ್‌ ಮೀನು ಸಂತತಿಗೆ ಸಂಚಕಾರ!