Friday, 20th September 2024

Tumkur News: ದಲಿತರಿಗೆ ನಿವೇಶನ ನೀಡಲು ಆಗ್ರಹ 

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೋರ ಹೋಬಳಿಯ ಮೇಳೆಹಳ್ಳಿ, ಹೆಬ್ಬೂರು ಹೋಬಳಿ ಸೀನಪ್ಪನಹಳ್ಳಿ, ಗೂಳೂರು ಹೋಬಳಿಯ ಮಂಚಗೊಂಡನಹಳ್ಳಿ ಗ್ರಾಮಗಳಲ್ಲಿ ಇರುವ ಸರಕಾರಿ ಭೂಮಿ ಯನ್ನು ದಲಿತ ಸಮುದಾಯದ ಜನರು ಮನೆ ಕಟ್ಟಿಕೊಳ್ಳಲು ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಮಹಾಜನ ಪರಿವಾರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಮಹಾಜನ ಪರಿವಾರ ಸಮಿತಿಯ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ ಮತ್ತು ಜಿಲ್ಲಾಧ್ಯಕ್ಷ ಲವ ಎಂ.ಎ. ಅವರ ನೇತೃತ್ವದಲ್ಲಿ ನೂರಾರು ದಲಿತರು,ಅದಿವಾಸಿಗಳು ನಿವೇಶನ ಮತ್ತು ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು ಇಓ ತಾಲೂಕು ಪಂಚಾಯಿತಿ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: Tumkur_Yeshwantpur Memu Train: ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ರೈಲು ಓಡಾಟ

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ದಲಿತ ಮತ್ತು ಮಹಾಜನ ಪರಿವಾರದ ಜನರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಮಹಾಜನ ಪರಿವಾರ ಸಮಿತಿಯ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ, ಸೀನಪ್ಪನ ಹಳ್ಳಿ, ಮೇಳೆಹಳ್ಳಿ, ಮಂಚಗೊಂಡನಹಳ್ಳಿ ಗ್ರಾಮಗಳಲ್ಲಿ ದಲಿತರಿಗೆ ನಿವೇಶನಕ್ಕಾಗಿ ಭೂಮಿ ನೀಡುವಂತೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ದಲಿತರ ಅರ್ಜಿಗಳು ಸರಕಾರಿ ಕಚೇರಿಗಳ ಕಸದ ಬುಟ್ಟಿ ಸೇರುತ್ತಿವೆ.ಗೂಳೂರು ಹೋಬಳಿ ಮಂಚಗೊಂಡನಹಳ್ಳಿ ಯಲ್ಲಿ ಸುಮಾರು ೯೫ ದಲಿತ ಕುಟುಂಬಗಳಿಗೆ ನಿವೇಶನ ನೀಡಲು ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಇದುವರೆಗೂ ನಿವೇಶನ ನೀಡಿಲ್ಲ. ಸರಕಾರಿ ದಾಖಲೆಗಳಲ್ಲಿ ನಿವೇಶನಕ್ಕಾಗಿ ಮೀಸಲಿಟ್ಟ ಜಾಗ ಎಂದು ತೋರಿಸಿ ದ್ದಾರೆ. ಕೇವಲ ದಾಖಲೆಗಳಲ್ಲಿ ಇದ್ದರೆ ಸಾಲದು ಅದು ಸಂಬಂಪಟ್ಟ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿ ನಲ್ಲಿ ಸರಕಾರದ ಆಡಳಿತ ಯಂತ್ರ ಚುರುಕಾಗಬೇಕಾಗಿದೆ. ಜಿಲ್ಲಾಡಳಿತದ ನಡವಳಿಕೆ ಇದೇ ರೀತಿ ಮುಂದು ವರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಕರ್ನಾಟಕ ಮಹಾಜನ ಪರಿವಾರ ಸಮಿತಿಯ ಜಿಲ್ಲಾಧ್ಯಕ್ಷ ಲವ.ಎಂ.ಎ ಮಾತನಾಡಿ, ತುಮಕೂರು ನಗರಕ್ಕೆ ಕೂಗಳ ತೆಯ ದೂರದಲ್ಲಿರುವ ಮೇಳೆಹಳ್ಳಿ ಗ್ರಾಮದಲ್ಲಿ ಇದ್ದ ಸರಕಾರಿ ಜಮೀನನ್ನು ಸರಕಾರದ ವಿವಿಧ ಅಭಿವೃದ್ದಿ ನಿಗಮ ಗಳ ಅಡಿಯಲ್ಲಿ ಬರುವ ಭೂ ಒಡೆತನ ಯೋಜನೆಯಡಿ ಮಂಜೂರು ಮಾಡಿದ್ದು, ಇದರಿಂದ ಗ್ರಾಮದಲ್ಲಿರುವ ದಲಿತರಿಗೆ ಮನೆ ಕಟ್ಟಿಕೊಳ್ಳಲು ಭೂಮಿಯೇ ಇಲ್ಲದಂತಾಗಿದೆ. ಹಾಗಾಗಿ, ಉಳಿದಿರುವ ಒಂದು ಎಕರೆ ಜಾಗವನ್ನು ದಲಿತರು ಮನೆ ಕಟ್ಟಿಕೊಳ್ಳಲು ಮೀಸಲಿಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.

ಇದುವರೆಗೆ ಮೇಳೆಹಳ್ಳಿ ಗ್ರಾಮದ ಜನರು ಸಣ್ಣಪುಟ್ಟ ಗುಡಿಸಲುಗಳಲ್ಲಿ ವಾಸ ಮಾಡುತಿದ್ದಾರೆ. ಒಂದೊಂದು ಗುಡಿಸಲುಗಳಲ್ಲಿ ಮರ‍್ನಾಲ್ಕು ಕುಟುಂಬ ಗಳು ವಾಸಿಸುವಂತಹ ಪರಿಸ್ಥಿತಿ ಇದೆ. ಹಾಗಾಗಿ, ಜಿಲ್ಲಾಡಳಿತ ಗ್ರಾಮದಲ್ಲಿ ಉಳಿದಿರುವ ಭೂಮಿಯನ್ನು ದಲಿತರ ನಿವೇಶನಕ್ಕೆಂದು ಮೀಸಲಿಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಇಓ ಅವರಿಗೆ ಸಲ್ಲಿಸಲಾಯಿತು. ಈ ವೇಳೆ ಸಮಿತಿಯ ಜಿಲ್ಲಾಧ್ಯಕ್ಷ ಲವ.ಎಂ.ಎ ಜಿಲ್ಲಾ ವಕ್ತಾರ ಹನುಮಂತರಾಜು, ಮಂಜುನಾಥ್, ಮಹಿಳಾ ಘಟಕದ ಶಿವಗಂಗಮ್ಮ, ಮುಖಂಡರಾದ ನೀಲಯ್ಯ, ಲಕ್ಮ್ಷೀ, ಉಮಾದೇವಿ ಮತ್ತಿತರರು ಪಾಲ್ಗೊಂಡಿದ್ದರು.