Friday, 20th September 2024

MLA Basavaraj Mattimadu: ಸಮಾಜದಲ್ಲಿನ ಸಮಸ್ಯೆ ಪ್ರಕಟಿಸಿ ಪರಿಹಾರ ನೀಡಬೇಕು- ಶಾಸಕ ಮತ್ತಿಮಡು

ಕಮಲಾಪುರ: ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸ ಪತ್ರಕರ್ತರು ಮಾಡಬೇಕು. ಸಮಾಜದಲ್ಲಿನ ಸಮಸ್ಯೆ ಗಳ ಸುದ್ದಿ ಪ್ರಕಟಿಸಿ ಪರಿಹಾರ ಒದಗಿಸಬೇಕು. ತಪ್ಪು ಮಾಡಿದವರ ಕಿವಿ ಹಿಂಡುವದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಸಮಾಜವನ್ನು ಸರಿದಾರಿಗೆ ತರುವವನೇ ನಿಜವಾದ ಪತ್ರಕರ್ತ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಪಟ್ಟಣದ ಆಕೃತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕಮಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ, ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಮಲಾಪುರದಲ್ಲಿ ಪತ್ರಿಕಾ ಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ. ಎಲ್ಲಾ ಪತ್ರಕರ್ತರು ಒಟ್ಟುಗೂಡಿ ಸಂಘವನ್ನು ಬೆಳೆಸಬೇಕು. ವಿವಿಧ ಕ್ಷೇತ್ರದ ಪ್ರಮುಖರನ್ನು ಗುರುತಿಸಿ ವಿಶೇಷ ಸತ್ಕರಿಸಿದ ಕ್ರಮ ಶ್ಲಾಘನೀಯ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಸಂಘದ ಅಡಿಯಲ್ಲಿ ಜರುಗಳಿ ಎಂದರು.

ಇದನ್ನೂ ಓದಿ: Healthy Milk: ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ವಿಡಿಯೊ ಸಹಿತ ಟಿಪ್ಸ್‌

ಕಮಲಾಪುರ ವೀರಶೈವ ಲಿಂಗಾಯತ ಮುಖಂಡ ರವಿ ಬಿರಾದರ ಮಾತನಾಡಿ, ಪತ್ರಕರ್ತರು ಹಣವಂತರ, ರಾಜಕಾರಣಿಗಳ ಹಾಗೂ ಭ್ರಷ್ಟ ಅಧಿಕಾರಿಗಳ ಪರವಾಗಿ ಕೆಲಸ ಮಾಡಬಾರದು, ಪತ್ರಿಕಾರಂಗಕ್ಕೆ ಅಗಾಧವಾದ ಶಕ್ತಿ ಇದೆ. ಈ ಹಿಂದೆ ಸರಕಾರ ಕೆಡುವಿ, ಸರಕಾರ ರಚನೆ ಮಾಡುವಲ್ಲಿ ಪತ್ರಿಕಾ ರಂಗ ಮಹತ್ತರ ಪಾತ್ರ ವಹಿಸಿದ ಉದಾ ಹರಣೆಗಳಿವೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಧಿಕಾರ ದುರುಪಯೋಗ ಪಡೆಸಿಕೊಂಡರೆ ಮೂಗು ದಾರ ಹಾಕುವ ಕೆಲಸ ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಡಿಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ ಮಾತನಾಡಿದರು.

ಈ ಸಂದರ್ಭದಲ್ಲಿ ಸೊಂತ-ಕಲಮೂಡ ಮುಲ್ಲಾಮಾರಿ ತೀರ್ಥ ಕ್ಷೇತ್ರದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯ ವಹಿಸಿದ್ದರು.

ಮಾಜಿ ಜಿಪಂ ಸದಸ್ಯ ಶಿವಶೆಟ್ಟಿ ಪಾಟೀಲ, ಬಿಜೆಪಿ ಮುಖಂಡ ಶಿವಕುಮಾರ ಪಸಾರ, ಕಾಂಗ್ರೆಸ್ ಮುಖಂಡ ಗುರು ಮಾಟೂರ, ತಹಶಿಲ್ದಾರ ಮಹಮ್ಮದ್ ಮೊಹಸಿನ್, ಪ.ಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯ ಸಾಹಿತಿ ರವೀಂದ್ರ ಭಂಟನಳ್ಳಿ, ಶಿವಕುಮಾರ ದೊಶೆಟ್ಟಿ, ಅಮೃತ ಗೌರೆ, ಮಲ್ಲಿಕಾರ್ಜುನ ಮರತೂರಕರ, ಕಮಲಾಪುರ ಪತ್ರಕರ್ತರ ಸಂಘದ ಅಧ್ಯಕ್ಷರು ಸುರೇಶ್ ಲೇಂಗಟಿ, ಖಜಾಂಚಿ ಶಿವಲಿಂಗ ಬೆಳಕೋಟಾ, ಉಪಾಧ್ಯಕ್ಷರಾದ ರಮೇಶ ಕಟ್ಟಿಮನಿ, ರಮೇಶ ಕಟ್ಟಿಮನಿ, ಚೆನ್ನವೀರ ದಸ್ತಾಪುರ, ಕಾರ್ಯದರ್ಶಿ ಆನಂದ ತೆಗನೂರ, ಕಾರ್ಯಕಾರಣಿ ಸದಸ್ಯ ಸನಾಗರಾಜ ಶಿಲ್ಡ್, ಸುಧಾಕರ ಲೇಂಗಟಿ ಇದ್ದರು. ಕಮಲಾಪುರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮೂಲಗೆ ಸ್ವಾಗತಿಸಿದರು, ಕಸ್ತೂರಿ ಬಾಯಿ, ರಾಜೇಶ್ವರ ಪ್ರಾರ್ಥಿಸಿದರು, ಶಿವಲಿಂಗ ಬೆಳಕೋಟಾ ವಂದಿಸಿದರು, ರವೀಂದ್ರ ಬಿಕೆ ನಿರೂಪಿಸಿದರು.