Sunday, 24th November 2024

ಬಿಹಾರ ವಿಧಾನಸಭೆ ಚುನಾವಣೆ: ನಾಳೆ ಎರಡನೇ ಹಂತದ ಮತದಾನ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ನಡೆಯಲಿದ್ದು, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕೊನೆ ಗಳಿಗೆಯ ಸಿದ್ದತೆಗಳು ನಡೆಯಲಿವೆ.

ಬಿಹಾರದ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 146 ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ಸೇರಿದಂಎ 1,463 ಅಭ್ಯರ್ಥಿಗಳ ಭವಿಷ್ಯವನ್ನು 2.86 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ವೆಸ್ಟ್ ಚಂಪಾರಣ್, ಈಸ್ಟ್ ಚಂಪಾರಣ್, ದರ್ಭಾಂಗ, ಅರಾರಿಯಾ, ಮಧು ಬನಿ, ಪುರ್ನಿಯಾ, ಕಿಶನ್‍ಗಂಜ್, ಸಮಷ್ಟಿಪುರ್, ಸೀತಾ ಮರಿ, ವೈಶಾಲಿ, ಪಾಟ್ನಾ, ಮೋತಿಹರಿ, ಛಾತ್ರಾ, ಮುಜಫರ್‍ಪುರ್ ಸೇರಿದಂತೆ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ನಕ್ಸಲ್ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುವುದರಿಂದ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ರಾಘೋಪುರ್, ಪರು, ಮೀನಾಪುರ್ ಮತ್ತು ಅಲೌಳಿ ಸೇರಿದಂತೆ ಎಂಟು ನಕ್ಸಲ್ ಪೀಡಿತ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 4 ಗಂಟೆ ವರೆಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಅ.28ರಂದು ನಡೆದ ಮೊದಲ ಹಂತದಲ್ಲಿ 16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ನ.7ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಫಲಿತಾಂಶ ನ.10ರಂದು ಪ್ರಕಟವಾಗಲಿದೆ.