ಬೆಂಗಳೂರು : ಮಮತಾ ಬ್ಯಾನರ್ಜಿ (Mamata Banerjee) ಗುರುವಾರ ಪಶ್ವಿಮ ಬಂಗಾಳ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಮುಂದಾಗಿದ್ದು ಈ ಹುದ್ದೆನನಗೆ ಬೇಡ ಎಂದು ಹೇಳಿಕೊಂಡಿದ್ದಾರೆ. ಯುವ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿಭಾಯಿಸುವಲ್ಲಿ ಸಿಎಂ ಎಡವಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಜತೆಗಿನ ಸಂಧಾನ ಸಭೆ ವಿಫಲಗೊಂಡ ಬಳಿಕ ಮಮತಾ ಈ ಮಾತುಗಳನ್ನಾಡಿದ್ದಾರೆ. ನಾನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನಾನು ಹುದ್ದೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನ್ಯಾಯ ಬೇಕು, ನ್ಯಾಯ ಸಿಗುವ ಬಗ್ಗೆ ಮಾತ್ರ ನನಗೆ ಕಾಳಜಿ ಇದೆ ಎಂದು ಅವರು ಹೇಳಿದ್ದಾರೆ.
ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮುಖ್ಯಮಂತ್ರಿ ಮಮತಾ ಕರೆದ ಸಭೆಗೆ ಹಾಜರಾಗಲು ನಿರಾಕರಿಸಿದ್ದರು. ಸಭೆಯನ್ನು ನೇರ ಪ್ರಸಾರ ಮಾಡಲು ರಾಜ್ಯ ಸರ್ಕಾರ ಒಪ್ಪದ ಕಾರಣ ಅವರನ್ನು ಭೇಟಿಯಾಗಲು ನಿರಾಕರಿಸಿದ ನಂತರ ಮುಖ್ಯಮಂತ್ರಿಯ ರಾಜೀನಾಮೆ ಪ್ರಸ್ತಾಪ ಬಂದಿದೆ. ಸಭೆಯನ್ನು ರೆಕಾರ್ಡ್ ಮಾಡಲು ಸರ್ಕಾರ ಸಿದ್ಧವಾಗಿತ್ತು. ಆದರೆ ವೈದ್ಯರು ಲೈವ್ ಸ್ಟ್ರೀಮಿಂಗ್‌ಗೆ ಒತ್ತಾಯಿಸಿದ್ದರು.
ಕಿರಿಯ ವೈದ್ಯರೊಂದಿಗೆ ಸಭೆಯಲ್ಲಿ ಕುಳಿತುಕೊಳ್ಳವುದಕ್ಕೆ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಎಂದು ಮಮತಾ ಸಭೆ ವಿಫಲಗೊಂಡ ಬಳಿಕ ಹೇಳಿದ್ದಾರೆ. “ನಾನು ಅವರಿಗಾಗಿ 3 ದಿನ ಕಾಯುತ್ತಿದ್ದೆ. ಅವರು ಬಂದು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿತ್ತು. ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಒಪ್ಪದಿದ್ದರೂ ನಾನು ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿ ಮತ್ತು ನನ್ನ ಎಂಒಎಸ್ ಸೇರಿದಂತೆ ನನ್ನ ಉನ್ನತ ಅಧಿಕಾರಿಗಳೊಂದಿಗೆ 3 ದಿನದಿಂದ ಸಭೆ ನಡೆಸಲು ಕಾಯುತ್ತಿದ್ದೇನೆ ಎಂದು ಮಮತಾ ಹೇಳಿದ್ದಾರೆ.
” ವೈದ್ಯರನ್ನುನಾನೂ ಬೆಂಬಲಿಸುತ್ತಿದ್ದು ಈ ದೇಶದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನಿಮ್ಮ ಬೆಂಬಲ ನೀಡಿ. ನಾವು ಸಾಮಾನ್ಯ ಜನರಿಗೆ ನ್ಯಾಯ ಬಯಸುತ್ತೇವೆ. ಸಾಮಾನ್ಯ ಜನರಿಗೆ ಚಿಕಿತ್ಸೆ ಸಿಗಬೇಕು. ಸುಪ್ರೀಂ ಕೋರ್ಟ್ ಸೂಚನೆಯ ಪ್ರಕಾರ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕೆಂದು ನಾವು ಬಯಸುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಉನ್ನತ ನ್ಯಾಯಾಲಯದ ಆದೇಶದ ನಂತರ ಮೂರು ದಿನಗಳು ಕಳೆದರೂ, ರಾಜ್ಯವು ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುತ್ತಿ.ಲ್ಲ ಏಕೆಂದರೆ ಕೆಲವೊಮ್ಮೆ ನಾವು ಎಲ್ಲವನ್ನೂ ಸಹಿಸಬೇಕಾಗುತ್ತದೆ. ಅದನ್ನು ಸಹಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.
ಇದನ್ನೂ ಓದಿ: Narendra Modi : ಪ್ಯಾರಾ ಅಥ್ಲೀಟ್‌ಗಳ ಜತೆ ಸಂಭಾಷಣೆ ನಡೆಸಲು ನೆಲದ ಮೇಲೆ ಕುಳಿತ ಪ್ರಧಾನಿ ಮೋದಿ
ಸಭೆಗಾಗಿ ತಾನು ಎರಡು ಗಂಟೆಗಳ ಕಾಲ ಕಾಯುತ್ತಿದ್ದೆ. ಆದರೆ ಪ್ರತಿಭಟನಾನಿರತ ವೈದ್ಯರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬ್ಯಾನರ್ಜಿ ಹೇಳಿದರು. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಸಭೆ ನಡೆಸಲು ರಾಜ್ಯವು ತನ್ನ ಕೈಲಾದಷ್ಟು ಪ್ರಯತ್ನಿಸಿದೆ ಎಂದು ಹೇಳಿದರು.
ಇಡೀ ಸಭೆಯನ್ನು ದಾಖಲಿಸಲು ನಾವು ರೆಕಾರ್ಡಿಂಗ್ ವ್ಯವಸ್ಥೆ ಮಾಡಿದ್ದೇವೆ. ಎರಡು ಪಕ್ಷಗಳ ನಡುವೆ ವಿಶ್ವಾಸ ಇರಬೇಕು. ನಾವು ಅವರ ಮಾತನ್ನು ಕೇಳಲು ಬಯಸುತ್ತೇವೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಅಭಿಪ್ರಾಯ ಇರಬಾರದು. ಯಾವುದೇ ಸಂಘರ್ಷದ ಪರಿಸ್ಥಿತಿ ಇರಬಾರದು. ಆದ್ದರಿಂದ ಲೈವ್ ಸ್ಟ್ರೀಮಿಂಗ್ ಇಲ್ಲದಿದ್ದರೆ ನಾವು ಸಭೆಗೆ ಹೋಗುವುದಿಲ್ಲ ಎಂದು ಅವರು ಏಕೆ ಭಾವಿಸುತ್ತಿದ್ದಾರೆ ನನಗೆ ಅರ್ಥವಾಗುತ್ತಿಲ್ಲ,” ಎಂದು ಅವರು ಹೇಳಿದ್ದಾರೆ.
ಸಭೆ ರದ್ದು
ಲೈವ್ ಸ್ಟ್ರೀಮಿಂಗ್ ಸಭೆಯ ಬೇಡಿಕೆಯನ್ನು ಈಡೇರಿಸದ ಹೊರತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಲು ವೈದ್ಯರು ನಿರಾಕರಿಸಿದ ನಂತರ ಪ್ರತಿಭಟನಾನಿರತ ಕಿರಿಯ ವೈದ್ಯರು ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಗಳು ಗುರುವಾರ ಸ್ಥಗಿತಗೊಂಡಿವೆ.
ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಸಂಜೆ 5: 25 ರ ಸುಮಾರಿಗೆ ಸ್ಥಳಕ್ಕೆ ತಲುಪಿದ್ದರು. ಸರ್ಕಾರಿ ಅಧಿಕಾರಿಗಳೊಂದಿಗೆ ಉದ್ವಿಗ್ನ ಪರಿಸ್ಥಿತಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗೇಟ್‌ನ ಹೊರಗೆ ಇದ್ದರು. ಮಮತಾ ಬ್ಯಾನರ್ಜಿ, ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದೊಳಗೆ ಕಾಯುತ್ತಿದ್ದರು.
ತಮ್ಮ ಸಹೋದ್ಯೋಗಿಯ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ನಿರ್ವಹಿಸುವ ಬಗ್ಗೆ ವೈದ್ಯರ ಕುಂದುಕೊರತೆಗಳನ್ನು ಪರಿಹರಿಸಲು ಈ ಸಭೆ ನಡೆಯಬೇಕಿತ್ತು.