ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಪ್ರತಿವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು ಈ ವರ್ಷ ಕರೋನಾದಿಂದಾಗಿ ನೀಡಬೇಕೋ ಬೇಡವೋ ಎಂದು ರಾಜ್ಯ ವ್ಯಾಪಿ ನಡೆಯುತ್ತಿದ್ದ ಚರ್ಚೆಯ ನಡುವೆ ಪಟ್ಟಿ ಬಿಡುಗಡೆಯಾಗಿದ್ದು, ನವೆಂಬರ್ ಏಳರಂದು ಪ್ರಶಸ್ತಿ ಪ್ರದಾನ ಸಮಾ ರಂಭ ನಡೆಯಲಿದೆ. ಈ ವರ್ಷದ ವಿಶೇಷವೆಂದರೆ ಪ್ರಶಸ್ತಿಗಾಗಿ ಅರ್ಜಿ ಹಾಕದೇ ಇದ್ದರೂ, ಕೆಲವು ವ್ಯಕ್ತಿಗಳನ್ನು ಮತ್ತು ಸಂಘ ಸಂಸ್ಥೆ ಗಳನ್ನು ಸರಕಾರವೇ ಗುರುತಿಸಿ ಪ್ರಶಸ್ತಿಗೆ ಅರ್ಹರೆಂದು ಆಯ್ಕೆ ಮಾಡಿರುವುದು.
ಗಣ್ಯರಿಗೆ ಹೋಲಿಸಿದರೆ ಸಂಸ್ಥೆಯ ಆಯ್ಕೆ ಸ್ವಲ್ಪ ಕ್ಲಿಷ್ಟಕರವಾದ ಕೆಲಸ. ಸಂಸ್ಥೆಗೂ ಅಷ್ಟೇ, ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ, ಯಾರಾದರೂ ಒಬ್ಬ ಎಡವಟ್ಟು ಮಾಡಿದರೂ ಇಡೀ ಸಂಸ್ಥೆಗೇ ಕೆಟ್ಟ ಹೆಸರು. ಪ್ರತಿಯೊಬ್ಬನೂ ಪ್ರತಿ ಕ್ಷಣವೂ
ಜಾಗರೂಕನಾಗಿದ್ದರೆ ಮಾತ್ರ ಆ ಸಂಸ್ಥೆಯ ಘನತೆ ಹೆಚ್ಚುವುದು. ಈ ವರ್ಷ ಪ್ರಶಸ್ತಿಗೆ ಭಾಜನರಾದ ಸಂಘ ಸಂಸ್ಥೆಗಳ ಪಟ್ಟಿಯಲ್ಲಿ ಧರ್ಮಸ್ಥಳ ಟ್ರಸ್ಟ್, ಬೆಟರ್ ಇಂಡಿಯಾ, ಯೂತ್ ಫಾರ್ ಸೇವಾ, ದೇವದಾಸಿ ಸ್ವಾವಲಂಬನ ಕೇಂದ್ರದ ಜೊತೆಗೆ ಯುವಾ
ಬ್ರಿಗೇಡ್ ಕೂಡ ಒಂದು.
‘ಒಂದು ವಿಚಾರವನ್ನು ಕಲ್ಪಿಸಿಕೊಳ್ಳಿ. ಆ ಒಂದು ವಿಚಾರ ನಿಮ್ಮ ಜೀವನವಾಗಿರಲಿ. ಅದರ ಬಗ್ಗೆ ಕನಸು ಕಾಣಿ, ಅದನ್ನು ಅನು ಸರಿಸಿ. ನಿಮ್ಮ ನರ ನಾಡಿಗಳು, ಮಾಂಸಖಂಡಗಳು, ಮಿದುಳು, ದೇಹ ಎಲ್ಲದರಲ್ಲಿ ಯೂ ಆ ವಿಚಾರ ತುಂಬಿರಲಿ. ಬೇರೆ ಯಾವ ವಿಷಯವೂ ನಿಮ್ಮ ವಿಚಾರಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ. ಅದೇ ನಿಮ್ಮ ಗೆಲುವಿನ ಮಾರ್ಗ ವಾಗಿರುತ್ತದೆ’ ಎಂಬುದು ಸ್ವಾಮಿ ವಿವೇಕಾನಂದರ ನುಡಿ. ಇದೇ ಮಂತ್ರವನ್ನು ಪಾಲಿಸುತ್ತ, ರಾಷ್ಟ್ರಹಿತವೊಂದನ್ನೇ ಲಕ್ಷ್ಯವಾಗಿಸಿಕೊಂಡು ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಂಸ್ಥೆ ಯುವಾ ಬ್ರಿಗೇಡ್. ಇದರ ಪ್ರತಿಯೊಬ್ಬ ಸದಸ್ಯನಿಗೂ ರಾಷ್ಟ್ರ ಸರ್ವೋಪರಿ.
ಸದೃಢವಾದ ರಾಷ್ಟ್ರ ನಿರ್ಮಾಣಗೊಳ್ಳಬೇಕಾದರೆ ಅದರಲ್ಲಿ ಯುವಕರ ಪಾತ್ರ ಮಹತ್ವದ್ದು, ದೇಶ ಕಟ್ಟುವ ಕಾರ್ಯದಲ್ಲಿ ಯುವ ಜನತೆಯ ಪಾತ್ರ, ಕೊಡುಗೆ ಅಪಾರ, ಯುವ ಜನತೆಗೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂದು ಸುಮಾರು 150 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಹೇಳಿದ್ದರು. ಇದು ಎಲ್ಲಾ ದೇಶಗಳಿಗೂ ಅನ್ವಯಿಸುವ ಮಾತು. ತನ್ನ ಜನಸಂಖ್ಯೆಯ ಮೂವತ್ತೈದು ಪ್ರತಿಶತಕ್ಕಿಂತಲೂ ಹೆಚ್ಚು ಯುವ ಜನತೆಯನ್ನು ಹೊಂದಿದ, ಅಭಿವೃದ್ಧಿಶೀಲ ದೇಶವಾದ ಭಾರತದ ಮಟ್ಟಿಗಂತೂ ಇದು ನೂರಕ್ಕೆ ನೂರರಷ್ಟು ಸತ್ಯ. ಹೊಸ ವಿಚಾರಗಳನ್ನು ಯೋಚಿಸುವಲ್ಲಿ, ಯೋಜನೆಗಳನ್ನು ರೂಪಿಸುವಲ್ಲಿ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯುವಕರ ಪಾತ್ರ ಮಹತ್ತರವಾದದ್ದು. ಅವರ ಒಳಗೊಳ್ಳುವಿಕೆ ಬೇಕೇಬೇಕು, ಅವರನ್ನು ಬಿಟ್ಟು ಯಾವ ಕಾರ್ಯವನ್ನೂ ಮಾಡಲಾಗದು.
ಹೀಗಿರುವಾಗ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಯುವ ಪೀಳಿಗೆ ಮುಂದಾದರೆ ಅವರು ನಿಜಕ್ಕೂ ಅಭಿನಂದನಾರ್ಹರು.
ಕಳೆದ ಆರು ಏಳು ವರ್ಷಗಳಿಂದ ಸತತವಾಗಿ ದೇಶ ಕಟ್ಟುವ ಕಾರ್ಯಕ್ಕೆ ತನ್ನನ್ನು ತುಡಗಿಸಿಕೊಂಡಿರುವ ಸಂಸ್ಥೆ ಯುವ ಬ್ರಿಗೇಡ್. ಇಂದು ಈ ಸಂಸ್ಥೆಯಲ್ಲಿ ಕರ್ನಾಟಕದ ದಕ್ಷಿಣದಲ್ಲಿರುವ ಚಾಮರಾಜನಗರದಿಂದ ಉತ್ತರದಲ್ಲಿರುವ ಬೀದರ್ವರೆಗೆ ಪ್ರತಿ ಜಿಲ್ಲೆ,
ಪ್ರತಿ ತಾಲೂಕಿನಲ್ಲಿ ಒಟ್ಟೂ ಸುಮಾರು ಮೂರು ಸಾವಿರ ಸಕ್ರಿಯ ಸೇವಾಕರ್ತರಿದ್ದಾರೆ. ಇವರ ಹೊರತಾಗಿ ಆಯಾ ಸಂದರ್ಭಕ್ಕೆ ಬಂದು ತಮ್ಮ ಸೇವೆ ಸಲ್ಲಿಸುವ ಸುಮಾರು ಎಂಟು ಸಾವಿರ ಕಾರ್ಯಕರ್ತರಿದ್ದಾರೆ.
ಒಂದೆರಡು ಸಂದರ್ಭದಲ್ಲಿ ಯುವ ಬ್ರಿಗೇಡ್ನೊಂದಿಗೆ ಸಮಯ ಕಳೆಯುವ ಅವಕಾಶ ನನಗೆ ಒದಗಿ ಬಂದಿತ್ತು. ಮೈಸೂರು, ಮಂಡ್ಯ ಪ್ರದೇಶದಲ್ಲಿ ಹತ್ತು ದಿನ, ಬೆಳಗಾವಿಯ ಸಂಕೇಶ್ವರದಲ್ಲಿ ಹತ್ತು ದಿನ ಈ ತಂಡದವರೊಂದಿಗಿದ್ದೆ. ಎರಡೂ ಕಡೆಗಳಲ್ಲಿ ನನಗೆ ಪರಿಚಯವಿರುವ ಒಬ್ಬ ವ್ಯಕ್ತಿಯೂ ಇರಲಿಲ್ಲ. ಆದರೆ ಕ್ಷಣಾರ್ಧದಲ್ಲಿ ಕಾರ್ಯಪಡೆಯ ಸದಸ್ಯರೆಲ್ಲ ಆಪ್ತರಾಗಿದ್ದರು. ನನ್ನ ಮನೆ ಮಂದಿಯೊಂದಿಗೇ ಇದ್ದಂತೆ ಬೆಚ್ಚಗಿನ ಅನುಭವ.
ಮೈಸೂರಿನಲ್ಲಿರುವಾಗ ಚಂದ್ರಶೇಖರ್ ನಂಜನ ಗೂಡು, ಸಂಕೇಶ್ವರದಲ್ಲಿರುವಾಗ ವರ್ಧಮಾನ ತ್ಯಾಗಿ ಯುವಾ ಬ್ರಿಗೇಡ್ನ ಒಳ ತಿರುಳನ್ನು ಬಿಡಿಸಿಟ್ಟಿದ್ದರು. ಸಂಘಟನೆ ಯಾವುದೇ ಕಾರಣಕ್ಕೆ ಪ್ರತಿಭಟನೆಯ ಹೆಸರಿನಲ್ಲಿ ಧರಣಿಗೆ ಕುಳಿತುಕೊಳ್ಳುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತಿಭಟನೆ, ಧರಣಿಯಿಂದ ನಷ್ಟವಾದರೆ ಅದು ಬ್ರಿಟಿಷರಿಗಾಗುತ್ತಿತ್ತು, ಈಗ ನಷ್ಟವಾದರೆ ಅದು
ನಮ್ಮದೇ ರಾಷ್ಟ್ರಕ್ಕೆ ಎಂಬ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಧರಣಿ ನಡೆಸಿಲ್ಲ, ನಡೆಸುವುದೂ ಇಲ್ಲ ಎಂಬ ಅಚಲ ನಿರ್ಧಾರ ಯುವಾ ಬ್ರಿಗೇಡ್ನದ್ದು.
ಸಂಘಟನೆ ಕಾರ್ಯನಿರ್ವಹಿಸಲು ಅನುಕೂಲವಾಗಲು ರಾಜ್ಯವನ್ನು ವಿಜಯಪುರ, ಬಳ್ಳಾರಿ, ಧಾರವಾಡ, ಮಂಗಳೂರು, ಮೈಸೂರು ಮತ್ತು ಬೆಂಗಳೂರು ಹೀಗೆ ಆರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದೆ. ಪ್ರತಿ ವಿಭಾಗದಲ್ಲಿ ನಾಲ್ಕರಿಂದ ಐದು ಜಿಲ್ಲೆಗಳು ಸೇರಿರುತ್ತವೆ. ಮಾಹಿತಿ ತಂತ್ರಜ್ಞಾನದ ತಂಡ ಇವರ ಜೊತೆಜೊತೆಗೇ ಕೆಲಸ ಮಾಡುತ್ತದೆ. ಬ್ರಿಗೇಡ್ನ ಸೈನಿಕರು ಇದುವರೆಗೆ ಕಾವೇರಿ, ಕಪಿಲಾ, ನಂದಿನಿ, ಕುಮಾರಧಾರ, ಹಿರಣ್ಯಕೇಶಿ, ಪಯಸ್ವಿನಿ ನದಿಗಳಿಂದ ಟನ್ಗಟ್ಟಲೆ ಪ್ಲಾಸ್ಟಿಕ್, ಸೀಸ,
ಬಟ್ಟೆ, ಮರ ಇತ್ಯಾದಿ ತ್ಯಾಜ್ಯವನ್ನು ಹೊರತೆಗೆದಿದ್ದಾರೆ.
ಭೀಮಾ ನದಿಯನ್ನು ಎರಡು ಬಾರಿ ಸ್ವಚ್ಛಗೊಳಿಸಿದ್ದಾರೆ. ಕಳೆದ ವರ್ಷ ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಕಾರ್ಯದ ಆರಂಭದಲ್ಲಿ ಆಯೋಜಿಸಿದ ‘ರನ್ ಫಾರ್ ವೃಷಭಾವತಿ’ಯಲ್ಲಿ ಸುಮಾರು ಹತ್ತು ಸಾವಿರ ಜನ
ಭಾಗವಹಿಸಿದ್ದರು ಎನ್ನುವುದು ಉಲ್ಲೇಖನೀಯ.
ಕಾರ್ಯಕರ್ತರು ರಾಜ್ಯಾದ್ಯಂತ ಇದುವರೆಗೆ 220ಕ್ಕೂ ಹೆಚ್ಚು ಕಲ್ಯಾಣಿ, ಪುಷ್ಕರಿಣಿಗಳನ್ನು ಶುಚಿಗೊಳಿಸಿದ್ದಾರೆ. ಯುವಾ ಬ್ರಿಗೇಡ್ ಕಳೆದ ಎರಡೂವರೆ ವರ್ಷದಿಂದ ‘ಕಣ ಕಣದಲ್ಲೂ ಶಿವ’ ಎಂಬ ಶಿರೋನಾಮದಡಿಯಲ್ಲಿ, ನದಿಯಲ್ಲಿ ಬಿಟ್ಟ, ಮರದ ಕೆಳಗೆ ಇಟ್ಟ, ಸುಮಾರು ನಾಲ್ಕು ಲಕ್ಷ ದೇವರ ಫೋಟೊಗಳನ್ನು ಆರಿಸಿ, ಅದರಲ್ಲಿನ ಗ್ಲಾಸು, ಮೊಳೆಗಳನ್ನೆಲ್ಲ ಬೇರ್ಪಡಿಸಿ, ಮರ ಮತ್ತು ದೇವರ ಪಟಗಳನ್ನು ಭೂಮಿಯಲ್ಲಿ ಹೂತು, ಅದರ ಮೇಲೆ ಗಿಡ ನೆಡುವ ಕೆಲಸ ಮಾಡಿದೆ. ತಮ್ಮ ರಾಜ್ಯದಲ್ಲಿಯೂ ಇದನ್ನೇ
ಮಾದರಿಯಾಗಿಸಿಕೊಂಡು ಗುಜರಾತ್ ಮತ್ತು ಉತ್ತರ ಪ್ರದೇಶದ ಕೆಲವು ಸಂಸ್ಥೆಗಳು ಕಾರ್ಯಾರಂಭ ಮಾಡಿವೆ.
ಸಂಘಟನೆಯು ಪ್ರವಾಹದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ 205 ಕುಟುಂಬಗಳಿಗೆ ಆ ಕ್ಷಣದಲ್ಲಿ ಸಹಾಯ ಒದಗಿಸಿದ್ದಲ್ಲದೇ ಮುಂದಿನ ಆರು ತಿಂಗಳು ಅವರ ಜೀವನ ನಡೆಯುವಂತೆ ಸಹಕಾರಿಯಾಗಲು ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಹತ್ತು ಸಾವಿರ
ರುಪಾಯಿಯ ಧನಸಹಾಯ ಒದಗಿಸಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬೆಳಗಾವಿ, ಶಿವಮೊಗ್ಗ, ಮೈಸೂರು, ಕಾರವಾರ ಇತ್ಯಾದಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇದುವರೆಗೆ ಒಟ್ಟೂ ಆರು ಮನೆಗಳನ್ನು ನಿರ್ಮಿಸಿ ಕೊಟ್ಟಿದೆ.
ಕಲಬುರ್ಗಿಯಲ್ಲಿ ಇನ್ನೊಂದು ಮನೆ ಕಟ್ಟುವ ಕೆಲಸ ನಡೆಯುತ್ತಿದೆ. ತಮಿಳುನಾಡಿನ ಗಡಿ ಭಾಗದಲ್ಲಿರುವ ಅನೆಕಲ್ ಗ್ರಾಮದಲ್ಲಿರುವ ಕನ್ನಡ ಶಾಲೆಗೆ ನಾಲ್ಕು ಕೊಠಡಿಯನ್ನು ಕಟ್ಟಿ ಕೊಟ್ಟಿದೆ. ಗಡಿಗೆ ಹೊಂದಿಕೊಂಡಿರುವ ಇನ್ನೊಂದು ಗ್ರಾಮ ಸೋಲೂರಿನಲ್ಲಿರುವ ಕನ್ನಡ ಶಾಲೆಯ ಕಟ್ಟಡದ ಕಾರ್ಯ ಅಂತಿಮ ಹಂತದಲ್ಲಿದೆ.
ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಳಗಾಗಿ ಛಾವಣಿಯವರೆಗೂ ಮುಳುಗಿ ಹೋಗಿದ್ದ ಶಾಲೆಯೂ, ಪ್ರೌಢ ಶಾಲೆಯೂ ಸೇರಿದಂತೆ ಹತ್ತು ಶಾಲೆಗಳನ್ನು ದತ್ತಕ್ಕೆ ಪಡೆದು, ಸಂಪೂರ್ಣ ದುರಸ್ತಿ, ಸುಣ್ಣ, ಬಣ್ಣದ ಕಾರ್ಯವನ್ನೆಲ್ಲ ಕೈಗೆತ್ತಿಕೊಂಡದ್ದಲ್ಲದೇ, ಆ ಶಾಲೆಗಳಿಗೆ ಬೇಕಾದ ಪೀಠೋಪಕರಣಗಳು, ವಾಟರ್ ಫಿಲ್ಟರ್, ಕ್ರೀಡಾ ಸಾಮಗ್ರಿಗಳು ಇತ್ಯಾದಿ ಸಕಲ ಸಲಕರಣೆಗಳನ್ನೂ ಒದಗಿಸುತ್ತಿದೆ.
ಹತ್ತು ಶಾಲೆಗಳಲ್ಲಿ history park, science park ಮತ್ತು maths park ನಿರ್ಮಿಸುವ ಸಂಕಲ್ಪ ತೊಟ್ಟಿದೆ. ಮುಂದಿನ ಐದು ವರ್ಷ ಆನ್ಲೈನ್ನಲ್ಲಿ ಗ್ರಾಫಿಕ್ಸ್ ಮುಖೇನ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿಯೂ ಯೋಜನೆ ರೂಪುಗೊಳ್ಳುತ್ತಿದೆ. ಕರೋನಾ ಕಾಲದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾದ ವಿದ್ಯಾರ್ಥಿಗಳಲ್ಲಿ ಶಾಲೆ ಇಲ್ಲದಿದ್ದರೂ ಆಸಕ್ತಿ ಹೆಚ್ಚಿಸಲು ಚಾಮರಾಜನಗರದ ದೀನಬಂಧು ಟ್ರಸ್ಟ್ನೊಂದಿಗೆ ಸೇರಿ “spark” ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ದ್ವಿಚಕ್ರ ವಾಹನದ ಹಿಂದಿರುವ ಪೆಟ್ಟಿಗೆಯಲ್ಲಿ ಸುಮಾರು ನಲವತ್ತರಷ್ಟು ಪ್ರಾಯೋಗಿಕ ವಸ್ತುಗಳನ್ನು ಬೇರೆ ಬೇರೆ ಸ್ಥಳಗಳಿಗೆ ಹೋಗಿ ನಾಲ್ಕಾರು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಪ್ರಯೋಗಗಳನ್ನು ಮಾಡಿ ತೋರಿಸುವ ವಿನೂತನ ಯೋಚನೆ ಇದು.
ಸರಕಾರ ಗುರುತಿಸದ ಅನೇಕ ಕನ್ನಡ ನಾಡಿನ ಐತಿಹಾಸಿಕ, ಪಾರಂಪರಿಕ, ಸಾಹಿತ್ಯಿಕ ಸ್ಥಳಗಳನ್ನು ಗುರುತಿಸಲು ಮತ್ತು
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿಯೂ ತಂಡ ವಿಶೇಷ ಆಸಕ್ತಿ ತೋರಿಸಿದೆ. ನೂರಾರು ವರ್ಷದ ಇತಿಹಾಸವಿರುವ
ಮರಗಳು, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣರಂಥ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಕಣ್ಣು ತಪ್ಪಿಸಿ, ತಂತ್ರ
ನಿರೂಪಿಸಲು ಸೇರುತ್ತಿದ್ದ ಸ್ಥಳಗಳು, ನಾಡಿನ ಹೆಸರಾಂತ ವ್ಯಕ್ತಿಗಳ ಮನೆ, ಕಚೇರಿ, ಈ ರೀತಿ ಒಟ್ಟೂ ಆರು ನೂರು ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದು, ಇಂಗ್ಲೆೆಂಡಿನ ‘ಬ್ಲೂ ಪ್ಲೇಕ್ಸ್’ ಮಾದರಿಯಲ್ಲಿ ‘ರೆಲ್ಲೋ ಪ್ಲೇಕ್ಸ್’ (ನಾಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ಬಣ್ಣದ ಫಲಕ, red and yellow plaque) ಗಳನ್ನು ಹಾಕುವ ಕಾರ್ಯ ಇದಾಗಿದೆ.
ಇದುವರೆಗೆ ಸುಮಾರು ಎಪ್ಪತ್ತು ಕಡೆಗಳಲ್ಲಿ ಈ ಪ್ಲೇಕ್ಸ್ಗಳನ್ನು ಹಾಕಲಾಗಿದೆ. ಮೊದಲ ಪ್ಲೇಕ್ಸನ್ನು ನಾಡಿನ ಹೆಸರಾಂತ
ಕವಿ ಕುವೆಂಪು ಅವರು ಮೈಸೂರಿನಲ್ಲಿ ವಾಸವಾಗಿದ್ದ ಮನೆಯಿಂದ ಆರಂಭಿಸಲಾಗಿದೆ. ಇದುವರೆಗೆ ಸುಮಾರು ಎರಡು ಸಾವಿರ ಜನ ಅನ್ಯ ರಾಜ್ಯದವರಿಗೆ ಪ್ರಾಥಮಿಕ ಕನ್ನಡ ಕಲಿಸಿದ ಕೀರ್ತಿ ಈ ತಂಡಕ್ಕಿದೆ.
ಕನ್ನಡ ಗಂಗೆ, ಕನ್ನಡವೇ ಸತ್ಯ ಇತ್ಯಾದಿ ಅವಿಸ್ಮರಣೀಯ ಕನ್ನಡದ ಕಾರ್ಯಕ್ರಮಗಳನ್ನು ನೀಡಿದೆ. ಸದ್ಯದಲ್ಲೇ ‘ಕಂಪು’ kannada amplifies you ನ ಸಣ್ಣ ರೂಪ) ಯೋಜನೆಯಲ್ಲಿ ಕನ್ನಡದ ಒಳ್ಳೆಯ ಪುಸ್ತಕಗಳ ಆಡಿಯೋ ಬುಕ್ ಕೂಡ ಅನಾವರಣಗೊಳ್ಳಲಿದೆ.
ಯುವ ಪೀಳಿಗೆ ಓದಲೇಬೇಕಾದ, ಮನಸ್ಸು ಉಲ್ಲಸಿತವಾಗುವ ಪುಸ್ತಕಗಳ ಓದು ಹಿನ್ನೆಲೆ ಸಂಗೀತದೊಂದಿಗೆ ಹೊರಬರಲಿದೆ.
ಮುಂದಿನ ವರ್ಷ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳಾಗುತ್ತಿರುವ ಸಂಭ್ರಮದ ಸಂದರ್ಭದಲ್ಲಿ ‘ಸ್ವರಾಜ್ಯಕ್ಕೆ ಮುಕ್ಕಾಲ್ನೂರು’ ಎಂಬ ಎಪ್ಪತ್ತೈದು ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟನೆ ಆಯೋಜಿಸುತ್ತಿದೆ.
ಕಳೆದ ಆಗಸ್ಟ್ನಿಂದ ಆರಂಭವಾದ ಈ ಯೋಜನೆಯಲ್ಲಿ ಕರುನಾಡ ಹನುಮ, ವೀರ ಕೇಸರಿ, ಕ್ಷೇತ್ರ ಸ್ವಚ್ಛತೆಯಂಥ ಕಾರ್ಯಕ್ರಮಗಳು ಸೇರಿವೆ. ‘ಯುವಾ ಫಾರ್ಮ್’ನಲ್ಲಿ ಸಾವಯವ ಕೃಷಿಗೆ ಸಂಬಂಧಿಸಿದ ವಿಷಯಗಳ ಅಭ್ಯಾಸ ನಡೆದಿದ್ದು, ರೈತರು ಎದುರಿಸುವ ಸವಾಲುಗಳನ್ನು ಸ್ವತಃ ತಿಳಿಯುವ ಪ್ರಯತ್ನ ಇದಾಗಿದೆ. ಶೀಘ್ರದಲ್ಲಿ ರೈತರ ಪ್ರಶ್ನೆಗೆ ರೈತರೇ ಉತ್ತರಿಸುವ ask farmer’
ವೆಬ್ ಸೈಟ್ ಕೂಡ ಆರಂಭವಾಗಲಿದೆ. ಇದುವರೆಗೆ ಸುಮಾರು ಇಪ್ಪತ್ತು ಮೃತ ಸೈನಿಕರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡಿದೆ.
ಭಾರತದ ಸೇನೆಗೆ ಸೇರಲು ಬಯಸಿದ ಇನ್ನೂರಕ್ಕೂ ಹೆಚ್ಚು ಯುವಕರಿಗೆ ನಿವೃತ್ತ ಸೈನಿಕರ ಸಹಾಯದಿಂದ ತರಬೇತಿ ನೀಡಿದೆ. ಸ್ವಂತ ಉದ್ಯೋಗ ಆರಂಭಿಸುವ ಯುವಕರ ಮಾರ್ಗದರ್ಶನಕ್ಕೆಂದು ಹಮ್ಮಿಕೊಂಡ ‘ಫಿಫ್ತ್ ಪಿಲ್ಲರ್’ಆಗಲೀ, ನಾಡಿನಲ್ಲಿ ತಯಾರಾಗುವ ವಸ್ತುಗಳನ್ನು ಮಾರಾಟ ಮಾಡಲು ಅಥವಾ ಕೊಂಡುಕೊಳ್ಳಲು ಅನುಕೂಲವಾಗುವ “Glocal India ವೆಬ್ ಸೈಟ್ ಆಗಲಿ, ವಾಣಿಜ್ಯಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಯುವಾ ಬ್ರಿಗೇಡ್ ನೀಡಿದ ಉಡುಗೊರೆ. ಕೋವಿಡ್ ಸಂದರ್ಭದಲ್ಲಿ ನಡೆಸಿದ ಆಸ್ಪತ್ರೆಯ ಸ್ವಚ್ಛತಾ ಕಾರ್ಯ, ಪ್ರತಿನಿತ್ಯ ಬೆಳಿಗ್ಗೆ ‘ಬಿರುಗಾಳಿಯ ಸಂತ’ನ ಪ್ರೇರಣಾದಾಯಕ ನುಡಿಗಳು, ಎಲ್ಲವನ್ನೂ ವಿವರವಾಗಿ ಪಟ್ಟಿ ಮಾಡಿದರೆ ಹನುಮಂತನ ಬಾಲಕ್ಕಿಂತ ಉದ್ದವಾದೀತು.
ಗಮನಿಸಬೇಕಾದ ಅಂಶವೆಂದರೆ, ಇದರಲ್ಲಿ ಬಹುತೇಕ ಕಾರ್ಯಗಳನ್ನೆಲ್ಲ ಸ್ವಯಂಸೇವಕರೇ ಮಾಡಿದ್ದು, ಮಾಡುತ್ತಿದ್ದು, ಅವಶ್ಯಕತೆ ಇದ್ದಾಗ ಮಾತ್ರ ಕಂಪನಿಗಳಿಂದ, ದಾನಿಗಳಿಂದ, ಟ್ರಸ್ಟ್ ಗಳಿಂದ ಸಹಾಯ ಪಡೆದಿದ್ದಾರೆ. ಭವಿಷ್ಯದಲ್ಲಿಯೂ ಇದೇ
ರೀತಿ ಮುಂದುವರಿಯಲು ಸಂಘಟನೆ ನಿರ್ಣಯಿಸಿದೆ. ಈ ಸಂಘಟನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಕೆಲಸವಿದೆ. ಒಬ್ಬರೂ ಹೊಟ್ಟೆೆಪಾಡಿಗೆಂದು ಬಂದು ದುಡಿಯುವವರಲ್ಲ.
ಜತೆಗೆ, ಸಂಘಟನೆಗಾಗಿ ದುಡಿಯುವ ಭರದಲ್ಲಿ ತಮ್ಮ ಸಂಸಾರ, ಮನೆಯವರು, ಪರಿವಾರ ಬಳಗದವರನ್ನು ಅಲಕ್ಷಿಸಬಾರದು, ಉಪೇಕ್ಷಿಸಬಾರದು, ತಮ್ಮ ಕರ್ತವ್ಯವನ್ನು ಮರೆಯಬಾರದೆಂಬ ಕಳಕಳಿಯೂ ಸಂಘಟನೆಯ ಮೂಲ ಮಂತ್ರಗಳಲ್ಲೊಂದು. ತಮ್ಮ ಕೆಲಸದ ನಡುವೆಯೇ ನಾಡಿಗಾಗಿ ದಿನದ ಕೆಲವು ಗಂಟೆಗಳನ್ನೋ, ತಿಂಗಳಿನ ಕೆಲವು ದಿನಗಳನ್ನೋ ಈ ಕಾರ್ಯಕ್ಕೆ ಮೀಸಲಿಡುತ್ತಾರೆ. ಇದುವರೆಗೆ ಯಾರನ್ನೂ ಸಂಘಟನೆಗೆ ಸೇರಿಕೊಳ್ಳುವಂತೆ ದುಂಬಾಲು ಬಿದ್ದಿಲ್ಲ, ಅಂಗಲಾಚಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದಲೇ ಸಂಘಟನೆಯೊಂದಿಗೆ ಸೇರಿಕೊಂಡವರು ಎಂಬುದು ಇನ್ನೊಂದು ಮಹತ್ವದ ಸಂಗತಿ.
ನಾನು ಮೈಸೂರಿನಲ್ಲಿರುವಾಗ ಪರಿಚಯವಾದ ಒಬ್ಬ ಯುವಕ ತನ್ನ ಜೀವನೋಪಾಯಕ್ಕೆ ಮಾಡಿಕೊಂಡ ಸಣ್ಣ ಆದಾಯದ ಫೋಟೊ ಸ್ಟುಡಿಯೋವನ್ನು ಒಂದು ತಿಂಗಳ ಮಟ್ಟಿಗೆ ಬಾಗಿಲು ಹಾಕಿ ಬಂದಿದ್ದ. ಒಂದು ತಿಂಗಳಿನ ಆದಾಯ ಬಿಟ್ಟು ಹೇಗೆ ಬಂದೆಯೆಂದು ಕೇಳಿದ್ದಕ್ಕೆ, ‘ದೇಶ ನಮಗೆ ಇಷ್ಟೆಲ್ಲ ಕೊಟ್ಟಾಗ ನನ್ನ ಒಂದು ತಿಂಗಳಿನ ಆದಾಯವನ್ನು ದೇಶಕ್ಕಾಗಿ ಬಿಡುವುದು ಏನು ಮಹಾ’ ಎಂದು ತಣ್ಣಗೆ ನುಡಿದು ನಕ್ಕಿದ್ದ.
ಸಂಕೇಶ್ವರದಲ್ಲಿ ನನ್ನೊಂದಿಗಿದ್ದ ಶಿವಾನಂದ, ನಿಖಿಲ್ ಮಿರ್ಜಿ, ಸಚಿನ್ ಬಾಳಿಕಾಯಿ ಮತ್ತು ಅವರ ತಂಡದವರೆಲ್ಲ ವಾರಾನು ಗಟ್ಟಲೆ ಕೆಲಸದಿಂದ ರಜೆ ಪಡೆದು ಸಂಘಟನೆಯ ಕೆಲಸಮಾಡಿದ್ದನ್ನು ಕಂಡಿದ್ದೇನೆ. ಇವರ್ಯಾರೂ ಹಣದ ಆಮಿಷಕ್ಕಾಗಿಯೋ, ಊಟದ ಆಸೆಯಿಂದಲೋ ಅಥವಾ ಪ್ರಚಾರದ ಪ್ರೀತಿಯಿಂದಲೋ ಬಂದವರಲ್ಲ. ಇಂಥವರೆಲ್ಲ ಒಂದಾಗಲು ಕಾರಣ ಅವರಲ್ಲಿರುವ ದೇಶಭಕ್ತಿ, ಮನದಲ್ಲಿರುವ ಒಂದೇ ಮಂತ್ರ. ರಾಷ್ಟ್ರ, ರಾಷ್ಟ್ರ, ರಾಷ್ಟ್ರ!
ಇಂಥವರನ್ನೆಲ್ಲ ಒಂದೆಡೆ ಸೇರುವಂತೆ ಮಾಡಿ, ಇವರನ್ನೆಲ್ಲ ಹುರಿದುಂಬಿಸಿ ಪ್ರೇರಣೆ ನೀಡುವವರು ಸ್ವತಃ ಕಂಪ್ಯೂಟರ್ ಎಂಜಿನಿಯರ್ ಆದರೂ ದೇಶಸೇವೆಯೇ ಪರಮೋಧರ್ಮ ಎಂದು ನಂಬಿ, ದೇಶಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ
ಸ್ಫೂರ್ತಿಯ ಚಿಲುಮೆ, ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ. ಈ ಸಂಘಟನೆಯ ವಿಶೇಷವೆಂದರೆ ಉಳಿದ ಸಂಸ್ಥೆಯಂತೆ ಇದರಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಇತ್ಯಾದಿ ಹುದ್ದೆಗಳಿಲ್ಲ. ವರ್ಷಕ್ಕೋ ಎರಡು ವರ್ಷಕ್ಕೋ ಆ ಸ್ಥಾನಗಳಿಗೆ ಚುನಾವಣೆ ನಡೆಯುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ಒಂದೊಂದು ಹೊಣೆಗಾರಿಕೆಯಿರುತ್ತದೆ. ಆ ಹೊಣೆಗಾರಿಕೆಯೂ ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತದೆ.
ಎಲ್ಲವೂ ಅವರವರೇ ಪ್ರೀತಿಯಿಂದ ಒಪ್ಪಿಕೊಂಡು ಮಾಡುವ ಕೆಲಸ. ಒಮ್ಮೆ ಒಪ್ಪಿಕೊಂಡ ಕಾರ್ಯಕ್ಕೆ ಕೈ ಹಾಕಿದರೆ ಮುಗಿಯಿತು, ಅಗಚಾಟಲು, ಚಿಲ್ಲತನ ಇಲ್ಲವೇ ಇಲ್ಲ. ದಣಿವು, ಆಯಾಸ ಕೇಳಲೇ ಬೇಡಿ. ಒಬ್ಬೊಬ್ಬರದ್ದೂ ಸಹಸ್ರ ಗಜಬಲ. ಇಷ್ಟೆಲ್ಲ ಮಾಡುವು ದಕ್ಕೆ ಒಬ್ಬರಿಗೂ ಸಂಸ್ಥೆಯ ವತಿಯಿಂದ ಸಂಬಳವಿಲ್ಲ, ಉಡುಗೊರೆಯಿಲ್ಲ, ಭಕ್ಷೀಸು ಇಲ್ಲ. ರಾಷ್ಟ್ರ ಹಿತಕ್ಕಾಗಿ ದುಡಿದ ಆತ್ಮ ತೃಪ್ತಿಯೇ ಇವರಿಗೆ ಸಂಬಳ. ಇವರ ಕಾರ್ಯಗಳನ್ನು ಶ್ಲಾಘಿಸಿ ನುಡಿದ ಎರಡು ನುಡಿಗಳೇ ಇವರಿಗೆ ಉಡುಗೊರೆ.
ಇವರಿಂದ ಸಹಾಯ ಪಡೆದವರ ಮುಖದ ಮೇಲಿನ ಒಂದು ನಗುವೇ ಇವರಿಗೆ ಭಕ್ಷೀಸು. ರಾಷ್ಟ್ರ ಕಟ್ಟುವ ರಟ್ಟೆಗೆ ಇನ್ನಷ್ಟು ಬಲ ಬರಲಿ, ದೇಶದ ಹಿತಕ್ಕೆ ದುಡಿಯುವವರ ತೋಳಿಗೆ ಇನ್ನಷ್ಟು ಶಕ್ತಿ ಸಿಗಲಿ, ಇನ್ನಷ್ಟು ಸುಮನಸ್ಕರು ನಾಡು ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸು ವಂತಾಗಲಿ. ಇಂತಹ ಕಾರ್ಯಗಳು ರಾಜ್ಯಕ್ಕಷ್ಟೇ ಸೀಮಿತವಾಗಿರದೆ, ರಾಷ್ಟ್ರವ್ಯಾಪಿಯಾಗಲಿ.