Thursday, 19th September 2024

Ajit Doval Russia Visit: ದೋವಲ್‌ ಮೂಲಕ ಪುಟಿನ್‌ಗೆ ಮೋದಿ ಸಂದೇಶ ರವಾನೆ; ರಷ್ಯಾ-ಉಕ್ರೇನ್‌ ಸಮರಕ್ಕೆ ಅಂತ್ಯ ಫಿಕ್ಸ್‌?

Ajit doval Russia Visit

ಮಾಸ್ಕೋ: ಉಕ್ರೇನ್‌(Ukraine) ಜತೆಗಿನ ತನ್ನ ಸಮರಕ್ಕೆ ಅಂತ್ಯ ಹಾಡುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಷ್ಯಾ, ಸಂಧಾನಕ್ಕೆ(Russia-Ukraine War) ಮುಂದಾಗಿದ್ದು, ಮಧ್ಯಸ್ಥಿಕೆ ವಹಿಸುವಂತೆ ಭಾರತದತ್ತ ಮುಖಮಾಡಿದೆ. ಮತ್ತೊಂದೆಡೆ ಉಭಯ ರಾಷ್ಟ್ರಗಳ ನಡುವಿನ ಯುದ್ಧವನ್ನು ಅಂತ್ಯಗೊಳಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಆಗಾಗ ಪುನರುಚ್ಛರಿಸಿದ್ದಾರೆ. ಇದೀಗ ಇಷ್ಟೆಲ್ಲಾ ಬೆಳವಣಿಗೆ ನಡುವೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್(Ajit Doval Russia Visit) ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌(Vladimir Putin) ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಕಾನ್ಸ್ಟಾಂಟಿನೋವ್ಸ್ಕಿ ಅರಮನೆಯಲ್ಲಿ ಪುಟಿನ್‌ ಅವರನ್ನು ಭೇಟಿ ಮಾಡಿದ ಅಜಿತ್‌ ದೋವಲ್‌, ಇತ್ತೀಚೆಗೆ ಉಕ್ರೇನ್‌ ಪ್ರವಾಸದ ಕುರಿತ ಪ್ರಧಾನಿ ಮೋದಿ ಕಳಿಸುವ ಸಂದೇಶವನ್ನು ತಲುಪಿಸಿದ್ದಾರೆ. ಅಲ್ಲದೇ ಉಕ್ರೇನಿಯನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆ ಪುಟಿನ್ ಮಾತುಕತೆ ನಡೆಸುವಂತೆ ಪ್ರಧಾನಿ ಮೋದಿ ಇಚ್ಛಿಸಿದ್ದಾರೆ ಎಂದು ದೋವಲ್‌ ತಿಳಿಸಿದ್ದಾರೆ.

ಈ ಹಿಂದೆ ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಸಮ್ಮೇಳನಕ್ಕಾಗಿ ಭಾರತೀಯ ಎನ್‌ಎಸ್‌ಎ ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್ ಮತ್ತು ದೋವಲ್ ನಡುವೆ ಮಾತುಕತೆ ನಡೆದಿತ್ತು. ಕಜಾನ್‌ನಲ್ಲಿ ಅಕ್ಟೋಬರ್ 22 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಪುಟಿನ್‌ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಉಕ್ರೇನ್‌ ಮತ್ತು ರಷ್ಯಾ ಭಾರತದ ಮಿತ್ರ ರಾಷ್ಟ್ರಗಳಾಗಿದ್ದು, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಯುದ್ಧ ಕೈಬಿಡುವಂತೆ ಕರೆ ನೀಡಿದ್ದರು. ರಣರಂಗದಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದರು. ಅಲ್ಲದೇ ಶಾಂತಿ ಮಾತುಕತೆಯತ್ತಗಮನ ಹರಿಸುವಂತೆ ಪುಟಿನ್‌ಗೆ ಕರೆ ಮಾಡಿ ಮನವಿ ಮಾಡಿದ್ದರು. ಉಕ್ರೇನ್‌ಗೆ ಶಾಶ್ವತ ಶಾಂತಿಯನ್ನು ತರಲು ವಿಚಾರಗಳನ್ನು ಚರ್ಚಿಸಲು ಭಾರತವು ತನ್ನ ಎನ್‌ಎಸ್‌ಎಯನ್ನು ಮಾಸ್ಕೋಗೆ ಕಳುಹಿಸಲಿದೆ ಎಂದು ಉಭಯ ನಾಯಕರು ಈ ಕರೆಯ ಸಮಯದಲ್ಲಿ ಚರ್ಚಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಅದೇನೇ ಇದ್ದರೂ, NSA ದೋವಲ್ ಯಾವಾಗ ರಷ್ಯಾಕ್ಕೆ ಭೇಟಿ ನೀಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ವ್ಲಾಡಿವೋಸ್ಟಾಕ್ ನಗರದಲ್ಲಿ ರಷ್ಯಾದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮಾತುಕತೆಗೆ ಸಿದ್ಧವಾಗಿದೆ. ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿಯೇ ಇದ್ದೇವೆ. ನಾವು ಎಂದೂ ಮಾತುಕತೆಗೆ ನಿರಾಕರಿಸಿಲ್ಲ, ಆದರೆ ಕೆಲವು ಅಲ್ಪಕಾಲಿಕ ಬೇಡಿಕೆಗಳ ಆಧಾರದ ಮೇಲೆ ಮಾತುಕತೆ ಸಫಲವಾಗಲು ಸಾಧ್ಯವಿಲ್ಲ. ಮಾತುಕತೆಯ ಮಧ್ಯಸ್ಥಿಕೆಯನ್ನು ಭಾರತ, ಚೀನಾ ಮತ್ತು ಬ್ರೆಜಿಲ್‌ ವಹಿಸಿದರೆ ಉತ್ತಮ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ajit Doval: ಮೋದಿ ಭೇಟಿ ಬೆನ್ನಿಗೇ ಅಜಿತ್ ಧೋವಲ್ ರಷ್ಯಾಗೆ ಧಾವಿಸುತ್ತಿರುವುದೇಕೆ?