Friday, 22nd November 2024

Shreyas Iyer: ಶೋಕಿ ಮಾಡಲು ಹೋಗಿ ಶೂನ್ಯ ಸುತ್ತಿದ ಶ್ರೇಯಸ್‌ ಅಯ್ಯರ್‌

Shreyas Iyer

ಅನಂತಪುರ: ಪ್ರಸಕ್ತ ಸಾಗುತ್ತಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌(Duleep Trophy) ಟೂರ್ನಿಯಲ್ಲಿ ಭಾರತ ʼಡಿʼ ತಂಡದ ನಾಯಕ ಶ್ರೇಯಸ್‌ ಅಯ್ಯರ್‌(Shreyas Iyer) ಅವರ ಬ್ಯಾಟಿಂಗ್‌ ವೈಫಲ್ಯ ಮತ್ತೆ ಮುಂದುವರಿದೆ. ಜತೆಗೆ ಅವರ ಬ್ಯಾಟಿಂಗ್‌ ಕಂಡು ನೆಟ್ಟಿಗರು ಟ್ರೋಲ್‌ ಕೂಡ ಮಾಡಿದ್ದಾರೆ.

ಇಂಡಿಯಾ ʼಎʼ ತಂಡ ನೀಡಿದ 290 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ ʼಡಿʼ ತಂಡ ದ್ವಿತಿಯ ದಿನದಾಟದಲ್ಲಿ 183 ರನ್‌ಗೆ ಸರ್ವಪತನ ಕಂಡಿದೆ. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಶ್ರೇಯಸ್‌ ಅಯ್ಯರ್‌ 7 ಎಸೆತ ಎದುರಿಸಿ ಶೂನ್ಯಕ್ಕೆ(shreyas iyer ducks) ವಿಕೆಟ್‌ ಕಳೆದುಕೊಂಡರು. ಸನ್​ಗ್ಲಾಸ್​ ಧರಿಸಿ, ಸಖತ್​ ಸೈಲಿಶ್ ಆಗಿ ಎಂಟ್ರಿ ಕೊಟ್ಟ ಅಯ್ಯರ್ ತಾವು ತೋರಿದ ಈ ಶೋಕಿಗೆ ಕನಿಷ್ಠ ಒಂದು ರನ್‌ ಗಳಿಸಲು ಸಾಧ್ಯವಾಗದ ಕಾರಣ ನೆಟ್ಟಿಗರು ಅವರನ್ನು ಟ್ರೋಲ್‌ ಮಾಡಿದ್ದಾರೆ. ಮೊದಲು ಶೋಕಿ ಬಿಟ್ಟು ರನ್‌ಗಳಿಸುವತ್ತ ಗಮನಹರಿಸಿ ಎಂದು ಬುದ್ಧಿವಾದ ಹೇಳಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿಯೂ ಅಯ್ಯರ್‌ ಒಂದಂಕಿಗೆ ಸೀಮಿತರಾಗಿದ್ದರು.

ಇನ್ನು ಕೆಲ ನೆಟ್ಟಿಗರು ರನ್​ಗಳು ಅಗತ್ಯವಿದ್ದಾಗ ಈ ರೀತಿ ಶೋಕಿ ಬೇಕಿತ್ತೇ? ಎಂದು ಅಯ್ಯರ್‌ಗೆ ಪ್ರಶ್ನೆ ಮಾಡಿದ್ದಾರೆ. ಕೆಲವರು ಸನ್‌ಗ್ಲಾಸ್‌ ಹಾಕಿಯೂ ಚೆಂಡು ಸರಿಯಾಗಿ ಕಾಣಿಸಿಲ್ಲವೆಂದರೆ ನಿಮ್ಮಗೆ ದೃಷ್ಟಿ ದೋಷವಿದೆ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ Virat Kohli: 3 ತಿಂಗಳ ಬಳಿಕ ಭಾರತಕ್ಕೆ ಬಂದ ವಿರಾಟ್‌ ಕೊಹ್ಲಿ

ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತ ತಂಡದ ಭವಿಷ್ಯದ ಆಟಗಾರ ಎಂದು ಪರಿಗಣಿಸಲಾಗಿತ್ತು. ತಂಡ ಸೇರಿದ್ದ ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅಯ್ಯರ್‌ ಬಳಿಕ ತಮ್ಮ ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡರು. ಜತೆಗೆ ಪದೇಪದೆ ಗಾಯಕ್ಕೂ ತುತ್ತಾಗಿ ಹಲವು ಸರಣಿಯಿಂದ ಹೊರಗುಳಿದಿದ್ದರು. ಬ್ಯಾಟಿಂಗ್‌ ಲಯ ಕಳೆದುಕೊಂಡ ಕಾರಣಕ್ಕೆ ಅವರಿಗೆ ಬಿಸಿಸಿಐ ದೇಶೀ ಕ್ರಿಕೆಟ್​ ಟೂರ್ನಿ ಆಡುವಂತೆ ಸೂಚಿಸಿತ್ತು. ಆದರೆ ಇಲ್ಲಿಯೂ ಅಯ್ಯರ್‌ ವಿಫಲವಾಗಿದ್ದಾರೆ. ಯುವ ಆಟಗಾರರ ಪೈಪೋಟಿ ಮಧ್ಯೆ ಅವರು ತಂಡಕ್ಕೆ ಸೇರುವುದು ಅನುಮಾನ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ತವರಿನ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯ ವೇಳೆ ಅಯ್ಯರ್​ ಗಾಯಗೊಂಡು ಸುಮಾರು ಆರು ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಬಳಿಕ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ಪಾಸ್​ ಆಗಿ ಏಷ್ಯಾಕಪ್​ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್​ಗೆ ಪುನರಾಗಮನ ಮಾಡಿದ್ದರು. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿಯೂ ಅವರು ವೈಫಲ್ಯ ಕಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿರಲಿಲ್ಲ. ಅಯ್ಯರ್‌ ಮುಂದಿನ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದರೆ ಮಾತ್ರ ಅವರಿಗೆ ಭಾರತ ತಂಡದ ಬಾಗಿಲು ತೆರೆಯಬಹುದು.