Saturday, 23rd November 2024

Murder Case: ಮೋಸದ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ; ಏನಾಯಿತು ಆಕೆಗೆ?

Murder Case

ರಾಮ್ಟೆಕ್: ಪ್ರೀತಿ ಮಾಯೆ. ಅದರಲ್ಲಿ ಮೋಸ, ವಂಚನೆ ಇದ್ದೇ ಇರುತ್ತದೆ. ಎಷ್ಟೋ ಯುವತಿಯರು ಈ ಮೋಸದ ಪ್ರೀತಿಯ ಜಾಲಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಂಡಿರುವುದಲ್ಲದೇ ಅದೆಷ್ಟೋ ಯುವತಿಯರು ತಮ್ಮ ಜೀವವನ್ನೇ ಕೊನೆಗಾಣಿಸಿಕೊಂಡಿದ್ದಾರೆ. ಇಷ್ಟಾದರೂ ಕೂಡ ಇನ್ನೂ ಯುವತಿಯರು ಈ ಮೋಸದ ಪ್ರೀತಿಯ ಬಲೆಗೆ ಬೀಳುವುದು ಕಡಿಮೆಯಾಗಿಲ್ಲ. ಇತ್ತೀಚೆಗೆ ರಾಮ್ಟೆಕ್‍ನ ಅಂಬಾಲಾ ಬಳಿಯ ಅಮ್ಗಾಂವ್ ಪ್ರದೇಶದ ಟೇಕ್ರಿಯಲ್ಲಿ ಯುವತಿಯೊಬ್ಬಳು ಸುಳ್ಳು ಪ್ರೀತಿಯನ್ನು ನಂಬಿ ಮೋಸ ಹೋಗಿ ಕೊನೆಗೆ ಶವವಾಗಿ (Murder Case) ಪತ್ತೆಯಾಗಿದ್ದಾಳೆ.

24 ವರ್ಷದ ಯುವತಿಯ ಶವ ಪತ್ತೆಯಾಗಿದ್ದು, ಆಕೆಯ ಗೆಳೆಯ ಮಹೇಶ್ ಕೇಶವ್ ವಾಲ್ಸ್ಕರ್ ಆಗಸ್ಟ್ 17 ರಂದು ಅವಳನ್ನು ಕೊಲೆ ಮಾಡಿ ಶವವನ್ನು ಟೇಕ್ರಿಯಲ್ಲಿ ನೆಲದಲ್ಲಿ ಹೂತುಹಾಕಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಮಹೇಶ್ ವಾಲ್ಸ್ಕರ್ ಮತ್ತು ಯುವತಿ ಪ್ರೀತಿಯ ಸಂಬಂಧದಲ್ಲಿದ್ದರು. ಆರೋಪಿ ಮಹೇಶ್ ಹಾಲಿನ ಪುಡಿ ತಯಾರಿಕೆಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಆರು ವರ್ಷಗಳ ಹಿಂದೆ ತನ್ನ ಕಂಪನಿಯಲ್ಲಿ ಯುವತಿಯನ್ನು ನೇಮಿಸಿಕೊಂಡಿದ್ದಾನೆ.

ಪ್ರತ್ಯೇಕ ವಾಸಿಸುತ್ತಿದ್ದ ಯುವತಿ

ಯುವತಿ ಗೋಧಾನಿಯಲ್ಲಿ ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ನಡುವೆ ಮಹೇಶ್ ರಾಮ್ಟೆಕ್‍ನಲ್ಲಿ ರೆಸಾರ್ಟ್ ವ್ಯವಹಾರ ಸಹ ಪ್ರಾರಂಭಿಸಿದ್ದಾನೆ. ಅಲ್ಲಿಗೆ ಯುವತಿಗೆ ಆಗಾಗ್ಗೆ ಬರುತ್ತಿದ್ದಳು. ಅವರ ನಡುವೆ ದೈಹಿಕ ಸಂಬಂಧ ಬೆಳೆದು ಅವಳು ಗರ್ಭಿಣಿಯಾಗಿದ್ದಾಳೆ. ಆಗ ಮಹೇಶ್ ಅವಳಿಗೆ ಗರ್ಭಪಾತ ಮಾಡಲು ಒತ್ತಾಯಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಆಗಸ್ಟ್ 16ರಿಂದ ಯುವತಿ ನಾಪತ್ತೆಯಾಗಿದ್ದು, ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಆಕೆಯ ತಾಯಿ ಗೋಧಾನಿಯಲ್ಲಿರುವ ಆಕೆಯ ರೂಂಗೆ ಹೋದಾಗ ಅದು ಲಾಕ್ ಆಗಿರುವುದನ್ನು ಕಂಡು ಮಂಕಾಪುರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ದೂರು ದಾಖಲಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಮಹೇಶ್‍ನನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: PM Modi Birthday: ಪ್ರಧಾನಿ ಮೋದಿ ಬರ್ತ್‌ಡೇಗೆ ಅಜ್ಮೀರ್‌ ದರ್ಗಾದಲ್ಲಿ 4000 ಕೆ.ಜಿ ಸಸ್ಯಾಹಾರ ಅನ್ನದಾಸೋಹ

ವಿಚಾರಣೆ ವೇಳೆ ಮಹೇಶ್ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಹಾಗಾಗಿ ಅವಳನ್ನು ಅಂಬಾಲಾದ ರೆಸಾರ್ಟ್ ನಲ್ಲಿ ಕತ್ತು ಹಿಸುಕಿ ಕೊಂದು ಅವಳ ದೇಹವನ್ನು ನೆಲದಲ್ಲಿ ಹೂತುಹಾಕಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬುಧವಾರ ಪೊಲೀಸರು ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹೇಶ್‍ನನ್ನು ಬಂಧಿಸಿದ್ದಾರೆ ಮತ್ತು ಮಂಕಾಪುರ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.