Saturday, 23rd November 2024

Newspaper Distributor: ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ, ಆರೋಗ್ಯ ವಂತ ಸಮಾಜಕ್ಕೆ ಸಹಕಾರಿ: ಅಜಿತ್‌ಬಾಬು

ಪತ್ರಿಕಾ ವಿತರಕರಿಗೆ ಲಯನ್ಸ್ ಸಂಸ್ಥೆಯಿಂದ ರೈನ್ ಕೋಟ್ ವಿತರಿಸಿ ಹೇಳಿಕೆ

ಗೌರಿಬಿದನೂರು: ಸೂರ್ಯ ಹುಟ್ಟುವ ಮುನ್ನ ಮನೆಮನೆಗೆ ಪತ್ರಿಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಲಯನ್ಸ್ ಸಂಸ್ಥೆ 317 ಎಫ್‌ನ ಪಿಆರ್‌ಒ ಮತ್ತು ಹುಮೆನಿಟೆರಿಯನ್ ಸೇವಾ ಕಾರ್ಯಗಳ ಜಿಲ್ಲಾಧಿಕಾರಿಯಾದ ಅಜಿತ್ ಬಾಬು ತಿಳಿಸಿದರು.

ನಗರದ ಮುನೇಶ್ವರ ಬಡಾವಣೆಯಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರ ಲಯನ್ಸ್ ಸಂಸ್ಥೆ ಮತ್ತು ಸ್ಥಳೀಯ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 30ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ರೈನ್ ಕೋಟ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಲಯನ್ಸ್ ಸಂಸ್ಥೆಯು ನಿರಂತರವಾಗಿ ಸಮಾಜದಲ್ಲಿನ ಶ್ರಮಿಕ ವರ್ಗದವರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಬದ್ಧ ವಾಗಿದೆ. ಇದರಿಂದಾಗಿ ಅವರ ಕಾರ್ಯಕ್ಕೆ ನೆರವಾಗುವ ಜೊತೆಗೆ ಬದುಕಿಗೆ ಸಹಕಾರಿಯಾಗಲಿದೆ. ಈಗಾಗಲೇ ಜಿಲ್ಲಾ ಲಯನ್ಸ್ 317 ಎಫ್ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ರೈನ್ ಕೋಟ್ ಗಳನ್ನು ವಿವಿಧ ವರ್ಗದ ಶ್ರಮಿಕರಿಗೆ ನೀಡಲಾಗಿದೆ ಎಂದು ಹೇಳಿದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಸಿ.ಎನ್.ನಂಜೇಗೌಡ ಮಾತನಾಡಿ, ಲಯನ್ಸ್ ಸಂಸ್ಥೆಯ ಕಣ್ಣಿನ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಕಲಿಕೋಪಕರಣಗಳ ವಿತರಣೆ, ಪರಿಸರ ಸಂರಕ್ಷಣಾ ಕಾರ್ಯ ಸೇರಿದಂತೆ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ.

ಇದನ್ನೂ ಓದಿ: Vishweshwar Bhat Column: ಯಾರೂ ಬದಲಾವಣೆಯನ್ನು ಒಪ್ಪುವುದಿಲ್ಲ, ಸ್ವಾಗತಿಸುವುದೂ ಇಲ್ಲ !

ಅವುಗಳ ಜೊತೆಗೆ ಸದಾ ನಾಗರೀಕರಿಗೆ ದೇಶ ವಿದೇಶಗಳಲ್ಲಿ ನಡೆಯುವ ಮಾಹಿತಿಯ ಭಂಡಾರವಾಗಿರುವ ದಿನಪತ್ರಿಕೆ ಗಳನ್ನು ಮನೆಮನೆಗೆ ಹಂಚಿಕೆ ಮಾಡುವವರಿಗೆ ನೆರವಾಗುವ ನಿಟ್ಟಿನಲ್ಲಿ ರೈನ್ ಕೋಟ್ ಗಳನ್ನು ವಿತರಣೆ ಮಾಡ ಲಾಗುತ್ತಿದೆ. ಇದರಿಂದಾಗಿ ಅವರುಗಳ ಬದುಕಿಗೆ ಸಹಕಾರಿಯಾಗುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗುತ್ತದೆ ಎಂದು ಹೇಳಿದರು.

ಈ ವೇಳೆ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಆರ್.ಎನ್.ಬಾಲಕೃಷ್ಣ, ಖಜಾಂಚಿ ಜಗನ್ನಾಥ್. ಎ.ಎಸ್ ಆರ್ಕುಂದ, ಪದಾಧಿಕಾರಿಗಳಾದ ಲಕ್ಷ್ಮೀ, ಜಿ.ಎನ್.ಸುರಾಜ್, ಇಸ್ಮಾಯಿಲ್ ಜಭೀವುಲ್ಲಾ, ಪ್ರೊ.ಕೆ.ರಾಮಾಂಜನೇಯಲು, ಸರ್ವಜ್ಞ ನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಅನ್ಸು ಪ್ರಕಾಶ್ ಶ್ರೀವತ್ಸ, ಪದಾದೀಕಾರಿಗಳಾದ ರಮೇಶ್ ಜೈನ್, ಲೀಲಾ ದೇವಿ, ಪತ್ರಿಕಾ ವರದಿಗಾರರಾದ ಜಿ.ಎನ್.ಅಶ್ವತ್ಥನಾರಾಯಣ, ಎಸ್.ವಿ.ಅರುಣ್ ಕುಮಾರ್, ಕೆ.ಎನ್. ನರಸಿಂಹ ಮೂರ್ತಿ, ರವಿಕುಮಾರ್, ಟಿ.ವಿ.ಮಂಜುನಾಥ್, ಕೆ.ಪಿ.ಸಮೀರಚಾರಿ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿ ದ್ದರು.