Friday, 20th September 2024

Democracy Day: ಪ್ರಜಾಪ್ರಭುತ್ವ ದಿನ; ಸೆ.14, 15ರಂದು ಡಿಸಿ ಅನುಮತಿ ಇಲ್ಲದೆ ಸರ್ಕಾರಿ ನೌಕರರು ರಜೆ ಪಡೆಯುವಂತಿಲ್ಲ

Democracy Day

ಧಾರವಾಡ: ಸೆಪ್ಟೆಂಬರ್‌ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (Democracy Day) ಪ್ರಯುಕ್ತ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರ ಜನ ಪಾಲ್ಗೊಳ್ಳುತ್ತಿರುವುದರಿಂದ, ಕಾರ್ಯಕ್ರಮ ಯಶಸ್ವಿಗಾಗಿ ಪ್ರತಿ ಸರಕಾರಿ ನೌಕರ ಉಪಸ್ಥಿತರಿದ್ದು, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಡಿಸಿ ಅನುಮತಿ ಇಲ್ಲದೆ ಯಾರು ರಜೆ ಪಡೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದರು.

ಶುಕ್ರವಾರ ಸಂಜೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂತಿಮ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಿಸಿ, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪರೇಷೆ ಮಾಡಲಾಗಿದೆ. ಮಾನವ ಸರಪಳಿ ರಚನೆ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಆಗಿರುವದರಿಂದ ಜಿಲ್ಲೆಯ ಪ್ರತಿಯೊಬ್ಬ ಸರಕಾರಿ ನೌಕರನು ಕಡ್ಡಾಯವಾಗಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಸೆಪ್ಟೆಂಬರ್ 14, 15 ಮತ್ತು 16 ರಂದು ಸಾರ್ವತ್ರಿಕ ರಜೆ ಇದೆ ಎಂದು ಮುಂಚಿತವಾಗಿ, ಈಗಾಗಲೇ ಯಾವುದೇ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ರಜೆ ಹೋಗಿದ್ದರೆ, ಆಯಾ ಇಲಾಖೆ ಮೇಲಾಧಿಕಾರಿ ತಕ್ಷಣ ತಮ್ಮ ಅಧಿಕಾರಿ, ಸಿಬ್ಬಂದಿಗಳ ರಜೆ ರದ್ದುಪಡಿಸಿ, ಅವರು ಮರಳಿ ಕಚೇರಿಗೆ ಹಾಜರಾಗಲು ಸೂಚಿಸಬೇಕು. ಯಾರಿಗೆ ಆಗಲಿ, ರಜೆ ಅನಿವಾರ್ಯವಾಗಿ ಅಗತ್ಯವಿದ್ದರೆ ಅವರು ನೇರವಾಗಿ ಸ್ವತಃ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಸಂಪರ್ಕಿಸಿ, ಅನುಮತಿ ಪಡೆಯಬೇಕು. ಒಂದು ವೇಳೆ ಹಿರಿಯ ಅಧಿಕಾರಿ ಅನುಮತಿ ಮೇರೆಗೆ ಯಾರೇ ರಜೆ ಹೋಗಿದ್ದು ಕಂಡುಬಂದಲ್ಲಿ, ರಜೆ ಮಂಜೂರು ಮಾಡಿದ್ದ ಆಯಾ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಿ, ಸರಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಶಿಪಾರಸು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇನ್ನು ಸೆಪ್ಟೆಂಬರ್ 14 ಮತ್ತು 15 ರಂದು ಜಿಲ್ಲೆಯ ಎಲ್ಲ ಸರಕಾರಿ ನೌಕರರು ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿ ಯಾವುದೇ ರೀತಿಯಲ್ಲಿ ಕರ್ತವ್ಯಲೋಪವಾಗದಂತೆ ತಮಗೆ ವಹಿಸಿದ ಕಾರ್ಯ ನಿರ್ವಹಿಸಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ತೊಂದರೆಯಾದರೆ ಅಥವಾ ಅಗತ್ಯ ಮಾಹಿತಿ ಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರಂಭಸಿರುವ ಸಹಾಯವಾಣಿ: 0836 2233840 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಈ ಸುದ್ದಿಯನ್ನೂ ಓದಿ | KPSC Group B Exam: ಸೆ.14, 15ರ ಕೆಪಿಎಸ್‌ಸಿ ಗ್ರೂಪ್‌ ಬಿ ಹುದ್ದೆಗಳ ಪರೀಕ್ಷೆ ಮುಂದೂಡಿಕೆ!

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಸೇರಿದಂತೆ ಮಾನವ ಸರಪಳಿಯ 55 ಕಿ.ಮೀ. ವ್ಯಾಪ್ತಿಯ 100 ಮೀಟರ್, 1000 ಮೀಟರ್, 1 ಕಿ.ಮೀ ಮತ್ತು 5 ಕಿ.ಮೀ.ಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.