ಬಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ (Free medical treatment) ನೀಡುವ ಸಲುವಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯಡಿಯಲ್ಲಿ ಪ್ರತಿ ಕುಟುಂಬವು ವರ್ಷಕ್ಕೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯನ್ನು (Health insurance) ಪಡೆಯುತ್ತದೆ. ಆದರೆ ಈ ಪ್ರಯೋಜನವನ್ನು ಪಡೆಯಲು ಆಯುಷ್ಮಾನ್ ಕಾರ್ಡ್ ಹೊಂದಿರಬೇಕಾಗುತ್ತದೆ.
ಆಯುಷ್ಮಾನ್ ಕಾರ್ಡ್ ಪಡೆಯಲು ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ. ಇವುಗಳನ್ನು ನೀಡದೆ ಆಯುಷ್ಮಾನ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ. ಉಚಿತ ಚಿಕಿತ್ಸೆ ಪಡೆಯಲು ಬೇಕಾಗುವ ಆಯುಷ್ಮಾನ್ ಕಾರ್ಡ್ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವುದು, ಅದನ್ನು ಎಲ್ಲಿ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.
ಆಯುಷ್ಮಾನ್ ಭಾರತ್ ಯೋಜನೆ ಎಂದರೇನು?
ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದು ಕರೆಯಲಾಗುತ್ತದೆ. 2018ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆ ಇದಾಗಿದೆ. ಈ ಯೋಜನೆಯ ಪ್ರಾಥಮಿಕ ಗುರಿ ದೇಶದ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ.
ಏನು ಸೌಲಭ್ಯ ?
ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ವಾರ್ಷಿಕ ನಗದು ರಹಿತ ಆರೋಗ್ಯ ವಿಮೆಯನ್ನು ರಾಷ್ಟ್ರದ ಸರಿಸುಮಾರು 10.74 ಕೋಟಿ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ನೀಡಲಾಗಿದೆ. ವಯಸ್ಸಿನ ಮಿತಿ ಇಲ್ಲದೆ ಈ ಯೋಜನೆಯಡಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ.
ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಸೇರಿ ತುರ್ತು ಆರೋಗ್ಯ ರಕ್ಷಣೆಗೆ ದೇಶದಲ್ಲಿ ಎಲ್ಲಿಯಾದರೂ ಚಿಕಿತ್ಸೆ ಪಡೆಯಬಹುದು.
ಯಾವ ದಾಖಲೆಗಳು ಅಗತ್ಯ?
ಆಯುಷ್ಮಾನ್ ಕಾರ್ಡ್ ಪಡೆಯಲು ಗುರುತು ಮತ್ತು ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಲ್ಲಿಸಬೇಕು.
ಇನ್ನು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಬಿಪಿಎಲ್, ಎಎವೈ ಪಡಿತರ ಚೀಟಿ ದಾಖಲೆಯನ್ನು ಒದಗಿಸಬೇಕು.
ಸಾಮಾಜಿಕ-ಆರ್ಥಿಕ ಜಾತಿ ಗಣತಿ 2011ರಲ್ಲಿ ನಿಮ್ಮ ಹೆಸರು ಇರುವ ಎಸ್ ಇಸಿಸಿ ಡೇಟಾ ಪುರಾವೆ, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ ಸಲ್ಲಿಸಬೇಕಾಗುತ್ತದೆ.
ಯಾರು ಅರ್ಹರು?
ಆಯುಷ್ಮಾನ್ ಕಾರ್ಡ್‌ಗೆ ಅರ್ಹತೆ ಹೊಂದಿರಬೇಕಾದರೆ ಸಾಮಾಜಿಕ-ಆರ್ಥಿಕ ಜಾತಿ ಗಣತಿ 2011ರಲ್ಲಿ ಪಟ್ಟಿಯಲ್ಲಿ ಹೆಸರು ಇರಬೇಕು. ಬಿಪಿಎಲ್ ಅಥವಾ ಎಎವೈ ಪಡಿತರ ಚೀಟಿ ಹೊಂದಿರಬೇಕು, ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು, ಯಾವುದೇ ಸರ್ಕಾರಿ ಯೋಜನೆಯಡಿ ಆರೋಗ್ಯ ವಿಮೆಯನ್ನು ಹೊಂದಿರಬಾರದು.
ಕಾರ್ಡ್ ಪಡೆಯುವುದು ಹೇಗೆ?
ಅಧಿಕೃತ ಆಯುಷ್ಮಾನ್ ಭಾರತ್ ವೆಬ್‌ಸೈಟ್ https://pmjay.gov.in ಗೆ ಭೇಟಿ ನೀಡಿ. ‘ನಾನು ಅರ್ಹನಾಗಿದ್ದೇನೆಯೇ?’ ಮತ್ತು ರಾಜ್ಯವನ್ನು ಆಯ್ಕೆ ಮಾಡಿ. ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಒಟಿಪಿ ಮೂಲಕ ಪರಿಶೀಲಿಸಿ. ಕುಟುಂಬ ಸದಸ್ಯರ ವಿವರಗಳನ್ನು ಭರ್ತಿ ಮಾಡಿ. ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಫಾರ್ಮ್ ಅನ್ನು ಸಲ್ಲಿಸಿ ಮತ್ತು ದೃಢೀಕರಣ ಪಡೆಯಿರಿ.
ಅನುಮೋದನೆ ಬಳಿಕ ಆಯುಷ್ಮಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಏನು ಪ್ರಯೋಜನ ?
5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ, 1,400ಕ್ಕೂ ಹೆಚ್ಚು ರೋಗಗಳಿಗೆ ಚಿಕಿತ್ಸೆ, ದೇಶಾದ್ಯಂತ ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೌಲಭ್ಯ, ಎಲ್ಲ ವಹಿವಾಟುಗಳು ಡಿಜಿಟಲ್ ಮೂಲಕ ನಡೆಯುವುದರಿಂದ ಪೇಪರ್ ಲೆಸ್ ಮತ್ತು ಕ್ಯಾಶ್ ಲೆಸ್ ಆಗಿರುತ್ತದೆ.
ಎಲ್ಲಾ ಕುಟುಂಬ ಸದಸ್ಯರನ್ನು ಒಳಗೊಳ್ಳುತ್ತದೆ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ಅನಂತರದ ವೆಚ್ಚಗಳನ್ನು ಒಳಗೊಂಡಿರುತ್ತದೆ. ಟೋಲ್-ಫ್ರೀ 24×7 ಸಹಾಯ ಲಭ್ಯವಿರುತ್ತದೆ.
ಏನು ವಿಶೇಷ?
ಈಗಾಗಲೇ ದೇಶಾದ್ಯಂತ ಇರುವ 30 ಕೋಟಿಗೂ ಹೆಚ್ಚು ಮಂದಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ. 2023- 24ರಲ್ಲಿ 7.5 ಕೋಟಿಗೂ ಹೆಚ್ಚು ಹೊಸ ಕಾರ್ಡ್‌ಗಳನ್ನು ರಚಿಸಲಾಗಿದೆ. ಪ್ರತಿ ನಿಮಿಷಕ್ಕೆ ಸರಿಸುಮಾರು 181 ಆಯುಷ್ಮಾನ್ ಕಾರ್ಡ್‌ಗಳನ್ನು ರಚಿಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 4.83 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ. ಒಟ್ಟು ಆಯುಷ್ಮಾನ್ ಕಾರ್ಡ್‌ಗಳಲ್ಲಿ ಶೇ. 49ರಷ್ಟು ಕಾರ್ಡ್ ಗಳು ಮಹಿಳೆಯರ ಹೆಸರಿನಲ್ಲಿದೆ. ಇದುವರೆಗೆ 6.11 ಕೋಟಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳಿಗೆ 78,188 ಕೋಟಿ ರೂ. ಮಂಜೂರು ಮಾಡಲಾಗಿದೆ.
ತಿಳಿದಿರಲಿ
ಆಯುಷ್ಮಾನ್ ಕಾರ್ಡ್ ಕಳೆದು ಹೋದರೆ ಹತ್ತಿರದ ಸೇವಾ ಕೇಂದ್ರವನ್ನು ಸಂಪರ್ಕಿಸಿ. ಹೊಸ ಕಾರ್ಡ್ ಅನ್ನು ಸೇವಾ ಕೇಂದ್ರ (CSC) ಅಥವಾ ಆಯುಷ್ಮಾನ್ ಮಿತ್ರ ವೆಬ್ ಸೈಟ್ ಮೂಲಕ ಪಡೆಯಬಹುದು.
ಸಾಮಾಜಿಕ-ಆರ್ಥಿಕ ಜಾತಿ ಗಣತಿ 2011ರಲ್ಲಿ ಹೆಸರು ಇಲ್ಲದಿದ್ದರೆ ಅಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
Mpox Vaccine : ಮಂಕಿ ಪಾಕ್ಸ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಒಪ್ಪಿಗೆ
ಆಯುಷ್ಮಾನ್ ಕಾರ್ಡ್‌ಗಳನ್ನು ರಚಿಸಲು ‘ಆಯುಷ್ಮಾನ್ ಅಪ್ಲಿಕೇಶನ್’ ಅನ್ನು ಪ್ರಾರಂಭಿಸಲಾಗಿದ್ದು, 52 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ, 1,50,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಯು 11,813 ಖಾಸಗಿ ಸೇರಿದಂತೆ 26,901 ನೋಂದಾಯಿತ ಆಸ್ಪತ್ರೆಗಳನ್ನು ಹೊಂದಿದೆ.