Friday, 20th September 2024

‌Vishweshwar Bhat Column: ಮುಖ್ಯಮಂತ್ರಿ ಗನ್‌ ಮ್ಯಾನ್

ಸದ್ಯಶೋಧನೆ

ವಿಶ್ವೇಶ್ವರ ಭಟ್

ದಿವಂಗತ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರಿಗೆ‌ ಎಂ.ತಿಮ್ಮೇಗೌಡ ಎಂಬ ಗನ್ ಮ್ಯಾನ್ ಇದ್ದರು. ಅವರು ರಿಸರ್ವ್ ಪೊಲೀಸ್ ಕಾನಸ್ಟೆಬಲ್ ಆಗಿ ಸೇವೆಗೆ ಸೇರಿದವರು. ನಂತರ ೧೯೮೩ ರಲ್ಲಿ ಪಟೇಲರ ಅಂಗರಕ್ಷಕರಾದರು. ಸಾಮಾನ್ಯವಾಗಿ ರಾಜಕಾರಣಿಗಳಾದವರು ತಮ್ಮ ಊರಿನ, ಜಿಲ್ಲೆಯ ಅಥವಾ ತಮ್ಮ ಕೋಮಿನವರನ್ನು ಅಂಗರಕ್ಷಕರನ್ನಾಗಿ ಸೇರಿಸಿಕೊಳ್ಳಲು ಬಯಸುತ್ತಾರೆ.

ಆದರೆ ಪಟೇಲರು ಲಿಂಗಾಯತರಾಗಿದ್ದರೂ, ಅಂಗರಕ್ಷಕನಾಗಿ ಒಕ್ಕಲಿಗ ಕೋಮಿಗೆ ಸೇರಿದ ತಿಮ್ಮೇಗೌಡರನ್ನು ನೇಮಿಸಿಕೊಂಡಿದ್ದರು. ತಿಮ್ಮೇಗೌಡರು ಮದ್ದೂರು ತಾಲೂಕಿನ ಮರಳಿಗ ಊರಿನವರು. ಅಂಗರಕ್ಷಕನಾಗಿ ಸೇರಿದ ಕೆಲದಿನಗಳಲ್ಲಿಯೇ ತಿಮ್ಮೇಗೌಡರು, ಪಟೇಲರ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರರಾದರು. ತಿಮ್ಮೇಗೌಡರು ಪಟೇಲರ ಸ್ವಭಾವವನ್ನು ಚೆನ್ನಾಗಿ ಅರಿತುಕೊಂಡಿದ್ದರು. ಪಟೇಲರು ಯಾವ
ಕೆಲಸವನ್ನು ಹೇಳಿದರೂ ತಿಮ್ಮೇಗೌಡರು ಅತ್ಯಂತ ಪ್ರೀತಿಯಿಂದ ಮತ್ತು ಉತ್ಸಾಹದಿಂದ ಮಾಡುತ್ತಿದ್ದರು. ಪಟೇಲರ ಬಗ್ಗೆ ಅವರ ಪಕ್ಷದ ನಾಯಕರು ಅಥವಾ ಕಾರ್ಯಕರ್ತರು ಕೇಳಿದರೆ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ. ಒಮ್ಮೆ ಅವರ ಪಕ್ಷದ ಶಾಸಕರೊಬ್ಬರು, ‘ಪಟೇಲರೇ, ನೀವು ನಿಮ್ಮ ಗನ್ ಮ್ಯಾನ್ ತಿಮ್ಮೇಗೌಡನಿಗೆ ತೋರುವ ವಿಶ್ವಾಸದಲ್ಲಿ ನನಗೆ ಶೇ.ಐದರಷ್ಟನ್ನಾದರೂ ತೋರಿಸಿದ್ದರೆ ಸಾಕಿತ್ತು’ ಎಂದು ತಮ್ಮ ಅಸಮಾಧಾನ ವನ್ನು ಹೊರಹಾಕಿದರು.

ಇದನ್ನೂ ಓದಿ: Vishweshwar Bhat Column: ಬೋ*ಮಗ ಸಂಸ್ಕೃತ ಪದವೇ ?

ಆಗ ಪಟೇಲರು, ‘ಸ್ವಾಮಿ, ಆ ತಿಮ್ಮೇಗೌಡ ನನಗೆ ಮಾಡುವ ಕೆಲಸದಲ್ಲಿ ಶೇ.ಐದರಷ್ಟನ್ನು ನೀವು ಮಾಡಿದ್ದರೆ ನಿಮ್ಮನ್ನು ಮಂತ್ರಿಯಾಗಿ ಮಾಡುತ್ತಿದ್ದೆ’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು. ಪ್ರಾಯಶಃ ತಿಮ್ಮೇಗೌಡರಷ್ಟು ಬೇರೆ ಯಾವ ಗನ್ ಮ್ಯಾನ್ ಕೂಡ ಮುಖ್ಯಮಂತ್ರಿಗೆ ಅಷ್ಟು ಆಪ್ತವಾಗಿರಲಿಕ್ಕಿಲ್ಲ. ಅವರು ಆ ದಿನಗಳಲ್ಲಿ ‘ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿ’ ಎಂದು ಕರೆಯಿಸಿಕೊಂಡಿದ್ದರು. ತಿಮ್ಮೇಗೌಡರ ಬಗ್ಗೆ ಯಾರು ಚಾಡಿ ಹೇಳಿದರೂ, ಪಟೇಲರು ಕೇಳುತ್ತಿರಲಿಲ್ಲ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಬಹಿರಂಗವಾಗಿಯೇ, ‘ನಾವು ಐಪಿಎಸ್ ಅಧಿಕಾರಿಯಾಗಿರಬಹುದು. ಆದರೆ ನಾವು ಸಿಎಂ ಗನ್ ಮ್ಯಾನ್ ಅಷ್ಟು ಪ್ರಭಾವಿ ಅಲ್ಲ’ ಎಂದು ತಮಾಷೆಯಿಂದ ಹೇಳುತ್ತಿದ್ದರು.

ಸಂಪುಟದ ಸಚಿವರು ಮುಖ್ಯಮಂತ್ರಿಯವರಿಗೆ ಏನಾದರೂ ಹೇಳುವುದಿದ್ದರೆ, ತಿಮ್ಮೇಗೌಡರ ಮೂಲಕ ತಿಳಿಸುತ್ತಿದ್ದರು. ದೇವೇಗೌಡರು ಮುಖ್ಯಮಂತ್ರಿಯಾದಾಗ ಅನೇಕರು, ‘ನೀನೇಕೆ ಸಿಎಂ ಬಳಿ (ದೇವೇಗೌಡ) ಸೇರಿಕೊಳ್ಳಬಾರದು? ಹೇಗಿದ್ದರೂ ನೀನು ಅವರ
ಕೋಮಿನವ. ಈಗಾಗಲೇ ಗನ್ ಮ್ಯಾನ್ ಆಗಿ ಅನುಭವವನ್ನು ಹೊಂದಿದ್ದೀಯಾ. ಪಟೇಲರ ಬಳಿ ಕೆಲಸ ಮಾಡಿದವನು ಅಂದ್ರೆ ಖಂಡಿತವಾಗಿಯೂ
ಸೇರಿಸಿಕೊಳ್ಳುತ್ತಾರೆ’ ಎಂದು ತಿಮ್ಮೇಗೌಡರಿಗೆ ಸಲಹೆ ನೀಡಿದ್ದರಂತೆ. ಆದರೆ ಅವರು ಆ ಕುರಿತು ಕಿಂಚಿತ್ತೂ ಯೋಚಿಸಲಿಲ್ಲ. ‘ಪಟೇಲರು ಎಲ್ಲಿ ತನಕ ನನ್ನನ್ನು ಸಹಿಸಿಕೊಂಡು ಅವರ ಹತ್ತಿರ ಇಟ್ಟುಕೊಳ್ಳುತ್ತಾರೋ, ಅಲ್ಲಿ ತನಕ ಇರುತ್ತೇನೆ.

ಹೀಗಿರುವಾಗ ಬೇರೆಯವರ ಜತೆ ಕೆಲಸ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ತಿಮ್ಮೇಗೌಡರು ಹೇಳಿದ್ದರಂತೆ. ಅದಾಗಿ ಒಂದೂವರೆ ವರ್ಷ ಗಳಲ್ಲಿ ಪಟೇಲರು ಮುಖ್ಯಮಂತ್ರಿಯಾದರು. ಆಗ ತಿಮ್ಮೇಗೌಡರ ಖದರು ಬದಲಾಗಿಬಿಟ್ಟಿತು. ಪಟೇಲರು ಏಳುತ್ತಿದ್ದಂತೆ, ‘ಏ ತಿಮ್ಮೇಗೌಡ, ಎಲ್ಲಿದ್ದೀಯೋ?’ ಎಂದು ಕರೆಯು ತ್ತಿದ್ದರು. ಬೆಳಗ್ಗೆ ಏಳುವಾಗ ತಿಮ್ಮೇಗೌಡ ಅವರ ಮುಂದೆ ಇರಬೇಕಾಗಿತ್ತು. ಅವರಿಗೆ ಮಾತ್ರ ಸಿಎಂ ಮನೆಯ ಎಲ್ಲ ರೂಮುಗಳಿಗೆ ಮುಕ್ತ ಪ್ರವೇಶ. ಮುಖ್ಯಮಂತ್ರಿಯವರನ್ನು ಭೇಟಿ ಮಾಡುವವರು ತಿಮ್ಮೇಗೌಡರನ್ನು ಸಂಪರ್ಕಿಸಿ ಆಗಮಿಸುತ್ತಿದ್ದರು.

ತಿಮ್ಮೇಗೌಡರ ಮೂಲಕ ಯಾರಾದರೂ ಆಗಮಿಸಿದರೆ, ಪಟೇಲರನ್ನು ಸುಲಭವಾಗಿ ಭೇಟಿಯಾಗಬಹುದಿತ್ತು. ಪಟೇಲರಿಗೆ ತಮ್ಮ ಅಂಗರಕ್ಷಕನ ಮೇಲೆ ಅಂಥ ವಿಶ್ವಾಸ! ಹದಿನೇಳು ವರ್ಷಗಳ ತನಕ ಪಟೇಲರ ಜತೆ ಅವರ ನೆರಳಿನಂತೆ ಕೆಲಸ ಮಾಡಿದ ತಿಮ್ಮೇಗೌಡರು, ಅವರು (ಪಟೇಲರು) ನಿಧನ (೧೨.೧೨. ೨೦೦೦) ರಾಗುವ ತನಕವೂ ಅವರೊಂದಿಗಿದ್ದರು. ಅದಾದ ಎರಡು ವರ್ಷಗಳ ನಂತರವೂ ಅವರ ಕುಟುಂಬದ ಜತೆಗಿದ್ದರು. ಒಬ್ಬ ವ್ಯಕ್ತಿ ಜತೆ ಇಷ್ಟು ನಿಕಟವಾಗಿರುವುದು, ಅವರ ವಿಶ್ವಾಸಕ್ಕೆ ಪಾತ್ರರಾಗುವುದು ಸಣ್ಣ ವಿಷಯವಲ್ಲ.